ಭಾರೀ ಮಳೆಯಿಂದ ಚಾಮರಾಜನಗರ ಜಿಲ್ಲೆಯಲ್ಲಿ ತುಂಬಿದ ಕೆರೆಗಳೆಷ್ಟು ಗೊತ್ತಾ?-ತಾಲೂಕುವಾರು ಮಾಹಿತಿ ಇಲ್ಲಿದೆ
ಚಾಮರಾಜನಗರ, ಮೇ, 24: ರಾಜ್ಯದ ಬಹುತೇಕ ಭಾಗಗಳಲ್ಲಿ ಮಳೆ ಸುರಿಯುತ್ತಿದ್ದು, ಜಲಮೂಲಗಳಿಗೆ ಜೀವಕಳೆ ಬಂದಂತಾಗಿದೆ. ಹಾಗೆಯೇ ಕಳೆದ 2 ವಾರಗಳಿಂದ ಸುರಿಯುತ್ತಿರುವ ನಿರಂತರ ಮಳೆಗೆ ಚಾಮರಾಜನಗರ ಜಿಲ್ಲೆಯ ಹಲವು ಕೆರೆಗಳು ಭರ್ತಿಯಾಗುತ್ತಿದ್ದು, ಇನ್ನೂ ಹಲವು ಕೆರೆಗಳು ಮಳೆಯನ್ನು ಅರಸುತ್ತಿವೆ. ಹಾಗಾದರೆ ಯಾವೆಲ್ಲ ಕೆರೆಗಳು ಭರ್ತಿಯಾಗುವ ಹಂತವನ್ನು ತಲುಪಿವೆ ಎನ್ನುವ ಮಾಹಿತಿಯನ್ನು ಇಲ್ಲಿ ತಿಳಿಯಿರಿ.
ಉತ್ತಮ ಮಳೆ ಸುರಿದಿರುವ ಹಿನ್ನೆಲೆ ನಾಡಿನಷ್ಟೇ ಅಲ್ಲದೆ, ಕಾಡಂಚಿನ ಕೆರೆಗಳು ಕೂಡ ತುಂಬಿದ್ದು, ನೀರಿಗಾಗಿ ವನ್ಯಜೀವಿಗಳು ಪರದಾಡುವುದು ತಪ್ಪಿದಂತಾಗಿದೆ. ಬಂಡೀಪುರ, ಬಿಆರ್‌ಟಿ ಭಾಗದ ಅರಣ್ಯ ಪ್ರದೇಶ ಹಸಿರು ಹೊದ್ದಿಕೊಳ್ಳುತ್ತಿದ್ದು, ಇದರಿಂದ ಇದೀಗ ಅರಣ್ಯಕ್ಕೆ ಜೀವಕಳೆ ಬಂದಂತಾಗಿದೆ.

ಚಾಮರಾಜನಗರ ತಾಲೂಕಿನ ದೊಡ್ಡರಾಯಪೇಟೆ ಕೆರೆ, ಉಮ್ಮತ್ತೂರು ಕೆರೆ, ಹುತ್ತೂರು ಕೆರೆ, ಹನೂರು ತಾಲೂಕಿನ ಗೋಪಿನಾಥಂ ಕೆರೆ, ಕೌಲಿಹಳ್ಳಕೆರೆ ಭರ್ತಿಯಾಗುತ್ತಿದೆ. ಇನ್ನು ಗುಂಡ್ಲುಪೇಟೆ ತಾಲೂಕಿನ ಬೇರಂಬಾಡಿ ಕೆಂಪು ಸಾಗರ ಕೆರೆ, ಹೊನ್ನೇಗೌಡನಹಳ್ಳಿ ವಡ್ಡರಗಟ್ಟೆ ಕೆರೆ ಹಾಗೂ ಹಾಲಹಳ್ಳಿ ಅಣೆಕಟ್ಟೆ ತುಂಬಿ ಕೋಡಿ ಬಿದ್ದಿದೆ. ಜೊತೆಗೆ ತಾಲೂಕಿನ ಹಲವು ಕೆರೆಗಳಿಗೆ ಶೇಕಡಾ 50ರಿಂದ 80 ಭಾಗ ನೀರು ಬಂದಿದ್ದು, ತುಂಬುವ ಹಂತವನ್ನು ತಲುಪಿವೆ.
ಬರಗಿ ಕೆರೆ, ಮುಂಟೀಪುರ ಕೆರೆ, ದೇವರಹಳ್ಳಿ ಕೆರೆ, ಗೋಪಾಲಪುರ ಕೆರೆ, ಕನ್ನೇಗಾಲ ಕೆರೆ, ಕೂತನೂರು ಕೆರೆ, ಹಂಗಳ ಹೀರಿಕೆರೆ, ಹಂಗಳ ದೊಡ್ಡಕೆರೆ, ಮಂಗಲ, ಎಲಚೆಟ್ಟಿ, ಜಕ್ಕಹಳ್ಳಿ, ಕಮರಹಳ್ಳಿ ಕೆರೆ, ದೇವಲಾಪುರ ಕೆರೆ, ಕುರುಬರಹುಂಡಿ ಕೆರೆ ಸೇರಿದಂತೆ ಇನ್ನಿತರ ಹಲವು ಕೆರೆಗಳಿಗೆ ಒಳ ಹರಿವಿನ ಪ್ರಮಾಣದಲ್ಲಿ ಏರಿಕೆ ಕಂಡಿದ್ದು, ಶೇಕಡಾ 50ರಷ್ಟು ನೀರು ತುಂಬಿದೆ.
ಜೊತೆಗೆ ಕಾಲುವೆಗಳ ಮೂಲಕ ನೀರು ಹೆಚ್ಚಿನ ಪ್ರಮಾಣದಲ್ಲಿ ಕೆರೆಗಳಿಗೆ ಹರಿದು ಬರುತ್ತಿದೆ. ಇನ್ನೂ ವಡ್ಡಗೆರೆ ಕೆರೆಗೆ ಏತ ನೀರಾವರಿ ಯೋಜನೆ ಹಾಗೂ ಮಳೆಯಿಂದ ನೀರು ಬರುತ್ತಿದ್ದು, ತುಂಬಿ ಕೋಡಿ ಬೀಳುವ ಹಂತ ತಲುಪಿದ್ದು, ಈ ಭಾಗದ ಜನರು, ರೈತರ ಮುಖದಲ್ಲಿ ಮಂದಹಾಸ ಮೂಡಿದಂತಾಗಿದೆ.
ಬಂಡೀಪುರ ಅಭಯಾರಣ್ಯದ ಕೆರೆಗಳಿಗೆ ಜೀವಕಳೆ: ಬಂಡೀಪುರ ರಾಷ್ಟ್ರೀಯ ಅಭಯಾರಣ್ಯ ವ್ಯಾಪ್ತಿಯಲ್ಲಿ ಬಂಡೀಪುರ ವಲಯ, ಗೋಪಾಲಸ್ವಾಮಿ ಬೆಟ್ಟ ವಲಯ, ಕುಂದರೆಕೆ ವಲಯ, ಮದ್ದೂರು ವಲಯ, ಓಂಕಾರ ವಲಯಕ್ಕೂ ಕೂಡ ಉತ್ತಮ ಮಳೆಯಾಗಿದ್ದು, ಕಾಡಿನಲ್ಲಿ ಮಾರು 100ಕ್ಕೂ ಅಧಿಕ ಕೆರೆಗಳು ತುಂಬಿವೆ. ಜೊತೆಗೆ ಒಳ ಹರಿವಿನ ಪ್ರಮಾಣದಲ್ಲಿ ಏರಿಕೆ ಕಂಡಿದೆ. ಇದರಿಂದ ಕಾಡುಪ್ರಾಣಿಗಳಿಗೆ ಕುಡಿಯುವ ನೀರಿನ ಆತಂಕ ದೂರವಾಗಿದೆ ಎಂದು ಅರಣ್ಯಾಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಯಾವೆಲ್ಲ ಕೆರೆಗಳು ಖಾಲಿ?: ಸಣ್ಣ ನೀರಾವರಿ ಇಲಾಖೆಯು ಮಾಹಿತಿ ಪ್ರಕಾರ, ನಿರಂತರ ಮಳೆಯ ನಡುವೆಯೂ ಇನ್ನೂ ಹಲವು ಕೆರೆಗಳು ಖಾಲಿ-ಖಾಲಿಯಾಗಿವೆ.
ಚಾಮರಾಜನಗರದ ಯಡಿಯೂರು ಅಡ್ಡಹಳ್ಳ, ಯಳಂದೂರಿನ ಗೌಡಹಳ್ಳಿ ಹೊಸಕೆರೆ, ಗಣಗನೂರು ಕೆರೆ, ಅಲ್ಕೆರೆ ಅಗ್ರಹಾರ ಕೆರೆ, ಕೊಳ್ಳೇಗಾಲ ತಾಲೂಕಿನ ಬಾಳಗುಣಸೆ ಕೆರೆ, ಲಿಂಗಮ್ಮನಕೆರೆ, ಹನೂರಿನ ದಿನ್ನಳ್ಳಿ ಕೆರೆ, ಅಲಗಾಪುರ ಕೆರೆ, ಮಣಗಳ್ಳಿ ಕೆರೆ, ಮಾರ್ಟಹಳ್ಳಿ ಕೆರೆ ಸೇರಿದಂತೆ ಸಣ್ಣ ನೀರಾವರಿ ಇಲಾಖೆಗೆ ಒಳಪಡುವ 64 ಕೆರೆಗಳಲ್ಲಿ 15 ಕೆರೆಗಳು ನೀರಿಲ್ಲದೇ ಭಣಗುಡುತ್ತಿವೆ. ಶೇಕಡಾ 30ರಷ್ಟು 25 ಕೆರೆಗಳು, ಶೇಕಡಾ 50ರಷ್ಟು 12 ಕೆರೆಗಳು, ಶೇಕಡ 90ರಷ್ಟು 9 ಕೆರೆಗಳಲ್ಲಿ ನೀರು ತುಂಬಿದೆ.












Click it and Unblock the Notifications