ಹುಂಡಿ ಎಣಿಕೆ: ಚಾಮರಾಜನಗರ ಮಹದೇಶ್ವರನಿಗೆ ಹರಿದುಬಂತು ಕೋಟಿ.. ಕೋಟಿ ಹಣ, ಇಲ್ಲಿದೆ ವಿವರ
ಹನೂರು ತಾಲೂಕಿನ ಮಲೆಮಹದೇಶ್ವರ ಬೆಟ್ಟದದಲ್ಲಿ ಮಂಗಳವಾರ ಹುಂಡಿ ಎಣಿಕೆ ಮಾಡಲಾಗಿದ್ದು, ಹುಂಡಿಯಲ್ಲಿ ಸಂಗ್ರಹವಾದ ಹಣದ ವಿವರವನ್ನು ಇಲ್ಲಿ ತಿಳಿಯಿರಿ.
ಚಾಮರಾಜನಗರ, ಮಾರ್ಚ್, 08: ಪ್ರಮಖ ಧಾರ್ಮಿಕ ಸ್ಥಳವಾದ ಹನೂರು ತಾಲೂಕಿನ ಮಲೆಮಹದೇಶ್ವರ ಬೆಟ್ಟದದಲ್ಲಿ ಮಂಗಳವಾರ ಹುಂಡಿ ಎಣಿಕೆ ಮಾಡಲಾಗಿತ್ತು. ಈ ವೇಳೆ ಹುಂಡಿಯಲ್ಲಿ 2.86 ಕೋಟಿ ರೂಪಾಯಿ ಸಂಗ್ರಹವಾಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಮಲೆಮಹದೇಶ್ವರ ಬೆಟ್ಟದ ಬಸ್ ನಿಲ್ದಾಣದ ಬಳಿಯ ವಾಣಿಜ್ಯ ಸಂಕೀರ್ಣದಲ್ಲಿ ಮಂಗಳವಾರ ಬೆಳಗ್ಗೆ ಸಿಸಿ ಕ್ಯಾಮೆರಾ ಕಣ್ಗಾವಲು ಹಾಗೂ ಪೋಲಿಸ್ ಬಂದೋಬಸ್ತ್‌ನಲ್ಲಿ ಹುಂಡಿ ಎಣಿಕೆ ಕಾರ್ಯಕ್ರಮವನ್ನು ಆರಂಭಿಸಲಾಯಿತು. ಈ ಹುಂಡಿ ಎಣಿಕೆ ಕಾರ್ಯವು ರಾತ್ರಿ 10:30ರ ವರೆಗೂ ನಡೆಯಿತು.

ಹರಿದುಬಂತು ಕೋಟಿ, ಕೋಟಿ ಹಣ
ಈ ಬಾರಿ ಅಮಾವಾಸ್ಯೆ, ಶಿವರಾತ್ರಿ ಜಾತ್ರಾ ಮಹೋತ್ಸವ, ಸರ್ಕಾರಿ ರಜಾ ದಿನಗಳಂದು ರಾಜ್ಯದ ವಿವಿಧೆಡೆಯಿಂದ ಲಕ್ಷಾಂತರ ಜನರು ಆಗಮಿಸಿದ್ದರು. ಆದ್ದರಿಂದ 26 ದಿನಗಳ ಅವಧಿಯಲ್ಲಿ 2,86,17,698 ರೂಪಾಯಿ ಹಣ, 90 ಗ್ರಾಂ ಚಿನ್ನ ಹಾಗೂ 2.825 ಗ್ರಾಂ ಬೆಳ್ಳಿ ಸಂಗ್ರಹವಾಗಿದೆ ಎಂದು ತಿಳಿದುಬಂದಿದೆ.
ಡಿಸೆಂಬರ್‌ನಲ್ಲಿ ಹುಂಡಿ ಎಣಿಕೆ ಕಾರ್ಯ
ಇತ್ತೀಚೆಗಷ್ಟೇ ಚಾಮರಾಜನಗರದ ಚಾಮರಾಜೇಶ್ವರ ದೇವಾಲಯ ಹುಂಡಿ ಎಣಿಕೆ ಕಾರ್ಯ ನಡೆದಿತ್ತು. ಹುಂಡಿ ಎಣಿಕೆ ಕಾರ್ಯ (ಡಿಸೆಂಬರ್ 23)ರಂದು ನಡೆದಿದ್ದು, 7 ಲಕ್ಷ ರೂಪಾಯಿಗಳನ್ನು ಭಕ್ತರು ಶಿವನಿಗೆ ಅರ್ಪಿಸಿದ್ದರು. ಹುಂಡಿ ಎಣಿಕೆ ಕಾರ್ಯದ ವೇಳೆ ಪತ್ರಗಳು, ಆಹ್ವಾನ ಪತ್ರಿಕೆಗಳು ಕೂಡ ಪತ್ತೆಯಾಗಿದೆ.

ಯೇಸು ಭಕ್ತನೋರ್ವ ಕ್ರಿಸ್ತ ಹುಟ್ಟಿದ ಬಗ್ಗೆ, ಕ್ರಿಸ್ತನನ್ನು ನಂಬಿದ್ದೆಲ್ಲಾ ಬರೆದು ದೇವರ ಹುಂಡಿಗೆ ಹಾಕಿದ್ದು, " ದೇವರ ರಾಜ್ಯ ಸಮೀಪಿಸಿದೆ" ಎಂಬ ನಿಗೂಢಾರ್ಥ ವಾಕ್ಯವನ್ನು ಬರೆದುಕೊಂಡಿದ್ದಾನೆ. ಇನ್ನು, ಯುವಕನೋರ್ವ ತನಗೆ ಹುಡುಗಿ ಕರುಣಿಸು, ಪ್ರೀತಿಯ ದೇವರೆ ಎಂದು ಶಿವಲಿಂಗದ ಚಿತ್ರ ಬರೆದು ಹುಂಡಿಗೆ ಹಾಕಿ ಪ್ರಾರ್ಥಿಸಿದ್ದಾನೆ. ಯುವತಿ ಭಾವಚಿತ್ರ, ಆಹ್ವಾನ ಪತ್ರಿಕೆಗಳು ಕೂಡ ಹುಂಡಿಯಲ್ಲಿ ಪತ್ತೆಯಾಗಿದ್ದವು.












Click it and Unblock the Notifications