ಗುಂಡ್ಲುಪೇಟೆ: ಪ್ರಸಿದ್ಧ ಪ್ರವಾಸಿ ತಾಣ ಗೋಪಾಲಸ್ವಾಮಿ ಬೆಟ್ಟಕ್ಕೆ ಈ ಮೂರು ದಿನ ವಾಹನಗಳಿಗೆ ನಿರ್ಬಂಧ, ಏಕೆ?-ಇಲ್ಲಿದೆ ಮಾಹಿತಿ
ಗುಂಡ್ಲುಪೇಟೆ, ಡಿಸೆಂಬರ್, 13: ತಾಲೂಕಿನ ಪ್ರಸಿದ್ಧ ಧಾರ್ಮಿಕ ಸ್ಥಳ ಹಿಮವದ್ ಗೋಪಾಲಸ್ವಾಮಿ ಬೆಟ್ಟಕ್ಕೆ ಸಾಗುವ ರಸ್ತೆ ಡಾಂಬರೀಕರಣ ನಡೆಯುತ್ತಿದ್ದು, ಈ ಮಾರ್ಗದಲ್ಲಿ ಡಿಸೆಂಬರ್ 18ರಿಂದ 20ರವರೆಗೆ ಮೂರು ದಿನಗಳ ಕಾಲ ವಾಹನ ಸಂಚಾರವನ್ನು ನಿರ್ಬಂಧಿಸಲಾಗಿದೆ.
ಗೋಪಾಲಸ್ವಾಮಿ ಬೆಟ್ಟದ ತಪ್ಪಲಿನಿಂದ ದೇವಸ್ಥಾನಕ್ಕೆ ತೆರಳುವ ರಸ್ತೆ ಸಂಪೂರ್ಣ ಹದಗೆಟ್ಟ ಹಿನ್ನೆಲೆ ವಾಹನ ಸಂಚಾರಕ ತೀವ್ರ ಅಡಚಣೆ ಉಂಟಾಗುತ್ತಿತ್ತು. ಈ ಬಗ್ಗೆ ಪ್ರವಾಸಿಗರು ಹಾಗೂ ಪ್ರಯಾಣಿಕರಿಂದ ವ್ಯಾಪಕವಾಗಿ ದೂರುಗಳು ಸಹ ಕೇಳಿ ಬಂದಿದ್ದವು. ಇದರಿಂದ ಎಚ್ಚೆತ್ತ ಲೋಕೋಪಯೋಗಿ ಇಲಾಖೆ ಇದೀಗ ರಸ್ತೆ ದುರಸ್ತಿಗೊಳಿಸಿ 11.20 ಕಿಲೋ ಮೀಟರ್ ರಸ್ತೆ ಡಾಂಬರೀಕರಣ ಮಾಡಲು ಮುಂದಾಗಿದೆ.

ಗೋಪಾಲಸ್ವಾಮಿ ಬೆಟ್ಟದ ತಪ್ಪಲಿನಿಂದ ಪ್ರತಿನಿತ್ಯ ಕೆಎಸ್ಆರ್‌ಟಿಸಿ ವತಿಯಿಂದ 5 ಬಸ್‌ಗಳನ್ನು ಬಿಡಲಾಗಿತ್ತು. ವಾರಾಂತ್ಯ ಹಾಗೂ ವಿಶೇಷ ದಿನಗಳಲ್ಲಿ 20ಕ್ಕೂ ಅಧಿಕ ಬಸ್‌ಗಳು ಈ ಮಾರ್ಗದಲ್ಲಿ ಸಂಚರಿಸುತ್ತಿದ್ದವು. ಜೊತೆಗೆ ಅರಣ್ಯ ಇಲಾಖೆ ವತಿಯಿಂದ ನಾಲ್ಕೈರಿಂದ ಐದು ಜೀಪ್‌ಗಳನ್ನು ಸಹ ಬಿಡಲಾಗಿತ್ತು. ಇದೀಗ ರಸ್ತೆ ಡಾಂಬರೀಕರಣ ಮಾಡುವ ಉದ್ದೇಶದಿಂದ ಎಲ್ಲಾ ವಾಹನಗಳಿಗೆ ನಿರ್ಬಂಧಿಸಲಾಗಿದೆ.
ಗೋಪಾಲಸ್ವಾಮಿ ಬೆಟ್ಟಕ್ಕೆ ತೆರಳುವ ಭಕ್ತಾದಿಗಳು ಹಾಗೂ ಪ್ರವಾಸಿಗರು ಡಿಸೆಂಬರ್ 18ರಿಂದ 20ರವರೆಗೆ ಮೂರು ದಿನಗಳ ಕಾಲ ಬೆಟ್ಟಕ್ಕೆ ನಿರ್ಬಂಧ ಹೇರಿರುವ ಹಿನ್ನೆಲೆ ಸಹಕಾರ ನೀಡಬೇಕೆಂದು ತಹಶೀಲ್ದಾರ್ ಟಿ.ರಮೇಶ್ ಬಾಬು ತಿಳಿಸಿದ್ದಾರೆ.
ಅಂಬಿಗರಿಂದ ಪ್ರತಿಭಟನೆ
ಇತ್ತೀಚೆಗಷ್ಟೇ ಪ್ರಸಿದ್ಧ ಪ್ರವಾಸಿ ತಾಣವಾದ ಹನೂರು ತಾಲೂಕಿನ ಹೊಗೆನಕಲ್ ಫಾಲ್ಸ್‌ನಲ್ಲಿ ತೆಪ್ಪ ನಡೆಸಲು ಒಬ್ಬರಿಗೆ 1,200 ರೂಪಾಯಿ ನಿಗದಿ ಮಾಡುವಂತೆ ಒತ್ತಾಯಿಸಿ ಅಂಬಿಗರು ಪ್ರತಿಭಟನೆ ನಡೆಸಿದ್ದರು.
ಕರ್ನಾಟಕದ ನಯಾಗರ ಫಾಲ್ಸ್ ಎಂದೇ ಪ್ರಸಿದ್ಧಿ ಪಡೆದಿರುವ ಹೊಗೆನಕಲ್ ಫಾಲ್ಸ್‌ಗೆ ವಾರಾಂತ್ಯದ ರಜಾ ದಿನಗಳು ಹಾಗೂ ಇನ್ನಿತರ ವಿಶೇಷ ದಿನಗಳಲ್ಲಿ ಫಾಲ್ಸ್‌ಗೆ ನೂರಾರು ಸಂಖ್ಯೆಯಲ್ಲಿ ಭೇಟಿ ನೀಡಿ ಫಾಲ್ಸ್ ವೀಕ್ಷಣೆ ಮಾಡುತ್ತಿದ್ದಾರೆ. ಆದರೆ ಹೊಗೆನಕಲ್ ಫಾಲ್ಸ್‌ಗೆ ಬರುವ ಪ್ರವಾಸಿಗರಿಗೆ ಅರಣ್ಯ ಇಲಾಖೆಯವರು ಒಬ್ಬರಿಗೆ 500 ನಿಗದಿ ಮಾಡಿದ್ದರು. ಇದರಲ್ಲಿ ಸರ್ಕಾರಕ್ಕೆ ನೂರು ರೂಪಾಯಿ ಹಾಗೂ ತೆಪ್ಪ ನಡೆಸುವವರಿಗೆ 400 ರೂಪಾಯಿ ನೀಡಲಾಗುತ್ತಿತ್ತು.
ನೂರು ರೂಪಾಯಿಯನ್ನು ಪಡೆಯುವ ಅರಣ್ಯ ಇಲಾಖೆಯವರು ಬರುವಂತಹ ಪ್ರವಾಸಿಗರಿಗೆ ಯಾವುದೇ ವ್ಯವಸ್ಥೆಯನ್ನು ಮಾಡದೆ ಇರುವುದರಿಂದ ಇತ್ತೀಚಿನ ದಿನಗಳಲ್ಲಿ ಪ್ರವಾಸಿಗರ ಸಂಖ್ಯೆ ಕಡಿಮೆಯಾಗಿದೆ. ಪ್ರವಾಸಿಗರಿಗೆ ಉತ್ತಮ ಶೌಚಾಲಯ ಪಾರ್ಕಿಂಗ್ ವ್ಯವಸ್ಥೆ ಹಾಗೂ ವಿಶ್ರಾಂತಿ ಪಡೆಯಲು ಯಾವುದೇ ವ್ಯವಸ್ಥೆ ಇಲ್ಲದೆ ಇರುವುದರಿಂದ ತೊಂದರೆಯಾಗುತ್ತಿದೆ. ಅರಣ್ಯ ಇಲಾಖೆಯವರು ಪಡೆಯುವ ನೂರು ರೂಪಾಯಿಯಲ್ಲಿ ಅಭಿವೃದ್ಧಿ ಮಾಡುತ್ತಿಲ್ಲ. ನಮಗೂ 400 ರೂಪಾಯಿ ಸಾಲುತ್ತಿಲ್ಲ ಎಂದು ತೆಪ್ಪ ನಡೆಸುವವರು ಆಕ್ರೋಶ ಹೊರಹಾಕಿದ್ದರು.
ಇತ್ತೀಚಿನ ದಿನಗಳಲ್ಲಿ ದಿನನಿತ್ಯದ ಆಹಾರ ಪದಾರ್ಥಗಳ ಬೆಲೆ, ಪೆಟ್ರೋಲ್ ಡೀಸೆಲ್, ಗ್ಯಾಸ್ ಬೆಲೆ ಏರಿಕೆ ಯಾಗಿರುವುದರಿಂದ ಜೀವನ ನಡೆಸಲು ಕಷ್ಟವಾಗುತ್ತಿದೆ. ನೆರೆಯ ತಮಿಳುನಾಡು ರಾಜ್ಯದವರು ತೆಪ್ಪ ನಡೆಸುವವರಿಗೆ 1,700 ನಿಗದಿ ಮಾಡಿದ್ದಾರೆ. ಅದರಂತೆ ಕರ್ನಾಟಕದಲ್ಲಿಯೂ 1,200 ರೂಪಾಯಿ ನಿಗದಿ ಮಾಡಬೇಕೆಂದು ಹಲವು ದಿನಗಳಿಂದ ಬೇಡಿಕೆ ಇಟ್ಟಿದ್ದರು. ಇವರ ಬೇಡಿಕೆ ಈಡೇರಿಸದೆ ಇರುವುದರಿಂದ ಅಂಬಿಗರು ಈ ಪ್ರತಿಭಟನೆ ಕೈಗೊಂಡಿದ್ದರು.
ಇನ್ನು, ಅಂಬಿಗರು ಮುಷ್ಕರ ಮಾಡುತ್ತಿರುವುದರಿಂದ ಹೊಗೆನಕಲ್ ಜಲಪಾತಕ್ಕೆ ತೆರಳಲು ಪ್ರವಾಸಿಗರಿಗೆ ಮಲೆ ಮಹದೇಶ್ವರ ಬೆಟ್ಟ ಪೊಲೀಸರು ನಿರ್ಬಂಧ ಹೇರಿದ್ದಾರೆ. ಹೊಗೇನಕಲ್ ಫಾಲ್ಸ್‌ನಲ್ಲಿ ತೆಪ್ಪ ನಡೆಸುವವರಿಗೆ 800 ರೂಪಾಯಿ ನಿಗದಿ ಮಾಡುವಂತೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಸರ್ಕಾರ ಅನುಮೋದನೆ ನೀಡಿದ ನಂತರ ದರ ಹೆಚ್ಚಳ ಮಾಡಲಾಗುವುದು ಎಂದು ಅರಣ್ಯಾಧಿಕಾರಿ ಅಂಕರಾಜು ಮಾಹಿತಿ ನೀಡಿದ್ದರು.












Click it and Unblock the Notifications