ಮಲೆಮಹದೇಶ್ವರ ಬೆಟ್ಟ: ಪವಾಡ ಪುರುಷನ ಮಡಿಲಲ್ಲಿ ಪುಂಡಾಟ ಮೆರೆದ ಕುಡುಕರ ದಂಡು
ಚಾಮರಾಜನಗರ, ಆಗಸ್ಟ್ 25: ಇತ್ತೀಚಿಗೆ ರಾಜ್ಯದ ಪ್ರವಾಸಿ ಹಾಗೂ ಐತಿಹಾಸಿಕ ಸ್ಥಳದಲ್ಲಿ ಕೆಲವು ಪ್ರವಾಸಿಗರ ಹುಚ್ಚಾಟ ಮಿತಿ ಮೀರುತ್ತಿದ್ದು, ಉಳಿದ ಪ್ರವಾಸಿರಿಗೆ ಹಾಗೂ ಭಕ್ತರಿಗೆ ಅತೀವ ತೊಂದರೆ ಉಂಟಾಗುತ್ತಿದೆ. ಇದೀಗ ಇಂತಹ ಘಟನೆ ಮಲೆಮಹದೇಶ್ವರ ಬೆಟ್ಟದಲ್ಲಿ ನಡೆದಿದೆ.
ಸುಪ್ರಸಿದ್ಧ ಮಲೆಮಹದೇಶ್ವರ ಬೆಟ್ಟದಲ್ಲಿ ಮದ್ಯವ್ಯಸನಿಗಳ ಹುಚ್ಚಾಟ ಹೆಚ್ಚಾಗಿದ್ದು, ದೇವರ ದರ್ಶನಕ್ಕೆ ಎಂದು ಬಂದು ಪುಂಡಾಟ ಮೆರೆದಿದ್ದಾರೆ. ಹನೂರು ತಾಲೂಕಿನ ಮಲೆಮಹದೇಶ್ವರ ಬೆಟ್ಟದ ಮಹದೇಶ್ವರ ದೇವಾಲಯ ಪ್ರಾಧಿಕಾರಕ್ಕೆ ಸೇರಿರುವ ನಾಗಮಲೆ ಭವನದಲ್ಲಿ ನಿನ್ನೆ ರಾತ್ರಿ ಕೆಲ ಯುವಕರು ಮದ್ಯಪಾನ ಮಾಡಿ ಪುಂಡಾಟ ಮೆರೆದಿದ್ದಾರೆ.

ಗುಂಡ್ಲುಪೇಟೆ ಮೂಲದ ಮಹೇಂದ್ರ, ಸಿದ್ದಪ್ಪ, ಮಾದಪ್ಪ ಹಾಗೂ ಆನಂದ್ ಎನ್ನುವ ಯುವಕರು ಮದ್ಯಪಾನ ಮಾಡಿ ನಾಗಮಲೆ ಭವನದ ಸಿಬ್ಬಂದಿ ಜೊತೆ ಗಲಾಟೆ ನಡೆಸಿದ್ದಾರೆ. ದೇವರ ದರ್ಶನಕ್ಕೆ ಬಂದಿದ್ದ ಯುವರು ನಾಗಮಲೆ ಭವನದಲ್ಲಿ ತಂಗಿದ್ದರು. ಬಳಿಕ ತಡರಾತ್ರಿ ಕುಡಿದ ಮತ್ತಿನಲ್ಲಿ ಯುವಕರು ಗಲಾಟೆ ನಡೆಸಿದ್ದಾರೆ. ಪಕ್ಕದ ರೂಮ್‌ನಲ್ಲಿ ವಾಸ್ತವ್ಯ ಹೂಡಿದ್ದ ಮಹಿಳೆ ಈ ಬಗ್ಗೆ ದೂರು ನೀಡಿದ್ದು, ಯುವಕರ ವರ್ತನೆಯನ್ನು ಪ್ರಶ್ನಿಸಿದ ಪ್ರಾಧಿಕಾರದ ಸಿಬ್ಬಂದಿ ಜೊತೆ ಸಹ ಗಲಾಟೆ ನಡೆಸಿದ್ದಾರೆ.
ಈ ಬಗ್ಗೆ ತಕ್ಷಣವೇ ಪೊಲೀಸರಿಗೆ ಮಾಹಿತಿ ನೀಡಲಾಗಿದ್ದು, ವಿಚಾರ ತಿಳಿದು ಸ್ಥಳಕ್ಕೆ ಆಗಮಿಸಿದ ಪೊಲೀಸರು ಯುವಕರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಮಲೆಮಹದೇಶ್ವರ ಬೆಟ್ಟ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಶ್ರೇಷ್ಠ ಪರಂಪರೆಯ ಮಾದಪ್ಪನ ಸನ್ನಿಧಿಯಲ್ಲಿ ಕುಡುಕರ ಹಾವಳಿ ಹೆಚ್ಚಾಗಿದ್ದು, ಇಂತವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂದು ಭಕ್ತರು ಆಗ್ರಹಿಸಿದ್ದಾರೆ.

ಹುಚ್ಚಾಟ ಮೆರೆದ ಪ್ರವಾಸಿಗರಿಂದಲೇ ಕಸ ತೆಗೆಸಿದ ಪೊಲೀಸರು
ಇನ್ನು ಚಿಕ್ಕಮಗಳೂರು ಜಿಲ್ಲೆಯ ಪ್ರವಾಸಿ ತಾಣಗಳಲ್ಲಿಯೂ ಕೂಡ ಪ್ರವಾಸಿಗರು ಹುಚ್ಚಾಟ ಮೆರೆಯುತ್ತಿದ್ದು, ಪೊಲೀಸರು ಕಠಿಣ ಕ್ರಮಕ್ಕೆ ಮುಂದಾಗಿದ್ದಾರೆ. ಇತ್ತೀಚಿಗೆ ಚಿಕ್ಕಮಗಳೂರು ಲಿಂಗದಹಳ್ಳಿ ಠಾಣೆಯ ಪೊಲೀಸರು ಪ್ರವಾಸಿಗರಿಂದಲೇ ಕಸವನ್ನು ತೆಗೆಸುವ ಮೂಲಕ ತಕ್ಕ ಪಾಠ ಕಲಿಸಿದ್ದರು.
ತರೀಕೆರೆ ತಾಲೂಕಿನ ಕಲ್ಲತ್ತಿಗಿರಿ-ಕೆಮ್ಮಣ್ಣುಗುಂಡಿ ರಸ್ತೆ ಮಾರ್ಗದಲ್ಲಿ ಬಿಯರ್ ಬಾಟಲಿ ಎಸೆದು ಪುಂಡಾಟ ಮೆರೆದವರಿದಂಲೇ ಪೊಲೀಸರು ಅಲ್ಲಿನ ಕಸವನ್ನು ತೆಗೆಸಿದ್ದರು. ಈ ಕಾರ್ಯಕ್ಕೆ ಸಾಮಾಜಿಕ ಜಾಲತಾಣದಲ್ಲಿ ಅಭಿನಂದನೆಗಳ ಮಹಾಪೂರವೇ ಹರಿದುಬಂದಿತ್ತು. ಹೀಗೆ ಜಿಲ್ಲೆಯ ಪ್ರವಾಸಿ ತಾಣಗಳಲ್ಲಿ ಎಲ್ಲೆಂದರಲ್ಲೇ ಕುಡಿದು ಬಾಟೆಲ್, ಪ್ಲಾಸ್ಟಿಕ್ ಎಸೆದವರಿಗೆ ಪೊಲೀಸರು ಕ್ಲಾಸ್ ತೆಗೆದುಕೊಂಡಿದ್ದರು.












Click it and Unblock the Notifications