ರಾಜ್ಯದ ಏಕೈಕ ಆಷಾಢ ರಥೋತ್ಸವಕ್ಕೆ ಸಿದ್ಧತೆ ಹೇಗಿದೆ ಗೊತ್ತಾ?-ಮಾಹಿತಿ ಇಲ್ಲಿದೆ ತಿಳಿಯಿರಿ
ಚಾಮರಾಜನಗರ, ಜುಲೈ, 01: ಆಷಾಢ ಮಾಸದಲ್ಲಿ ನಡೆಯುವ ರಾಜ್ಯದ ಏಕೈಕ ರಥೋತ್ಸವವಾದ ಚಾಮರಾಜನಗರದ ಚಾಮರಾಜೇಶ್ವರ ರಥೋತ್ಸವಕ್ಕೆ ಸಿದ್ಧತೆ ಆರಂಭಗೊಂಡಿದ್ದು, ಶಾಸಕ ಸಿ.ಪುಟ್ಟರಂಗಶೆಟ್ಟಿ ರಥ ಕಟ್ಟುವ ಕಾರ್ಯಕ್ಕೆ ಚಾಲನೆ ಕೊಟ್ಟಿದ್ದಾರೆ.
ಆಷಾಢ ಮಾಸದಲ್ಲಿ ರಥೋತ್ಸವ ನಡೆಯುವುದು ಬಹಳ ಅಪರೂಪ ಮತ್ತು ವಿರಳವಾಗಿದ್ದು, ರಾಜ್ಯದಲ್ಲಿ ಚಾಮರಾಜನಗರದಲ್ಲಿ ಮಾತ್ರ ಆಷಾಢದ ಜಾತ್ರೆ ನಡೆಯಲಿದೆ. ಇದೇ ಜುಲೈ 20ರಂದು ರಥೋತ್ಸವ ನಡೆಯಲಿದ್ದು, ಸಾಂಪ್ರದಾಯಿಕವಾಗಿ ತಯಾರಿ ಆರಂಭಗೊಂಡಿದೆ.

ಚಾಮರಾಜೇಶ್ವರ ರಥೋತ್ಸವವು ನೂರಾರು ವರ್ಷಗಳಿಂದ ನಡೆದುಕೊಂಡು ಬರುತ್ತಿದ್ದು, ಇದು ದಂಪತಿಗಳ ಜಾತ್ರೆ ಅಂಥಲೇ ಜನಪ್ರಿಯವಾಗಿದೆ. ಮದುವೆಯಾದ ಹೊಸತರಲ್ಲಿ ಪತ್ನಿ ತವರಿನಲ್ಲಿ ಇರುವುದರಿಂದ ಈ ಜಾತ್ರೆಯ ದಿನದಂದು ಪತಿ-ಪತ್ನಿ ಭೇಟಿಯಾಗಿ ಹಣ್ಣು ಜವನ ಎಸೆದು ಪ್ರಾರ್ಥನೆ ಸಲ್ಲಿಸುವುದು ಇಲ್ಲಿನ ವಿಶೇಷವಾಗಿದೆ.
ತೇರು ಕಟ್ಟುವ ಕಾಯಕದಲ್ಲಿ ನುರಿತರು ಪಾಲ್ಗೊಂಡಿದ್ದು, ಈ ಬಾರಿ ಮಳೆ ಉತ್ತಮವಾಗಿ ಸುರಿಯುತ್ತಿರುವ ಹಿನ್ನೆಲೆ ಅದ್ಧೂರಿಯಾಗಿ ಜಾತ್ರೆ ಮಾಡಲು ಭಕ್ತರು ಅಣಿಯಾಗುತ್ತಿದ್ದಾರೆ. ಈ ಜಾತ್ರೆಯಲ್ಲಿ ನವಜೋಡಿಗಳ ಕಲರವವೇ ಕೇಂದ್ರ ಬಿಂದುವಾಗಿದ್ದು, ಇದರಿಂದ ಚಾಮರಾಜನಗರದಲ್ಲಿ ಜಾತ್ರೆ ಕಳೆ ಹೆಚ್ಚಿದಂತಾಗಲಿದೆ.
30 ದಿನಗಳಲ್ಲಿ ಸಂಗ್ರಹವಾದ ಹಣ ಎಷ್ಟು?: ಹನೂರು ತಾಲ್ಲೂಕಿನ ಶ್ರೀ ಮಲೆ ಮಹದೇಶ್ವರ ಬೆಟ್ಟದಲ್ಲಿ ಶುಕ್ರವಾರ (ಜೂನ್ 28) ನಡೆದ ಹುಂಡಿ ಹಣ ಎಣಿಕೆ ಕಾರ್ಯ ನಡೆದಿದ್ದು, ಈ ಬಾರಿ 30 ದಿನಗಳ ಅವಧಿಯಲ್ಲಿ 2.20 ಕೋಟಿ ರೂಪಾಯಿ ಸಂಗ್ರಹವಾಗಿದೆ ಎನ್ನುವ ಮಾಹಿತಿ ತಿಳಿದುಬಂದಿದೆ.
ಮಲೆ ಮಹದೇಶ್ವರ ಬೆಟ್ಟದ ಬಸ್ ನಿಲ್ದಾಣದ ಬಳಿಯ ವಾಣಿಜ್ಯ ಸಂಕೀರ್ಣದಲ್ಲಿ ಸಾಲೂರು ಬೃಹನ್ ಮಠದ ಅಧ್ಯಕ್ಷರಾದ ಶ್ರೀ ಶಾಂತ ಮಲ್ಲಿಕಾರ್ಜುನ ಸ್ವಾಮಿರವರ ಸಮ್ಮುಖದಲ್ಲಿ ಹುಂಡಿಗಳನ್ನು ತೆರೆಯಲಾಯಿತು. ಬಳಿಕ ಸಿಸಿ ಕ್ಯಾಮೆರಾ ಕಣ್ಗಾವಲಿನಲ್ಲಿ ಎಣಿಕೆ ಕಾರ್ಯ ಪ್ರಾರಂಭಿಸಲಾಗಿದ್ದು, ಎಣಿಕೆ ಕಾರ್ಯವು ಸಂಜೆ 7 ಗಂಟೆಯವರೆಗೂ ನಡೆಯಿತು.
ಸರ್ಕಾರಿ ರಜಾ ದಿನಗಳು ಹಾಗೂ ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗಳಲ್ಲೊಂದಾದ ಶಕ್ತಿ ಯೋಜನೆಯ ಉಚಿತ ಪ್ರಯಾಣದ ಹಿನ್ನೆಲೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ದೇವಸ್ಥಾನಕ್ಕೆ ಭೇಟಿ ನೀಡಿದ್ದರಿಂದ ಹರಕೆಯ ರೂಪದಲ್ಲಿ 2,20,97,533 ರೂಪಾಯಿ ನಗದು 106 ಗ್ರಾಂ ಚಿನ್ನ ಹಾಗೂ 2.1000 ಬೆಳ್ಳಿ ಪದಾರ್ಥಗಳನ್ನು ಹುಂಡಿಗೆ ಹಾಕಿದ್ದಾರೆ.
ಅಷ್ಟೇ ಅಲ್ಲದೆ, 3,38,830 ವಿದೇಶಿ ನೋಟುಗಳು, ಡಾಲರ್ 3, ಅರಬ್ 1, ನೇಪಾಳ 1, ಉಮನ್ ದೇಶದ 1 ಒಟ್ಟು 6 ಹುಂಡಿಯಲ್ಲಿ ಪತ್ತೆಯಾಗಿವೆ. ಇದಲ್ಲದೆ ಚಲಾವಣೆಯಲ್ಲಿ ಇಲ್ಲದ 2,000 ಮುಖಬೆಲೆಯ 19 ನೋಟುಗಳು ಹುಂಡಿಯಲ್ಲಿ ಹಾಕಿದ್ದಾರೆ.
ಈ ವೇಳೆ ಶ್ರೀ ಮಲೆ ಮಹದೇಶ್ವರ ಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಎ.ಈ ರಘು, ಉಪ ಕಾರ್ಯದರ್ಶಿ ಚಂದ್ರಶೇಖರ್, ಲೆಕ್ಕಾ ಅಧೀಕ್ಷಕ ನಾಗೇಶ್, ಜಿಲ್ಲಾಡಳಿತ ಕಚೇರಿ ಮುಜರಾಯಿ ಶಾಖೆಯ ಶ್ವೇತ, ಬ್ಯಾಂಕ್ ಆಫ್ ಬರೋಡ ನೌಕರರು ಹಾಗೂ ಪ್ರಾಧಿಕಾರದ ಸಿಬ್ಬಂದಿ ಎಣಿಕೆ ಕಾರ್ಯದಲ್ಲಿ ಭಾಗವಹಿಸಿದ್ದರು.












Click it and Unblock the Notifications