Chamarajanagar Dasara 2024: ಚಾಮರಾಜನಗರದಲ್ಲಿ ದಸರಾಗೆ ಸಿದ್ದತೆ ಹೇಗಿದೆ ಗೊತ್ತಾ?-ಇಲ್ಲಿದೆ ಮಾಹಿತಿ
ಚಾಮರಾಜನಗರ, ಆಗಸ್ಟ್, 23: ನಾಡಹಬ್ಬ ಮೈಸೂರು ದಸರಾ ಭಾಗವಾಗಿ ಗಡಿಜಿಲ್ಲೆ ಚಾಮರಾಜನಗರ ಜಿಲ್ಲೆಯಲ್ಲೂ ದಸರಾ ಮಹೋತ್ಸವವನ್ನು ಅಕ್ಟೋಬರ್ 7, 8 ಮತ್ತು 9ರಂದು ಒಟ್ಟು ಮೂರು ದಿನಗಳ ಕಾಲ ಅರ್ಥಪೂರ್ಣ ಹಾಗೂ ವಿಜೃಂಭಣೆಯಿಂದ ಆಚರಿಸಲು ನಿರ್ಧರಿಸಲಾಗಿದೆ. ಕಾರ್ಯಕ್ರಮಗಳ ವಿವರ ಇಲ್ಲಿದೆ ನೋಡಿ.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜಿಲ್ಲಾಧಿಕಾರಿ ಶಿಲ್ಪಾನಾಗ್ ಅಧ್ಯಕ್ಷತೆಯಲ್ಲಿ ನಡೆದ ವಿವಿಧ ಸಂಘ ಸಂಸ್ಥೆಗಳ ಮುಖಂಡರು, ಕಲಾವಿದರು, ಅಧಿಕಾರಿಗಳನ್ನೊಳಗೊಂಡ ದಸರಾ ಆಚರಣೆ ಕುರಿತ ಪೂರ್ವಭಾವಿ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಯಿತು.

ಮೈಸೂರು ದಸರಾ ಭಾಗವಾಗಿ ಈ ಹಿಂದಿನಂತೆ ಚಾಮರಾಜನಗರ ದಸರಾ ಮಹೋತ್ಸವವನ್ನು ಮೂರು ದಿನಗಳ ಕಾಲ ಹೆಚ್ಚು ಆಕರ್ಷಕವಾಗಿ ಹಾಗೂ ವಿಭಿನ್ನ ಕಾರ್ಯಕ್ರಮಗಳ ಮೂಲಕ ಅರ್ಥಪೂರ್ಣ ಹಾಗೂ ವಿಜೃಂಭಣೆಯಿಂದ ನಡೆಸಲು ನಿರ್ಧಾರ ತೆಗೆದುಕೊಳ್ಳಲಾಯಿತು.
ಸಭೆಯಲ್ಲಿ ಮಾತನಾಡಿದ ಸಂಘ ಸಂಸ್ಥೆಗಳ ಮುಖಂಡರು, ಕಲಾವಿದರು ದೀಪಾಲಂಕಾರವನ್ನು ವ್ಯಾಪಕವಾಗಿ ಪಟ್ಟಣದಲ್ಲಿ ಮಾಡಬೇಕು. ನಗರ ಪ್ರವೇಶಿಸುವ ಮುಖ್ಯ ದ್ವಾರದಲ್ಲಿ ವಿಶೇಷವಾಗಿ ವಿದ್ಯುತ್ ದೀಪಾಲಂಕಾರ ಇರಬೇಕು. ಸ್ಥಳೀಯ ಕಲಾವಿದರಿಗೆ ಆದ್ಯತೆ ನೀಡಬೇಕು. ರಾಜ್ಯಮಟ್ಟದಲ್ಲಿ ಹೆಸರು ಮಾಡಿರುವ ಜಿಲ್ಲೆಯ ಕಲಾವಿದರು ಹಾಗೂ ಇನ್ನಿತರ ಕಲಾವಿದರನ್ನು ಆಹ್ವಾನಿಸಿ ಕಾರ್ಯಕ್ರಮವನ್ನು ಆಯೋಜಿಸಬೇಕು. ಯುವಕರಿಗೆ ಆದ್ಯತೆ ನೀಡಬೇಕು ಎಂದು ಸಲಹೆ ನೀಡಿದರು.
ವಿದ್ಯಾರ್ಥಿಗಳಿಗೆ ಅವಕಾಶ ಮಾಡಿಕೊಡುವ ಸಾಂಸ್ಕೃತಿಕ ಕಾರ್ಯಕ್ರಮಗಳು ಇರಬೇಕು. ಜಿಲ್ಲೆಯ ಕ್ರೀಡಾ ಸಾಧಕರನ್ನು ಸನ್ಮಾನಿಸಬೇಕು. ಬೊಂಬೆ ಕೂರಿಸುವುದು, ಸಂವಿಧಾನ ಜಾಗೃತಿಯಂತಹ ಕಾರ್ಯಕ್ರಮಗಳು, ಜನಪದ, ರಂಗಗೀತೆ ಸೇರಿದಂತೆ ವೈವಿಧ್ಯಮಯ ಕಾರ್ಯಕ್ರಮಗಳು ನಡೆಯಬೇಕು. ಜನನಮಂಟಪವನ್ನು ಸ್ವಚ್ಚಗೊಳಿಸಿ ದಸರಾ ಮಹೋತ್ಸವದ ಸಂದರ್ಭದಲ್ಲಿ ಅರ್ಥಪೂರ್ಣ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಏರ್ಪಡಿಸಬೇಕು ಎಂಬುದೂ ಸೇರಿದಂತೆ ಇನ್ನಿತರ ಹಲವು ಸಲಹೆ, ಅಭಿಪ್ರಾಯಗಳನ್ನು ಮುಖಂಡರು, ಕಲಾವಿದರು ಸಭೆಯಲ್ಲಿ ನೀಡಿದರು.
ಬಳಿಕ ಜಿಲ್ಲಾಧಿಕಾರಿ ಶಿಲ್ಪಾನಾಗ್ ಮಾತನಾಡಿ, ನಾಡಹಬ್ಬ ದಸರಾ ಮಹೋತ್ಸವವನ್ನು ಚಾಮರಾಜನಗರ ಜಿಲ್ಲೆಯಲ್ಲೂ ಮೂರು ದಿನಗಳ ಕಾಲ ಸಾಂಪ್ರದಾಯಿಕ ಹಾಗೂ ಹೊಸ ಕಾರ್ಯಕ್ರಮಗಳ ರೂಪುರೇಷೆಯೊಂದಿಗೆ ನಡೆಸಲು ಎಲ್ಲರ ಸಲಹೆ, ಅಭಿಪ್ರಾಯವನ್ನು ಪಡೆಯಲಾಗಿದೆ. ಈ ಬಾರಿ ಮತ್ತಷ್ಟು ಆಕರ್ಷಕ, ಅರ್ಥಪೂರ್ಣ ಕಾರ್ಯಕ್ರಮಗಳನ್ನು ಏರ್ಪಡಿಸಲು ಎಲ್ಲರ ಸಹಕಾರ ಅಗತ್ಯವಾಗಿದೆ ಎಂದರು.
ದಸರಾ ಮಹೋತ್ಸವದ ಪ್ರಮುಖ ಆಕರ್ಷಣೆ ಹಾಗೂ ಸಾಂಪ್ರದಾಯಿಕವಾದ ಗಜ ಪೂಜೆ ಮೆರವಣಿಗೆಗೆ ಚಿಂತನೆ ನಡೆಸಲಾಗಿದ್ದು, ಅರಣ್ಯ ಇಲಾಖೆ ಹಾಗೂ ಇನ್ನಿತರ ಸಂಬಂಧಪಟ್ಟ ಇಲಾಖೆಗಳೊಂದಿಗೆ ಚರ್ಚಿಸಲಾಗುತ್ತಿದೆ. ಮೆರವಣಿಗೆಯಲ್ಲಿ ಸ್ತಬ್ದಚಿತ್ರ, ಕಲಾತಂಡಗಳಿಗೂ ಅವಕಾಶ ಮಾಡಿಕೊಡಲಾಗುವುದು. ಪಟ್ಟಣದಲ್ಲಿ ವಿದ್ಯುತ್ ದೀಪಾಲಂಕಾರ ವ್ಯಾಪಕವಾಗಿ ಮಾಡುವ ನಿಟ್ಟಿನಲ್ಲಿ ವಿದ್ಯುತ್ ಸರಬರಾಜು ನಿಗಮದ ಅಧಿಕಾರಿಗಳು ಸ್ಥಳ ಪರಿಶೀಲಿಸಿ ಅಂದಾಜು ಪಟ್ಟಿ ಸಲ್ಲಿಸಬೇಕು ಎಂದು ತಿಳಿಸಿದರು.












Click it and Unblock the Notifications