ಮಹದೇವಪ್ಪ ಅವರನ್ನು ಎರಡನೇ ಅಂಬೇಡ್ಕರರನ್ನಾಗಿ ಮಾಡಬೇಕು ಎನ್ನುವ ಆಸೆ ಇತ್ತು-ಡಿ.ಕೆ.ಶಿವಕುಮಾರ್
ಚಾಮರಾಜನಗರ, ಏಪ್ರಿಲ್ 03: ಸುನೀಲ್ ಬೋಸ್ ಅವರನ್ನು 3 ಲಕ್ಷ ಮತಗಳ ಅಂತರದಿಂದ ಚಾಮರಾಜನಗರದ ಜನತೆ ಗೆಲ್ಲಿಸಬೇಕು. ಸಂಸತ್ತಿಗೆ ಮಹದೇವಪ್ಪ ಅವರನ್ನು ಕಳುಹಿಸಿ ಎರಡನೇ ಅಂಬೇಡ್ಕರರನ್ನಾಗಿ ಮಾಡಬೇಕು ಎನ್ನುವ ಆಸೆ ಇತ್ತು ಆದರೆ ಅವರು ಒಪ್ಪಲಿಲ್ಲ. ಕ್ಷೇತ್ರದ ಮತದಾರರು ಮಲ್ಲಿಕಾರ್ಜುನ ಖರ್ಗೆ ಅವರು ಮತ್ತು ಕಾಂಗ್ರೆಸ್ ಪಕ್ಷವನ್ನು ಬಲಪಡಿಸಬೇಕು ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮತದಾರರಲ್ಲಿ ಮನವಿ ಮಾಡಿದ್ದಾರೆ.
ಚಾಮರಾಜನಗರದಲ್ಲಿ ಮಾತನಾಡಿದ ಅವರು, ಸುನೀಲ್ ಬೋಸ್ ನನ್ನ ಮಗನಿದ್ದಂತೆ, ಅವರನ್ನು ಸಂಸತ್ತಿಗೆ ಕಳುಹಿಸಬೇಕು. ಧ್ರುವನಾರಾಯಣ ಅವರ ಕನಸನ್ನು ನನಸು ಮಾಡಲು ನಾವು ಸುನೀಲ್ ಜೊತೆ ನಿಂತಿದ್ದೇವೆ. ಸಿದ್ದರಾಮಯ್ಯ ಅವರು ಚಾಮರಾಜನಗರದ ಮನೆ ಮಗ ಇದ್ದಂತೆ. ಅವರ ಮೇಲೆ ನಂಬಿಕೆ ಇಟ್ಟು ಮತ ನೀಡಬೇಕು. ಅವರ ಬೆಂಬಲಕ್ಕೆ ಮತದಾರರು ನಿಲ್ಲಬೇಕು ಎಂದರು.

ಕೊರೊನಾ ಸಮಯದಲ್ಲಿ ಆಕ್ಸಿಜನ್ ಇಲ್ಲದೆ ಜನ ಸತ್ತರೂ ರಕ್ಷಣೆಗೆ ಯಾವ ಬಿಜೆಪಿಯವರು ಬರಲಿಲ್ಲ. ಸಹಾಯವನ್ನು ಮಾಡಲಿಲ್ಲ. ನಿಮ್ಮ ಸಹಾಯಕ್ಕೆ ಬಂದ ಕಾಂಗ್ರೆಸ್ ಪಕ್ಷವನ್ನು ಎಂದಿಗೂ ಮರೆಯಬಾರದು.
ಕಮಲ ಕೆರೆಯಲ್ಲಿ ಇದ್ದರೆ ಚೆಂದ, ತೆನೆ ಹೊಲದಲ್ಲಿ ಇದ್ದರೆ ಚೆಂದ, ದಾನ, ಧರ್ಮ ಮಾಡುವ ಕೈ ಅಧಿಕಾರದಲ್ಲಿ ಇದ್ದರೆ ಚೆಂದ. ಕೊಟ್ಟ ಮಾತನ್ನು ನಾವು ಉಳಿಸಿಕೊಂಡು ಐದು ಗ್ಯಾರಂಟಿಗಳನ್ನು ಜಾರಿಗೆ ತಂದಿದ್ದೇವೆ. ಐದು ಬೆರಳು ಸೇರಿ ಕೈ ಗಟ್ಟಿಯಾಯಿತು. ಐದು ಗ್ಯಾರಂಟಿಗಳು ಸೇರಿ ಈ ಕೈ ಗಟ್ಟಿಯಾಯಿತು ಎಂದು ಹೇಳಿದರು.

ಉಚಿತ ಅಕ್ಕಿ, ಬಸ್ ಪ್ರಯಾಣ, 2 ಸಾವಿರ ಗೃಹಲಕ್ಷ್ಮಿ ಹಣ ಸೇರಿದಂತೆ ಎಲ್ಲ ಯೋಜನೆಗಳು ಮನೆಗೆ ತಲುಪುತ್ತಿವೆ. ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ಸರ್ಕಾರ ಅಧಿಕಾರಕ್ಕೆ ಬಂದ ಮೊದಲನೇ ದಿನವೇ ಗ್ಯಾರಂಟಿ ಜಾರಿಗೆ ತೀರ್ಮಾನ ಮಾಡಿದೆವು. ಇಂತಹ ನಿರ್ಧಾರವನ್ನು ಮೋದಿಯವರು ಮಾಡಿದ್ದಾರೆಯೇ? 15 ಲಕ್ಷ ಎಲ್ಲಿ, ಅಚ್ಚೇದಿನ್ ಎಲ್ಲಿ, 2 ಕೋಟಿ ಉದ್ಯೋಗ ಎಲ್ಲಿ ಮಾನ್ಯ ಮೋದಿಯವರೇ?. ಅವರಿಂದ ಏನೂ ಆಗಲಿಲ್ಲ ಎಂದರು.

ಹಾಲಿ ಸಂಸದರಾದ ಶ್ರೀನಿವಾಸ ಪ್ರಸಾದ್ ಅವರು ಸುನೀಲ್ ಬೋಸ್ ಅವರಿಗೆ ಆಶೀರ್ವಾದ ಮಾಡಿ ಕಳುಹಿಸಿದ್ದಾರೆ. ಈಗ ಜನರು ಆಶೀರ್ವಾದ ಮಾಡಬೇಕು ಎಂದು ಮನವಿ ಮಾಡುತ್ತೇನೆ. ಶ್ರೀನಿವಾಸ್ ಪ್ರಸಾದ್ ಅವರ ಬೆಂಬಲದ ಜೊತೆಗೆ ಅವರ ಎಲ್ಲಾ ಹಿತೈಷಿಗಳ, ಬೆಂಬಲಿಗರ ಶಕ್ತಿಯನ್ನು ನಮಗೆ ನೀಡಿದ್ದಾರೆ ಎಂದರು.












Click it and Unblock the Notifications