ಕಂಪ್ಯೂಟರ್ ಸರ್ಟಿಫಿಕೇಟ್ ಪಡೆದ ಜೈಲು ಹಕ್ಕಿಗಳು-ರಾಜ್ಯದ ಇದೇ ಮೊಟ್ಟ ಮೊದಲು
ಚಾಮರಾಜನಗರ, ಜೂನ್, 21: ಕಾರಾಗೃಹ ಬಂಧಿಗಳಿಗೆ ಕಾರಾಗೃಹದಲ್ಲಿಯೇ ಕಂಪ್ಯೂಟರ್ ಶಿಕ್ಷಣ ತರಬೇತಿ ನೀಡುವ ರಾಜ್ಯದಲ್ಲಿಯೇ ಮೊದಲು ಎನಿಸಿರುವ ವಿನೂತನ ಅರ್ಥಪೂರ್ಣ ಕಾರ್ಯಕ್ರಮ ಚಾಮರಾಜನಗರ ಜಿಲ್ಲೆಯಲ್ಲಿ ನಡೆದಿದೆ.
ಚಾಮರಾಜನಗರದ ಜಿಲ್ಲಾ ಕಾರಾಗೃಹದಲ್ಲಿರುವ ವಿಚಾರಣಾಧೀನ ಬಂಧಿಗಳಿಗೆ ಅಲ್ಲಿಯೇ ಕಂಪ್ಯೂಟರ್ ತರಬೇತಿ ನೀಡಿ ಅವರು ಬಿಡುಗಡೆಗೊಂಡ ಬಳಿಕ ಬದುಕು ಕಟ್ಟಿಕೊಳ್ಳಲು ನೆರವಾಗಲಿ ಎಂಬ ಉದ್ದೇಶದಿಂದ ಕಂಪ್ಯೂಟರ್ ತರಬೇತಿ ನೀಡಲು ಯೋಚಿಸಿದ್ದು, ಮೈಸೂರಿನ ಇನ್‍ಫೋಸಿಸ್ ರೋಟರಿ ಪಂಚಶೀಲ ಸಂಸ್ಥೆಗಳೊಂದಿಗೆ, ಸಿಎಸ್‍ಆರ್ ನೆರವಿನೊಂದಿಗೆ ಕಾರಾಗೃಹದಲ್ಲಿಯೇ ಕಂಪ್ಯೂಟರ್ ತರಬೇತಿಗೆ ಈ ಹಿಂದೆ ಚಾಲನೆ ನೀಡಲಾಗಿತ್ತು.

ಕಾರಾಗೃಹದಲ್ಲಿ ಸುಸಜ್ಜಿತ ಕೊಠಡಿಯಲ್ಲಿ 10 ಕಂಪ್ಯೂಟರ್ ಮತ್ತು ಪ್ರಿಂಟರ್‌ಗಳೊಂದಿಗೆ ತರಬೇತಿ ಆರಂಭ ಆಗಿತ್ತು. ತರಬೇತಿಗಾಗಿ 38 ವಿಚಾರಣಾಧೀನ ಬಂಧಿಗಳು ನೊಂದಣಿಯಾಗಿದ್ದರು. ಇವರಲ್ಲಿ 7 ಬಂಧಿಗಳು ಕಾರಾಗೃಹದಲ್ಲಿಯೇ ಕಂಪ್ಯೂಟರ್ ವಿವಿಧ ಕೋರ್ಸ್‌ಗಳನ್ನು ಕಲಿತು ಯಶಸ್ವಿಯಾಗಿ ಪೂರ್ಣಗೊಳಿಸಿ ಜಿಲ್ಲಾಧಿಕಾರಿ ಶಿಲ್ಪಾನಾಗ್ ಅವರಿಂದ ಇನ್‍ಫೋಸಿಸ್ ಸಂಸ್ಥೆಯ ಪ್ರಮಾಣ ಪತ್ರ ಪಡೆದುಕೊಂಡಿದ್ದಾರೆ.
ಕಾರಾಗೃಹ ಕಟ್ಟಡದಲ್ಲಿಯೇ ಬಂಧಿಗಳಿಗೆ ಕಂಪ್ಯೂಟರ್ ತರಬೇತಿ ಪಡೆಯಲು ಇನ್‍ಫೋಸಿಸ್ ಸಹಕಾರದೊಂದಿಗೆ ಐಐಎಚ್‍ಟಿ ಟೆಕಾಡಮಿ ಬೋಧಕರನ್ನು ನಿಯೋಜಿಸಲಾಗಿದೆ. ಬಂಧಿಗಳಿಗೆ ಮೈಕ್ರೋಸಾಫ್ಟ್ ಆಫೀಸ್, ಕಂಪ್ಯೂಟರ್ ಫಂಡಮೆಂಟಲ್, ಸಾಫ್ಟ್ ಸ್ಕಿಲ್ ಸೇರಿದಂತೆ ವಿವಿಧ ತರಬೇತಿಗಳನ್ನು ನೀಡಲಾಗುತ್ತಿದೆ.
ಮೊದಲನೇ ತಂಡದಲ್ಲಿ 38 ಬಂಧಿಗಳು ಕಂಪ್ಯೂಟರ್ ಕೋರ್ಸ್‌ಗಳನ್ನು ಕಲಿಯಲು ಆರಂಭಿಸಿದರು. ಇವರಲ್ಲಿ ಯಶಸ್ವಿಯಾಗಿ ಕೋರ್ಸ್‌ಗಳನ್ನು ಪೂರ್ಣಗೊಳಿಸಿದ 7 ಮಂದಿಗೆ ಇನ್‍ಫೋಸಿಸ್ ಸಂಸ್ಥೆಯ ಪ್ರಮಾಣ ಪತ್ರವನ್ನು ಜಿಲ್ಲಾಧಿಕಾರಿ ಶಿಲ್ಪಾನಾಗ್ ವಿತರಿಸಿದ್ದಾರೆ.
13 ಬಂಧಿಗಳು ಸಕ್ರಿಯವಾಗಿ ಕೋರ್ಸ್‌ಗಳಲ್ಲಿ ಪಾಲ್ಗೊಂಡು ವಿಶೇಷ ಗಮನಸೆಳೆದಿದ್ದು, ಇವರ ಕಲಿಕೆ ಮುಂದುವರೆದಿದೆ. ಆಸಕ್ತ ಎಲ್ಲಾ ಬಂಧಿಗಳಿಗೆ ಕಂಪ್ಯೂಟರ್ ತರಬೇತಿ ನೀಡುವ ಕಾರ್ಯ ಕಾರಾಗೃಹದಲ್ಲಿ ಮುಂದುವರೆಸಲಾಗಿದ್ದು, ಇದು ನಿರಂತರವಾಗಿ ನಡೆಯಲಿದೆ.
ಇನ್ನು, ಪ್ರಮಾಣ ಪತ್ರ ವಿತರಿಸಿ ಜಿಲ್ಲಾಧಿಕಾರಿ ಶಿಲ್ಪಾ ನಾಗ್ ಮಾತನಾಡಿ, ದೇಶ ಕಟ್ಟುವ ಮಹತ್ವದ ಕಾರ್ಯದಲ್ಲಿ ಪ್ರತಿಯೊಬ್ಬರ ಕೊಡುಗೆ ಪಾತ್ರ ಅಮೂಲ್ಯವಾಗಿದೆ. ವಿಚಾರಣಾಧೀನ ಬಂಧಿಗಳು ಅವರು ಬಿಡುಗಡೆಗೊಂಡ ಬಳಿಕ ಬದುಕು ಹಸನಾಗಿಸಿಕೊಳ್ಳಲು ಅವರ ಭವಿಷ್ಯದ ಹಿತದೃಷ್ಠಿಯಿಂದ ಉದ್ಯೋಗ ಕೈಗೊಳ್ಳಲು ಅನುಕೂಲ ಆಗಲೆಂಬ ಸದುದ್ದೇಶದಿಂದ ಕಂಪ್ಯೂಟರ್ ತರಬೇತಿ ಆರಂಭಿಸಲಾಯಿತು. ಇಂದು ನಮ್ಮ ಆಶಯ ಉದ್ದೇಶ ಫಲಪ್ರದವಾಗಿದೆ. ಈ ಮಹತ್ಕಾರ್ಯಕ್ಕೆ ಇನ್‍ಫೋಸಿಸ್, ಐಐಎಚ್‍ಟಿ ಇನ್ನಿತರ ಸಂಸ್ಥೆಗಳು ಸಿಎಸ್‍ಆರ್ ನೆರವು ನೀಡಿದ್ದು, ಇದಕ್ಕಾಗಿ ಧನ್ಯವಾದಗಳನ್ನು ಅರ್ಪಿಸುವುದಾಗಿ ಹೇಳಿದರು.
ಸಮಾಜದಲ್ಲಿ ಯಾರೂ ಮೇಲು ಅಲ್ಲ, ಕೀಳು ಅಲ್ಲ. ಪ್ರತಿಯೊಬ್ಬರಿಗೂ ಸಮಾನ ಅವಕಾಶಗಳು ಲಭಿಸಬೇಕು. ಬಂಧಿಗಳು ಇಲ್ಲಿಂದ ಬಿಡುಗಡೆಗೊಂಡ ಬಳಿಕ ಆತ್ಮವಿಶ್ವಾಸದಿಂದ ಉತ್ತಮ ಜೀವನ ಮಾಡಬೇಕು. ಕುಟುಂಬ, ಸಮಾಜಕ್ಕೆ ಆದರ್ಶ ಪ್ರಾಯವಾಗಿ ಕೊಡುಗೆ ನೀಡಬೇಕು. ಜೀವನೋಪಾಯಕ್ಕೆ ಪೂರಕವಾದ ಸ್ವಂತ ಉದ್ಯೋಗ ಮಾಡಬೇಕು ಎಂಬ ಆಶಯ ನನ್ನದಾಗಿದೆ. ತರಬೇತಿ ಪಡೆದವರು ಸ್ವಂತ ಸೈಬರ್ ಕೇಂದ್ರ, ಸೇವಾ ಕೇಂದ್ರಗಳನ್ನು ತೆರೆದು ಇತರರಿಗೆ ಮಾದರಿಯಾಗಬಹುದು ಎಂದು ಹೇಳಿದರು.
ಈ ವೇಳೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪದ್ಮಿನಿ ಸಾಹು, ಕಾರಾಗೃಹದ ಅಧೀಕ್ಷಕರಾದ ಎನ್.ಎಸ್.ಶಿವಕುಮಾರ್ ಸೇರಿದಂತೆ ಮತ್ತಿತರರು ಹಾಜರಿದ್ದರು.












Click it and Unblock the Notifications