ಸಿದ್ದರಾಮಯ್ಯ 100% ಪ್ರಾಮಾಣಿಕ ರಾಜಕಾರಣಿ, ಮೊದ್ಲು ನಿಮ್ಮ ಮನೆ ಕೊಳಕು ಸ್ವಚ್ಛಗೊಳಿಸಿಕೋ: ವಿಜಯೇಂದ್ರಗೆ ಮಹದೇವಪ್ಪ ಟಾಂಗ್
ಚಾಮರಾಜನಗರ, ಆಗಸ್ಟ್, 24: ರಾಜ್ಯದಲ್ಲಿ ಇದೀಗ ಮುಡಾ ಹಗರಣ ಪ್ರಕರಣ ಸದ್ದು ಮಾಡುತ್ತಿದ್ದು, ಈ ಸಂಬಂಧ ಸಿಎಂ ಸಿದ್ದರಾಮಯ್ಯ ವಿರುದ್ಧ ವಿಪಕ್ಷ ನಾಯಕರು ಆಕ್ರೋಶ ಹೊರಹಾಕುತ್ತಲೇ ಇದ್ದಾರೆ. ಇನ್ನು ಈ ಬಗ್ಗೆ ಚಾಮರಾಜನಗರದಲ್ಲಿ ಪ್ರತಿಕ್ರಿಯಿಸಿರುವ ಸಚಿವ ಎಚ್.ಸಿ.ಮಹಾದೇವಪ್ಪ ಏನು ಹೇಳಿದ್ದಾರೆ ಎನ್ನುವ ಮಾಹಿತಿಯನ್ನು ಇಲ್ಲಿ ತಿಳಿಯಿರಿ.
ಚಾಮರಾಜನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಶಾಸಕರು, ಮಂತ್ರಿಗಳು ಹಾಗೂ ಹೈಕಮಾಂಡ್ ಸಿದ್ದರಾಮಯ್ಯ ಪರ ಇದೆ. ಸಿದ್ದರಾಮಯ್ಯ ಯಾವ ತಪ್ಪು ಕೂಡ ಮಾಡಿಲ್ಲ, ಅವರು ಪ್ರಾಮಾಣಿಕ ರಾಜಕಾರಣಿ ಎಂದು ತಿಳಿಸಿದರು.

ಜೆಡಿಎಸ್, ಬಿಜೆಪಿ ರಾಜಭವನವನ್ನು ರಾಜಕೀಯ ಅಂಗಳ ಮಾಡಿಕೊಂಡಿದ್ದಾರೆ. ಸಂವಿಧಾನ ಉಲ್ಲಂಘನೆ ಮಾಡುತ್ತಿರುವುದು ಪ್ರಜಾಪ್ರಭುತ್ವಕ್ಕೆ ಅಪಾಯ. ಪ್ರಾಮಾಣಿಕ ರಾಜಕಾರಣಿ ಸಿದ್ದರಾಮಯ್ಯ ಮೇಲೆ ಕಳಂಕ, ಗೌರವಕ್ಕೆ ಧಕ್ಕೆ ತರಲು ಕೋಮು ವಾದಿಗಳು, ಮತೀಯವಾದಿಗಳಿಂದ ಪಿತೂರಿ ನಡೆಸಲಾಗಿದೆ ಎಂದು ಆರೋಪಿಸಿದರು.
ಮುಡಾ ಪ್ರಕರಣದಲ್ಲಿ ಹಣಕಾಸಿನ ಅವ್ಯವಹಾರ ಆಗಿಲ್ಲ, ಸ್ವಜನ ಪಕ್ಷಪಾತ ಆಗಿಲ್ಲ, ಸಿದ್ದರಾಮಯ್ಯ ಯಾವುದೇ ತಪ್ಪು ಮಾಡಿಲ್ಲ. ಗ್ಯಾರಂಟಿ ಯೋಜನೆಗಳಿಂದ ಬಡವರಿಗೆ 4-5 ವರಮಾನ ಬರುತ್ತಿದೆ. ಇದನ್ನು ಕಂಡು ಬಡವರ ಪರ ಕೆಲಸ ಮಾಡಬಾರದು ಎಂದು ಸರ್ಕಾರದ ವಿರುದ್ಧ ಕೇಂದ್ರ ಸರ್ಕಾರ, ಜೆಡಿಎಸ್ ನಾಯಕರು ಪಿತೂರಿ ನಡೆಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜೀನಾಮೆ ಕೊಡಬೇಕು ಎಂಬ ವಿಜಯೇಂದ್ರ ಹೇಳಿಕೆಗೆ ಪ್ರತಿಕ್ರಿಯಿಸಿ, ಜನರು 135 ಜನರನ್ನು ಕಳುಹಿಸಿರುವುದು ರಾಜೀನಾಮೆ ಕೊಡುವುದಕ್ಕಾ.? ರಾಜೀನಾಮೆ ಕೊಡಲು ಏನಾಗಿದೆ.? ವಿಜಯೇಂದ್ರ ಹೇಳಿದ ತಕ್ಷಣ ರಾಜೀನಾಮೆ ಕೊಡಕ್ಕಾಗತ್ತಾ? ಅವರೆಲ್ಲ ಏನೇನು ಮಾಡಿದ್ದಾರೆ ಎಂದು ಪ್ರಶ್ನಿಸಿದರು.
ಇನ್ನು ಮಾಜಿ ಮುಖ್ಯಮಂತ್ರು ಬಿ.ಎಸ್.ಯಡಿಯೂರಪ್ಪ, ವಿಜಯೇಂದ್ರ, ನಿರಾಣಿ, ಜನಾರ್ದನ ರೆಡ್ಡಿ ಏನೇನು ಮಾಡಿದ್ದಾರೆ. ಅವರೆಲ್ಲರ ಮೇಲೂ ಕೇಸ್‌ಗಳಿದೆಯಲ್ಲಾ, ಪ್ರಾಸಿಕ್ಯೂಷನಲ್ಲು ಇದೆಯಲ್ಲ, ಮೊದಲು ಅದನ್ನು ಅವರು ಶುದ್ಧಿ ಮಾಡಿಕೊಳ್ಳಲಿ. ಅವರ ಮನೆಯನ್ನು ಮೊದಲು ಸ್ವಚ್ಚವಾಗಿಟ್ಟುಕೊಳ್ಳಲಿ ಎಂದು ವಿಜಯೇಂದ್ರಗೆ ತಿರುಗೇಟು ನೀಡಿದರು.
ಸಿಎಂ ಸಿದ್ದರಾಮಯ್ಯಗೆ ಬಹಿರಂಗ ಪತ್ರ: ಮುಡಾ ಹಗರಣ ಕುರಿತು ಇತ್ತೀಚೆಗೆ ಪ್ರತಿಪಕ್ಷಗಳಿಂದ ನಡೆದ ರಾಜಕೀಯ ಬೆಳವಣಿಗೆಯಿಂದ ಯಾವುದೇ ಪ್ರಯೋಜನವಾಗಿಲ್ಲ. ನೀವೇ ಹೇಳಿದಂತೆ ಇದು ನಿಮ್ಮ ಕೊನೇ ಅಧಿಕಾರವಧಿ. ಅಧಿಕಾರದಲ್ಲಿದ್ದಾಗಲಾದರೂ ಜನರು ನಿಮ್ಮನ್ನು ಶಾಶ್ವತವಾಗಿ ನೆನೆಯುವ ಕೆಲಸ ಮಾಡಿ ಎಂದು ಮೈಸೂರು ನಗರ ವಿಶ್ವಸ್ಥ ಮಂಡಳಿ ಮಾಜಿ ಅಧ್ಯಕ್ಷ ಡಿ.ಮಾದೇಗೌಡ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಬಹಿರಂಗ ಪತ್ರ ಬರೆದಿದ್ದಾರೆ.
"ಮುಡಾ ಶುದ್ಧೀಕರಣಕ್ಕಾಗಿ ಅಲ್ಲಿ ನಡೆದಿರುವ ಎಲ್ಲಾ ಹಗರಣಗಳನ್ನು ಬಯಲಿಗೆ ತರಲು ಮಾಜಿ ಲೋಕಾಯುಕ್ತ ಸಂತೋಷ್ ಹೆಗ್ಡೆ ಅವರಂತಹ ದಕ್ಷ ನಿವೃತ್ತ ನ್ಯಾಯಾಧೀಶರಿಂದ ತನಿಖೆ ನಡೆಸಿ. ಶೇ.50:50 ಅನುಪಾತದ ಯೋಜನೆಯಡಿ ಕಬಳಿಸಿರುವ ನಿವೇಶನಗಳನ್ನು ವಾಪಸ್ ಪಡೆಯಿರಿ. ಭೂಗಳ್ಳರ ವಿರುದ್ಧ ಕಠಿಣ ಕ್ರಮಕೈಗೊಳ್ಳಿ," ಎಂದು ಸಲಹೆ ನೀಡಿದ್ದಾರೆ. ಇನ್ನು ಮುಡಾ ಹಗರಣಗಳನ್ನು ತೊಡೆದು ಹಾಕಿ, ರಾಜ್ಯದ ಎಲ್ಲಾ ನಗರಾಭಿವೃದ್ಧಿ ಪ್ರಾಧಿಕಾರಗಳನ್ನೂ ಜನಸ್ನೇಹಿಯಾಗಿ ಬೆಳೆಸುವಂತಹ ಕಟ್ಟು ನಿಟ್ಟಿನ ನಿಯಮಗಳನ್ನು ಜಾರಿಗೆ ತನ್ನಿ ಎಂದು ತಿಳಿಸಿದ್ದಾರೆ.
ನಿಮ್ಮ ಪತ್ನಿ ಪಾರ್ವತಿ ಹೆಸರು ಮುಡಾ ಪ್ರಕರಣದಲ್ಲಿ ಬಂದಿರುವುದಕ್ಕೆ ಬೇಸರವಾಗುತ್ತಿದೆ. ಅಂಥವರಿಗೆ ನೀವು ಮುಡಾ ಕಳಂಕ ಹಚ್ಚಿದಿರಲ್ಲಾ ಇದು ಸರಿಯೇ? ನಿಮಗೆ ನಿಮ್ಮ ಪತ್ನಿ ಮೇಲೆ ಕಾಳಜಿ ಇದ್ದಿದ್ದರೆ, ಆ 14 ಮುಡಾ ನಿವೇಶನಗಳನ್ನು ಹಿಂತಿರುಗಿಸಿ ಆರೋಪ ಮುಕ್ತರಾಗುತ್ತಿದ್ದಿರಿ. ಆಗ ರಾಜ್ಯಪಾಲರು ಮುಡಾ ಪ್ರಕರಣದಲ್ಲಿ ಪ್ರಾಸಿಕ್ಯೂಷನ್‌ಗೆ ಅನುಮತಿ ಕೊಡುವ ಸನ್ನಿವೇಶ ಸೃಷ್ಟಿಯಾಗುತ್ತಿರಲಿಲ್ಲ ಎಂದಿದ್ದಾರೆ.
ಮುಡಾ ಹಗರಣ ಕುರಿತು ಇತ್ತೀಚೆಗೆ ಪ್ರತಿಪಕ್ಷಗಳಿಂದ ನಡೆದ ರಾಜಕೀಯ ಬೆಳವಣಿಗೆಯಿಂದ ಯಾವುದೇ ಪ್ರಯೋಜನವಾಗಿಲ್ಲ. ನೀವೇ ಹೇಳಿದಂತೆ ಇದು ನಿಮ್ಮ ಕೊನೆ ಅಧಿಕಾರವಧಿ. ನಿಮ್ಮ ಕೊನೆ ಅಧಿಕಾರದಲ್ಲಾದರೂ ಜನರು ನಿಮ್ಮನ್ನು ಶಾಶ್ವತವಾಗಿ ನೆನೆಯುವ ಕೆಲಸ ಮಾಡಿ. ಬಹು ಮುಖ್ಯವಾಗಿ ನಿಮ್ಮ ಹೆಸರಿಗೆ ಕಳಂಕ ಅಂಟಿಸಿರುವ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಕೊಳೆ ತೊಳೆಯುವ ಕೆಲಸ ಮಾಡಿ ಎಂದು ಸಲಹೆ ನೀಡಿದ್ದಾರೆ.












Click it and Unblock the Notifications