ಮುಖ್ಯಮಂತ್ರಿಗಳು ಬರೀ ಬುರುಡೆ ಬಿಡುತ್ತಾರೆ: ಚಾಮರಾನಗರದಲ್ಲಿ ವಾಟಾಳ್ ನಾಗರಾಜ್ ಆಕ್ರೋಶ
ಚಾಮರಾಜನಗರ, ಡಿಸೆಂಬರ್, 05: ಬಜೆಟ್‌ನಲ್ಲಿ ಜಿಲ್ಲೆಯ ಅಭಿವೃದ್ದಿಗೆ ಮೂರುಕಾಸು ಮೀಸಲಿಡದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಚುನಾವಣೆ ಹತ್ತಿರ ಇರುವುದರಿಂದ ಚಾಮರಾಜನಗರಕ್ಕೆ ಬರುತ್ತಾರೆ. ಹಾಗೆಯೇ 6 ಸಾವಿರ ಕೋಟಿ, 3 ಸಾವಿರ ಕೋಟಿ ಬಿಡುಗಡೆ ಮಾಡಿದ್ದೇನೆ ಎಂದು ಬುರುಡೆ ಬಿಡುತ್ತಾರೆ. ಇದನ್ನು ನಂಬಬೇಡಿ ಎಂದು ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ಜಿಲ್ಲೆಯ ಜನರಿಗೆ ಹೇಳಿದರು.
ನಗರದ ಪ್ರವಾಸಿಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಚಾಮರಾಜನಗರದ ಜನತೆ ನೋವಿನಲ್ಲಿ ಇದ್ದು, ಕಣ್ಣೀರಿನಲ್ಲಿ ಕೈ ತೊಳೆಯುತ್ತಿದ್ದಾರೆ. ಮುಖ್ಯಮಂತ್ರಿಗಳಿಗೆ ಚಾಮರಾಜನಗರದ ಮೇಲೆ ಇಷ್ಟು ದಿನಗಳಿಂದ ಇಲ್ಲದ ಪ್ರೀತಿ ಚುನಾವಣೆ ಸಂದರ್ಭದಲ್ಲಿ ಏಕೆ? ನೀವು ಇಲ್ಲಿ ಬಂದು ಸಾವಿರಾರು ಕೋಟಿ ಬಿಡುಗಡೆ ಘೋಷಣೆ ಮಾಡಿದರೆ, ಅದು ಆದೇಶ ಆಗಲು ಅನೇಕ ದಿನಗಳ ಕಾಲಾವಕಾಶ ಬೇಕಾಗುತ್ತದೆ. ಇನ್ನು 5 ತಿಂಗಳೊಳಗೆ ಚುನಾವಣೆ ಬಂದು ನಿಮ್ಮ ಸರ್ಕಾರ ಬಿದ್ದುಹೋಗುತ್ತದೆ. ಅಮೇಲೆ ಅನುದಾನ ಬಿಡುಗಡೆ ಮಾಡುತ್ತೀರಾ? ಇದು ಬರೀ ನಾಟಕ. ಚಂದ್ರ ಲೋಕವನ್ನೇ ಮೇಲಕ್ಕೆ ತರುತ್ತೇನೆ ಎಂದು ಬರೀ ಬುರುಡೆ ಬಿಡುತ್ತಾರೆ," ಎಂದು ಆಕ್ರೋಶ ವ್ಯಕ್ತಪಡಿಸಿದರು.
ಚಾಮರಾಜನಗರ ಶಾಸಕ ಪುಟ್ಟರಂಗಶೆಟ್ಟಿ ವಿರುದ್ಧ ಅಕ್ರಮ ಆಸ್ತಿ ಗಳಿಕೆ ಆರೋಪ ಮಾಡಿದ ಬಿಜೆಪಿ ಮುಖಂಡ
ಲೂಟಿ ಮಾಡುವವರಿಗೆ ಬೆಂಬಲ ಕೊಟ್ಟಿದ್ದೀರಿ
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೇ ಚಾಮರಾಜನಗರಕ್ಕೆ ನಿಮ್ಮ ಕೊಡುಗೆ ಏನು? ಪಿಡಬ್ಲ್ಯೂ ಯೋಜನೆಯಡಿಯಲ್ಲಿ ಎಷ್ಟು ರಸ್ತೆ ಮಾಡಿಸಿದ್ದೀರಿ. ನೀರಾವರಿ ಎಷ್ಟು ಅಭಿವೃದ್ಧಿ ಮಾಡಿಸಿದ್ದೀರಿ? ಎಷ್ಟು ಜನರಿಗೆ ಮನೆಗಳನ್ನು ಕೊಟ್ಟಿದ್ದೀರಿ? ಎಷ್ಟು ವಿದ್ಯುತ್‌ಶಕ್ತಿ ಮಾಡಿದ್ದೀರಿ? ಎಂದು ಸರಣಿ ಪ್ರಶ್ನೆಗಳನ್ನು ಕೇಳುವ ಮೂಲಕ ಆಕ್ರೋಶ ವ್ಯಕ್ತಪಡಿಸಿದರು. ನೀವು ಗಣಿಗಾರಿಕೆ ಲೂಟಿ ಮಾಡುವವರಿಗೆ ಬೆಂಬಲ ಕೊಟ್ಟಿದ್ದೀರಿ ಹೊರತು ಬೇರೆ ಯಾರಿಗೂ ಅಲ್ಲ. ಇದರಿಂದ ಜನರಿಗೆ ದೊಡ್ಡ ಅನ್ಯಾಯವಾಗಿದೆ ಎಂದು ಆರೋಪಿಸಿದರು.
ಜನರ ಕಲ್ಯಾಣಕ್ಕಾಗಿ ನಿರಂತರ ಹೋರಾಟ
ನಾನು ಸೋತರೂ ನನಗೇನು ಅದರ ಬಗ್ಗೆ ನೋವು ಇಲ್ಲ. ಚಾಮರಾಜನಗರ ಜನರ ಕಲ್ಯಾಣಕ್ಕಾಗಿ ನಿರಂತರ ಹೋರಾಟ ಮಾಡುತ್ತೇನೆ. ಚಾಮರಾಜನಗರ ಜಿಲ್ಲೆ ಮಾಡಿಸಿದ್ದು, ಕಾವೇರಿ ಕುಡಿಯುವ ನೀರು ತಂದದ್ದು, ಜಿಲ್ಲಾಡಳಿತ ಭವನ ಮಾಡಿಸಿದ್ದು, ಎಸ್‌ಪಿ ಆಫೀಸ್, ಜೋಡಿರಸ್ತೆ ಸೇರಿದಂತೆ ಹೀಗೆ ಚಾಮರಾಜನಗರದಲ್ಲಿ ಅನೇಕ ಅಭಿವೃದ್ದಿ ಕೆಲಸ ಮಾಡಿಸಿದ್ದೇನೆ. ಇದನ್ನು ಚಾಮರಾಜನಗರ ಜನತೆ ಅರ್ಥಮಾಡಿಕೊಳ್ಳಬೇಕಿದೆ ಎಂದರು.
ಈ ಸಂದರ್ಭದಲ್ಲಿ ವರದನಾಯಕ, ಗೋಪಾಲನಾಯಕ, ರೇವಣ್ಣಸ್ವಾಮಿ, ಕುಮಾರ್, ಅಜಯ್, ಶಿವಲಿಂಗಮೂರ್ತಿ, ಪಾರ್ಥಸಾರಥಿ ಸೇರಿದಂತೆ ಮತ್ತಿತರರು ಹಾಜರಿದ್ದರು.
ಬ್ರಾಹ್ಮಣರ ಮೀಸಲಾತಿಯಿಂದ ಹಿಂದುಳಿದ ವರ್ಗಗಳಿಗೆ ಅನ್ಯಾಯ-ಯತೀಂದ್ರ ಸಿದ್ದರಾಮಯ್ಯ