ಚಾಮರಾಜನಗರ: ವಿದ್ಯಾರ್ಥಿನಿಗೆ ಕೋಳಿ ಕುಕ್ಕಿದ್ದಕ್ಕೆ ಶಾಲೆಗೆ ಬೀಗ ಜಡಿದು ಪೋಷಕರ ಆಕ್ರೋಶ
ಚಾಮರಾಜನಗರ, ನವೆಂಬರ್, 24: ಶಾಲೆಗೆ ಯಾವುದೇ ಸೂಕ್ತ ವ್ಯವಸ್ಥೆ ಇಲ್ಲದೇ ಕೋಳಿಯೊಂದು ಬಾಲಕಿಯನ್ನು ಕುಕ್ಕಿದ ಘಟನೆ ಹನೂರು ತಾಲೂಕಿನ ಪೆದ್ದನಪಾಳ್ಯ ಎಂಬ ಗ್ರಾಮದಲ್ಲಿ ನಡೆದಿದ್ದು, ಪಾಲಕರು ಆಕ್ರೋಶಗೊಂಡು ಪ್ರತಿಭಟನೆ ನಡೆಸುತ್ತಿದ್ದಾರೆ.
ಗುರುವಾರ ಪೆದ್ದನ ಪಾಳ್ಯ ಶಾಲೆಯಲ್ಲಿ ಒಂದನೇ ತರಗತಿ ಬಾಲಕಿಗೆ ಕೋಳಿ ಕಚ್ಚಿ ಗಾಯಗೊಳಿಸಿದ್ದು, ಗುರುವಾರದಂದೇ ಶಾಲೆಗೆ ಬೀಗ ಜಡಿದು ಮಕ್ಕಳನ್ನು ಪಾಲಕರು ಮನೆಗೆ ಕರೆದೊಯ್ದಿದ್ದರು. ಇಂದು ಕೂಡ ಮಕ್ಕಳನ್ನು ಶಾಲೆಗೆ ಕಳುಹಿಸದೇ ಪಾಲಕರು ಪ್ರತಿಭಟನೆ ನಡೆಸಿ ಶಿಕ್ಷಣ ಇಲಾಖೆ ವಿರುದ್ಧ ಪ್ರತಿಭಟಿಸಿ ಅಕ್ರೋಶ ಹೊರಹಾಕುತ್ತಿದ್ದಾರೆ.

ಶಾಲೆಯ ಜಾಗದಲ್ಲಿ ಖಾಸಗಿ ವ್ಯಕ್ತಿಗಳು ವಿನಾಕಾರಣ ಹಸು ಕರುಗಳನ್ನು ಕಟ್ಟುತ್ತಿದ್ದು, ಜೊತೆಗೆ ಕೋಳಿಗಳನ್ನು ಮೇಯಲು ಬಿಡುತ್ತಿರುವ ಪರಿಣಾಮ ಈ ಘಟನೆ ನಡೆದಿದೆ. ಇಲಾಖೆ ಸರಿಯಾದ ರೀತಿ ವ್ಯವಸ್ಥೆ ಮಾಡಬೇಕು ಎಂದು ಪಾಲಕರು ಆಗ್ರಹಿಸಿದ್ದಾರೆ. ಸದ್ಯ, ಅಧಿಕಾರಿಗಳು ಇಂದು ಶಾಲೆಗೆ ಭೇಟಿ ಕೊಟ್ಟು ಪಾಲಕರ ಮನವೊಲಿಸುವ ಕೆಲಸವನ್ನು ಮಾಡುತ್ತಿದ್ದಾರೆ.
ಬೀದಿ ನಾಯಿಗಳಿಗೆ ಅನ್ನ ನೀಡಿದ BCCI ಅಧ್ಯಕ್ಷ
ಬಿಸಿಸಿಐ ಅಧ್ಯಕ್ಷ ರೋಜರ್ ಬಿನ್ನಿ ಈಗ ಕೃಷಿಯಲ್ಲಿ ಸೆಕೆಂಡ್ ಇನ್ನಿಂಗ್ ಆರಂಭಿಸಿದ್ದಾರೆ. ಇದರ ಜೊತೆಗೆ, ಬೀದಿನಾಯಿಗಳ ಮೇಲೆ ವಿಶೇಷ ಅಕ್ಕರೆ ಇಟ್ಟುಕೊಂಡಿದ್ದು, ಆಹಾರ ಜೊತೆಗೆ ಔಷಧವನ್ನು ಕೊಡುವ ಮೂಲಕ ಪ್ರಾಣಿ ಪ್ರೀತಿ ಮೆರೆದಿದ್ದಾರೆ.
ಗುಂಡ್ಲುಪೇಟೆ ತಾಲೂಕಿನ ಗೋಪಾಲಸ್ವಾಮಿ ಬೆಟ್ಟದ ತಪ್ಪಲಿನಲ್ಲಿ ಕೃಷಿ ನಡೆಸುವ ರೋಜರ್ ಬಿನ್ನಿ ತಾವು ಬಂದಾಗಲೆಲ್ಲ ಬೀದಿ ನಾಯಿಗಳಿಗೆ ಆಹಾರ ನೀಡುತ್ತಾರೆ. ಕೆಲ ದಿನಗಳ ಹಿಂದೆಯಷ್ಟೇ, ಬೀದಿನಾಯಿಗಳಿಗೆ ಚುಚ್ಚುಮದ್ದನ್ನು ಕೂಡ ಹಾಕಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ.
ತಾವು ಕೃಷಿ ಭೂಮಿಗೆ ತೆರಳುವ ಮಾರ್ಗ ಮಧ್ಯದಲ್ಲಿ ಸಿಗುವ ಬೀದಿ ನಾಯಿಗಳಿಗೆ ಆಹಾರ ನೀಡುತ್ತಾ ಸಾಗುವ ಬಿನ್ನಿಯ ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ಇದೀಗ ಭಾರೀ ವೈರಲ್ ಆಗುತ್ತಿದೆ. ಕೆಲ ದಿನಗಳ ಹಿಂದೆಯಷ್ಟೇ ಕೃಷಿ ಉಪಯೋಗಕ್ಕಾಗಿ ಚಾಮರಾಜನಗರದಲ್ಲಿ ಟ್ರಾಕ್ಟರ್ ಖರೀದಿಸಿ ಗಮನ ಸೆಳೆದಿದ್ದರು. ಇದೀಗ ಮತ್ತೆ ಮೂಲಕ ಪ್ರಾಣಿಗಳನ್ನು ಸಂತೈಸುವ ಮೂಲಕ ಗಮನ ಸೆಳೆದಿದ್ದಾರೆ.
ಮುತ್ತಯ್ಯ ಮುರಳೀಧರನ್ ಕಾರ್ಖಾನೆ
ಇನ್ನು ವಿಶ್ವ ವಿಖ್ಯಾತ ಕ್ರಿಕೆಟಿಗ, ಸ್ಪಿನ್ ಮಾಂತ್ರಿಕ ಎಂದೇ ಪ್ರಸಿದ್ಧಿಯಾಗಿರುವ ಮುತ್ತಯ್ಯ ಮುರಳೀಧರನ್ ಕೈಗಾರಿಕೋದ್ಯಮಿಯಾಗಿ ಮತ್ತೇ ಮೋಡಿ ಮಾಡಲು ಕರ್ನಾಟಕಕ್ಕೆ ಬರುತ್ತಿದ್ದಾರೆ. ಅದರಲ್ಲೂ ಕರ್ನಾಟಕದ ಚಾಮರಾಜನಗರದಲ್ಲಿ ಕಾರ್ಖಾನೆ ಸ್ಥಾಪನೆ ಮಾಡಲು ಮುಂದಾಗಿರುವುದೇ ವಿಶೇಷ.
ಗಡಿಜಿಲ್ಲೆ ಚಾಮರಾಜನಗರದ ಬದನಗುಪ್ಪೆ-ಕೆಲ್ಲಂಬಳ್ಳಿ ಕೈಗಾರಿಕಾ ಪ್ರದೇಶದಲ್ಲಿ ಸಾಫ್ಟ್ ಡ್ರಿಂಕ್ ಕಾರ್ಖಾನೆಯನ್ನು ಆರಂಭಿಸಲು ಮುಂದಾಗಿದ್ದಾರೆ. ಈ ಹಿನ್ನೆಲೆ 46 ಹೆಕ್ಟೇರ್ ಪ್ರದೇಶವನ್ನು ಖರೀದಿಸಿ, ಆಡಳಿತಾತ್ಮಕವಾದ ಎಲ್ಲಾ ಹಂತಗಳನ್ನೂ ಮುಗಿಸಿ ಕಾರ್ಕಾನೆ ನಿರ್ಮಾಣ ಕಾರ್ಯವನ್ನು ಆರಂಭಿಸಿದ್ದಾರೆ ಎಂದು ಇತ್ತೀಚೆಗಷ್ಟೇ ತಿಳಿದುಬಂದಿತ್ತು.
ಶ್ರೀಲಂಕಾ ತಂಡದ ಮಾಜಿ ಕ್ರಕೆಟ್ ಆಟಗಾರ ಈ ಕಾರ್ಖಾನೆಯಲ್ಲಿ ಮುತ್ತಯ್ಯ ಬೆವರೇಜಸ್ ಹೆಸರಿನಲ್ಲಿ ಸಾಫ್ಟ್ ಡ್ರಿಂಕ್, ಕೂಲ್ ಡ್ರಿಂಕ್, ಸುವಾಸಿತ ಹಾಲನ್ನು ಕ್ಯಾನ್‌ಗಳಲ್ಲಿ ಮಾರಾಟ ಮಾಡಲಿದ್ದಾರೆ. ಚಾಮರಾಜನಗರದಲ್ಲಿ ಸಾಪ್ಟ್ ಡ್ರಿಂಕ್ ಹಾಗೂ ನಾನ್ ಆಲ್ಕೊಹಾಲಿಕ್ ಡ್ರಿಂಕ್‌ಗಳು ತಯಾರಾಗಲಿದೆ ಎನ್ನುವ ಮಾಹಿತಿ ಲಭ್ಯವಾಗಿತ್ತು.
250 ಕೋಟಿ ರೂಪಾಯಿಗೂ ಅಧಿಕ ಮೊತ್ತದ ಹಣವನ್ನು ಚಾಮರಾಜನಗರದಲ್ಲಿ ಹೂಡಿಕೆ ಮಾಡುತ್ತಿದ್ದು, ಇದರಿಂದ ಸ್ಥಳೀಯವಾಗಿ 500-800 ಮಂದಿಗೆ ಕೆಲಸ ಸಿಗಲಿದೆ. ಪರೋಕ್ಷವಾಗಿ ನೂರಾರು ಮಂದಿ ಕಾರ್ಕಾನೆಯಿಂದ ಸಹಾಯವಾಗಾಲಿದೆ.
ಖ್ಯಾತ ಕ್ರಿಕೆಟಿಗ ಚಾಮರಾಜನಗರದಲ್ಲಿ ಕಾರ್ಖಾನೆ ಆರಂಭಿಸುವುದರಿಂದ ಮತ್ತಷ್ಟು ಕೈಗಾರಿಕೆಗಳನ್ನು ಸೆಳೆಯಲು ಅನುಕೂಲ ಆಗಲಿದೆ. ಈಗಾಗಲೇ ಬಿರ್ಲಾ ಗ್ರೂಪಿನಿಂದ ಪರಿಸರಸ್ನೇಹಿ ಬಣ್ಣದ ಕಾರ್ಖಾನೆ ಕೂಡ ನಿರ್ಮಾಣವಾಗುತ್ತಿದ್ದು, ಅಂತಿಮ ಹಂತದ ಪ್ರಕ್ರಿಯೆಯಲ್ಲಿ ಈ ಕಾರ್ಖಾನೆ ಇದೆ. ಒಟ್ಟಿನಲ್ಲಿ ಖ್ಯಾತ ಕ್ರಿಕೆಟಿಗ ಕರ್ನಾಟಕದಲ್ಲಿ ವೃತ್ತಿ ಬದುಕಿನ ಎರಡನೇ ಇನ್ನಿಂಗ್ಸ್ ಆರಂಭ ಮಾಡಿರುವುದು ಸಂತೋಷದಾಯಕ ಬೆಳವಣಿಗೆ ಆಗಿದೆ.












Click it and Unblock the Notifications