ಚಾಮರಾಜನಗರದ ಆಷಾಢದ ಏಕೈಕ ರಥೋತ್ಸವ ಇಲ್ಲ
ರಥೋತ್ಸವದ ರಥಕ್ಕೆ ಕೆಲ ದಿನಗಳ ಹಿಂದೆ ಬೆಂಕಿ ಬಿದ್ದಿದ್ದು ಹಾಗೂ ದೇಗುಲದ ಜೀರ್ಣೋದ್ಧಾರ ಕಾರ್ಯ ನಡೆಯುತ್ತಿದೆ. ಅದು ಮುಗಿಯಲು ಇನ್ನೂ ಎರಡೂವರೆ ವರ್ಷಗಳು ಬೇಕಾಗಿರುವುದರಿಂದ ಸದ್ಯಕ್ಕೆ ಈ ರಥೋತ್ಸವ ನಡೆಯುವುದು ಅನುಮಾನ ಎನ್ನುವಂತಾಗಿದೆ.
ಚಾಮರಾಜನಗರ, ಮೇ 25: ಆಷಾಢದಲ್ಲಿ ನಡೆಯುವ ಏಕೈಕ ರಥೋತ್ಸವ ಎಂಬ ಖ್ಯಾತಿಗೆ ಪಾತ್ರರಾಗಿರುವ ಚಾಮರಾಜೇಶ್ವರ ರಥೋತ್ಸವ ಈ ಬಾರಿ ನಡೆಸದಿರಲು ರಥೋತ್ಸವದ ಉತ್ಸುವಾರಿ ಹೊತ್ತಿರುವ ಚಾಮರಾಜೇಶ್ವರ ದೇಗುಲದ ಆಡಳಿತ ಮಂಡಳಿ ನಿರ್ಧರಿಸಿದೆ.
ಇದಕ್ಕೆ ಕಾರಣವೂ ಇದೆ. ಕೆಲವು ಸಮಯಗಳ ಹಿಂದೆ ಇಲ್ಲಿನ ಐತಿಹಾಸಿಕ ರಥಕ್ಕೆ ಬೆಂಕಿ ಬಿದ್ದು ಹಾನಿಯಾಗಿದೆ. ಇದರ ಪುನರ್ ನಿರ್ಮಾಣ ಕಾರ್ಯಕ್ಕೆ ಇನ್ನೂ ಚಾಲನೆ ನೀಡಲಾಗಿಲ್ಲ. ಈ ನಡುವೆ ಇಲ್ಲಿರುವ ಐತಿಹಾಸಿಕ ಚಾಮರಾಜೇಶ್ವರ ದೇವಾಲಯದ ಜೀರ್ಣೋದ್ಧಾರ ಕಾರ್ಯವೂ ಭರದಿಂದ ಸಾಗಿದೆ.[ಬಂಡೀಪುರದಲ್ಲಿ ಅಕ್ರಮವಾಗಿ ಹರಿಸಿದ್ದ ವಿದ್ಯುತ್ ಸ್ಪರ್ಶಕ್ಕೆ ಹಸು ಬಲಿ]
ಸುಮಾರು 2.10 ಕೋಟಿ ರು. ವೆಚ್ಚದಲ್ಲಿ ಅಭಿವೃದ್ಧಿ ಕೆಲಸ ನಡೆಯುತ್ತಿದ್ದು, ಇದು ಮುಗಿಯಲು ಸುಮಾರು ಎರಡು ವರ್ಷಗಳು ಬೇಕಾಗಬಹುದು. ಹೀಗಾಗಿ ಸದ್ಯಕ್ಕೆ ರಥೋತ್ಸವ ನಡೆಯುವುದಿಲ್ಲವೆಂದು ದೇಗುಲದ ಆಡಳಿತ ಮಂಡಳಿ ತಿಳಿಸಿದೆ.

ದೇಗುಲದ ಐತಿಹ್ಯ: 1826ರಲ್ಲಿ ಮೈಸೂರು ರಾಜ ಮುಮ್ಮಡಿ ಕೃಷ್ಣರಾಜ ಒಡೆಯರ್, ತಮ್ಮ ತಂದೆ ಚಾಮರಾಜೇಂದ್ರ ಒಡೆಯರ್ ನೆನಪಿಗಾಗಿ ಶೃಂಗೇರಿಯಿಂದ ರಾಜತ್ವ, ಈಶತ್ವ ಅಂಶವುಳ್ಳ ಲಿಂಗವನ್ನು ತರಿಸಿ ಪ್ರತಿಷ್ಠಾಪಿಸಿ ದೇಗುಲ ನಿರ್ಮಿಸಿದ್ದರಲ್ಲದೆ, ಶುಕನಾಶಿ, ಗರ್ಭಗುಡಿ, ಧ್ವಜಸ್ತಂಭ, ವಿಮಾನಗೋಪುರ, ಕಲ್ಯಾಣಿ ನಿರ್ಮಿಸಿದ್ದರು. ಈ ದೇವಾಲಯವು ದ್ರಾವಿಡ ಶೈಲಿಯನ್ನು ಹೊಂದಿದ್ದು ಇತರೆ ದೇವಾಲಯಗಳಿಗೆ ಹೋಲಿಸಿದರೆ ವಿಭಿನ್ನ ಮತ್ತು ವಿಶಿಷ್ಟವಾಗಿರುವುದನ್ನು ಕಾಣಬಹುದಾಗಿದೆ.
ಚಾಮರಾಜೇಶ್ವರ ದೇಗುಲ ನಿರ್ಮಾಣಕ್ಕೂ ಮುನ್ನ ಚಾಮರಾಜನಗರವನ್ನು ಅರಿಕುಠಾರ ಎಂದು ಕರೆಯಲಾಗುತ್ತಿತ್ತಂತೆ. ದೇವಾಲಯ ನಿರ್ಮಾಣದ ನಂತರ ಚಾಮರಾಜನಗರ ಎಂದು ಕರೆಯಲಾಯಿತೆಂದು ಇತಿಹಾಸ ಹೇಳುತ್ತದೆ.[ಚಾಮರಾಜನಗರ: ದಕ್ಷ ಅಧಿಕಾರಿ ವರ್ಗಾವಣೆಯಲ್ಲಿ ರಾಜಕೀಯ?]
ಸುಮಾರು ಎರಡು ಶತಮಾನಗಳಿಂದ ಭಕ್ತರ ಇಷ್ಟಾರ್ಥಗಳನ್ನು ನೆರವೇರಿಸುತ್ತಾ ಬಂದಿದ್ದ ದೇವಾಲಯ ದುರಸ್ತಿಗೀಡಾಗಿತ್ತು. ಆದ್ದರಿಂದ ರಾಜ್ಯ ಸರ್ಕಾರ 2.10 ಕೋಟಿ ರು. ವೆಚ್ಚದಲ್ಲಿ ದೇವಾಲಯ ಜೀರ್ಣೋದ್ಧಾರಕ್ಕೆ ಮುಂದಾಗಿದ್ದು, ಪ್ರಾಚ್ಯ ವಸ್ತು ಇಲಾಖೆಯ ಮೇಲುಸ್ತುವಾರಿಯಲ್ಲಿ ಜೀರ್ಣೋದ್ಧಾರ ಕಾರ್ಯ ನಡೆಯುತ್ತಿದೆ. ಈಗಾಗಲೇ ಶೇ. 40 ರಷ್ಟು ಕಾಮಗಾರಿ ಪೂರ್ಣಗೊಂಡಿದ್ದು, ಕಾಮಗಾರಿ ಸಂಪೂರ್ಣವಾಗಬೇಕಾದರೆ ಇನ್ನೆರಡು ವರ್ಷ ಕಾಯಬೇಕಾಗಿದೆ.
ರಥೋತ್ಸವದ ಮಹತ್ವ: ಚಾಮರಾಜನಗರ ಜನಮನ ಸೆಳೆಯುವುದೇ ಆಷಾಢದ ಚಾಮರಾಜೇಶ್ವರ ರಥೋತ್ಸವದಿಂದ. ಈ ರಥೋತ್ಸವದಲ್ಲಿ ನೂತನವಾಗಿ ವಿವಾಹವಾದ ನವದಂಪತಿಗಳು ಹಣ್ಣು ಜವನ ಎಸೆದು ದಾಂಪತ್ಯ ಸುಖಮಯವಾಗಿರುವಂತೆ ಬೇಡಿಕೊಳ್ಳುತ್ತಾರೆ.
ರಾಜ್ಯದ ಏಕೈಕ ಆಷಾಢ ರಥೋತ್ಸವ ಎಂಬ ಹೆಗ್ಗಳಿಕೆ ಪಡೆದ ರಥಕ್ಕೆ ಕಳೆದ ಆರು ತಿಂಗಳ ಹಿಂದೆ ಬೆಂಕಿಬಿದ್ದು ಹಾನಿಯಾಗಿದ್ದು, ರಥವನ್ನು ದುರಸ್ತಿ ಮಾಡಲಾಗದಷ್ಟು ಹಾಳಾಗಿರುವುದರಿಂದ ನೂತನ ರಥವನ್ನೇ ನಿರ್ಮಾಣ ಮಾಡುವುದು ಅನಿವಾರ್ಯವಾಗಿದೆ. ಆದರೆ ಇನ್ನು ಚಾಮರಾಜೇಶ್ವರನ ರಥೋತ್ಸವಕ್ಕೆ ತಿಂಗಳಷ್ಟೆ ಬಾಕಿಯಿರುವುದರಿಂದ ನೂತನ ರಥ ನಿರ್ಮಾಣವೂ ಸಾಧ್ಯವಿಲ್ಲ. ಹೀಗಾಗಿ ಈ ಬಾರಿ ರಥೋತ್ಸವ ನಡೆಯುತ್ತಿಲ್ಲ. ಇದು ಭಕ್ತರಿಗೆ ನಿರಾಸೆ ತಂದಿದೆ.












Click it and Unblock the Notifications