ಮಲೆಮಹದೇಶ್ವರ ಬೆಟ್ಟ ವನ್ಯಧಾಮ ಇನ್ನು ಮುಂದೆ ಹುಲಿ ರಕ್ಷಿತಾರಣ್ಯ
ಚಾಮರಾಜನಗರ, ಜನವರಿ 11: ಈಗಾಗಲೇ ಬಂಡೀಪುರ ಮತ್ತು ಬಿಳಿಗಿರಿರಂಗನಾಥ ಹುಲಿ ರಕ್ಷಿತಾರಣ್ಯಗಳನ್ನು ಹೊಂದಿರುವ ಚಾಮರಾಜನಗರದಲ್ಲಿ ಮತ್ತೊಂದು ಹುಲಿ ರಕ್ಷಿತಾರಣ್ಯ ಘೋಷಣೆಗೆ ಸಿದ್ಧತೆ ನಡೆದಿದೆ.
ರಾಷ್ಟ್ರಪ್ರಾಣಿ ಹುಲಿಗಳ ಆವಾಸ ತಾಣವಾಗಿರುವ ಮಲೆಮಹದೇಶ್ವರಬೆಟ್ಟ ವನ್ಯಧಾಮವನ್ನೂ ಹುಲಿ ರಕ್ಷಿತಾರಣ್ಯ ಎಂದು ಘೋಷಿಸಲು ಮುಖ್ಯಮಂತ್ರಿ ಕುಮಾರಸ್ವಾಮಿ ಅಧ್ಯಕ್ಷತೆಯಲ್ಲಿ ನಡೆದ ವನ್ಯಜೀವಿ ಮಂಡಳಿ ಸಭೆಯಲ್ಲಿ ನಿರ್ಧರಿಸಲಾಗಿದೆ.
ಮುಖ್ಯಮಂತ್ರಿ ಗೃಹಕಚೇರಿಯಲ್ಲಿ ಬುಧವಾರ ನಡೆದ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ. ವನ್ಯಜೀವಿ ಮಂಡಳಿ ಅಧ್ಯಕ್ಷರೂ ಆಗಿರುವ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ, ಅರಣ್ಯ ಸಚಿವ ಸತೀಶ್ ಜಾರಿಕಿಹೊಳಿ, ಪ್ರಧಾನ ಅರಣ್ಯ ಸಂರಕ್ಷಣಾಧಿಕಾರಿ (ವನ್ಯಜೀವಿ) ಜಯರಾಂ, ಇಲಾಖೆಯ ಹಿರಿಯ ಅಧಿಕಾರಿಗಳು ಮತ್ತು ಮಂಡಳಿಯ ಸದಸ್ಯರು ಸಭೆಯಲ್ಲಿ ಭಾಗವಹಿಸಿದ್ದರು.

ಗಡಿಯಲ್ಲಿರುವ ಚಾಮರಾಜನಗರ ಜಿಲ್ಲೆ ಶೇ 51ರಷ್ಟು ಅರಣ್ಯ ಪ್ರದೇಶ ಹೊಂದಿದೆ. ಬಂಡೀಪುರ, ಬಿಳಿಗಿರರಂಗನ ಬೆಟ್ಟ, ಕಾವೇರಿ ವನ್ಯಧಾಮ ಮತ್ತು ಮಲೆಮಹದೇಶ್ವರ ಬೆಟ್ಟ ಎಂಬ ನಾಲ್ಕು ಅರಣ್ಯ ವಲಯಗಳು ಇಲ್ಲಿವೆ. ರಾಜ್ಯದ ಯಾವುದೇ ಜಲ್ಲೆಯೂ ಇಷ್ಟು ವಿಶಾಲ ಅರಣ್ಯ ಪ್ರದೇಶ ಮತ್ತು ವನ್ಯಜೀವಿಗಳ ನೆಲೆಯನ್ನು ಹೊಂದಿಲ್ಲ.
ಮಲೆಮಹದೇಶ್ವರ ಬೆಟ್ಟ ಅರಣ್ಯ 960 ಚದರ ಕಿ.ಮೀ. ವ್ಯಾಪ್ತಿ ಹೊಂದಿದ್ದು, 2013-14ನೇ ಸಾಲಿನಲ್ಲಿ ಅದನ್ನು ವನ್ಯಧಾಮವನ್ನಾಗಿ ಘೋಷಿಸಿಲಾಗಿತ್ತು. ಅಲ್ಲದೆ, ಕಳೆದ ವರ್ಷವಷ್ಟೇ ವನ್ಯಧಾಮದ 143 ಚದರ ಕಿ.ಮೀ. ಪ್ರದೇಶವನ್ನು ಪರಿಸರ ಸೂಕ್ಷ್ಮ ವಲಯ ಎಂದು ಪರಿಗಣಿಸಲಾಗಿತ್ತು.
ಕಾವೇರಿ ವನ್ಯಧಾಮಕ್ಕೆ ಅಂಟಿಕೊಂಡಿರುವ ಈ ವನ್ಯಧಾಮದಲ್ಲಿ ಇತ್ತೀಚೆಗೆ ಹುಲಿಗಳ ಸಂಖ್ಯೆ ಹೆಚ್ಚಾಗಿದೆ. ಈ ಸಂಖ್ಯೆ ಹೆಚ್ಚುವ ನಿರೀಕ್ಷೆಯಿರುವುದರಿಂದ ಇದನ್ನು ಹುಲಿ ಮೀಸಲು ಅರಣ್ಯವನ್ನಾಗಿ ಘೋಷಿಸಲು ವನ್ಯಜೀವಿ ಮಂಡಳಿ ಸಭೆಯಲ್ಲಿ ನಿರ್ಧರಿಸಲಾಗಿದೆ.
ಮಲೆಮಹದೇಶ್ವರ ಬೆಟ್ಟದಲ್ಲಿ 15-20 ಹುಲಿಗಳಿವೆ ಎಂದು ಅಂದಾಜಿಸಲಾಗಿದೆ. ರಾಜ್ಯದಲ್ಲಿಯೇ ಅತಿ ಹೆಚ್ಚು ಹುಲಿಗಳು ಬಂಡೀಪುರ ರಾಷ್ಟ್ರೀಯ ಉದ್ಯಾನದಲ್ಲಿದ್ದು, 100ಕ್ಕೂ ಹೆಚ್ಚು ಹುಲಿಗಳು ಅಲ್ಲಿ ನೆಲೆಸಿವೆ ಎಂದು ಹುಲಿ ಗಣತಿ ವೇಳೆ ಅಂದಾಜಿಸಲಾಗಿದೆ.












Click it and Unblock the Notifications