ಕಾವೇರಿ ಕಿಚ್ಚು: ಕನ್ನಡಿಗರಿಗೆ ಚಾಕೊಲೇಟ್ ಕೊಟ್ಟ ಸರ್ಕಾರ: ಕರ್ನಾಟಕ ಸೇನಾ ಪಡೆ ಆಕ್ರೋಶ
ಚಾಮರಾಜನಗರ, ಅಕ್ಟೋಬರ್, 22: ರಾಜ್ಯ ಸರ್ಕಾರ ತಮಿಳುನಾಡಿಗೆ ಹರಿಸುತ್ತಿರುವ ಕಾವೇರಿ ನೀರನ್ನು ನಿಲ್ಲಿಸುವಂತೆ ಒತ್ತಾಯಿಸಿ ಕರ್ನಾಟಕ ಸೇನಾ ಪಡೆ ವತಿಯಿಂದ ಪ್ರತಿಭಟನೆ ಮುಂದುವರೆದಿದ್ದು, ಇಂದು ಕೂಡ ಚಾಕಲೇಟ್ ಪ್ರದರ್ಶಿಸಿ ಸರ್ಕಾರಗಳು ಮೋಸ ಮಾಡಿವೆ ಎಂದು ಆರೋಪಿಸಿ ವಿನೂತನ ಪ್ರತಿಭಟನೆ ನಡೆಸಲಾಯಿತು.
ನಗರದ ಶ್ರೀಚಾಮರಾಜೇಶ್ವರ ಉದ್ಯಾನವನದ ಮುಂಭಾಗದಲ್ಲಿ ಕರ್ನಾಟಕ ಸೇನಾಪಡೆಯ ಅಧ್ಯಕ್ಷ ಚಾ.ರಂ.ಶ್ರೀನಿವಾಸಗೌಡ ಅವರ ನೇತೃತ್ವದಲ್ಲಿ ಜಮಾಯಿಸಿದ ಪ್ರತಿಭಟನಾನಿತರು ಚಾಕಲೇಟ್ ಹಿಡಿದು ಅಲ್ಲಿಂದ ಮೆರವಣಿಗೆ ಹೊರಟು, ಭುವನೇಶ್ವರಿ ವೃತ್ತಕ್ಕೆ ತೆರಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ರಸ್ತೆತಡೆ ನಡೆಸಿದರು. ಈ ವೇಳೆ ಕೇಂದ್ರ ಸರ್ಕಾರ, ತಮಿಳುನಾಡು ಸರ್ಕಾರ, ಕರ್ನಾಟಕ ಸರ್ಕಾರ, ಕಾವೇರಿ ನೀರು ನಿರ್ವಹಣಾ ಮಂಡಳಿ ವಿರುದ್ದ ಘೋಷಣೆ ಕೂಗಿ ಅಕ್ರೋಶ ವ್ಯಕ್ತಪಡಿಸಿದರು.

ಪ್ರತಿಭಟನೆ ನೇತೃತ್ವ ವಹಿಸಿದ ಚಾ.ರಂ.ಶ್ರೀನಿವಾಸಗೌಡ ಮಾತನಾಡಿ, ರಾಜ್ಯ ಸರ್ಕಾರ ತಮಿಳುನಾಡು ಒತ್ತಡಕ್ಕೆ ಮಣಿದು, ಕಾವೇರಿ ನ್ಯಾಯಾಧೀಕರಣ ತಮಿಳುನಾಡಿನ ಏಜೆಂಟ್ ರೀತಿ ವರ್ತನೆ ಮಾಡುತ್ತಿದೆ. ನಮ್ಮ ನೀರಿಗೆ ಅತ್ಯಂತ ತೊಂದರೆ ಉಂಟು ಮಾಡುತ್ತಿದೆ. ಇದನ್ನು ಖಂಡಿಸಿ ಕರ್ನಾಟಕ ಸೇನಾ ಪಡೆ ಸತತವಾಗಿ ಕಳೆದ 39 ದಿನಗಳಿಂದ ವಿನೂತನ ಪ್ರತಿಭಟನೆ ನಡೆಸಿಕೊಂಡು ಬಂದಿದ್ದು, ಇಂದು ಕೂಡ ಸರ್ಕಾರಗಳು ಕಾವೇರಿ ನೀರಿನ ಹಂಚಿಕೆಯಲ್ಲಿ ಕರ್ನಾಟಕದ ಜನತೆಗೆ ಚಾಕಲೇಟ್ ನೀಡಿ ಮೋಸ ಮಾಡಿವೆ ಎಂದು ಆರೋಪಿಸಿ ಪ್ರತಿಭಟನೆ ನಡೆಸಲಾಗಿದೆ ಎಂದರು.
ರಾಜ್ಯದಲ್ಲಿ ಮುಂದುವರಿದ ಕಾವೇರಿ ಹೋರಾಟ: ಮಂಡ್ಯದಲ್ಲಿ ರೈತರ ಎತ್ತಿನ ಗಾಡಿ, ಟ್ರಾಕ್ಟರ್ ಮೆರವಣಿಗೆ
ಕಾವೇರಿ ಜಲಾಶಯಗಳ ಕೊಳ್ಳದಲ್ಲಿ ನೀರು ಬರಿದಾಗುತ್ತಿದ್ದರೂ, ಕೇಂದ್ರ ಸರ್ಕಾರ ಮಧ್ಯಸ್ಥಿಕೆ ವಹಿಸದೆ ಮೌನವಾಗಿದೆ. ತಮಿಳುನಾಡು ಸರ್ಕಾರ ಪದೇಪದೇ ಕಾವೇರಿ ನೀರಿನ ವಿಚಾರದಲ್ಲಿ ಕ್ಯಾತೆ ತೆಗೆದು ತನ್ನು ತೀಟೆಯನ್ನು ತೀರಿಸಿಕೊಳ್ಳುತ್ತಿದೆ. ಕರ್ನಾಟಕ ಸರ್ಕಾರ ತಮಿಳುನಾಡಿಗೆ ಬಿಟ್ಟಿರುವ ನೀರನ್ನು ನಿಲ್ಲಿಸಬೇಕು ಇಲ್ಲದಿದ್ದರೆ ಉಗ್ರ ಹೋರಾಟ ಮಾಡುವುದಾಗಿ ಎಚ್ಚರಿಸಿದರು.
ಪ್ರತಿಭಟನೆಯಲ್ಲಿ ಶಾ.ಮುರಳಿ, ಚಾ.ವೆಂ.ರಾಜ್ ಗೋಪಾಲ್, ಚಾ.ಹ.ರಾಮು,ರಾಚಪ್ಪ,ಲಿಂಗರಾಜು, ಹೆಗ್ಗೋಠಾರ ಶಿವಸ್ವಾಮಿ, ಆರಾಧ್ಯ, ಪ್ರಕಾಶ್ ಮೂಡ್ಲುಪುರ ಭಾಗವಹಿಸಿದ್ದರು.
ಪ್ರಧಾನಿ ಮಧ್ಯಪ್ರವೇಶಿಸಬೇಕು
ಕಾವೇರಿ ನದಿ ನೀರು ಹಂಚಿಕೆ ವಿಷಯದಲ್ಲಿ ಪ್ರಧಾನಿಯವರು ಮಧ್ಯಪ್ರವೇಶಿಸಿ ಎರಡೂ ರಾಜ್ಯದ ನಡುವೆ ಇರುವ ಬಿಕ್ಕಟ್ಟನ್ನು ಪರಿಹರಿಸಬೇಕು ಎಂದು ನಟ ಶಿವರಾಜ್‌ಕುಮಾರ್ ಒತ್ತಾಯಿಸಿದರು.
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಾವಿದ್ದೇವೆ. ಈ ವ್ಯವಸ್ಥೆಯೊಳಗೆ ರಾಜ್ಯಗಳ ನಡುವೆ ಏನೇ ಸಮಸ್ಯೆಗಳು, ವಿವಾದಗಳು ಉಂಟಾದರೂ ಪ್ರಧಾನಮಂತ್ರಿಗಳೇ ಅದನ್ನು ಬಗೆಹರಿಸಬೇಕು. ಆ ಜವಾಬ್ದಾರಿ ಅವರದ್ದೇ ಆಗಿರುತ್ತದೆ. ರಾಜಕಾರಣವನ್ನು ಯಾರೂ ಮುಂದಕ್ಕೆ ತರಬಾರದು ಎಂದು ಮದ್ದೂರಿನಲ್ಲಿ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದರು.
ಕರ್ನಾಟಕ ಮತ್ತು ತಮಿಳುನಾಡು ಮುಖ್ಯಮಂತ್ರಿಗಳು ಕುಳಿತು ಮಾತನಾಡಬೇಕು. ಶಾಂತಿಯುತವಾಗಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕು. ಇಲ್ಲಿರುವವರೂ ರೈತರೇ, ಅಲ್ಲಿರುವವರೂ ರೈತರೇ. ದ್ವೇಷ, ರಾಜಕೀಯ, ಪ್ರತಿಷ್ಠೆಯನ್ನು ಮರೆತು ಒಟ್ಟಿಗೆ ಕುಳಿತು ಮಾತನಾಡಿದರೆ ಯಾವುದೇ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬಹುದು. ಆ ನಿಟ್ಟಿನಲ್ಲಿ ಪ್ರಯತ್ನಗಳು ನಡೆಯಬೇಕು ಎಂದರು.
ನಮಗೇ ಕುಡಿಯಲು ನೀರಿಲ್ಲದಿರುವಾಗ ತಮಿಳುನಾಡಿಗೆ ನೀರು ಹರಿದುಹೋಗುತ್ತಿದೆ. ಇದು ಸರಿಯಲ್ಲ. ಈ ವಿಷಯವಾಗಿ ಎಲ್ಲರೂ ಸೇರಿ ಕುಳಿತು ಚರ್ಚಿಸಿ ಸರ್ಕಾರದ ಮೇಲೆ ಒತ್ತಡ ಹೇರಬೇಕು ಎಂದು ಹೇಳಿದರು. ಕಾವೇರಿ ವಿಚಾರದಲ್ಲಿ ನಿಮ್ಮ ಹೋರಾಟ ಹೇಗಿರುತ್ತದೆ ಎಂದು ಪ್ರಶ್ನಿಸಿದಾಗ, ಹೋರಾಟ ಹೇಗಿರಬೇಕು ಎಂಬ ಬಗ್ಗೆಯೂ ಚರ್ಚೆಯಾಗಬೇಕು. ಸುಮ್ಮನೆ ಬೀದಿಯಲ್ಲಿ ನಿಂತು ಕಿರುಚುವುದು, ಬೆಂಕಿ ಹಚ್ಚುವುದು ಹೋರಾಟವಲ್ಲ. ಅದು ಒಳ್ಳೆಯ ರೀತಿಯಲ್ಲಿರಬೇಕು. ಶಕ್ತಿಯುತವಾಗಿಯೂ ಇರಬೇಕು ಎಂದರು.
ನಾವು ಮಾಡುವ ಹೋರಾಟ ಇನ್ನೊಬ್ಬರಿಗೆ ಪ್ರೇರಣೆಯಾಗುವಂತಿರಬೇಕೇ ವಿನಃ ಪ್ರಚೋದನೆ ನೀಡುವಂತಿರಬಾರದು. ಯಾರಿಗೂ ತೊಂದರೆ ಆಗದಂತೆ ಹೋರಾಟ ನಡೆಯಬೇಕು. ನಮ್ಮಿಂದ ಸಮಾಜಕ್ಕೆ ತಪ್ಪು ಸಂದೇಶ ಹೋಗಬಾರದು. ಕಿಚ್ಚನ್ನು ತಡೆದಿಟ್ಟುಕೊಂಡು ಸರಿಯಾದ ರೀತಿಯಲ್ಲಿ ಹೋರಾಟವನ್ನು ಮುನ್ನಡೆಸಬೇಕು. ನಾವು ಹಚ್ಚುವ ಹೋರಾಟದ ಕಿಚ್ಚು ಯಾರನ್ನೂ ಸುಡಬಾರದು. ಹಾನಿ ಉಂಟುಮಾಡಬಾರದು ಎಂದರು.
ಸರ್ಕಾರದಿಂದ ಸರಿಯಾದ ವಾದ ಮಂಡನೆ ಆಗದಿರುವ ಬಗ್ಗೆ ಆರೋಪಗಳು ಕೇಳಿಬರುತ್ತಿರುವ ಬಗ್ಗೆ ಕೇಳಿದಾಗ, ನಮಗೂ ಅದೇ ಪ್ರಶ್ನೆ ಕಾಡುತ್ತಿದೆ. ಈಗ ನಾನೊಬ್ಬ ಕಲಾವಿದ. ಜನರಿಗೆಷ್ಟು ಗೊತ್ತಿದೆಯೋ ನನಗೂ ಅಷ್ಟೇ ಗೊತ್ತಿದೆ. ಈ ವಿಚಾರದಲ್ಲಿ ನನಗೆ ಹೆಚ್ಚು ಮಾಹಿತಿ ಇರುವುದಿಲ್ಲ. ನಾವು ಆರಿಸಿ ಕಳುಹಿಸಿರುವ ಪ್ರತಿನಿಧಿಗಳು ಇದರ ಬಗ್ಗೆ ಆಲೋಚಿಸಬೇಕು. ಮುಂದೇನು ಮಾಡಬೇಕೆಂಬ ಬಗ್ಗೆ ಅವರು ತೀರ್ಮಾನ ಕೈಗೊಳ್ಳಬೇಕು ಎಂದು ನುಡಿದರು.
ಶಿವರಾಜ್‌ಕುಮಾರ್ ರಾಜಕೀಯ ರಂಗಕ್ಕೆ ಬರುತ್ತಾರೆಯೇ ಎಂದು ಕೇಳಿದಾಗ, ನನಗೆ ಸಿನಿಮಾರಂಗ ಒಂದೇ ಸಾಕು. ಖಂಡಿತ ರಾಜಕೀಯಕ್ಕೆ ಬರುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಇನ್ನು ಘೋಸ್ಟ್ ಚಿತ್ರದ ಕುರಿತು ಪ್ರತಿಕ್ರಿಯಿಸಿ, ಚಿತ್ರ ತುಂಬಾ ಚೆನ್ನಾಗಿ ಮೂಡಿಬಂದಿದ್ದು, ಜನರಿಂದಲೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಜನರಿಂದ ಪ್ರೋತ್ಸಾಹ, ಸಹಕಾರ ಸಿಕ್ಕರಷ್ಟೇ ಇನ್ನಷ್ಟು ಉತ್ತಮ ಚಿತ್ರಗಳನ್ನು ಮಾಡಲು ಸಾಧ್ಯ. ಕೆಜಿಎಫ್, ಕಾಂತಾರ, ವೇದ, ಚಾರ್ಲಿ 777 ಚಿತ್ರಗಳ ಸಾಲಿನಲ್ಲಿ ನಿಲ್ಲುವ ಚಿತ್ರ ಘೋಸ್ಟ್ ಆಗಿದೆ. ಹೀಗೆಯೇ ಕನ್ನಡ ಚಿತ್ರಗಳನ್ನು ಪ್ರೋತ್ಸಾಹಿಸುವಂತೆ ಮನವಿ ಮಾಡಿದರು.












Click it and Unblock the Notifications