ರಾಜ್ಯದಲ್ಲಿ ಮುಂದುವರಿದ ಕಾವೇರಿ ಹೋರಾಟ: ಮಂಡ್ಯದಲ್ಲಿ ರೈತರ ಎತ್ತಿನ ಗಾಡಿ, ಟ್ರಾಕ್ಟರ್ ಮೆರವಣಿಗೆ
ಮಂಡ್ಯ, ಅಕ್ಟೋಬರ್ 20: ಕಾವೇರಿ ಕೊಳ್ಳದ ಜಲಾಶಯಗಳಿಂದ ತಮಿಳುನಾಡಿಗೆ ನೀರು ಹರಿಸುತ್ತಿರುವ ಸರ್ಕಾರದ ವಿರುದ್ಧದ ಕಾವೇರಿ ಹೋರಾಟ ಕಾವೇರಿದ್ದು, ಮಂಡ್ಯದಲ್ಲಿ ರೈತರು ಎತ್ತಿನ ಗಾಡಿ, ಟ್ರಾಕ್ಟರ್ ಮೆರವಣಿಗೆ ನಡೆಸಿದರು.
ಇಂಡುವಾಳು, ಸಿದ್ದಯ್ಯನ ಕೊಪ್ಪಲು, ಸುಂಡಹಳ್ಳಿ,ಕಿರಗಂದೂರು ಹಾಗೂ ಮೊಳೆ ಕೊಪ್ಪಲು ಗ್ರಾಮದ ರೈತರು ಎತ್ತಿನ ಗಾಡಿ, ಟ್ರಾಕ್ಟರ್,ಬೈಕ್ ಗಳಲ್ಲಿ ಮೆರವಣಿಗೆ ಮೂಲಕ ಬೆಂಗಳೂರು-ಮೈಸೂರು ಹೆದ್ದಾರಿ ಮೂಲಕ ಮಂಡ್ಯಕ್ಕೆ ಆಗಮಿಸಿದರು.

ನಗರದ ಜಯಚಾಮರಾಜೇಂದ್ರ ಒಡೆಯರ್ ವೃತ್ತದಲ್ಲಿ ಮಾನವ ಸರಪಳಿ ರಚಿಸಿ ವಾಹನ ಸಂಚಾರಕ್ಕೆ ಅಡ್ಡಿಪಡಿಸಿದ ರೈತರು ಕೇಂದ್ರ -ರಾಜ್ಯ ಸರ್ಕಾರದ ವಿರುದ್ಧ ಧಿಕ್ಕಾರದ ಘೋಷಣೆ ಕೂಗಿ ಆಕ್ರೋಶಿಸಿದರು.
ಜಿಲ್ಲಾ ರೈತ ಹಿತರಕ್ಷಣಾ ಸಮಿತಿ ಧರಣಿ ಸ್ಥಳಕ್ಕೆ ತೆರಳಿ ನಿರಂತರ ಧರಣಿಯಲ್ಲಿ ಭಾಗಿಯಾದ ರೈತ ಸಮೂಹ ಜಲಾಶಯಗಳಿಂದ ನೆರೆ ರಾಜ್ಯಕ್ಕೆ ನಿರಂತರ ನೀರು ಹರಿಸುವ ಮೂಲಕ ಅಣೆಕಟ್ಟೆಯನ್ನು ಬರಿದು ಮಾಡಲಾಗುತ್ತಿದೆ, ಈ ಕೂಡಲೇ ನೆರೆ ರಾಜ್ಯಕ್ಕೆ ಹರಿಸುತ್ತಿರುವ ನೀರು ಸ್ಥಗಿತ ಮಾಡಬೇಕು, ಕೇಂದ್ರ ಸರ್ಕಾರ ಮಧ್ಯಪ್ರವೇಶಿಸಿ ಪರಿಹಾರ ರೂಪಿಸಬೇಕು, ಸಂಕಷ್ಟ ಸನ್ನಿವೇಶದಲ್ಲಿ ಅನುಕೂಲವಾಗುವಂತೆ ಸಂಕಷ್ಟ ಸೂತ್ರ ರೂಪಿಸಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಇಂಡುವಾಳು ಗ್ರಾಮದ ರೈತ ಮುಖಂಡ ಚಂದ್ರಶೇಖರ್, ಇ.ಬಸವರಾಜು, ಕೃಷ್ಣೆಗೌಡ, ಉಮಾ ಶಂಕರ್, ದೇವೇಗೌಡ, ಸಿದ್ದಯ್ಯನ ಕೊಪ್ಪಲು ಗ್ರಾಮದ ರಮೇಶ್ ರಾಜು,ನಟೇಶ್,ತಮ್ಮೇಗೌಡ,ತಮ್ಮಣ್ಣ, ಶಿವಣ್ಣ, ನಾಗರಾಜು, ಸಿದ್ದರಾಮು, ನಂಜೇಗೌಡ, ಸುಂಡಹಳ್ಳಿಗ್ರಾಮದ ಶಿವ ಸ್ವಾಮಿ, ಸಿದ್ದಲಿಂಗಯ್ಯ, ದೇವರಾಜು, ಮೊಳೆ ಕೊಪ್ಪಲು ಗ್ರಾಮದ ಅಂದಾನಿ, ಬೆಟ್ಟೇಗೌಡ, ಶಂಕರ್, ಶಿವರಾಮ, ಹೊನ್ನಪ್ಪ, ಕಿರಗಂದೂರು ಗ್ರಾಮದ ಸಿದ್ದಯ್ಯ,ಕರಿಯಪ್ಪ,ಚಿಕ್ಕಯ್ಯ ಭಾಗವಹಿಸಿದ್ದರು.

ಚಾಮರಾಜನಗರದಲ್ಲಿಯೂ ನಿಲ್ಲದ ಕಾವೇರಿ ಹೋರಾಟ
ಚಾಮರಾಜನಗರ: ತಮಿಳುನಾಡಿಗೆ ಕಾವೇರಿ ನೀರು ಹರಿಸುತ್ತಿರುವುದನ್ನು ಖಂಡಿಸಿ ಇಂದು ಚಾಮರಾಜನಗರದಲ್ಲಿ ಕನ್ನಡಪರ ಹೋರಾಟಗಾರರು 37 ನೇ ದಿನದ ಪ್ರತಿಭಟನೆ ನಡೆಸಿದರು. ಚಾಮರಾಜೇಶ್ವರ ದೇಗುಲದಿಂದ ಭುವನೇಶ್ವರಿ ವೃತ್ತದ ತನಕ ಚಾ.ರಂ.ಶ್ರೀನಿವಾಸಗೌಡ ನೇತೃತ್ವದಲ್ಲಿ ಹಾರೆ, ಪಿಕಾಸಿ, ಎಲ್ಕೊಟ್ಟು, ಬಾಂಡ್ಲಿ ಹಿಡಿದು ಸರ್ಕಾರಗಳ ವಿರುದ್ಧ ಧಿಕ್ಕಾರದ ಘೋಷಣೆ ಕೂಗಿ ಆಕ್ರೋಶ ಹೊರಹಾಕಿದರು.
ಕೃಷಿ ಕಾಯಕಕ್ಕೆ ನೀರಿಲ್ಲದೇ ಗುದ್ದಲಿ, ಪಿಕಾಸಿ, ಸಲಿಕೆಗಳು ನಿಷ್ಪ್ರಯೋಜಕ ಆಗಿವೆ. ನಮ್ಮ ನೀರು ತಮಿಳುನಾಡಿಗೆ ಹರಿಯುತ್ತಿರುವುದರಿಂದ ರೈತರಿಗೆ ಕೆಲಸವಿಲ್ಲವಾಗಿದೆ. ಇದೇ ರೀತಿ ನೀರು ಹರಿಸುತ್ತಿದ್ದರೇ ಮುಂದಿನ ದಿನಗಳಲ್ಲಿ ರೈತರು ಗುಳೆ ಹೋಗಿ ಕೂಲಿ ಕೆಲಸ ಮಾಡಬೇಕಾಗುತ್ತದೆ. ರೈತರ ಹಿತವನ್ನು ರಾಜ್ಯ ಸರ್ಕಾರ ಬಲಿ ಕೊಡುತ್ತಿದೆ. ಕೇಂದ್ರ ಸರ್ಕಾರ ಮಾತನಾಡದೇ ಮೌನವಹಿಸಿ ನಾಟಕ ಆಡುತ್ತಿದೆ ಎಂದು ಆಕ್ರೋಶ ಹೊರಹಾಕಿದರು.












Click it and Unblock the Notifications