ಪುಟ್ಟರಂಗಶೆಟ್ಟಿಯೇ ಚಾಮರಾಜನಗರ ಜಿಲ್ಲಾ ಉಸ್ತುವಾರಿ ಸಚಿವ, ಫ್ಲೆಕ್ಸ್ ಬರಹ ವೈರಲ್
ಚಾಮರಾಜನಗರ, ಮೇ, 19: ರಾಜ್ಯದಲ್ಲಿ ಈಗಾಗಲೇ ಕಾಂಗ್ರೆಸ್ ಪಕ್ಷವು ಬಹುಮತಗಳ ಅಂತರದಿಂದ ಗೆಲುವು ಸಾಧಿಸಿದ್ದು, ಇದೀಗ ಸಿಎಂ ಪ್ರಮಾಣ ವಚನ ಸ್ವೀಕಾರ ಕಾರ್ಯಕ್ರಮಕ್ಕೆ ಕ್ಷಣಗಣನೆ ಆರಂಭವಾಗಿದೆ. ಮತ್ತೊಂದೆಡೆ ದೆಹಲಿಯಲ್ಲಿ ಸಂಪುಟ ರಚನೆ ಕುರಿತಂತೆ ಚರ್ಚೆಗಳು ಕೂಡ ಆಗುತ್ತಿವೆ. ಇತ್ತ ಚಾಮರಾಜನಗರದಲ್ಲಿ ಉಸ್ತುವಾರಿ ಸಚಿವ ಪುಟ್ಟರಂಗಶೆಟ್ಟಿ ಎಂಬ ಫ್ಲೆಕ್ಸ್ ಬರಹವನ್ನು ಕೂಡ ಅಳವಡಿಕೆ ಮಾಡಿದ್ದಾರೆ.
ಚಾಮರಾಜನಗರದ ಭುವನೇಶ್ವರಿ ವೃತ್ತದಲ್ಲಿ ಹಾಕಿರುವ ಫ್ಲೆಕ್‌ನಲ್ಲಿ ಎರಡನೇ ಬಾರಿಗೆ ರಾಜ್ಯದ ಸಿಎಂ ಆಗಿರುವ ಸಿದ್ದರಾಮಯ್ಯ ಹಾಗೂ ಚಾಮರಾಜನಗರದ ಜಿಲ್ಲಾ ಉಸ್ತುವಾರಿ ಸಚಿವರು ಪುಟ್ಟರಂಗಶೆಟ್ಟಿ ಅಂತಾ ಬರೆಸಿದ್ದಾರೆ. ಈ ಪ್ಲೆಕ್ಸ್ ಅನ್ನು ಪುಟ್ಟರಂಗಶೆಟ್ಟಿ ಅಭಿಮಾನಿಗಳು ಮಾಡಿಸಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.

ಇನ್ನೂ ರಾಜ್ಯದ ಉಪ್ಪಾರ ಸಮುದಾಯ ಏಕೈಕ ಶಾಸಕರಾದ ಪುಟ್ಟರಂಗಶೆಟ್ಟಿ ಅವರು ಸತತ ನಾಲ್ಕನೇ ಬಾರಿಗೆ ಚಾಮರಾಜನಗರ ಕ್ಷೇತ್ರದಿಂದ ಆಯ್ಕೆ ಆಗಿದ್ದಾರೆ. ಅಲ್ಲದೆ ಇವರು ಸಿದ್ದರಾಮಯ್ಯ ಆಪ್ತ ಬಣದಲ್ಲಿ ಗುರುತಿಸಿಕೊಂಡಿದ್ದು, ಬೆಂಗಳೂರಿನಲ್ಲಿ ಉಳಿದುಕೊಂಡು ಉಸ್ತುವಾರಿ ಸ್ಥಾನಕ್ಕಾಗಿ ಲಾಭಿ ನಡೆಸುತ್ತಿದ್ದಾರೆ. ಮತ್ತೊಂದೆಡೆ ಅಭಿಮಾನಿಗಳು ಪುಟ್ಟರಂಗಶೆಟ್ಟಿ ಚಾಮರಾಜನಗರದ ಉಸ್ತುವಾರಿ ಸಚಿವರು ಅಂತಾ ಈಗಲೇ ಫ್ಲೆಕ್ಸ್ ಅಳವಡಿಸಿದ್ದು, ಇದು ಇದೀಗ ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ.
ಸಚಿವ ಸ್ಥಾನಕ್ಕೆ ಲಾಬಿ
ಬಿಜೆಪಿ ಪ್ರಭಾವಿ ಮುಖಂಡ, ಲಿಂಗಾಯತ ಸಮುದಾಯದ ನಾಯಕ ವಿ.ಸೋಮಣ್ಣ ಅವರನ್ನು ಸೋಲಿಸಿ ಚಾಮರಾಜನಗರದಲ್ಲಿ ಸತತ ನಾಲ್ಕನೇ ಬಾರಿ ಶಾಸಕರಾಗಿರುವ ಸಿ.ಪುಟ್ಟರಂಗಶೆಟ್ಟಿಗೆ ಮಂತ್ರಿ ಪಟ್ಟ ಒಲಿಯಲಿದೆ ಎನ್ನುವ ಮಾತುಗಳು ಜೋರಾಗಿಯೇ ಕೇಳಿಬರುತ್ತಿವೆ.
ಚಾಮರಾಜನಗರ ಜಿಲ್ಲೆಯಲ್ಲಿ ನಾಲ್ಕು ವಿಧಾನಸಭಾ ಕ್ಷೇತ್ರಗಳಿದ್ದು, ಮೂರು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಜಯಭೇರಿ ಬಾರಿಸಿದೆ. ಚಾಮರಾಜನಗರದ ಮೂವರು ಕಾಂಗ್ರೆಸ್ ಶಾಸಕರಲ್ಲಿ 68ರ ಹರೆಯದ ಪುಟ್ಟರಂಗಶೆಟ್ಟಿ ಹಿರಿಯ ಶಾಸಕರಾಗಿದ್ದು, ಇವರು ಉಪ್ಪಾರ ಜಾತಿಯ ರಾಜ್ಯದ ಏಕೈಕ ಶಾಸಕ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ. ಆದ್ದರಿಂದ ಸಿದ್ದರಾಮಯ್ಯ ಸಂಪುಟದಲ್ಲಿ ಇವರು ಸ್ಥಾನ ಗಿಟ್ಟಿಸಿಕೊಳ್ಳಲಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ.
ಸಿ.ಪುಟ್ಟರಂಗಶೆಟ್ಟಿ ಸಿದ್ದರಾಮಯ್ಯ ಕಟ್ಟಾ ಬೆಂಬಲಿಗರಾಗಿದ್ದು, ಇವರು ಎಚ್.ಡಿ.ಕುಮಾರಸ್ವಾಮಿ ಸಿಎಂ ಆಗಿದ್ದ ವೇಳೆ ಈಗಲೂ ನನಗೇ ಸಿದ್ದರಾಮಯ್ಯನೇ ಸಿಎಂ ಎನ್ನುವ ಮೂಲಕ ಗಮನ ಸೆಳೆದಿದ್ದರು. ಕ್ಷೇತ್ರ ಹುಡುಕಾಟದ ವೇಳೆ ಚಾಮರಾಜನಗರದಲ್ಲಿ ಸಿದ್ದರಾಮಯ್ಯ ಸ್ಪರ್ಧೆ ಮಾಡಲಿ ಎಂದು ಆಹ್ವಾನ ಕೊಟ್ಟಿದ್ದರು.
ಅಲ್ಲದೆ ಸಿದ್ದರಾಮಯ್ಯ ಆಪ್ತ ಬಳಗದ ಶಾಸಕರಲ್ಲಿ ಗುರುತಿಸಿಕೊಂಡಿರುವ ಪುಟ್ಟರಂಗಶೆಟ್ಟಿ ಅವರಿಗೆ ಸಿದ್ದರಾಮಯ್ಯ ಮಣೆ ಹಾಕುವುದು ನಿಶ್ಚಿತ ಅಂತಾ ಹೇಳಲಾಗುತ್ತಿದೆ. ಚಾಮರಾಜನಗರಕ್ಕೆ ಪ್ರಾತಿನಿಧ್ಯ ಕೊಡಬೇಕಾಗಿರುವುದರಿಂದ ಜೊತೆಗೆ, ಹಿಂದುಳಿದ ವರ್ಗ ಉಪ್ಪಾರ ಸಮುದಾಯಕ್ಕೂ ಆದ್ಯತೆ ಕೊಡಬೇಕಿರುವುದರಿಂದ ಪುಟ್ಟರಂಗಶೆಟ್ಟಿಗೆ ಮಂತ್ರಿ ಭಾಗ್ಯ, ಚಾಮರಾಜನಗರ ಜಿಲ್ಲಾ ಉಸ್ತುವಾರಿ ಸಚಿವ ಸ್ಥಾನ ಸಿಗಬಹುದು ಎನ್ನಲಾಗಿದೆ.
ಸೋಲಿಲ್ಲದ ಸರದಾರನ ಪಟ್ಟ ಹಳೇ ಮೈಸೂರು ಭಾಗದಲ್ಲಿ ಚಾಮರಾಜನಗರ ಕಳೆದ 4 ಸಾಲಿನಿಂದ ಕಾಂಗ್ರೆಸ್ ಭದ್ರಕೋಟೆ ಆಗಿದ್ದು, ಕ್ಷೇತ್ರದಲ್ಲಿ ಸತತವಾಗಿ 4 ಬಾರಿ ಗೆದ್ದ ಮೊದಲ ಶಾಸಕರಾಗಿದ್ದಾರೆ. ಈ ಮೂಲಕ ಸೋಲಿಲ್ಲದ ಸರದಾರ ಅಂತಲೂ ಕರೆಸಿಕೊಂಡಿದ್ದಾರೆ. ಒಟ್ಟಿನಲ್ಲಿ ಸಿ.ಪುಟ್ಟರಂಗಶೆಟ್ಟಿ ಅವರು ವಿ.ಸೋಮಣ್ಣ ಅವರನ್ನು ಸೋಲಿಸಿ ಎರಡನೇ ಬಾರಿ ಸಚಿವರಾಗುವ ಉತ್ಸಾಹದಲ್ಲಿದ್ದಾರೆ.












Click it and Unblock the Notifications