ಹಾನೂರು: ಮಲೆ ಮಾದಪ್ಪನ ಬೆಟ್ಟದಲ್ಲಿ ವೃದ್ಧೆಗೆ ಕೊಂಬಿನಲ್ಲಿ ತಿವಿದ ಗೂಳಿ; ಆಸ್ಪತ್ರೆಗೆ ದಾಖಲು
ಚಾಮರಾಜನಗರ, ಅಕ್ಟೋಬರ್, 2: ಚಾಮರಾಜನಗರ ಜಿಲ್ಲೆ, ಹನೂರು ತಾಲ್ಲೂಕಿನ ಮಲೆ ಮಹದೇಶ್ವರ ಬೆಟ್ಟದಲ್ಲಿ ಭಕ್ತೆಯೊಬ್ಬಳ ಮೇಲೆ ಗೂಳಿಯೊಂದು ದಾಳಿ ಮಾಡಿದ. ಈ ವೇಳೆ ವೃದ್ಧೆ ನೆಲಕ್ಕೆ ಬಿದ್ದು ತಲೆಗೆ ಪೆಟ್ಟಾಗಿರುವ ಘಟನೆ ಬುಧವಾರ (ಅಕ್ಟೋಬರ್ 02) ನಡೆದಿದೆ. ಹಾಗಾದರೆ ಇದೀಗ ಆ ವೃದ್ಧೆಯ ಪರಿಸ್ಥಿತಿ ಹೇಗಿದೆ ಎನ್ನುವ ಮಾಹಿತಿಯನ್ನು ಇಲ್ಲಿ ತಿಳಿಯಿರಿ.
ಮಂಡ್ಯ ಜಿಲ್ಲೆಯ ಹೆಚ್.ಹೊಸೂರು ನಿಂಗಮ್ಮ(70) ಗಾಯಗೊಂಡ ವೃದ್ಧೆ. ದೇವರಿಗೆ ತಲೆ ಮುಡಿಕೊಡಲು ಹೋಗುತ್ತಿದ್ದಾಗ ದಾಸೋಹದ ಬಳಿ ಈ ಅವಘಡ ಜರುಗಿದೆ.

ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ವೃದ್ಧೆಯನ್ನು ಮಲೆ ಮಹದೇಶ್ವರ ಬೆಟ್ಟದ ಪ್ರಾಥಮಿಕ ಆರೋಗ್ಯ ಘಟಕದವರು ಆಂಬ್ಯುಲೇನ್ಸ್ ಮೂಲಕ ಕೊಳ್ಳೇಗಾಲ ವಿಭಾಗೀಯ ಆಸ್ಪತ್ರೆಗೆ ರವಾನಿಸಿದ್ದಾರೆ. ವೃದ್ಧೆಯನ್ನು ಪರೀಕ್ಷಿಸಿದ ವೈದ್ಯರು ಕಿವಿಯಿಂದ ರಕ್ತ ಸೋರುತ್ತಿರುವುದು ನಿಲ್ಲದ ಕಾರಣ ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರು ಕೆ.ಆರ್.ಆಸ್ಪತ್ರೆಗೆ ರವಾನಿಸಿದ್ದಾರೆ. ಈ ಸಂಬಂಧ ಮಲೆ ಮಹದೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಾದಪ್ಪನ ಬೆಟ್ಟದಲ್ಲಿ ಭಕ್ತಸಾಗರ: ಮಹಾಲಯ ಅಮಾವಾಸ್ಯೆ ಹಿನ್ನೆಲೆ ಹನೂರು ತಾಲೂಕಿನ ಮಲೆ ಮಹದೇಶ್ವರ ಬೆಟ್ಟಕ್ಕೆ ಭಕ್ತಸಾಗರವೇ ಹರಿದು ಬಂದಿದೆ. ಬೆಳಗ್ಗೆಯಿಂದಲೇ ವಿಶೇಷ ಸೇವೆ ಉತ್ಸವಾದಿಗಳು ಜರುಗುತ್ತಿದ್ದು, ಸಹಸ್ರಾರು ಭಕ್ತರು ಕ್ಷೇತ್ರಕ್ಕೆ ಆಗಮಿಸಿದ್ದಾರೆ.
ಮಹಾಲಯ ಅಮಾವಾಸ್ಯೆ ಪ್ರಯುಕ್ತ ಶ್ರೀ ಕ್ಷೇತ್ರ ಮಲೆ ಮಹದೇಶ್ವರ ಬೆಟ್ಟಕ್ಕೆ ಬರುವ ಭಕ್ತಾದಿಗಳಿಗೆ ಶ್ರೀ ಕ್ಷೇತ್ರ ಮಲೆ ಮಹದೇಶ್ವರ ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ ವಿಶೇಷ ದಾಸೋಹ, ಅತಿಥಿ ಗಣ್ಯರಿಗೆ ನೇರದರ್ಶನ, ನೆರಳಿನ ವ್ಯವಸ್ಥೆ, ಶುದ್ಧ ಕುಡಿಯುವ ನೀರು, ಹಿರಿಯ ನಾಗರಿಕರಿಗೆ ಪ್ರತ್ಯೇಕ ಕ್ಯೂ ಲೈನ್ ಮಾಡಲಾಗಿದೆ.
ಅಮಾವಾಸ್ಯೆ ಜಾತ್ರಾ ಮಹೋತ್ಸವ ಪ್ರಯುಕ್ತ ಬೆಂಗಳೂರು, ರಾಮನಗರ, ಕನಕಪುರ, ಮಂಡ್ಯ, ಚಾಮರಾಜನಗರ, ಮೈಸೂರು, ತುಮಕೂರು, ಕೋಲಾರ, ಶಿವಮೊಗ್ಗ ತಮಿಳುನಾಡು ಭಾಗಗಳಿಂದ ಲಕ್ಷಾಂತರ ಭಕ್ತಾದಿಗಳು ಶ್ರೀ ಕ್ಷೇತ್ರಕ್ಕೆ ಭೇಟಿ ನೀಡಿದ್ದು, ಯಾವುದೇ ಅನಾನುಕೂಲ ಆಗದಂತೆ ಪ್ರಾಧಿಕಾರದ ವತಿಯಿಂದ ಈಗಾಗಲೇ ಸೂಕ್ತ ಕ್ರಮ ವಹಿಸಲಾಗಿದೆ.
ಶ್ರೀ ಕ್ಷೇತ್ರಕ್ಕೆ ಬಂದ ಲಕ್ಷಾಂತರ ಭಕ್ತಾದಿಗಳಿಗೆ, ಪೊಲೀಸ್ ಸಿಬ್ಬಂದಿಗಳು ಗೃಹರಕ್ಷಕ ದಳದವರು ಅಧಿಕಾರಿ ವರ್ಗದವರಿಗೆ ವಿಶೇಷ ದಾಸೋಹ ತೆರೆಯಲಾಗಿದೆ. ನಿರಂತರ ದಾಸೋಹ ವ್ಯವಸ್ಥೆ ಕಲ್ಪಿಸಲಾಗಿದೆ. ಧಾರ್ಮಿಕ ದತ್ತಿ ಇಲಾಖೆ ವ್ಯಾಪ್ತಿಯ ದೇವಾಲಯಗಳಿಗೆ ಬರುವ 60 ವರ್ಷ ಮೇಲ್ಪಟ್ಟವರಿಗೆ ನೇರದರ್ಶನ ಅವಕಾಶ ಮಾಡಿಕೊಡುವಂತೆ, ಧಾರ್ಮಿಕ ದತ್ತಿ ಇಲಾಖೆಯ ಆಯುಕ್ತರು ಈಗಾಗಲೇ ಆದೇಶ ಹೊರಡಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ಮಲೆ ಮಹದೇಶ್ವರ ಬೆಟ್ಟದ ಆಲಂಬಾಡಿ ಬಸವ ದ್ವಾರದಿಂದ 60 ವರ್ಷ ಮೇಲ್ಪಟ್ಟ ಹಿರಿಯ ನಾಗರೀಕರಿಗೆ ನೇರ ದರ್ಶನಕ್ಕೆ ವ್ಯವಸ್ಥೆ ಕಲ್ಪಿಸಲಾಗಿದೆ. ಅತಿಥಿ ಗಣ್ಯರು ಅಂಗವಿಕಲರಿಗೆ ಗೇಟ್ ನಂಬರ್ ನಾಲ್ಕರಲ್ಲಿ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. 60 ವರ್ಷ ಮೇಲ್ಪಟ್ಟವರು ಕಡ್ಡಾಯವಾಗಿ ಆಧಾರ್ ಕಾರ್ಡ್ ತೋರಿಸಿ ದರ್ಶನ ಪಡೆಯುತ್ತಿದ್ದಾರೆ.
ಮಹಾಲಯ ಅಮಾವಾಸ್ಯೆ ಪ್ರಯುಕ್ತ ಶ್ರೀ ಕ್ಷೇತ್ರ ಮಲೆ ಮಾದೇಶ್ವರ ಬೆಟ್ಟಕ್ಕೆ ಬಂದಿರುವ ಭಕ್ತಾದಿಗಳು ಲಡ್ಡು ಪ್ರಸಾದಕ್ಕೆ ಹೆಚ್ಚಿನ ಆದ್ಯತೆ ನೀಡುವುದರಿಂದ ಈಗಾಗಲೇ ಪ್ರಾಧಿಕಾರದ ವತಿಯಿಂದ 2,00,000 ಲಾಡು ತಯಾರಿಸಲಾಗಿದೆ. ಕಳೆದ ಮೂರು ದಿನಗಳಿಂದಲೂ ಬೆಟ್ಟಕ್ಕೆ ಹೆಚ್ಚಿನ ಭಕ್ತಾದಿಗಳು ಆಗಮಿಸುವುದರಿಂದ ಬೆಂಗಳೂರು, ಮೈಸೂರು, ಕೊಳ್ಳೇಗಾಲ, ಮಂಡ್ಯ, ನಂಜನಗೂಡು ಸೇರಿದಂತೆ ಇನ್ನಿತರ ಡಿಪೋಗಳಿಂದ 300ಕ್ಕೂ ಅಧಿಕ ಬಸ್‌ಗಳು ಕಾರ್ಯಾಚರಣೆ ನಡೆಸಲಾಗುತ್ತಿದೆ.












Click it and Unblock the Notifications