ಮೈಸೂರು ಪಾಲಿಕೆ ಚುನಾವಣೆಯಲ್ಲಿ ಜೆಡಿಎಸ್‌ನವರಿಗೆ ಬಿಜೆಪಿ ಮಕ್ಮಲ್ ಟೋಪಿ
ಚಾಮರಾಜನಗರ, ಸೆಪ್ಟೆಂಬರ್ 6: "ಮೈಸೂರು ಪಾಲಿಕೆ ಚುನಾವಣೆಯಲ್ಲಿ ಜನತಾದಳದವರಿಗೆ ಬಿಜೆಪಿಯವರು ಸರಿಯಾಗಿ ಮಕ್ಮಲ್ ಟೋಪಿ ಹಾಕಿದ್ದಾರೆಂದು" ಮಾಜಿ ಮುಖ್ಯಮಂತ್ರಿ, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಲೇವಡಿ ಮಾಡಿದ್ದಾರೆ.
ಗುಂಡ್ಲುಪೇಟೆಯಲ್ಲಿ ಸುದ್ದಿಗಾರರೊಂದಿಗೆ ಅವರು ಮಾತನಾಡಿ, "ಮೈಸೂರು ಮಹಾನಗರ ಪಾಲಿಕೆ ಮೇಯರ್ ಚುನಾವಣೆಯಲ್ಲಿ ಬಿಜೆಪಿಗೆ ಬೆಂಬಲ ಕೊಟ್ಟು ಜೆಡಿಎಸ್ ಮಂಗ ಆಗಿದೆ. ಮೇಯರ್, ಉಪಮೇಯರ್ ಸ್ಥಾನವನ್ನು ಬಿಜೆಪಿಗೆ ಬಿಟ್ಟುಕೊಟ್ಟಿದ್ದಾರೆ. ಈ ಚುನಾವಣೆ ಮೂಲಕ ಜೆಡಿಎಸ್ ಅವಕಾಶವಾದಿಗಳು ಎಂದು ಮತ್ತೊಮ್ಮೆ ಸಾಬೀತಾಗಿದೆ" ಎಂದು ಆರೋಪಿಸಿದರು.
"ಮೂರು ಪಕ್ಷಗಳು ಏಕಾಂಗಿಯಾಗಿ ಸ್ಪರ್ಧಿಸಿದ್ದರೆ ಕಾಂಗ್ರೆಸ್‌ಗೆ ಮೇಯರ್ ಸ್ಥಾನ ಸಿಗುತ್ತಿತ್ತು. ಆದರೆ, ಜೆಡಿಎಸ್ ಬಿಜೆಪಿಯನ್ನು ಬೆಂಬಲಿಸಿತು. ಜೆಡಿಎಸ್‌ನವರಿಗೆ ಸ್ವಲ್ಪವೂ ಕೂಡ ರಾಜಕೀಯ ಘನತೆ, ಗೌರವವಿಲ್ಲ, ಬಿಜೆಪಿಗೆ ಸಪೋರ್ಟ್ ಮಾಡುವ ಜೆಡಿಎಸ್ ಹೇಗೆ ಸೆಕ್ಯೂಲರ್ ಪಾರ್ಟಿ ಆಗಲಿದೆ?" ಎಂದು ಪ್ರಶ್ನಿಸಿದರು.
"ರಾಷ್ಟ್ರಪತಿ ಚುನಾವಣೆಯಲ್ಲಿ ಬುಡಕಟ್ಟು ಮಹಿಳೆ ಎಂದು ಬಿಜೆಪಿಗೆ ಜೆಡಿಎಸ್ ಸಪೋರ್ಟ್ ಮಾಡಿತ್ತು. ಈಗ ಮೈಸೂರು ಮೇಯರ್ ಚುನಾವಣೆಯಲ್ಲಿ ಏಕೆ ಬಿಜೆಪಿಯನ್ನು ಬೆಂಬಲಿಸಿತು?" ಎಂದು ಜೆಡಿಎಸ್ ವಿರುದ್ಧ ಸಿದ್ದರಾಮಯ್ಯ ಟೀಕಾಪ್ರಹಾರ ನಡೆಸಿದರು.

ಸಿಎಂ ಹೇಳುವುದು ವೇದವಾಕ್ಯವಲ್ಲ
"ಮಳೆ ಅವಾಂತರಕ್ಕೆ ಕಾಂಗ್ರೆಸ್ ಕಾರಣ ಎಂದು ಬಿಜೆಪಿಯವರು ಹೇಳುತ್ತಿದ್ದಾರೆ. ಸಿಎಂ ಹೇಳುವುದು ವೇದವಾಕ್ಯವಲ್ಲ, ಮೂರು ವರ್ಷಗಳಿಂದ ಬಿಜೆಪಿಯವರು ಏನು ಮಾಡುತ್ತಿದ್ದಾರೆ, ಯಡಿಯೂರಪ್ಪ ಅವಧಿಯಲ್ಲಿ ಪ್ರವಾಹ ಬಂದಿತ್ತಲ್ಲ ಅದಾದ ನಂತರ ಏಕೆ ಸರಕಾರ ಕ್ರಮ ಕೈಗೊಂಡಿಲ್ಲ, 3 ವರ್ಷದಿಂದ ಏನು ಮಾಡುತ್ತಿದ್ದೀರಿ. ನಾವು ಮಾಡಿರುವುದು ತಪ್ಪು ಎಂದು ಹೇಳುತ್ತಿದ್ದಾರೆ. ಅದನ್ನೇಕೆ ಸರಿಪಡಿಸಲಿಲ್ಲ?" ಎಂದು ಸರಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
"ಜನರು ಕಾಯುತ್ತಿದ್ದು ಆದಷ್ಟು ಬೇಗ ಈ ಜನವಿರೋಧಿ ಸರಕಾರವನ್ನು ಕಿತ್ತೊಗೆಯುತ್ತಾ. ತಿಂಗಳಿಗೊಮ್ಮೆ ಮೋದಿ ರಾಜ್ಯಕ್ಕೆ ಬರುತ್ತೇನೆ ಎನ್ನುತ್ತಿದ್ದು ಅವರ ವರ್ಚಸ್ಸು ಕಡಿಮೆ ಆಗುತ್ತಿದೆ" ಎಂದರು.

ಶಿಕ್ಷಕರ ನೇಮಕಾತಿ ಹಗರಣ ತನಿಖೆ ದ್ವೇಷದ ರಾಜಕಾರಣ
ಕಾಂಗ್ರೆಸ್ ಅವಧಿಯಲ್ಲಾದ ಶಿಕ್ಷಕರ ನೇಮಕಾತಿಯನ್ನು ತನಿಖೆ ಮಾಡಲಾಗುವುದು ಎನ್ನುವುದರ ಬಗ್ಗೆ ಮಾತನಾಡಿ, "ಯಾವ ತನಿಖೆಯನ್ನಾದರೂ ಮಾಡಲಿ, ನಾವು ಹೆದರಲ್ಲ, 40% ಕಮಿಷನ್ ಆರೋಪ ಮಾಡಿದ್ದಕ್ಕೆ ಹಳೆಯದನ್ನು ಕೆದಕುತ್ತಿದ್ದಾರೆ. 2015ರ ವಿಚಾರ ಇದು, ಆಗ ವಿರೋಧ ಪಕ್ಷದಲ್ಲಿ ಇದ್ದವರೂ ಏನು ಮಾಡುತ್ತಿದ್ದರು. ಯಡಿಯೂರಪ್ಪ, ಬೊಮ್ಮಾಯಿ , ಜಗದೀಶ್ ಶೆಟ್ಟರ್ ಮಾತಾನಾಡಿದರಾ?. ತನಿಖೆ ಮಾಡಿಕೊಳ್ಳಲಿ ನಮ್ಮದೇನು ವಿರೋಧ ಇಲ್ಲ. ಆದರೆ ಆಗ ಮಾತನಾಡದ ಬಿಜೆಪಿಯವರು ವಿರೋಧ ಪಕ್ಷದಲ್ಲಿ ಇದ್ದು ಫೇಲ್ ಆಗಿದಿರಿ ಎಂದರ್ಥ. ಈಗ ಇವರು ಮಾಡುತ್ತಿರುವುದು ದ್ವೇಷದ ರಾಜಕಾರಣ. 40% ಕಮಿಷನ್ ತನಿಖೆ ಮಾಡಿ ಎಂದಿದ್ದಕ್ಕೆ ಈಗ ಶಿಕ್ಷಕರ ನೇಮಕಾತಿ ಹಗರಣ ಅಂತ ಶುರು ಮಾಡಿದ್ದಾರೆ" ಎಂದರು.
"ಇವರ ಸರಕಾರದಲ್ಲಿ ಎಡಿಜಿಪಿ ಅಮೃತ್ ಪೌಲ್ ಜೈಲಿಗೆ ಹೋಗಿರುವುದು ಏಕೆ?. ಏನು ಅಮೃತ್ ಅವರ ಅತ್ತೆ ಮನೆ ಎಂದು ಜೈಲಿಗೆ ಕಳುಹಿಸಿದ್ದಾರಾ?" ಎಂದು ಪಿಎಸ್ಐ ನೇಮಕಾತಿ ಹಗರಣದ ಬಗ್ಗೆ ಕಿಡಿಕಾರಿದರು.

ಒಂದಿಬ್ಬರು ಬಿಟ್ಟು ಹೋದರೆ ಕಾಂಗ್ರೆಸ್ ಮಾಯವಾಗಲ್ಲ
ಭಾರತ್ ಜೋಡೋ ಅಲ್ಲಾ ಕಾಂಗ್ರೆಸ್ ಜೋಡೋ ಮಾಡಲಿ ಎಂಬ ವಿಪಕ್ಷಗಳ ಟೀಕೆಗೆ ಪ್ರತಿಕ್ರಿಯಿಸಿ, "ಯಾರೋ ಒಂದಿಬ್ಬರು ಕಾಂಗ್ರೆಸ್ ಬಿಟ್ಟು ಹೋದರೇ ಕಾಂಗ್ರೆಸ್ ಏನೂ ಮಾಯವಾಗಲ್ಲ, ಜನಸಂಘದಲ್ಲಿರುವವರೆಲ್ಲಾ ಈಗ ಬಿಜೆಪಿಯಲ್ಲಿದ್ದರಾ?. ಬಿಜೆಪಿ ವಲಸಿಗರ ಪಾರ್ಟಿ ಆಗಿದೆ. ಎಸ್. ಟಿ. ಸೋಮಶೇಖರ್ ಏನು ಆರ್‌ಎಸ್‌ಎಸ್‌ನವರಾ?. ಸೋಮಣ್ಣ, ಸುಧಾಕರ್, ಬೈರತಿ ಸಂಘ ಪರಿವಾರದವರಾ.?. ಸಿಎಂ ಬೊಮ್ಮಾಯಿ ಎಲ್ಲಿಯವರು, ಬಿಜೆಪಿ ವಲಸಿಗರ ಪಾರ್ಟಿ ಆಗಿದೆ" ಎಂದು ವ್ಯಂಗ್ಯ ಮಾಡಿದರು.

ಪಾದಯಾತ್ರೆಯಲ್ಲಿ 25 ಸಾವಿರ ಕಾರ್ಯಕರ್ತರು
ಸೆಪ್ಟೆಂಬರ್ 30ರಂದು ಗುಂಡ್ಲುಪೇಟೆ ಮೂಲಕ ಪಾದಯಾತ್ರೆ ರಾಜ್ಯ ಪ್ರವೇಶಿಸಲಿದೆ. ಈ ಸಂದರ್ಭದಲ್ಲಿ ರಾಹುಲ್ ಗಾಂಧಿಯವರಿಗೆ ಅದ್ದೂರಿ ಸ್ವಾಗತ ಕೋರಲು ನಿರ್ಧರಿಸಲಾಗಿದೆ. ಚಾಮರಾಜನಗರ ಹಾಗೂ ಮೈಸೂರು ಜಿಲ್ಲೆಯಲ್ಲಿ ಪಾದಯಾತ್ರೆ ಯಶಸ್ವಿಗೊಳಿಸಲು ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ರಾಹುಲ್ ಗಾಂಧಿ ನೇತೃತ್ವದಲ್ಲಿ ಪ್ರತಿದಿನ 25 ಸಾವಿರ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಭಾಗವಹಿಸಬೇಕು ಸಿದ್ದರಾಮಯ್ಯ ಸೂಚನೆ ನೀಡಿದ್ದಾರೆ.












Click it and Unblock the Notifications