ಗುಂಡ್ಲುಪೇಟೆ: ಆಹಾರವೆಂದು ಭಾವಿಸಿ ಸಿಡಿಮದ್ದು ಜಗಿದು ಜಾಂಬವಂತ ಸಾವು
ಚಾಮರಾಜನಗರ, ಜುಲೈ, 18: ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಓಂಕಾರ ವಲಯದ ವ್ಯಾಪ್ತಿಯ ಗುಂಡ್ಲುಪೇಟೆ ತಾಲೂಕಿನ ಹೊರೆಯಾಲ ಗ್ರಾಮದ ಜಮೀನನಲ್ಲಿ ಹಂದಿಗಳ ಬೇಟೆಗೆ ಇಟ್ಟಿದ್ದ ನಾಡ ಸಿಡಿಮದ್ದು ಸಿಡಿದು ಕರಡಿ ಸಾವಿಗೀಡಾದ ಘಟನೆ ನಡೆದಿದೆ.
ಗ್ರಾಮದ ಮಹದೇವಪ್ಪ ಎಂಬುವರ ಮಗ ಮಹದೇವಸ್ವಾಮಿ ಎಂಬುವರಿಗೆ ಸೇರಿದ ಕಬ್ಬಿನ ತೋಟದಲ್ಲಿ ಇಟ್ಟಿದ್ದ ಸಿಡಿಮದ್ದು ತಿನ್ನಲು ಹೋಗಿದ್ದ 6 ವರ್ಷ ವಯಸ್ಸಿನ ಗಂಡು ಕರಡಿಯ ಬಾಯಿಗೆ ಸಿಡಿದು ಸ್ಥಳದಲ್ಲಿಯೇ ಸಾವಿಗೀಡಾಗಿದೆ.

ವಿಷಯ ತಿಳಿದ ಓಂಕಾರ್ ವಲಯದ ಅರಣ್ಯಾಧಿಕಾರಿಗಳು ಸ್ಥಳಕ್ಕೆ ತೆರಳಿ ಪರಿಶೀಲಿಸಿದರು. ಈ ಬಗ್ಗೆ ಪ್ರಕರಣ ದಾಖಲಿಸಲಾಗಿದ್ದು, ಇನ್ನು ಸಿಡಿಮದ್ದು ಇಟ್ಟಿದ್ದ ಜಮೀನು ಮಾಲೀಕ ತಲೆಮರೆಸಿಕೊಂಡಿದ್ದಾನೆ ಎನ್ನಲಾಗಿದೆ. ಕೊನೆಯದಾಗಿ ಗುರುವಾರ ಮರಣೋತ್ತರ ಪರೀಕ್ಷೆ ನಡೆಸಿ ಕರಡಿಯ ಕಳೇಬರವನ್ನು ಸುಟ್ಟು ಹಾಕಲಾಗಿದೆ ಎಂದು ತಿಳಿದುಬಂದಿದೆ.
2 ಊರುಗಳಲ್ಲಿ ಚಿರತೆ ದಾಳಿ: ಚಿರತೆ ದಾಳಿ ನಡೆಸಿ ಎರಡು ಕುರಿಗಳನ್ನು ಕೊಂದು ಹಾಕಿರುವ ಘಟನೆ ಗುಂಡ್ಲುಪೇಟೆ ತಾಲೂಕಿನ ಪರಮಾಪುರ ಗ್ರಾಮದ ಹೊರ ವಲಯದಲ್ಲಿ ಮಂಗಳವಾರ (ಜುಲೈ 09) ನಡೆದಿದೆ.
ಪರಮಾಪುರ ಗ್ರಾಮದ ಚಂದ್ರಶೇಖರ್ ಎಂಬುವರಿಗೆ ಸೇರಿದ ಕುರಿಗಳು ಇವಾಗಿವೆ. ರೇವಣ್ಣ ಎಂಬ ರೈತರ ಜಮೀನಿನಲ್ಲಿ ಕುರಿಗಳನ್ನು ಮೇಯಿಸುತ್ತಿದ್ದ ವೇಳೆ ಏಕಾಏಕಿ ದಾಳಿ ನಡೆಸಿದ ಚಿರತೆ ಎರಡು ಮರಿಗಳನ್ನು ಕೊಂದು ಹಾಕಿದ್ದು, ಒಂದನ್ನು ಎಳೆದೋಯ್ದಿದೆ. ಚಿರತೆ ದಾಳಿ ನಡೆಸಿದ ವೇಳೆ ಮಾಲೀಕರು ಕೂಗಿಕೊಂಡ ಪರಿಣಾಮ ಸ್ಥಳದಿಂದ ಕಾಲ್ಕಿತ್ತಿದೆ. ಇದರಿಂದ ಮಾಲೀಕರಿಗೆ ತೀವ್ರ ನಷ್ಟ ಉಂಟಾಗಿದೆ.
ಸುಮಾರು 20,000 ರೂಪಾಯಿ ಬೆಲೆ ಬಾಳುವ ಎರಡು ಕುರಿಗಳನ್ನು ಚಿರತೆ ದಾಲಿ ನಡೆಸಿ ಕೊಂದು
ಹಾಕಿರುವುದರಿಂದ ಇದನ್ನೇ ನಂಬಿ ಜೀವನ ನಡೆಸುತ್ತಿದ್ದ ಮಾಲೀಕರು ಕಂಗಲಾಗಿದ್ದಾರೆ. ಆದ್ದರಿಂದ ಅರಣ್ಯ ಇಲಾಖೆಯವರು ಕೂಡಲೇ ಸೂಕ್ತ ಪರಿಹಾರ ದೊರಕಿಸಿಕೊಡಬೇಕು ಎಂದು ರೈತ ಮುಖಂಡರು ಒತ್ತಾಯಿಸಿದ್ದಾರೆ.
ಚಿರತೆ ಸೆರೆಗೆ ಆಗ್ರಹ: ಪರಮಾಪುರ, ಪಡಗೂರು ವ್ಯಾಪ್ತಿಯಲ್ಲಿ ಚಿರತೆ ಹಾವಳಿ ಹೆಚ್ಚಿನ ರೀತಿಯಲ್ಲಿದ್ದು, ಆಗಿಂದಾಗ್ಗೆ ಜಾನುವಾರು, ಮರಿ-ಕುರಿಗಳ ಮೇಲೆ ದಾಳಿ ನಡೆಸಿ ಕೊಂದು ಹಾಕುತ್ತಿದೆ. ಇದರಿಂದ ರೈತರು ತಮ್ಮ ಜಮೀನುಗಳಿಗೆ ಹೋಗಲು ಹಿಂದೇಟು ಹಾಕುವಂತಾಗಿದೆ. ಈ ಕೂಡಲೇ ಅರಣ್ಯ ಇಲಾಖೆ ಅಧಿಕಾರಿಗಳು ಕ್ರಮ ವಹಿಸಿ ಬೋನ್ ಇರಿಸಿ ಚಿರತೆ ಸೆರೆ ಹಿಡಿಯುವಂತೆ ಮಧು ಕಬ್ಬಹಳ್ಳಿ ಬಸಪ್ಪ ಆಗ್ರಹಿಸಿದ್ದಾರೆ.
ಕರುವಿನ ಮೇಲೆ ಚಿರತೆ ದಾಳಿ: ಕೊಟ್ಟಿಗೆಯಲ್ಲಿ ಕಟ್ಟಿ ಹಾಕಿದ್ದ ಕರುವಿನ ಮೇಲೆ ಚಿರತೆ ದಾಳಿ ನಡೆಸಿದ ಪರಿಣಾಮ ಕರು ಗಾಯಗೊಂಡಿರುವ ಘಟನೆ ಗುಂಡ್ಲುಪೇಟೆ ತಾಲೂಕಿನ ಓಂಕಾರ ವನ್ಯಜೀವಿ ವಲಯ ವ್ಯಾಪ್ತಿಯ ಮಂಚಹಳ್ಳಿ ಗ್ರಾಮದಲ್ಲಿ ನಡೆದಿದೆ.
ಮಂಚಹಳ್ಳಿ ಗ್ರಾಮದ ಸಿದ್ದನಾಯಕ ಎಂಬುವವರು ತಮ್ಮ ಕರುವನ್ನು ಕೊಟ್ಟಿಗೆಯಲ್ಲಿ ಕಟ್ಟಿಹಾಕಿದ್ದ ವೇಳೆ ಚಿರತೆ ದಾಳಿ ನಡೆಸಿ ಗಾಯಗೊಳಿಸಿದೆ. ಈ ವೇಳೆ ಕರು ಅರಚಿಕೊಂಡಿದ್ದರಿಂದ ಎಚ್ಚೆತ್ತುಕೊಂಡ ಅಕ್ಕಪಕ್ಕದ ಮನೆಯವರು ಕೂಗಿದ್ದಾರೆ. ನಂತರ ಕರುವನ್ನು ಬಿಟ್ಟು ಚಿರತೆ ಪರಾರಿಯಾಗಿದೆ.












Click it and Unblock the Notifications