ಬಂಡೀಪುರ: ಹುಲಿ ದಾಳಿಯಿಂದ ಮರಿಯಾನೆ ಸಾವು, ನಡುರಸ್ತೆಯಲ್ಲೇ ಮುಗಿಲು ಮುಟ್ಟಿದ ತಾಯಿಯ ಆಕ್ರಂದನ, ವಿಡಿಯೋ ವೈರಲ್
ಚಾಮರಾಜನಗರ, ಏಪ್ರಿಲ್, 20: ಹುಲಿ ದಾಳಿಯಿಂದ ಮರಿ ಆನೆ ಸಾವಿಗೀಡಾದ ಘಟನೆ ಬಂಡೀಪುರ ಅರಣ್ಯದಲ್ಲಿ ನಡೆದಿದಿದೆ. ಇನ್ನು ತಾಯಿ ಆನೆಯು ಸಾವನ್ನಪ್ಪಿದ ಮರಿ ಆನೆಯ ಶವ ಬಿಟ್ಟು ಕದಲದೇ ಕಾದು ಕುಳಿತ್ತಿದ್ದು, ಈ ದೃಶ್ಯ ಮನಕಲಕುವಂತಿದೆ.
ಸಾಮಾನ್ಯವಾಗಿ ತಾಯಂದಿರು ತಮ್ಮ ಮಕ್ಕಳು ಹೇಗೆ ಇರಲಿ ಅವರ ಮೇಲೆ ತಮ್ಮ ಜೀವವನ್ನೇ ಇಟ್ಟುಕೊಂಡಿರುತ್ತಾರೆ. ಹಾಗೆಯೇ ಕೆಲವೊಂದು ಪ್ರಾಣಿಗಳು ಕೂಡ ತಮ್ಮ ಮರಿಗಳ ರಕ್ಷಣೆ ಮಾಡುತ್ತವೆ. ಇನ್ನು ಆನೆಗಳ ವಿಚಾರಕ್ಕೆ ಬಂದರೆ, ತನ್ನ ಮರಿಗಳೇನಾದರೂ ಕಾಣಲಿಲ್ಲ ಅಂದರೆ ಅವುಗಳ ವರ್ತನೆಯಲ್ಲಿ ಗಾಬರಿಯ ಲಕ್ಷಣಗಳು ಕಂಡು ಬರುತ್ತವೆ.

ಇನ್ನು ಇದೀಗ ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆ ತಾಲೂಕಿನ ಬಂಡೀಪುರ ಹುಲಿ ಸಂರಕ್ಷಿತ ಅರಣ್ಯದಲ್ಲಿ ಹುಲಿ ದಾಳಿಯಿಂದ ಮರಿ ಆನೆ ಸಾವನ್ನಪ್ಪಿದೆ. ಬಳಿಕ ಸ್ಥಳಕ್ಕೆ ಆಗಮಿಸಿದ ತಾಯಿ ಆನೆ ತನ್ನ ಮರಿಯ ಶವವನ್ನು ಬಿಟ್ಟು ಕದಲದೆ ಕಣ್ಣೀರಾಕುತ್ತಾ ಕುಳಿತಿರುವ ಮನಕಲಕುವ ದೃಶ್ಯ ಇದೀಗ ಎಲ್ಲೆಡೆ ವೈರಲ್ ಆಗುತ್ತಿದೆ. ಇನ್ನು ಇದನ್ನು ಕಂಡ ಸಾವಿರಾರು ಪ್ರಯಾಣಿಕರು, ಅಲ್ಲಿ ನೆರೆದಿದ್ದ ಜನರು ಕೂಡ ಕಣ್ಣಿರಿಟ್ಟ ಘಟನೆ ನಡೆದಿದೆ.
ಮತ್ತೊಂದೆಡೆ ರಸ್ತೆ ಪಕ್ಕದಲ್ಲೇ ಆನೆ ಮರಿ ಸಾವನ್ನಪ್ಪಿರುವ ಹಿನ್ನೆಲೆ ಬಂಡೀಪುರ ಅರಣ್ಯ ವ್ಯಾಪ್ತಿಯ ಮೈಸೂರು ಊಟಿ ರಸ್ತೆ ಸಂಚಾರ ಅಸ್ತವ್ಯಸ್ತವಾಗಿದ್ದು, ವಾಹನಗಳು ಕಿಲೋಮೀಟರ್ ಗಟ್ಟಲೇ ಸಾಲುಗಟ್ಟಿ ನಿಂತಿರುವ ಘಟನೆ ಜರುಗಿದೆ. ಇನ್ನು ವಾಹನಗಳ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲು ಅರಣ್ಯಾಧಿಕಾರಿಗಳು ಹರಸಾಹಸಪಟ್ಟಿದ್ದಾರೆ.
ರಸ್ತೆ ಪಕ್ಕದ ತಡೆಗೋಡೆ ಮೇಲೆ ಮಲಗಿದ ಚಿರತೆ: ಬೆಂಗಳೂರು- ದಿಂಡಿಗಲ್ ರಾಷ್ಟ್ರೀಯ ಹೆದ್ದಾರಿ ಹಾದುಹೋಗುವ ಚಾಮರಾಜನಗರ ಗಡಿಭಾಗವಾದ ದಿಂಬಂ ಘಟ್ಟ ಪ್ರದೇಶದ ತಡೆಗೋಡೆ ಮೇಲೆ ಚಿರತೆ ಮಲಗಿ ನಿದ್ರಿಸುತ್ತಿದ್ದು, ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗುತ್ತಿದೆ.
ತಮಿಳುನಾಡಿನಿಂದ ಮೈಸೂರಿಗೆ ಬರುತ್ತಿದ್ದ ವೇಳೆ ದಿಂಬಂನ 27ನೇ ತಿರುವಿನ ತಡೆಗೋಡೆ ಮೇಲೆ ಚಿರತೆಯೊಂದು ಮಲಗಿತ್ತು. ಇದನ್ನು ಕಂಡ ಕಾರಿನ ಚಾಲಕ ವೀಡಿಯೋ ಮಾಡುವ ವೇಳೆ ಎಚ್ಚೆತ್ತ ಚಿರತೆ ತಡೆಗೋಡೆ ಇಳಿದು ಮಾಯಾವಾಗಿದೆ. ಇನ್ನು, ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲದದ ಆಗುತ್ತಿದೆ.
ಸಾಮಾನ್ಯವಾಗಿ ಇತ್ತೀಚಿನ ದಿನಗಳಲ್ಲಿ ಬಿಸಿಲಿನ ತಾಪಕ್ಕೆ ನದಿ, ತೊರೆಗಳಲ್ಲಿ ನೀರು ಬತ್ತಿಹೋಗುತ್ತಲೇ ಇದೆ. ಅದರಲ್ಲೂ ಕಾಡಿನ ಮಧ್ಯಭಾಗದಲ್ಲಿರುವ ತೊರೆಗಳಲ್ಲಿಯೂ ನೀರು ಬತ್ತಿಹೋಗುತ್ತಿದ್ದು, ಈ ಹಿನ್ನೆಲೆ ಕಾಡುಪ್ರಾಣಿಗಳು ಬಾಯರಿಕೆ ನೀಗಿಸಿಕೊಳ್ಳಲು ಕಾಡು ಬಿಟ್ಟು ನಾಡಿನತ್ತ ಲಗ್ಗೆ ಇಡುತ್ತಿವೆ. ಇತ್ತೀಚೆಗಷ್ಟೇ ಚಾಮರಾಜನಗರ ಜಿಲ್ಲೆಯ ಬಂಡಿಪುರ ಭಾಗದಲ್ಲಿ ಹುಲಿಯೊಂದು ಕಾಡಿನಿಂದ ಹೊರಬಂದು ರಸ್ತೆಯಲ್ಲಿದ್ದ ನೀರನ್ನು ಕುಡಿದು ಬಾಯಾರಿಕೆ ನೀಗಿಸಿಕೊಂಡ ಘಟನೆ ನಡೆದಿತ್ತು.












Click it and Unblock the Notifications