ಶಾಸಕ ಮಹೇಶ್‌ಗೆ ಪರೋಕ್ಷವಾಗಿ ಕೊಳ್ಳೇಗಾಲ ಕ್ಷೇತ್ರದ ಟಿಕೆಟ್ ಸುಳಿವು ನೀಡಿದ ಬಿ.ಎಸ್. ಯಡಿಯೂರಪ್ಪ
ಶಾಸಕ ಮಹೇಶ್‌ಗೆ ಕೊಳ್ಳೇಗಾಲದ ಟಿಕೆಟ್ ಪಕ್ಕಾ ಎಂದು ಚಾಮರಾಜನಗರದಲ್ಲಿ ನಡೆದ ಬಿಜೆಪಿ ರಥಯಾತ್ರೆಯಲ್ಲಿ ಬಿಎಸ್‌ವೈ ಪರೋಕ್ಷವಾಗಿ ಸುಳಿವು ಕೊಟ್ಟರು.
ಚಾಮರಾಜನಗರ, ಮಾರ್ಚ್, 02: ಶಾಸಕ ಮಹೇಶ್‌ಗೆ ಕೊಳ್ಳೇಗಾಲದ ಟಿಕೆಟ್ ಪಕ್ಕಾ ಎಂದು ಚಾಮರಾಜನಗರದಲ್ಲಿ ನಡೆದ ಬಿಜೆಪಿ ರಥಯಾತ್ರೆಯಲ್ಲಿ ಬಿಎಸ್‌ವೈ ಪರೋಕ್ಷವಾಗಿ ಸುಳಿವು ಕೊಟ್ಟರು.
ಕೊಳ್ಳೇಗಾಲದಲ್ಲಿ ಬುಧವಾರ ನಡೆದ ಬಿಜೆಪಿ ವಿಜಯ ಸಂಕಲ್ಪ ಯಾತ್ರೆಯಲ್ಲಿ ಬಿ.ಎಸ್.ಯಡಿಯೂರಪ್ಪ ಮಾತನಾಡಿ, ಶಾಸಕ ಎನ್.ಮಹೇಶ್ ಸಂಭಾವಿತರು, ಅವರು ಒಳ್ಳೆಯ ಕೆಲಸಗಳನ್ನು ಮಾಡಿದ್ದಾರೆ. ಈ ಬಾರಿಯೂ ಜನರು ಮಹೇಶ್‌ಗೆ ಆಶೀರ್ವಾದ ಮಾಡಿ ಎನ್ನುವ ಮೂಲಕ ಟಿಕೆಟ್ ಫೈನಲ್ ಆಗಿರುವ ಕುರಿತು ಸುಳಿವು ಕೊಟ್ಟರು.
ಇನ್ನು, ಚುನಾವಣಾ ರಾಜಕೀಯದಿಂದ ವಿದಾಯ ಪಡೆದಿರುವ ಬಗ್ಗೆ ಸ್ಪಷ್ಟನೆ ಕೊಟ್ಟ ಯಡಿಯೂರಪ್ಪ, ಪಕ್ಷ ತನಗೆ ಯಾವುದೇ ಅನ್ಯಾಯ ಮಾಡಿಲ್ಲ. ಎಲ್ಲಾ ಸ್ಥಾನಮಾನವನ್ನೂ ಕೊಟ್ಟಿದೆ, ಕೇಂದ್ರ ಮಟ್ಟದಲ್ಲಿ ಉನ್ನತ ಸ್ಥಾನ ಕೊಟ್ಟಿದೆ. ತನಗೆ ಯಾವುದೇ ಅಸಮಾಧಾನವೂ ಇಲ್ಲ. ಇದನ್ನು ಲಿಂಗಾಯತ ಸಮುದಾಯ ಅರಿಯಬೇಕು. ಈ ಬಾರಿ ಜಿಲ್ಲೆಯ ನಾಲ್ಕು ಕ್ಷೇತ್ರಗಳಲ್ಲಿ ಕಮಲವನ್ನು ಅರಳಿಸಬೇಕು ಎಂದು ಮನವಿ ಮಾಡಿಕೊಂಡರು. ಹಾಗೆಯೇ ಶಾಸಕ ಎನ್.ಮಹೇಶ್ ಅವರನ್ನು ಆಶೀರ್ವಾದ ಮಾಡಬೇಕೆಂದು ಭಾಷಣದಲ್ಲಿ ಹೇಳಿದರು.
ಸಿದ್ದರಾಮಯ್ಯ ಅಂಡ್ ಕಂಪನಿ ಹಣಬಲ, ಅಧಿಕಾರ ಬಲ, ಜಾತಿ ನಡುವೆ ವಿಷ ಬಿತ್ತಿ ಅಧಿಕಾರ ಹಿಡಿಯಲು ಹೊರಟಿದ್ದಾರೆ. ಅವರಿಗೆ ತಕ್ಕ ಪಾಠ ಕಲಿಸಿ. ನನಗೆ ಜಾತಿ ಗೊತ್ತಿಲ್ಲ.
ಹಿಂದೂ, ಮುಸ್ಲಿಂ, ಕ್ರಿಶ್ಚಿಯನ್ ಎಲ್ಲರೂ ಒಂದೇ ಎಂದು ಬದುಕಿರುವವನು ನಾನು.
ನರೇಂದ್ರ ಮೋದಿ ಇರುವವರೆಗೂ ಈ ವೆಂಕ, ನಾಣಿ, ಸೀನ ಇವರೆಲ್ಲಾ ಯಾವ ಲೆಕ್ಕ ಎಂದು ಕಾಂಗ್ರೆಸ್ ವಿರುದ್ಧ ಕಿಡಿಕಾರಿದರು.

ಪ್ರಧಾನಿಯವರದ್ದು ನಿಸ್ವಾರ್ಥ ಚಿಂತನೆಯಾಗಿದೆ
ಸಮಾವೇಶದಲ್ಲಿ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಮಾತನಾಡಿ, ನಮ್ಮ ಪ್ರಧಾನಿ ಯಾವುದೇ ದೇಶಕ್ಕೆ ಹೋದರೂ ಕೆಂಪು ಹಾಸಿನ ಸ್ವಾಗತ ಸಿಗುತ್ತಿದೆ. ಹಿಂದೆ ನಾವು ವಿದೇಶದ ಶಸ್ತ್ರಾಸ್ತ್ರಗಳಿಗೆ ಕೈ ಚಾಚುತ್ತಿದ್ದೆವು. ಆದರೆ ನಾವೇ 20 ದೇಶಗಳಿಗೆ ಶಸ್ತ್ರಾಸ್ತ್ರಗಳನ್ನು ರಫ್ತು ಮಾಡುತ್ತಿದ್ದೇವೆ. ತನಗಾಗಿ ಏನನ್ನು ಮಾಡಿಕೊಳ್ಳದ ನಿಸ್ವಾರ್ಥ ಚಿಂತನೆಯ ಪ್ರಧಾನಿ ಇರುವ ಪಕ್ಷದಲ್ಲಿ ಇರುವುದು ನಮ್ಮ ಪುಣ್ಯ ಎಂದರು.

ನಮ್ಮ ನಂಬಿಕೆಗೆ ಸಿದ್ದರಾಮಯ್ಯ ಮೋಸ ಮಾಡಿದರು
ಗರ್ಭದಲ್ಲಿರುವ ಮಗು ಯಾವುದೆಂದು ತಿಳಿದು ಹೆಣ್ಣು ಮಗುವಾಗದರೇ ಹೊಟ್ಟೆಯಿಂದಲೇ ಕಿತ್ತಾಕುತ್ತಿದ್ದರು. ಇದನ್ನು ನಿಲ್ಲಿಸಲು ಯಡಿಯೂರಪ್ಪ ಭಾಗ್ಯಲಕ್ಷ್ಮಿ ಯೋಜನೆಯನ್ನು ಜಾರಿಗೆ ತಂದರು. ಸಿದ್ದರಾಮಯ್ಯ ಒಂದು ವರ್ಗದ ಒಲೈಕೆ ಮಾಡುವ ರಾಜಕಾರಣ ಮಾಡಿದರು.
ಸಿದ್ದರಾಮಯ್ಯ ಹಿಂದುಳಿದ ವರ್ಗದ ಧ್ವನಿಯಾಗುತ್ತಾರೆ ಎಂದು ನಾವೆಲ್ಲ ಅಂದುಕೊಂಡಿದ್ದೆವು.
ಆದರೆ ನಮ್ಮ ನಂಬಿಕೆಗೆ ಸಿದ್ದರಾಮಯ್ಯ ಮೋಸ ಮಾಡಿದರು ಎಂದರು.
ನೀವು ಸಿದ್ದರಾಮಯ್ಯ ಸರ್ಕಾರ ಮತ್ತು ಯಡಿಯೂರಪ್ಪ, ಬೊಮ್ಮಾಯಿ ಸರ್ಕಾರವನ್ನು ತುಲನೆ ಮಾಡಿ ಎಂದರು. ನೀವೆಲ್ಲರೂ ಶಾಸಕ ಮಹೇಶ್ ಕೈ ಬಲಪಡಿಸುವ ಕೆಲಸ ಮಾಡಿ ಎಂದು ಮನವಿ ಮಾಡುವ ಮೂಲಕ ಗಮನ ಸೆಳೆದರು.

ಕೊಳ್ಳೇಗಾಲ ಸಾಕಷ್ಟು ಅಭಿವೃದ್ಧಿಯಾಗಿದೆ
ಸಿಎಂ ಬೊಮ್ಮಾಯಿ ಮಾತನಾಡಿ, ಚಾಮರಾಜನಗರದ 4 ಕ್ಷೇತ್ರಗಳಲ್ಲೂ ಕಮಲ ಅರಳುತ್ತದೆ.
ಯಡಿಯೂರಪ್ಪ ಅವರು ಚಾಮರಾಜನಗರವನ್ನು ಅತ್ಯಂತ ಪ್ರೀತಿ ಮಾಡುತ್ತಾರೆ. ಅವರ ಹೃದಯದಲ್ಲಿ ಚಾಮರಾಜನಗರ ಇದೆ. 2009ರಲ್ಲಿ ಜಿಲ್ಲೆಯ ಕೆರೆ ತುಂಬಿಸುವ ಕಾರ್ಯಕ್ಕೆ ಚಾಲನೆ ನೀಡಿ 2013ರಲ್ಲಿ ಪೂರ್ಣಗೊಳಿಸಿದರು. ಯಡಿಯೂರಪ್ಪ ಮುಖ್ಯಮಂತ್ರಿ ಆದಮೇಲೆ ಮಹೇಶ್ ಬಂದು ನಾನು ಯಡಿಯೂರಪ್ಪ ಕೈ ಬಲಪಡಿಸುತ್ತೇನೆ. ಆದರೆ ನನಗೆ ನನ್ನ ಕ್ಷೇತ್ರ ಅಭಿವೃದ್ಧಿ ಮಾಡಿ ಎಂದು ಕೇಳಿಕೊಂಡರು. ಅದರಂತೆಯೇ ಕೊಳ್ಳೇಗಾಲ ಕ್ಷೇತ್ರ ನಮ್ಮ ಅವಧಿಯಲ್ಲಿ ಸಾಕಷ್ಟು ಅಭಿವೃದ್ಧಿಯಾಗಿದೆ ಎಂದರು.

ಕಾಂಗ್ರೆಸ್ ವಿರುದ್ಧ ಬಸವರಾಜ ಬೊಮ್ಮಾಯಿ ಕಿಡಿ
ಕಾಂಗ್ರೆಸ್ ಸರ್ಕಾರದಲ್ಲಿ ಅನ್ನಭಾಗ್ಯದಲ್ಲಿ ಲೂಟಿ ಮಾಡಿದರು. ಹಾಸ್ಟೆಲ್ ವಿದ್ಯಾರ್ಥಿಗಳ ದಿಂಬು ಮತ್ತು ಬೆಡ್‌ಶೀಟ್, ಹಾಸಿಗೆಯಲ್ಲೂ ದುಡ್ಡು ಹೊಡೆದರು. ಅವರು 5 ವರ್ಷ ಪೂರ್ತಿ ಲೂಟಿ ಮಾಡಿದರು. ಇವತ್ತು ಕಾಂಗ್ರೆಸ್‌ನವರು ಬೇರೆ ಬೇರೆ ಮುಖವಾಡ ಹಾಕಿಕೊಂಡು ಬರುತ್ತಾರೆ. ಕಾಂಗ್ರೆಸ್ ಪಕ್ಷವನ್ನು ಮನೆಗೆ ಕಳುಹಿಸುವ ಕೆಲಸ ಮಾಡಿ. ನರೇಂದ್ರ ಮೋದಿ ರಾಜ್ಯಕ್ಕೆ ಬಂದರೆ ಕಾಂಗ್ರೆಸ್‌ನವರಿಗೆ ಕೈ ಕಾಲು ನಡುಗುತ್ತೆ. ಅದಕ್ಕೆ ಅವರು ಯಾಕೆ ಇಲ್ಲಿಗೆ ಬರುತ್ತಾರೆ ಎಂದು ಕೇಳುತ್ತಾರೆ ಅಂತಾ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.
ಇನ್ನು, ರಾಷ್ಟ್ರೀಯ ಅಧ್ಯಕ್ಷ ನಡ್ಡಾ ಕಾರ್ಯಕ್ರಮದಲ್ಲಿ ಸಚಿವ ಸೋಮಣ್ಣ ಗೈರಾಗಿದ್ದರು. ಹಾಗೆಯೇ ಕೊಳ್ಳೇಗಾಲದ ಯಾತ್ರೆಗೆ ಬಿಜೆಪಿ ಪ್ರಬಲ ಟಿಕೆಟ್ ಆಕಾಂಕ್ಷಿಯಾಗಿದ್ದ ಮಾಜಿ ಶಾಸಕ ಜಿ.ಎನ್.ನಂಜುಂಡಸ್ವಾಮಿ ಗೈರಾಗುವ ಮೂಲಕ ಪಕ್ಷದಲ್ಲಿ ಅಂತರ ಕಾಯ್ದುಕೊಂಡಿದ್ದು ಜಗಜ್ಜಾಹಿರಾಯಿತು.












Click it and Unblock the Notifications