ಚಾಮರಾಜನಗರ ಜಿಲ್ಲೆಯ 4 ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳ ಪರ ನಟ ಸುದೀಪ್‌ ಮತಬೇಟೆ, ಅಭಿಮಾನಿಗಳ ಬಳಿ ಮಾಡಿದ ಮನವಿ ಏನು?

ಚಾಮರಾಜನಗರ, ಮೇ, 05: ಕಳೆದ 15 ದಿನಗಳಿಂದ ಬಿಜೆಪಿ ಅಭ್ಯರ್ಥಿಗಳ ಪರ ಭರ್ಜರಿ ಪ್ರಚಾರ ನಡೆಸುತ್ತಿರುವ ಚಿತ್ರನಟ ಸುದೀಪ್ ಇಂದು ಚಾಮರಾಜನಗರದ ನಾಲ್ಕು ಕ್ಷೇತ್ರಗಳಲ್ಲಿಯೂ ರೋಡ್‌ ಶೋ ನಡೆಸಿ ಬಿಜೆಪಿ ಅಭ್ಯರ್ಥಿಗಳ ಪರ ಮತಯಾಚನೆ ಮಾಡಿದರು.

ಮೈಸೂರಿನ ಮೂಲಕ ಮೊದಲಿಗೆ ಗುಂಡ್ಲುಪೇಟೆಗೆ ಆಗಮಿಸಿದ ನಟ ಕಿಚ್ಚ ಸುದೀಪ್‌ ಅವರನ್ನು ಸಹಸ್ರಾರು ಅಭಿಮಾನಿಗಳು ಅದ್ಧೂರಿಯಾಗಿ ಸ್ವಾಗತಿಸಿದರು. 15 ನಿಮಿಷ ರೋಡ್ ಶೋ ನಡೆಸಿದ ನಟ ಸುದೀಪ್, ಗೆದ್ದೇ ಗೆಲ್ಲೆವೆವು ಒಂದು ದಿನ- ಗೆಲ್ಲಲೇಬೇಕು ಒಳ್ಳೆತನ ಎಂದು ಮಾತು ಆರಂಭಿಸಿದರು. ನೆವರ್ ಗಿವ್ ಅಪ್ ರೀತಿ ಸತತವಾಗಿ ಸೋತರು ಗೆದ್ದ ನಿರಂಜನಕುಮಾರ್ ಅವರನ್ನು ಈ ಬಾರಿಯೂ ಗೆಲ್ಲಿಸಿಕೊಡಬೇಕು ಎಂದು ಅಭಿಮಾನಿಗಳಿಗೆ ಮನವಿ ಮಾಡಿದರು.

Actor Sudeep campaign for BJP candidates in 4 constituencies of Chamarajanagar district

ಅಭಿಮಾನಿಗೆ ಆಟೋಗ್ರಾಫ್‌ ಹಾಕಿದ ಸುದೀಪ್

ಗುಂಡ್ಲುಪೇಟೆಯಲ್ಲಿ ನೆಚ್ಚಿನ ನಟನನ್ನು ಕಾಣಲು ಆಭಿಮಾನಿಗಳ ಸಮೂಹವೇ ನೆರೆದಿತ್ತು. ಈ ವೇಳೆ, ಪ್ರಚಾರ ವಾಹನ ಹತ್ತಿದ ಹೊಸೂರಿನ ಅಜಿತ್ ಕುಮಾರ್ ಎಂಬ ಅಭಿಮಾನಿ ಎದೆ ಮೇಲೆ ಸುದೀಪ್ ಆಟೋಗ್ರಾಫ್‌ ಹಾಕಿದರು. ಅಲ್ಲದೆ ಪುನೀತ್‌ರಾಜ್‌ಕುಮಾರ್‌ ಹಾಗೂ ಇನ್ನಿತರ ಅಭಿಮಾನಿಗಳು ತಂದಿದ್ದ ತಮ್ಮ ಫೋಟೋಗಳಿಗೆ ಹಸ್ತಾಕ್ಷಾರ ಹಾಕಿ ಗಮನ ಸೆಳೆದರು. ಹಾಗೆಯೆ ಕಿಚ್ಚ ಕಿಚ್ಚ ಎಂದು ಕೂಗುತ್ತಿದ್ದ ಅಭಿಮಾನಿಗೆ ತಮ್ಮ ವಾಟರ್ ಬಾಟೆಲ್ ಅನ್ನು ಉಡುಗೊರೆಯಾಗಿ ಎಸೆದರು.

ಬೀಳುತ್ತಿದ್ದ ಸೋಮಣ್ಣನನ್ನು ರಕ್ಷಿಸಿದ ಕಿಚ್ಚ

ಗುಂಡ್ಲುಪೇಟೆ ಪ್ರಚಾರದ ಬಳಿಕ ಚಾಮರಾಜನಗರಕ್ಕೆ ಆಗಮಿಸಿದ ನಟ ಸುದೀಪ್, ಸಚಿವ ವಿ.ಸೋಮಣ್ಣ ಅವರ ಪರ ಪ್ರಚಾರ ನಡೆಸಿದರು. ಚಾಮರಾಜನಗರದ ಸಂತೇಮರಹಳ್ಳಿ ವೃತ್ತದಲ್ಲಿ ಸುದೀಪ್ ಅವರನ್ನು 5 ಸಾವಿರಕ್ಕೂ ಅಧಿಕ ಮಂದಿ ಅಭಿಮಾನಿಗಳ ಜಮಾಯಿಸಿ ಸ್ವಾಗತಿಸಿದರು. ಇನ್ನು ಪ್ರಚಾರದ ವೇಳೆ ಕಾರಿನ ಮೇಲೆ ನಿಂತಿದ್ದ ಸೋಮಣ್ಣ ಆಯತಪ್ಪಿ ಬೀಳುತ್ತಿದ್ದಾಗ ಸುದೀಪ್ ಕೈ ಹಿಡಿದೆತ್ತಿ ಅವಘಡ ತಪ್ಪಿಸಿದರು.

ಅಭಿಮಾನಿಯೋರ್ವ ಕಾರನ್ನು ಹತ್ತಿ ಸುದೀಪ್ ಮುಟ್ಟಲು ಪ್ರಯತ್ನಿಸಿದಾಗ ಈ ಅವಘಡ ಉಂಟಾಯಿತು. ಚಾಮರಾಜನಗರದ ಬಳಿಕ ಕೊಳ್ಳೇಗಾಲ ವಿಧಾನಸಭಾ ಕ್ಷೇತ್ರದ ಯಳಂದೂರು ಮತ್ತು ಹನೂರಿನಲ್ಲಿ ಬಿಜೆಪಿ ಅಭ್ಯರ್ಥಿಗಳ ಪರ ಮತಯಾಚನೆ ಮಾಡಿದರು. ಕಿಚ್ಚ ಹೋದಲೆಲ್ಲಾ ಕ್ರೇನ್ ಮೂಲಕ ಸೇಬು, ಹೂವಿನ ಹಾರಗಳನ್ನು ಹಾಕಿ ಅಭಿಮಾನಿಗಳು ಸಂಭ್ರಮಿಸಿದರು. ಮತ್ತೊಂದೆಡೆ ಸಹಸ್ರಾರು ಸಂಖ್ಯೆಯಲ್ಲಿ ಅಭಿಮಾನಿಗಳು ಸೇರಿದ್ದರಿಂದ ಅವರನ್ನು ನಿಯಂತ್ರಣಿಸಲು ಪೊಲೀಸರು ಲಾಠಿ ರುಚಿ ತೋರಿಸಬೇಕಾಯಿತು‌.

ಸುದೀಪ್ ಬಿರುಗಾಳಿ ಎಂದ ಬಿಜೆಪಿ ಶಾಸಕ

ನಟ ಸುದೀಪ್ ಗುಂಡ್ಲುಪೇಟೆಗೆ ಬಂದು ರೋಡ್ ಶೋ ಮಾಡಿದ್ದು, ಈ ವೇಳೆ ನೆಚ್ಚಿನ ನಟನನ್ನು ಕಂಡು ಯುವ ಸಮೂಹ ಪುಳಕಿತರಾದರು. ಯುವಸಮೂಹ ಇಂದು ಸುದೀಪ್ ಕಂಡು ಸಂಭ್ರಮಿಸಿದ್ದಾರೆ, ಸುದೀಪ್ ಬಂದ ನಂತರ ಬಿರುಗಾಳಿ ಎದ್ದಿದೆ, ಬಿಜೆಪಿಗೆ ಒಳ್ಳೆಯ ವಾತಾವರಣ ನಿರ್ಮಾಣ ಮಾಡಿದೆ ಎಂದು ಗುಂಡ್ಲುಪೇಟೆ ಶಾಸಕ ನಿರಂಜನಕುಮಾರ್ ಹೇಳಿದರು.

ಈಗಾಗಾಲೇ ನಾನು ಪಾದಯಾತ್ರೆ ಮೂಲಕ ಊರೂರಿಗೆ ಭೇಟಿ ಕೊಟ್ಟು ಮತಯಾಚಿಸಿದ್ದೇನೆ. ಅಲ್ಲೆಲ್ಲ ಬಿಜೆಪಿ ಪರ ಅಲೆ ಇದೆ. ಊರುಗಳ ವಾಸ್ತವ ಸ್ಥಿತಿ ಅರ್ಥವಾಗಿದೆ. ಇನ್ನು ಕಾಂಗ್ರೆಸ್‌ ಅಭ್ಯರ್ಥಿ ಒಂದು ಊರಿನಲ್ಲಿಯೂ ಪಾದಯಾತ್ರೆ ಮಾಡಿಲ್ಲ. ಆಟೋ ಮೇಲೆ ಹತ್ತಿ ಟಾಟಾ ಮಾಡಿಕೊಂಡು ಹೋಗಿದ್ದಾರೆ. ಹೀಗಾದರೆ ಜನರ ಕಷ್ಟ ಏನು ಅರ್ಥ ಆಗಲಿದೆ ಎಂದು ಜನರೇ ಮಾತಾಡಿಕೊಳ್ಳುತ್ತಿದ್ದಾರೆ ಅಂತಾ ಟಾಂಗ್ ಕೊಟ್ಟು ಗೆಲ್ಲುವ ವಿಶ್ವಾಸ ವ್ಯಕ್ತಪಡಿಸಿದರು.

ಜನರಿಗೆ ಸುದೀಪ್‌ ಮಾಡಿದ ಮನವಿ ಏನು?

ಜಿಲ್ಲೆಯ ನಾಲ್ಕು ಕ್ಷೇತ್ರಗಳಲ್ಲಿ ಅಬ್ಬರದ ಪ್ರಚಾರ ನಡೆಸಿದ ಕಿಚ್ಚ ಸುದೀಪ್ ಅಭಿಮಾನಿಗಳು ಹುಚ್ಚೆದ್ದು ಕುಣಿಯುವಂತೆ ಮಾಡಿದರು. ಇನ್ನು ಪ್ರಚಾರದ ವೇಳೆ ಅಭಿಮಾನಿಗಳನ್ನು ಉದ್ದೇಶಿಸಿ ಮಾತನಾಡಿದ ಅವರು, ನಾನು ಚಿತ್ರರಂಗದಲ್ಲಿ ಇವತ್ತು ಸಹ ಬಣ್ಣಹಚ್ಚಲು ನಿಮ್ಮ ಈ ಪ್ರೀತಿ, ಅಭಿಮಾನವೇ ಕಾರಣ. ನಿಮ್ಮ ಈ ಋಣವನ್ನ ನಾನೆಂದಿಗೂ ತೀರಿಸಲು ಸಾಧ್ಯವಿಲ್ಲ. ನಿಮ್ಮ ಈ ಜಯಘೋಷಗಳನ್ನು ಬಿಜೆಪಿ ಅಭ್ಯರ್ಥಿಗಳ ಗೆಲುವಿನಲ್ಲಿ ಕೇಳಲು ಬಯಸುತ್ತೇನೆ ಎಂದರು.

ಒಟ್ಟಿನಲ್ಲಿ ಸುದೀಪ್ ಮೂಲಕ ಜಿಲ್ಲೆಯಲ್ಲಿ ವಾಲ್ಮೀಕಿ ಸಮುದಾಯ ಹಾಗೂ ಕಿಚ್ಚನ ಅಭಿಮಾನಿಗಳ ಮತಕ್ಕೆ ಗಾಳ ಹಾಕಿರುವ ಬಿಜೆಪಿ ಎಷ್ಟರ ಮಟ್ಟಿಗೆ ಸಫಲತೆ ಕಾಣುತ್ತದೆ ಎಂಬುದನ್ನು ಕಾದುನೋಡಬೇಕಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+