ಕೊಳ್ಳೇಗಾಲ: ಸಿಎಂ ಸಿದ್ದರಾಮಯ್ಯಗೆ ಕಪ್ಪು ಬಾವುಟ ಪ್ರದರ್ಶಿಸಿದ ಯುವಕ
ಚಾಮರಾಜನಗರ, ಆಗಸ್ಟ್, 10: ಸಿಎಂ ಸಿದ್ದರಾಮಯ್ಯಗೆ ಯುವಕೊನೊಬ್ಬ ಕಪ್ಪು ಬಾವುಟ ಪ್ರದರ್ಶನ ಮಾಡಿದ ಘಟನೆ ಕೊಳ್ಳೇಗಾಲದ ಆನಂದ ಜ್ಯೋತಿ ಕಾಲೋನಿಯಲ್ಲಿ ಶನಿವಾರ (ಆಗಸ್ಟ್ 10) ಸಂಜೆ ನಡೆಯಿತು. ಹಾಗಾದರೆ ಮುಂದೇನಾಯ್ತು ಎನ್ನುವ ಇಂಚಿಂಚು ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.
ಭರಚುಕ್ಕಿ ಜಲಪಾತೋತ್ಸವಕ್ಕೆ ಚಾಲನೆ ನೀಡಲು ತೆರಳುವಾಗ ಕೊಳ್ಳೇಗಾಲದ ಆನಂದ ಜ್ಯೋತಿ ಬಡಾವಣೆ ಸಮೀಪ ಇರಸವಾಡಿ ಪ್ರಸನ್ನ ಎಂಬ ಯುವಕ ಬೆಂಗಾವಲು ವಾಹನದ ಜೊತೆ ತೆರಳುತ್ತಿದ್ದ ಸಿಎಂ ಸಿದ್ದರಾಮಯ್ಯಗೆ ಕಪ್ಪು ಬಾವುಟ ಪ್ರದರ್ಶನ ಮಾಡಿದರು.

ದಲಿತರಿಗೆ ಮೀಸಲಿಟ್ಟಿದ್ದ ಹಣವನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದು ಪ್ರಸನ್ನ ಧಿಕ್ಕಾರದ ಘೋಷಣೆ ಕೂಗಿ ಕಪ್ಪು ಬಾವುಟ ಪ್ರದರ್ಶನ ಮಾಡಿದ್ದಾರೆ. ಇನ್ನು ಈ ವೇಳೆ ಅಲ್ಲೇ ಸ್ಥಳದಲ್ಲೇ ಬಂದೋಬಸ್ತ್‌ನಲ್ಲಿದ್ದ ಕೊಳ್ಳೇಗಾಲ ಪಟ್ಟಣ ಠಾಣೆ ಪೊಲೀಸರು ಅವರನ್ನು ವಶಕ್ಕೆ ಪಡೆದಿದ್ದಾರೆ ಎಂದು ತಿಳಿದುಬಂದಿದೆ.
ಬಿ.ರಾಚಯ್ಯ ಸ್ಮಾರಕ ಲೋಕಾರ್ಪಣೆ: ಶುದ್ಧ ಹಸ್ತರು, ಸ್ವಚ್ಛ ರಾಜಕಾರಣಿ, ಅಜಾತ ಶತ್ರು ಎಂದೇ ಜನಮನ್ನಣೆ ಗಳಿಸಿದ್ದ ಮಾಜಿ ರಾಜ್ಯಪಾಲ ಬಿ.ರಾಚಯ್ಯ ಸ್ಮಾರಕವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟನೆ ಮಾಡಿದರು.
ಹಳೇ ಮೈಸೂರು ಭಾಗದಲ್ಲಿ ಪ್ರಭಾವಿ ನಾಯಕರಾಗಿದ್ದ ಬಿ.ರಾಚಯ್ಯ ಸಿದ್ದರಾಮಯ್ಯ ರಾಜಕೀಯ ಏಳಿಗೆಗೆ ಕಾರಣರಾಗಿದ್ದರು. ತಮಗೆ ಶಕ್ತಿ ತುಂಬಿದ ಗುರುವಿಗೆ ಸಿದ್ದರಾಮಯ್ಯ ನಮಿಸಿದರು. ಅಂದಹಾಗೆ, ಬಿ.ರಾಚಯ್ಯ ಅವರ ಸ್ಮಾರಕಕ್ಕೆ ಮೊದಲ ಸಿಎಂ ಅವಧಿಯಲ್ಲಿ ಬಜೆಟ್‌ನಲ್ಲಿ ಅನುದಾನ ಘೋಷಿಸಿದ್ದರು.
ಚಾಮರಾಜನಗರ ತಾಲೂಕಿನ ಆಲೂರು ಗ್ರಾಮದ ಹೊರವಲಯದಲ್ಲಿ 1 ಎಕರೆ 11 ಗುಂಟೆ ಜಾಗದಲ್ಲಿ ಭವ್ಯ ಸ್ಮಾರಕ ನಿರ್ಮಿಸಲಾಗಿದೆ. ನೆಲ ಮಹಡಿ ಹಾಗೂ ಮೊದಲ ಮಹಡಿ ಸೇರಿ 6,400 ಚದರ ಅಡಿ ವಿಸ್ತೀರ್ಣ ಹೊಂದಿರುವ ಸ್ಮಾರಕವು ಶ್ವೇತ ವರ್ಣದಲ್ಲಿ ಕಂಗೊಳಿಸುತ್ತಿದೆ.
ರಾಚಯ್ಯ ಅವರ ವ್ಯಕ್ತಿತ್ವಕ್ಕೆ ಹೊಂದುವಂತೆ ಅರಳುವ ಕಮಲ ಶೈಲಿಯಲ್ಲಿ ಸ್ಮಾರಕ ರೂಪಿಸಿದ್ದು ಇಡೀ ಸ್ಮಾರಕಕ್ಕೆ ರಾಜಸ್ತಾನದ ಮಾರ್ಬಲ್ ಬಳಕೆ ಮಾಡಲಾಗಿದೆ.
₹4.87 ಕೋಟಿ ರೂಪಾಯಿ ವೆಚ್ಚದಲ್ಲಿ ಕಾಮಗಾರಿ ನಡೆದಿದ್ದು, ಬಿ.ರಾಚಯ್ಯ ಅವರ ಜೀವನ ಚರಿತ್ರೆ ಬಿಂಬಿಸುವ 120ಕ್ಕೂ ಹೆಚ್ಚು ಛಾಯಾ ಚಿತ್ರಗಳ ಗ್ಯಾಲರಿ ಸ್ಮಾರಕದಲ್ಲಿ ಪ್ರದರ್ಶಿಸಲಾಗುತ್ತಿದೆ. ರಾಜಕೀಯ ಹಾಗೂ ಸಾಮಾಜಿಕ ಕ್ಷೇತ್ರಕ್ಕೆ ನೀಡಿದ ಕೊಡುಗೆಗಳು, ವಿವಿಧ ಇಲಾಖೆಗಳ ಸಚಿವರಾಗಿ ತೆಗೆದುಕೊಂಡ ಮಹತ್ವದ ನಿರ್ಧಾರಗಳ ಮಾಹಿತಿ ಲಭ್ಯವಾಗಲಿದೆ.
ಇದರ ಜತೆಗೆ ರಾಚಯ್ಯ ಅವರು ಉಪಯೋಗಿಸುತ್ತಿದ್ದ ಕೋಟ್, ವಾಚ್, ವಾಕಿಂಗ್ ಸ್ಟಿಕ್, ವಿಸಿಟಿಂಗ್ ಕಾರ್ಡ್ ಹಾಗೂ ಸಾರ್ವಜನಿಕ ಜೀವನದಲ್ಲಿ ದೊರೆತ ಅಪರೂಪದ ಸ್ಮರಣಿಕೆಗಳು, ಪುಸ್ತಕಗಳು ಸ್ಮಾರಕದಲ್ಲಿ ವೀಕ್ಷಣೆಗೆ ಲಭ್ಯವಿದೆ.
2017, ಆಗಸ್ಟ್ 10ರಂದು ರಾಚಯ್ಯ ಅವರ ಜನ್ಮದಿನದಂದು ಅಂದು ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ಸ್ಮಾರಕಕ್ಕೆ ಶಂಕುಸ್ಥಾಪನೆ ನೆರವೇರಿಸಿದ್ದರು. ಈಗಲೂ ಕೂಡ ರಾಚಯ್ಯ ಅವರ ಜನ್ಮದಿನದಂದೇ ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಮಾರಕ ಲೋಕಾರ್ಪಣೆ ಮಾಡಿದರು.
ನಾನು ರಾಚಯ್ಯ ಪ್ರಾಡಕ್ಟ್: ರಾಚಯ್ಯ ಅವರ ಮಾರ್ಗದರ್ಶನದಂತೆ ನಾನು ಶೋಷಿತರ ಪರವಾಗಿದ್ದೇನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನುಡಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಾಜಿ ರಾಜ್ಯಪಾಲ ಬಿ.ರಾಚಯ್ಯ ಅವರ ಸ್ಮಾರಕವನ್ನು ಉದ್ಘಾಟಿಸಿ ಮಾತನಾಡಿದರು. ರಾಚಯ್ಯ ಅವರು ರಾಜ್ಯ ರಾಜಕಾರಣದ ಅತ್ಯಂತ ಮುತ್ಸದ್ದಿ ರಾಜಕಾರಣಿ. ಹೆಚ್ಚು ಮಾತಾಡುತ್ತಿರಲಿಲ್ಲ. ಬಡವರ ಪರವಾಗಿ ಹೆಚ್ಚೆಚ್ಚು ಕೆಲಸ ಮಾಡುತ್ತಿದ್ದರು ಎಂದರು.
ಅವತ್ತು ನಾನು ಮಂತ್ರಿ ಆಗದೇ ಹೋಗಿದ್ದರೆ, ನಾನು ಇವತ್ತು ಎರಡನೇ ಬಾರಿ ಮುಖ್ಯಮಂತ್ರಿ ಆಗಲು ಸಾಧ್ಯವಿರಲಿಲ್ಲ. ಇದೇ ಕೆಲವರಿಗೆ ಹೊಟ್ಟೆಯುರಿ ಎಂದು ತಮ್ಮ ಮೇಲೆ ಆರೋಪಿಸಿರುವವರಿಗೆ ಟೀಕಿಸಿದರು.
ಮೈಸೂರು, ಚಾಮರಾಜನಗರ ಜಿಲ್ಲೆಯ ಬಹುತೇಕ ಕಾಂಗ್ರೆಸ್ ಮುಖಂಡರು ರಾಚಯ್ಯನವರ ಪ್ರಾಡಕ್ಟ್‌ಗಳು, ನಾನೂ ರಾಚಯ್ಯನವರ ಪ್ರಾಡಕ್ಟ್ ಎಂದರು.
ರಾಚಯ್ಯ ಸ್ಮಾರಕದಲ್ಲಿ IAS-IPS ತರಬೇತಿ ಕೇಂದ್ರ ಸ್ಥಾಪಿಸಲು ಸರ್ಕಾರದ ನೆರವನ್ನು ಶಾಸಕ ಕೃಷ್ಣಮೂರ್ತಿ ಅವರು ಕೇಳಿದ್ದಾರೆ. ಈ ಬೇಡಿಕೆ ಬಗ್ಗೆ ಪರಿಶೀಲಿಸಲಾಗುವುದು ಎಂದರು.
ಇಡ್ಲಿ-ದೋಸೆ ಇರಲಿಲ್ಲ: ನಮಗೆ ಮನೆಯಲ್ಲಿ ತಂಗಳು ಇರುತ್ತಿತ್ತೇ ಹೊರತು, ಇಡ್ಲಿ, ದೋಸೆ, ಉಪ್ಪಿಟ್ಟು ಏನೂ ಇರುತ್ತಿರಲಿಲ್ಲ. ರಾತ್ರಿ ಉಳಿದ ಮುದ್ದೆಗೆ ಮಜ್ಜಿಗೆ ಬೆರೆಸಿ ತಂಗಳು ತಿಂತಾ ಇದ್ದೆವು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ಆ ದಿನಗಳನ್ನು ಸ್ಮರಿಸಿದರು.
ರಾಯಚ್ಯನವರ ಸ್ಮಾರಕ ಉದ್ಘಾಟನಾ ಭಾಷಣ ಶುರು ಮಾಡುವ ವೇಳೆಗೆ ಸಂಜೆ 4 ಗಂಟೆ ಆಗಿತ್ತು. ಊಟದ ಸಮಯ ತಡವಾದದ್ದನ್ನು ಪ್ರಸ್ತಾಪಿಸಿ ಕ್ಷಮೆ ಕೋರಿ ಭಾಷಣ ಆರಂಭಿಸಿದ ಮುಖ್ಯಮಂತ್ರಿಗಳು ಮೇಲಿನ ಪ್ರಸಂಗ ನೆನಪಿಸಿಕೊಂಡರು.
ರಾಚಯ್ಯ ಅವರ ಮನೆಯಲ್ಲೂ ಇಡ್ಲಿ ದೋಸೆ ಇರುತ್ತಿರಲಿಲ್ಲ ಎಂದು ಕಾಣುತ್ತಿದೆ. ಅವರೂ ನನ್ನಂಗೆ ತಂಗಳು ತಿಂದು ಗಟ್ಟಿಯಾದರು ಎಂದರು.












Click it and Unblock the Notifications