ಚಾಮರಾಜನಗರ: ಶಾಲಾ ವಾಹನ ಚಕ್ರ ಹರಿದು ವಿದ್ಯಾರ್ಥಿ ಕಾಲು ನಜ್ಜುಗುಜ್ಜು
ಚಾಮರಾಜನಗರ, ಆಗಸ್ಟ್, 17: ಖಾಸಗಿ ಶಾಲಾ ವಾಹನದ ಚಕ್ರ ಹರಿದು ವಿದ್ಯಾರ್ಥಿಯೊರ್ವನ ಬಲಗಾಲು ನಜ್ಜುಗುಜ್ಜಾಗಿರುವ ಘಟನೆ ಗೋಪಾಲಪುರ ಗ್ರಾಮದಲ್ಲಿ ಶನಿವಾರ (ಆಗಸ್ಟ್ 17) ನಡೆದಿದೆ. ಗೋಪಾಲಪುರ ಗ್ರಾಮದ ಸಿದ್ದಪ್ಪ ಎಂಬುವವರ ಮಗ ಕನ್ನೇಗಾಲ ಗ್ರಾಮದಲ್ಲಿರುವ ವಿದ್ಯಾ ಅಮೃತ ಖಾಸಗಿ ಶಾಲೆಯ ಎರಡನೇ ತರಗತಿ ವಿದ್ಯಾರ್ಥಿ ಹೃತ್ವಿಕ್(8) ಎಂಬಾತನ ಕಾಲಿಗೆ ತೀವ್ರ ಪೆಟ್ಟಾಗಿದೆ.
ಗೋಪಾಲಪುರ ಗ್ರಾಮದಲ್ಲಿ ಶನಿವಾರ ಬೆಳಗಿನ ತರಗತಿಗೆ ತೆರಳಲು ತನ್ನ ಶಾಲಾ ವಾಹನಕ್ಕಾಗಿ ಕಾಯುತ್ತಾ ಸೇತುವೆ ಮೇಲೆ ಕುಳಿತಿದ್ದ. ಈ ವೇಳೆ ಸೇಂಟ್ ಜಾನ್ ಖಾಸಗಿ ಶಾಲಾ ವಾಹನದ ಚಾಲಕ ಗಾಡಿಯನ್ನು ರಿವರ್ಸ್ ತೆಗೆಯುತಿದ್ದ. ಈ ವೇಳೆ ರಸ್ತೆ ಕಿರಿದಾದ ಕಾರಣ ವಾಹನದ ಹಿಂಬದಿ ಚಕ್ರವು ವಿದ್ಯಾರ್ಥಿಯ ಬಲಗಾಲಿನ ಮೇಲೆ ಹರಿದಿದೆ.

ಘಟನೆಯಲ್ಲಿ ಬಾಲಕನ ಕಾಲು ನಜ್ಜುಗುಜ್ಜಾಗಿದ್ದು, ಕೂಡಲೇ ಸ್ಥಳೀಯರು ಗುಂಡ್ಲುಪೇಟೆ ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ವಿದ್ಯಾರ್ಥಿಯನ್ನು ರವಾನಿಸಿ ಪ್ರಥಮ ಚಿಕಿತ್ಸೆ ನೀಡಿ, ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿಗೆ ರವಾನಿಸಿದ್ದಾರೆ.
ಇನ್ನು ಘಟನಾ ಸ್ಥಳಕ್ಕೆ ಸಬ್ ಇನ್ಸ್‌ಪೆಕ್ಟರ್ ಸಾಹೇಬಗೌಡ ಭೇಟಿ ನೀಡಿ ಪರಿಶೀಲನೆ ನಡೆಸಿ ಶಾಲಾ ವಾಹನವನ್ನು ವಶಕ್ಕೆ ಪಡೆದುಕೊಂಡಿದ್ದು, ಗುಂಡ್ಲುಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ ಎನ್ನಲಾಗಿದೆ.
ಮೂವರು ಸಾವು: ಲಾರಿ ಮತ್ತು ಕಾರಿನ ನಡುವೆ ನಡೆದ ಭೀಕರ ಅಪಘಾತದಲ್ಲಿ ಮೂವರು ಸ್ಥಳದಲ್ಲಿ ಸಾವನ್ನಪ್ಪಿದ ಘಟನೆ ಚಿತ್ರದುರ್ಗ ಜಿಲ್ಲೆಯಲ್ಲಿ ಇತ್ತೀಚೆಗಷ್ಟೇ ನಡೆದಿತ್ತು.
ಜಿಲ್ಲೆಯ ಚಿಕ್ಕಬೆನ್ನೂರು ಬಳಿ ಈ ಘಟನೆ ನಡೆದಿದ್ದು, ಅಪಘಾತ ರಭಸಕ್ಕೆ ಮೂವರು ಸ್ಥಳದಲ್ಲಿ ಅಸುನಿಗಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಪ್ರಜ್ವಲ್ ರೆಡ್ಡಿ (30 ವರ್ಷ), ಹರ್ಷಿತಾ (28 ವರ್ಷ) ಮತ್ತು ಮಗು ಸೋಹನ್ (2 ವರ್ಷ) ಮೃತ ದುರ್ದೈವಿಗಳಾಗಿದ್ದಾರೆ. ಗಾಯಗೊಂಡವರನ್ನು ಶಿಲ್ಪ, ಸ್ವರ್ಣ ಜಾರ್ಜ್, ಮಧುಮಿತ, ವಿಜಯ್ ರೆಡ್ಡಿ, ಕೃಷ್ಣ, ಎಂದು ಗುರುತಿಸಲಾಗಿದೆ.
ಚಲಿಸುತ್ತಿದ್ದ ಲಾರಿಯ ಟಯರ್ ಬ್ಲಾಸ್ಟ್ ಆಗುತ್ತಿದ್ದಂತೆ, ವೇಗವಾಗಿ ಹಿಂಬದಿಯಿಂದ ಬಂದ ಫಾರ್ಚೂನರ್ ಕಾರು ಲಾರಿಗೆ ಡಿಕ್ಕಿಯಾದ ರಭಸಕ್ಕೆ ಕಾರಿನಲ್ಲಿದ್ದ ಮೂವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಇನ್ನುಳಿದವರ ಸ್ಥಿತಿ ಗಂಭೀರವಾಗಿದ್ದು, ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಚಿತ್ರದುರ್ಗ ಕಡೆಯಿಂದ ದಾವಣಗೆರೆ ಕಡೆಗೆ ಚಲಿಸುವಾಗ ಈ ಘಟನೆ ನಡೆದಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸದ್ಯ ಈ ಪ್ರಕರಣ ಭರಮಸಾಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ ಎನ್ನಲಾಗಿದೆ.
ಇಬ್ನರು ಸ್ಥಳದಲ್ಲೇ ಸಾವು: ಮುಂದೆ ಚಲಿಸುತ್ತಿದ್ದ ಲಾರಿಗೆ ಕುರಿ ತುಂಬಿದ್ದ ಅಶೋಕ್ ಲೈಲಾಂಡ್ ಡಿಕ್ಕಿಯಾದ ರಭಸಕ್ಕೆ ಇಬ್ಬರು ಕುರಿ ವ್ಯಾಪಾರಿಗಳು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಹಿರಿಯೂರು ನಗರದ ಹೊರವಲಯದ ಆರ್.ಕೆ.ಪವರ್ ಜಿನ್ ಬಳಿ ಘಟನೆ ಇತ್ತೀಚೆಗಷ್ಟೇ ನಡೆದಿತ್ತು.
ಮೃತರನ್ನು ಚಳ್ಳಕೆರೆ ತಾಲೂಕಿನ ಹುಲಿಕುಂಟೆ ಗ್ರಾಮದ ರಮೇಶ್(55) ಹಾಗೂ ಬೆಳೆಗೆರೆ ಶಿವಲಿಂಗಪ್ಪ (65) ಮೃತರು ಎಂದು ಗುರುತಿಸಲಾಗಿದೆ. ಇನ್ನು ಗಾಯಗೊಂಡವರನ್ನು ಸ್ಥಳೀಯ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಗಿದೆ.
ಮೃತರು ಚಳ್ಳಕೆರೆಯ ತಾಲೂಕಿನ ತನ್ನ ಗ್ರಾಮದಿಂದ ಹಿರಿಯೂರು ಕುರಿ ಸಂತೆಗೆ ಕುರಿ ವ್ಯಾಪಾರ ಮಾಡಲು ಅಶೋಕ್ ಲೈಲ್ಯಾಂಡ್ ಗಾಡಿಯಲ್ಲಿ ಕುರಿ ತುಂಬಿಕೊಂಡು ಬರುತ್ತಿರುವಾಗ ಮುಂದೆ ಚಲಿಸುತ್ತಿದ್ದ ಲಾರಿಗೆ ಅಶೋಕ್ ಲೈಲಾಂಡ್ ಗಾಡಿ ಡಿಕ್ಕಿಯಾಗಿದೆ. ಡಿಕ್ಕಿಯಾದ ರಭಸಕ್ಕೆ ಇಬ್ಬರು ಕುರಿ ವ್ಯಾಪಾರಿಗಳು ಸ್ಥಳದಲ್ಲೇ ಅಸುನೀಗಿದ್ದಾರೆ.
ಇನ್ನು ಅಪಘಾತದ ರಭಸಕ್ಕೆ ಅಶೋಕ್ ಲೈಲ್ಯಾಂಡ್ ವಾಹನ ಮುಂಭಾಗ ಸಂಪೂರ್ಣ ನಜ್ಜುಗುಜ್ಜಾಗಿದೆ. ವಿಷಯ ತಿಳಿದ ತಕ್ಷಣ ಸ್ಥಳಕ್ಕೆ ಗ್ರಾಮಾಂತರ ಪೊಲೀಸ್ ಠಾಣೆ ಸಿಪಿಐ ಕಾಳಿಕೃಷ್ಣ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಹಿರಿಯೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ ಎಂದು ತಿಳಿದುಬಂದಿದೆ.












Click it and Unblock the Notifications