ಚಾಮರಾಜನಗರ: ಮತಗಟ್ಟೆಗೆ ಬಂದ ರಾಷ್ಟ್ರೀಯ ಪಕ್ಷಿ-ವಿಡಿಯೋ ಭಾರೀ ವೈರಲ್
ಚಾಮರಾಜನಗರ, ಏಪ್ರಿಲ್, 26: ಚಾಮರಾಜನಗರದಲ್ಲಿ ಮತದಾನ ಬಿರುಸಿನಿಂದ ನಡೆಯುತ್ತಿದ್ದು, ಮತಗಟ್ಟೆಗೆ ವಿಶೇಷ ಅತಿಥಿ ಬಂದ ಘಟನೆ ಚಾಮರಾಜನಗರ ತಾಲೂಕಿನ ಸಣ್ಣೇಗಾಲ ಗ್ರಾಮದಲ್ಲಿ ನಡೆಯಿತು. ಹಾಗಾದರೆ ಆ ವಿಶೇಷ ಅತಿಥಿ ಯಾರು ಎಂದು ಇಲ್ಲಿ ಗಮನಿಸಿ.
ಮತದಾನ ಆರಂಭಗೊಳ್ಳುತ್ತಿದ್ದಂತೆ ಎಲ್ಲಿಂದಲೋ ಬಂದ ರಾಷ್ಟ್ರಪಕ್ಷಿ ನವಿಲು ಮತಗಟ್ಟೆಗೆ ಎಂಟ್ರಿ ಕೊಟ್ಟಿದ್ದು, ಬಳಿಕ, ಮತದಾರರನ್ನು ಕಂಡು ಸ್ವಲ್ಪ ಹೊತ್ತಿನ ಬಳಿಕ ಹಾರಿ ಹೋಗಿದೆ.

ಜಿಲ್ಲಾಧಿಕಾರಿಯಿಂದ ಮತದಾನ ಜಾಗೃತಿ: ಚಾಮರಾಜನಗರ ಜಿಲ್ಲಾಧಿಕಾರಿ ಶಿಲ್ಪಾನಾಗ್, ಜಿಲ್ಲೆಯ ಉಪ ಕಾರ್ಯದರ್ಶಿ ಲಕ್ಷ್ಮೀ ಹಾಗೂ ಆಹಾರ ಇಲಾಖೆ ಉಪ ನಿರ್ದೇಶಕಿ ಸವಿತಾ ಅವರು ಧರಿಸಿರುವ ರೇಷ್ಮೆ ಸೀರೆಯಲ್ಲಿ ಮತದಾನ ಘೋಷಣೆ ನೇಯಲಾಗಿದೆ. ಕೈ ಮಗ್ಗದಿಂದ ನೇಯ್ದಿರುವ ರೇಷ್ಮೆ ಸೀರೆಯಲ್ಲಿ "ಚುನಾವಣಾ ಪರ್ವ" "ದೇಶದ ಗರ್ವ" ಎಂಬ ಘೋಷವಾಕ್ಯವನ್ನು ಬರೆಯಲಾಗಿದೆ.
ಹಾಡಿನಿಂದ ಮತದಾರರಿಗೆ ಸ್ವಾಗತ: ಚಾಮರಾಜನಗರದ ರಾಮಸಮುದ್ರದಲ್ಲಿ ತೆರೆದಿರುವ ಸಾಂಸ್ಕೃತಿಕ ಮತಗಟ್ಟೆಯಲ್ಲಿ ಜಾನಪದ ಕಲಾವಿದರು ಮತದಾರರು ಸ್ವಾಗತಿಸಿ ಮತಗಟ್ಟೆಗೆ ಕರೆದೊಯ್ದರು. ತಂಬೂರಿ ಪದ, ಡಮರುಗ, ತಮಟೆ ವಾದ್ಯಗಳ ಮೂಲಕ ಮತದಾರರನ್ನು ಅದ್ಧೂರಿಯಾಗಿ ಸ್ವಾಗತಿಸಿ ಹಬ್ಬದಂತೆ ಸಂಭ್ರಮಿಸಲಾಯಿತು. ಇನ್ನು, ಮತಗಟ್ಟೆ ಮುಂಭಾಗ ಸೆಲ್ಫಿ ಪಾಯಿಂಟ್ ಕೂಡ ಮಾಡಲಾಗಿದೆ.
ಕೆಂಡಸಂಪಿಗೆ ಹೀರೋ ಮತದಾನ: ಚಾಮರಾಜನಗರ ಲೋಕಸಭಾ ಕ್ಷೇತ್ರದಲ್ಲಿ ಬೆಳ್ಳಂಬೆಳಗ್ಗೆ ಮತಗಟ್ಟೆಗೆ ಮತದಾರರು ಉತ್ಸಾಹದಿಂದ ಬರುತ್ತಿದ್ದು, ಬಿರುಸಿನ ಮತದಾನ ನಡೆಯುತ್ತಿದೆ. ರಣಭೀಕರನ ಬಿಸಿಲಿನ ನಡುವೆಯೇ ದೂರದ ಊರಿನಿಂದಲೂ ಸ್ವಗ್ರಾಮಕ್ಕೆ ಬಂದ ಯುವಕರು, ಹಿರಿಯ ನಾಗರಿಕರು ಮತದಾನ ಮಾಡುತ್ತಿದ್ದಾರೆ. ಹಾಗೆಯೇ ತಾಲೂಕಿನ ಮೂಡಲಪುರ ಗ್ರಾಮದಲ್ಲಿ ಕೆಂಡಸಂಪಿಗೆ ಹೀರೋ ಮತದಾನ ಮಾಡಿ ಗಮನ ಸೆಳೆದಿದ್ದಾರೆ.
ಚಾಮರಾಜನಗರ ತಾಲೂಕಿನ ಸ್ವ ಗ್ರಾಮವಾದ ಮೂಡಲಪುರದಲ್ಲಿ ಸ್ಯಾಂಡಲ್‌ವುಡ್ ನಟ ವಿಕ್ಕಿ ವರುಣ್ ಮತದಾನ ಮಾಡಿದ್ದಾರೆ. ಮಧ್ಯರಾತ್ರಿ ಬೆಂಗಳೂರಿನಿಂದ ಬಂದು ಬೆಳಗ್ಗೆಯೇ ಕೆಂಡಸಂಪಿಗೆ ಹೀರೋ ಮತದಾನ ಮಾಡಿ ಮತದಾನದ ಮಹತ್ವ ಸಾರಿದ್ದಾರೆ. ಬಳಿಕ ಮಾತನಾಡಿದ ಅವರು, ದೇಶದ ಅಭಿವೃದ್ಧಿಗಾಗಿ ಪ್ರತಿಯೊಬ್ಬರು ಮತದಾನ ಮಾಡಬೇಕು ಎಂದರು.
ದೇಶ ಅಭಿವೃದ್ಧಿ ಆಗಬೇಕೆಂದರೆ ಪ್ರತಿಯೊಬ್ಬರು ಮತದಾನ ಮಾಡಲೇಬೇಕು. ಮತದಾನ ಪ್ರತಿಯೊಬ್ಬರ ಜವಾಬ್ದಾರಿ, ದೇಶಕ್ಕಾಗಿ, ನಾಡಿಗಾಗಿ ನಮ್ಮ ಊರಿಗಾಗಿ ಪ್ರತಿಯೊಬ್ಬರು ಮತದಾನ ಮಾಡಲೇಬೇಕು. ನಾನು ಬೆಂಗಳೂರಿಗೆ ಶಿಫ್ಟ್ ಆಗಿದ್ದರೂ ಮತದಾನದ ಹಕ್ಕನ್ನು ಊರಲ್ಲೇ ಉಳಿಸಿಕೊಂಡಿದ್ದೇನೆ ಎಂದರು.












Click it and Unblock the Notifications