ಕೊಳ್ಳೇಗಾಲದಲ್ಲಿ ಸಿಎಂ ಸಿದ್ದರಾಮಯ್ಯಗೆ ವಿಶೇಷ ಉಡುಗೊರೆ ನೀಡಿದ ಅಭಿಮಾನಿ
ಚಾಮರಾಜನಗರ, ಏಪ್ರಿಲ್, 12: ಲೋಕಸಭೆ ಚುನಾವಣೆ ಹಿನ್ನೆಲೆ ಈಗಾಗಲೇ ಮತದಾರರನ್ನು ಸೆಳೆಯಲು ಎಲ್ಲಾ ಪಕ್ಷಗಳು ಭರ್ಜರಿ ಪ್ರಚಾರ ಆರಂಭಿಸಿದ್ದಾರೆ. ಇನ್ನು ಇಂದು (ಏಪ್ರಿಲ್ 12) ಕೊಳ್ಳೇಗಾಲದಲ್ಲಿ ಪ್ರಜಾ ಧ್ವನಿ ಸಮಾವೇಶ ನಡೆದಿದ್ದು, ಈ ವೇಳೆ ಸಿದ್ದರಾಮ್ಮಗೆ ಅಭಿಮಾನಿಯೊಬ್ಬರು ವಿಶೇಷ ಉಡುಗೊರೆಯನ್ನು ನೀಡಿದ್ದಾರೆ. ಹಾಗಾದರ ಆ ವಿಶೇಷ ಉಡುಗೊರೆ ಏನು ಎನ್ನುವ ಮಾಹಿತಿಯನ್ನು ಇಲ್ಲಿ ತಿಳಿಯಿರಿ.
ಇಂದು ಕೊಳ್ಳೇಗಾಲದಲ್ಲಿ ನಡೆದ ಪ್ರಜಾ ಧ್ವನಿ ಸಮಾವೇಶದಲ್ಲಿ ಅಭಿಮಾನಿಯೊಬ್ಬರು ಸಿದ್ದರಾಮಯ್ಯಗೆ ನಾಗರಬೆತ್ತ ಉಡುಗೊರೆ ಕೊಟ್ಟು ಕಾಂಗ್ರೆಸ್‌ಗೆ ಮತ ಎಂದ ಸಿದ್ದಪ್ಪಾಜಿ ಎಂದು ಹೇಳಿ ಗಮನ ಸೆಳೆದಿದ್ದಾರೆ.

ಮಂಟೇಸ್ವಾಮಿ, ಸಿದ್ದಪ್ಪಾಜಿ ಹೋರಾಟ ಸಮಿತಿಯ ಉಗ್ರ ನರಸಿಂಹೇಗೌಡ ಎಂಬುವರು ವಿಶೇಷ ಉಡುಗೊರೆ ನೀಡಿದ್ದಾರೆ. ಇನ್ನು ಈ ವೇಳೆ ಮಾತನಾಡಿದ ಅವರು, ರೈತ ವಿರೋಧಿಯಾಗಿ ಬಿಜೆಪಿ ನಡೆದುಕೊಳ್ಳುತ್ತಿರುವ ಹಿನ್ನೆಲೆ ಕಾಂಗ್ರೆಸ್‌ಗೆ ಈ ಬಾರಿ ಮತ ಹಾಕುತ್ತೇವೆ. ಮಂಟೇಸ್ವಾಮಿ ಪರಂಪರೆಯು ಈ ಬಾರಿಯೂ ಕಾಂಗ್ರೆಸ್ ಪರ ನಿಲ್ಲಲ್ಲಿದೆ ಎಂದು ಹೇಳಿದರು.
ಸುಳ್ಳೇ ಬಿಜೆಪಿಯವರ ಮನೆ ದೇವರು: ಗ್ಯಾರಂಟಿ ಯೋಜನೆಗೆ ಬಿಜೆಪಿ ಅವರಿಗೆ ಹೊಟ್ಟೆಯುರಿ ಉಂಟಾಗಿದೆ ಎಂದು ಸಿಎಂ ಸಿದ್ದರಾಮಯ್ಯ ಕೊಳ್ಳೇಗಾಲದಲ್ಲಿ ವಾಗ್ದಾಳಿ ನಡೆಸಿದರು. ಇದೇ ವೇಳೆ ಅವರು ಬಿಜೆಪಿಯವರು ಸುಳ್ಳನ್ನೇ ಮನೆ ದೇವರು ಮಾಡಿಕೊಂಡಿದ್ದಾರೆ ಎಂದು ಆಕ್ರೋಶ ಹೊರಹಾಕಿದ್ದಾರೆ.
ಕೊಳ್ಳೇಗಾಲದ ಎಂಜಿಎಸ್‌ವಿ ಮೈದಾನದಲ್ಲಿ ನಡೆದ ಪ್ರಜಾ ಧ್ವನಿ ಸಮಾವೇಶ ಉದ್ಘಾಟಿಸಿ ಮಾತನಾಡಿ, ಬಡವರು, ದಲಿತರು, ಹಿಂದುಳಿದ ವರ್ಗಗಳು ಕಂಡರೇ ಬಿಜೆಪಿಯವರಿಗೆ ಆಗಲ್ಲ. ಗ್ಯಾರಂಟಿ ಜಾರಿಯಿಂದ ಅವರಿಗೆ ಹೊಟ್ಟೆಯುರಿ ಉಂಟಾಗಿದೆ, ಅದಕ್ಕೆ ಸುಳ್ಳು ಸುದ್ದಿ ಹಬ್ಬಿಸುತ್ತಿದ್ದಾರೆ ಎಂದು ಬಿಜೆಪಿ ಮಾಡಿದ್ದ ಆರೋಪದ ವಿರುದ್ಧ ಕಿಡಿಕಾರಿದರು.
ಲೋಕಸಭಾ ಚುನಾವಣೆಯಾದ ಬಳಿಕ ಗ್ಯಾರಂಟಿ ಯೋಜನೆ ನಿಲ್ಲಿಸುತ್ತಾರೆ ಎಂದು ಸುಳ್ಳು ಹಬ್ಬಿಸುತ್ತಿದ್ದಾರೆ. ನಾನು ನಿಮಗೆ ಭರವಸೆ ಕೊಡುತ್ತೇನೆ, ಗ್ಯಾರಂಟಿ ಯೋಜನೆಗೆ ಎಷ್ಟೇ ಖರ್ಚಾದರೂ ಸರಿ ಯಾವುದೇ ಕಾರಣಕ್ಕೂ ಗ್ಯಾರಂಟಿ ಯೋಜನೆಗಳನ್ನು ನಿಲ್ಲಿಸುವುದಿಲ್ಲ, ಮುಂದುವರೆಸುತ್ತೇವೆ ಎಂದರು.
ಬಿಜೆಪಿ ಅವರು ಮಾತಿಗೆ ತಪ್ಪಿ ನಡೆಯುವವರು, ಸುಳ್ಳು ಅವರ ಮನೆ ದೇವರು. ಆದರೆ, ಕಾಂಗ್ರೆಸ್ ನುಡಿದಂತೆ ನಡೆಯುವ ಸರ್ಕಾರ. ಬಡವರಿಗೆ ಅಕ್ಕಿ ಕೊಟ್ಟರೆ ಕಾಂಗ್ರೆಸ್ ಪರ ನಿಲ್ಲುತ್ತಾರೆಂದು ಅಕ್ಕಿಯನ್ನೇ ಕೊಡಲಿಲ್ಲ ಎಂದು ಕೇಂದ್ರ ಸರ್ಕಾರದ ವಿರುದ್ಧ ಕಿಡಿಕಾರಿದರು.
ಹಿಟ್ಲರ್ ಸಿದ್ಧಾಂತದಲ್ಲಿ ನಂಬಿಕೆ ಇಟ್ಟಿರುವವರು ನರೇಂದ್ರ ಮೋದಿ, ಅವರು ಪ್ರಜಾಪ್ರಭುತ್ವ, ಸಂವಿಧಾನ ವಿರೋಧಿಯಾಗಿದ್ದಾರೆ. ಬಿಜೆಪಿ ಆಡಳಿತದಲ್ಲಿ ಸಂವಿಧಾನ ಸುರಕ್ಷಿತವಾಗಿಲ್ಲ, ಸಂವಿಧಾನ ಉಳಿಯಬೇಕಾದರೇ ಕಾಂಗ್ರೆಸ್ ಗೆಲ್ಲಬೇಕು ಎಂದರು.
ದೇಶದ ಪ್ರಧಾನಿಯಾಗಿ ನರೇಂದ್ರ ಮೋದಿ ಸಂಪೂರ್ಣ ವಿಫಲರಾಗಿದ್ದಾರೆ. ಇಂದಿಗೂ ಕೂಡ ಕಪ್ಪು ಹಣ ವಾಪಾಸ್ ತಂದಿಲ್ಲ, ಮೇಕ್ ಇನ್ ಇಂಡಿಯಾ ಆಗಿಲ್ಲ. ಅಚ್ಚೇ ದಿನ್ ಬಂದಿಲ್ಲ ಎಂದು ಕಿಡಿಕಾರಿದರು.
ಮೋದಿ ಮುಖ ನೋಡಿ ವೋಟ್ ಹಾಕಿ ಎಂದು ರಾಜ್ಯದ ನಾಯಕರು ಹೇಳುತ್ತಿದ್ದಾರೆ. ಇಲ್ಲಿನ ನಾಯಕರಿಗೆ ವೋಟ್ ಕೇಳುವ ನೈತಿಕತೆ ಇಲ್ಲ. ಮೋದಿ ಮುಖ ಬಿಟ್ಟು ಚುನಾವಣಾ ವಸ್ತುವಿಲ್ಲ, ತಮ್ಮ ಸಾಧನೆ ಹೇಳಿ ಅವರು ಮತ ಕೇಳುತ್ತಿಲ್ಲ. ತಾವು ಈ ಬಾರಿ ಕೆಟ್ಟದಾಗಿ ಸೋಲುತ್ತೇವೆ ಎಂದು ಹೆದರಿ ಬಿಜೆಪಿ-ಜೆಡಿಎಸ್ ಒಂದಾಗಿದ್ದಾರೆ ಎಂದು ವಾಗ್ದಾಳಿ ನಡೆಸಿದರು.












Click it and Unblock the Notifications