ಕೊಳ್ಳೇಗಾಲ: ತಾಳಿ ಕಟ್ಟಿಸಿಕೊಂಡ ತಕ್ಷಣವೇ ಪರೀಕ್ಷೆಗೆ ಹಾಜರಾದ ವಧು
ಚಾಮರಾಜನಗರ, ಮೇ, 22: ತಾಳಿ ಕಟ್ಟಿದ ಮರುಕ್ಷಣವವೇ ವಧು ಪರೀಕ್ಷೆಗೆ ಹಾಜರಾದ ಘಟನೆ ಚಾಮರಾಜನಗರ ಜಿಲ್ಲೆ ಕೊಳ್ಳೇಗಾಲದಲ್ಲಿ ಇಂದು (ಮೇ 22) ನಡೆದಿದೆ.
ಕೊಳ್ಳೇಗಾಲದ ವಾಸವಿ ಕಾಲೇಜಿನ ಅಂತಿಮ ವರ್ಷದ ಬಿ.ಕಾಂ ವಿದ್ಯಾರ್ಥಿನಿ ಆಗಿರುವ ಆರ್. ಸಂಗೀತಾ ಅವರು ನಂಜನಗೂಡು ತಾಲೂಕಿನ ಸಿಂಧುವಳ್ಳಿ ಗ್ರಾಮದ ಯುವಕನ ಜೊತೆ ಇಂದು ಸಪ್ತಪದಿ ತುಳಿದರು. ಕೊಳ್ಳೇಗಾಲ ಪಟ್ಟಣದ ರಾಜರಾಜೇಶ್ವರಿ ಕಲ್ಯಾಣ ಮಂಟಪದಲ್ಲಿ ವಿವಾಹ ಮಹೋತ್ಸವ ನಡೆದಿದ್ದು, ತಾಳಿ ಕಟ್ಟಿಸಿಕೊಂಡ ತಕ್ಷಣವೇ ಸಂಗೀತಾ ವಧುವಿನ ಧಿರಿಸಿನಲ್ಲೇ ಪರೀಕ್ಷೆಗೆ ಹಾಜರಾದ ಘಟನೆ ನಡೆದಿದೆ.

ಕೊಳ್ಳೇಗಾಲದ ಲಿಂಗಣಾಪುರ ಬಡಾವಣೆಯ ರಾಜಪ್ಪ ಮತ್ತು ಅನುಸೂಯ ಎಂಬುವರ ಪುತ್ರಿ ವಾಸವಿ ಸಂಯುಕ್ತ ಕಾಲೇಜಿನ ಬಿ.ಕಾಂ ತೃತೀಯ ವರ್ಷದ ವಿದ್ಯಾರ್ಥಿನಿ ಆರ್. ಸಂಗೀತಾಗೆ ನಂಜನಗೂಡು ತಾಲೂಕಿನ ಸಿಂಧುವಳ್ಳಿಯ ಯೋಗೇಶ್ ಎಂಬುವರ ಜೊತೆ ಮೂರ್ನಾಲ್ಕು ತಿಂಗಳ ಹಿಂದೆಯೇ ವಿವಾಹ ದಿನ ನಿಶ್ಚಯವಾಗಿತ್ತು. ಅದರಂತಯೇ ಮೇ 22ರಂದು ಯೋಗೇಶ್ ಅವರಿಂದ ತಾಳಿ ಕಟ್ಟಿಸಿಕೊಂಡು ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಬಳಿಕ ವಧು ವಸ್ತ್ರ ಅಲಂಕಾರದಲ್ಲೇ ತಮ್ಮ ಕಾಲೇಜಿನ ಪರೀಕ್ಷಾ ಕೇಂದ್ರಕ್ಕೆ ಹಾಜರಾಗಿ ಪರೀಕ್ಷೆ ಬರೆದು ಗಮನ ಸೆಳೆದರು.
ಈ ಬಗ್ಗೆ ಆರ್. ಸಂಗೀತಾ ಅವರ ತಂದೆ ರಾಜಪ್ಪ ಮಾತನಾಡಿ, ನನ್ನ ಮಗಳ ಮದುವೆ ಮೂರ್ನಾಲ್ಕು ತಿಂಗಳ ಹಿಂದೆಯೇ ನಿಶ್ಚಯ ಆಗಿತ್ತು. ಈ ನಡುವೆಯೇ ಕಳೆದ ವಾರದ ಹಿಂದೆಯಷ್ಟೇ ಆಕೆಯ ಅಂತಿಮ ವರ್ಷದ ಬಿ.ಕಾಂ ಪರೀಕ್ಷೆ ನಿಗದಿಯಾಗಿತ್ತು. ಈ ಹಿನ್ನೆಲೆ ವಿವಾಹದಷ್ಟೇ ಶೈಕ್ಷಣಿಕ ಬದುಕಿಗೂ ಪ್ರಾಮುಖ್ಯತೆ ಇರುವುದರಿಂದ ನಮ್ಮ ಮನೆಯವರೆಲ್ಲ ಚರ್ಚಿಸಿ ಈ ನಿರ್ಧಾರ ತೆಗೆದುಕೊಂಡೆವು. ಬಳಿಕ ಮಗಳು ಮದುವೆ ಸಂಭ್ರಮದಲ್ಲಿ ಭಾಗವಹಿಸಿ ಗುರು-ಹಿರಿಯರ ಆಶೀರ್ವಾದ ಪಡೆದಳು ಎಂದು ಹೇಳಿದರು.












Click it and Unblock the Notifications