ಚಾಮರಾಜನಗರ: ₹98,00,00000 ಮೌಲ್ಯದ ಬಿಯರ್ ವಶ.!, ಎಷ್ಟು ಲೀಟರ್ ಗೊತ್ತಾ?
ಚಾಮರಾಜನಗರ, ಏಪ್ರಿಲ್, 04: ಲೋಕಸಭೆ ಚುನಾವಣೆ ಹಿನ್ನೆಲೆ ಪೊಲೀಸರು ಚೆಕ್‌ಪೋಸ್ಟ್‌ಗಳಲ್ಲಿ ಹೈ ಅಲರ್ಟ್ ಆಗಿದ್ದಾರೆ. ಈಗಾಗಲೇ ರಾಜ್ಯದ ಬಹುತೇಕ ಕಡೆ ಅಕ್ರಮವಾಗಿ ಸಾಗಿಸುತ್ತಿದ್ದ ಕಂತೆ ಕಂತೆ ಹಣ, ಬಂಗಾರವನ್ನು ಪೊಲೀಸರು ವಶಕ್ಕೆ ಪಡೆದು ಕ್ರಮವನ್ನು ಜರುಗಿಸುತ್ತಿದ್ದಾರೆ. ಆದರೆ ಇದೀಗ ಬಹುಕೋಟಿ ಮೌಲ್ಯದ ಬಿಯರ್ ವಶಪಡಿಸಿಕೊಂಡ ಘಟನೆ ಚಾಮರಾಜನಗರ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ನಂಜನಗೂಡು ತಾಲೂಕಿನಲ್ಲಿ ನಡೆದಿದೆ.
ಚಾಮರಾಜನಗರ ಜಿಲ್ಲಾಧಿಕಾರಿಗೆ ಬಂದ ಅನಾಮದೇಯ ವ್ಯಕ್ತಿಯ ಫೋನ್ ಕರೆಯಿಂದ ಬರೋಬ್ಬರಿ 98,00,00000 ರೂಪಾಯಿ ಮೌಲ್ಯದ ಬಿಯರ್ ವಶಪಡಿಸಿಕೊಂಡಿರುವ ಘಟನೆ ಚಾಮರಾಜನಗರ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ನಂಜನಗೂಡು ತಾಲೂಕಿನ ಹಿಮ್ಮಾವು ಗ್ರಾಮದ ಫ್ಯಾಕ್ಟರಿಯಲ್ಲಿ ಏಪ್ರಿಲ್ 2ರಂದು ನಡೆದಿದೆ.
a

ಚಾಮರಾಜನಗರ ಲೋಕಸಭಾ ಕ್ಷೇತ್ರದ ಚುನಾವಣಾಧಿಕಾರಿ ಸಿ.ಟಿ.ಶಿಲ್ಪಾನಾಗ್ ಅವರಿಗೆ ಅನಾಮದೇಯ ವ್ಯಕ್ತಿ ಕರೆ ಮಾಡಿ ಅಕ್ರಮ ಮದ್ಯ ಶೇಖರಣೆ ಬಗ್ಗೆ ಮಾಹಿತಿ ಕೊಟ್ಟಿದ್ದಾನೆ. ಬಳಿಕ, ಶಿಲ್ಪಾನಾಗ್ ಅವರು ಅಬಕಾರಿ ಜಿಲ್ಲಾಧಿಕಾರಿ ನಾಗಶಯನಗೆ ಮುಂದಿನ ಕ್ರಮ ಕೈಗೊಳ್ಳಲು ಸೂಚನೆ ನೀಡಿದ್ದಾರೆ.
ಜಿಲ್ಲಾಧಿಕಾರಿ ಸೂಚನೆ ಮೇರೆಗೆ ನಾಗಶಯನ, ಯುನೈಟೆಡ್ ಬ್ರೀವರೀಸ್ ಲಿಮಿಟೆಡ್‍ನ ಘಟಕಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದೆ ನಂತರ ಮೈಸೂರು ವಿಭಾಗದ ಅಬಕಾರಿ ಜಂಟಿ ಆಯುಕ್ತರೊಂದಿಗೆ ಕಾರ್ಯಾಚರಣೆ ನಡೆಸಿ ಒಟ್ಟಾರೆ 98 ಕೋಟಿ 52 ಲಕ್ಷ ರೂಪಾಯಿ ಮೌಲ್ಯದ ಅಕ್ರಮ ಮದ್ಯವನ್ನು ಜಪ್ತಿ ಮಾಡಿ ಬ್ರೀವರಿ ಘಟಕದ ಮೇಲೆ ಪ್ರಕರಣವನ್ನು ದಾಖಲಿಸಿದ್ದಾರೆ ಎಂದು ತಿಳಿದುಬಂದಿದೆ.
ಘಟಕದ ದಾಖಲಾತಿಗಳಾದ ಲೆಕ್ಕದ ಪುಸ್ತಕದೊಂದಿಗೆ ಭೌತಿಕ ದಾಸ್ತಾನನ್ನು ಪರಿಶೀಲಿಸಿದಾಗ ಲೆಕ್ಕದ ಪುಸ್ತಕದ ದಾಸ್ತಾನಿಗಿಂತ 7,000 ವಿವಿಧ ಬ್ರಾಂಡ್‌ನ ರಟ್ಟಿನ ಪೆಟ್ಟಿಗೆಗಳ ಬಿಯರ್ ದಾಸ್ತಾನು ಕೊಠಡಿಯಲ್ಲಿ ಹೆಚ್ಚಾಗಿ ಕಂಡುಬಂದ ಹಿನ್ನೆಲೆಯಲ್ಲಿ ಅಬಕಾರಿ ಕಾಯ್ದೆ ಕಲಂ 9, 10, 11, 12, 14 ಖ/ತಿ 32, 34, 38(ಎ), 43ರಡಿ ಕೇಸ್ ದಾಖಲಿಸಲಾಗಿದೆ.
ಅಲ್ಲದೆ ಕರ್ನಾಟಕ ಬ್ರೀವರಿಯ ಸನ್ನದು ಷರತ್ತುಗಳ ನಿಯಮ 1, 2, 7 ಮತ್ತು 9 ಮತ್ತು ಕರ್ನಾಟಕ ಅಬಕಾರಿ ಕಾಯ್ದೆ ಬ್ರೀವರಿ 1967ರ ನಿಯಮ 18 ಮತ್ತು 19 ಬಾಟ್ಲಿಂಗ್ ರೂಲ್ ನಿಯಮ 13 ಕರ್ನಾಟಕ ಅಬಕಾರಿ (ದಾಸ್ತಾನು, ಸಾಗಾಣಿಕೆ, ಆಮದು ಮತ್ತು ರಫ್ತು ಅಮಲು ಪದಾರ್ಥಗಳು) (ಕರ್ನಾಟಕ) ನಿಯಮಗಳು 1967ರ ನಿಯಮ 7, 89, 3 ಇವುಗಳ ಉಲ್ಲಂಘನೆಯಾಗಿದೆ.
ಬ್ರೀವರಿ ಘಟಕದಲ್ಲಿ ತಯಾರಿಸಿರುವ ಒಟ್ಟು 6,03,644 ರಟ್ಟಿನ ಪೆಟ್ಟಿಗೆಗಳು ಹಾಗೂ ಕೆಗ್‍ಗಳಲ್ಲಿರುವ 23,160 ಲೀಟರ್, ಮತ್ತು ಬಿಬಿಟಿ ಟ್ಯಾಂಕ್‍ನಲ್ಲಿರುವ 5,16,700 ಲೀಟರ್, ಯುಟಿ ಟ್ಯಾಂಕ್‍ನಲ್ಲಿರುವ 66,16,700 ಲೀಟರ್, ಸೈಲೋಸ್ ಟ್ಯಾಂಕ್‍ನಲ್ಲಿರುವ ಕಚ್ಚಾವಸ್ತು 6,50,458 ಕೆ.ಜಿ ರಂತೆ ವಿವಿಧ ವಸ್ತುಗಳನ್ನು ಜಪ್ತಿ ಮಾಡಿಕೊಳ್ಳಲಾಗಿದೆ.
ಇನ್ನು ಬ್ರೀವರಿ ಪ್ರಕರಣದಲ್ಲಿ ನಾಪತ್ತೆ ಆಗಿರುವ 17 ಆರೋಪಿಗಳನ್ನು ಪತ್ತೆಹಚ್ಚಿ ಬಂಧಿಸಿಬೇಕಾಗಿರುತ್ತದೆ ಎಂದು ಅಬಕಾರಿ ಜಿಲ್ಲಾಧಿಕಾರಿ ನಾಗಶಯನ ಗುರುವಾರ ಮಾಧ್ಯಮವರೊಂದಿಗೆ ಮಾತನಾಡಿ ಈ ಬಗ್ಗೆ ಮಾಹಿತಿ ಹಂಚಿಕೊಂಡರು. ಜಪ್ತಿಪಡಿಸಿದ ಸ್ಥಳದ ಕೃತ್ಯವು ಚಾಮರಾಜನಗರ ಲೋಕಸಭಾ ಕ್ಷೇತ್ರ (ಪ.ಜಾ)ದ ವ್ಯಾಪ್ತಿಗೆ ಒಳಪಡಲಿದ್ದು, ಮಾದರಿ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ಅಕ್ರಮ ದಾಸ್ತಾನು ಪ್ರಕರಣ ದಾಖಲಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.












Click it and Unblock the Notifications