ಬಿಳಿಗಿರಿರಂಗನ ಬೆಟ್ಟದ ದೇವಾಲಯ ಹುಂಡಿಯಲ್ಲಿ ಒಂದಲ್ಲ.. ಎರಡಲ್ಲ.. 31 ಲಕ್ಷ ರೂಪಾಯಿ ಹಣ ಸಂಗ್ರಹ-ಎಷ್ಟು ದಿನಕ್ಕೆ?
ಚಾಮರಾಜನಗರ, ಅಕ್ಟೋಬರ್, 10: ಚಾಮರಾಜನಗರ ಜಿಲ್ಲೆ ಯಳಂದೂರು ತಾಲ್ಲೂಕಿನ ಇತಿಹಾಸ ಪ್ರಸಿದ್ಧ ಬಿಳಿಗಿರಿ ರಂಗನಾಥಸ್ವಾಮಿ ಬೆಟ್ಟದ ದೇವಾಲಯ ಹುಂಡಿ ಎಣಿಕೆ ಕಾರ್ಯ ನಡೆದಿದೆ. ಹಾಗಾದರೆ, ಎಷ್ಟು ಹಣ ಸಂಗ್ರಹ ಆಗಿದೆ ಎನ್ನುವ ಸಂಪೂರ್ಣ ಅಂಕಿಅಂಶಗಳ ಸಹಿತ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ಗಮನಿಸಿ.
ಬುಧವಾರ (ಅಕ್ಟೋಬರ್ 09) ಚಾಮರಾಜನಗರ ಜಿಲ್ಲೆಯ ಬಿಳಿಗಿರಿ ರಂಗನಾಥಸ್ವಾಮಿ ಬೆಟ್ಟದ ದೇವಾಲಯ ಹುಂಡಿ ಎಣಿಕೆ ಕಾರ್ಯ ನಡೆದಿದ್ದು, ಈ ವೇಳೆ 31,15,367 ರೂಪಾಯಿ ಸಂಗ್ರಹವಾಗಿದೆ.

ಹುಂಡಿ ಎಣಿಕೆ ವೇಳೆ 1 ಯುರೋ, 1 ಮಲೇಷಿಯನ್ ರಿಂಗಿಟ್ ಕೂಡ ಪತ್ತೆಯಾಗಿದೆ. ಚಿನ್ನ-ಬೆಳ್ಳಿ ಆಭರಣಗಳನ್ನು ಕೂಡ ಭಕ್ತರು ಕಾಣಿಕೆ ರೂಪದಲ್ಲಿ ರಂಗನಾಥನಿಗೆ ಅರ್ಪಿಸಿದ್ದು, ನಾಣ್ಯದ ಮೂಲಕವೇ 1.7 ಲಕ್ಷ ರೂಪಾಯಿ ಹುಂಡಿಯಲ್ಲಿ ಶೇಖರಣೆಯಾಗಿದೆ ಎಂದು ಬಿಳಿಗಿರಿರಂಗನ ಬೆಟ್ಟದ ಇಒ ಮೋಹನ್ ಮಾಹಿತಿ ನೀಡಿದ್ದಾರೆ.
ಬಿಳಿಗಿರಿರಂಗನಾಥ ಸ್ವಾಮಿ ದೇವಾಲಯವು ರಾಜ್ಯದ ಪ್ರಮುಖ ಯಾತ್ರಸ್ಥಳ ಮತ್ತು ಪ್ರವಾಸಿ ಸ್ಥಳವಾಗಿದ್ದು, ಹಸಿರನ್ನೇ ಹೊದ್ದಿರುವ ಕ್ಷೇತ್ರವಾಗಿದೆ. ವಾರಾಂತ್ಯದಲ್ಲಿ ರಾಜ್ಯ ಅಷ್ಟೇ ಅಲ್ಲದೇ ಹೊರ ರಾಜ್ಯಗಳಿಂದಲೂ ಸಹಸ್ರಾರು ಮಂದಿ ಭೇಟಿ ಕೊಟ್ಟು ಬಿಳಿಗಿರಿ ಬನದ ಚೆಲುವನ್ನು ಆನಂದಿಸುತ್ತಾರೆ.
ಮೂರೇ ದಿನಕ್ಕೆ 1.23 ಕೋಟಿ ಆದಾಯ: ಶ್ರೀ ಕ್ಷೇತ್ರ ಮಲೆ ಮಹದೇಶ್ವರ ಬೆಟ್ಟದಲ್ಲಿ ಮೂರು ದಿನಗಳ ಕಾಲ ನಡೆದ ಮಹಾಲಯ ಅಮವಾಸ್ಯೆ ಜಾತ್ರಾ ಮಹೋತ್ಸವಕ್ಕೆ ಆಗಮಿಸಿದ್ದ ಲಕ್ಷಾಂತರ ಭಕ್ತಾದಿಗಳಿಂದ 1.23 ಕೋಟಿ ರೂಪಾಯಿ ಆದಾಯ ಬಂದಿದೆ.
ಸೆಪ್ಟೆಂಬರ್ 30, ಅಕ್ಟೋಬರ್ 1 ಹಾಗೂ 2ರ ಅವಧಿಯಲ್ಲಿ ನಡೆದ ಮಹಾಲಯ ಅಮಾವಾಸ್ಯೆ ಜಾತ್ರಾ ಮಹೋತ್ಸವ ದಿನಗಳಲ್ಲಿ ಹೆಚ್ಚಿನ ಭಕ್ತಾದಿಗಳು ಆಗಮಿಸಿ ಚಿನ್ನದ ರಥೋತ್ಸವ, ಬೆಳ್ಳಿ ರಥೋತ್ಸವ ಹುಲಿ ವಾಹನ, ರುದ್ರಾಕ್ಷಿ ವಾಹನ ಬಸವ ಮಂಟಪ, ಲಾಡು ಮಾರಾಟ, ವಿವಿಧ ಸೇವೆಗಳು ಅಕ್ಕಿ ಸೇವೆ, ಮಿಶ್ರ ಪ್ರಸಾದ, ಪುದುವಟ್ಟು, ಮಾಹಿತಿ ಕೇಂದ್ರ ಹಾಗೂ ತಾಳಬೆಟ್ಟ ಭವನಗಳಿಂದ, ಪಾರ್ಕಿಂಗ್, ಕಲ್ಲುಸಕ್ಕರೆ, ತೀರ್ಥ, ಬ್ಯಾಗ್ ಮಾರಾಟದಿಂದ 1,23,91,458 ರೂಪಾಯಿ ಆದಾಯ ಬಂದಿದೆ.
ಮೂರು ದಿನಗಳ ಅವಧಿಯಲ್ಲಿ ವಿವಿಧ ಉತ್ಸವಗಳಾದ 468 ಚಿನ್ನದ ರಥೋತ್ಸವ, 34 ಬೆಳ್ಳಿ ರಥೋತ್ಸವ, 574 ಬಸವ ವಾಹನ, 7,112 ಹುಲಿ ವಾಹನ, 288 ರುದ್ರಾಕ್ಷಿ ವಾಹನದ ಹರಕೆ ಸಲ್ಲಿಕೆ ಮೂಲಕ 38,48,251 ರೂಪಾಯಿ ಆದಾಯ ಬಂದಿದೆ.
ಅಕ್ಟೋಬರ್ ಮೂರರಿಂದ ನವರಾತ್ರಿ ಪ್ರಾರಂಭವಾಗಿದ್ದು ದೀಪಾವಳಿ ಕಾರ್ತಿಕ ಮಾಸ ಪ್ರಯುಕ್ತ ಶ್ರೀ ಕ್ಷೇತ್ರಕ್ಕೆ ಹೆಚ್ಚಿನ ಭಕ್ತಾದಿಗಳು ಆಗಮಿಸುವ ನಿರೀಕ್ಷೆ ಇರುವುದರಿಂದ ಇನ್ನು ಹೆಚ್ಚಿನ ಆದಾಯ ನಿರೀಕ್ಷಿಸಲಾಗಿದೆ.
ಅಕ್ಟೋಬರ್ ಮೂರರಿಂದ ನವರಾತ್ರಿ ಪೂಜೆ ಮಹೋತ್ಸವ ಪ್ರಾರಂಭವಾಗಿದ್ದು, ಶ್ರೀ ಕ್ಷೇತ್ರ ಮಲೆ ಮಹದೇಶ್ವರ ಬೆಟ್ಟಕ್ಕೆ ಮಹಾನವಮಿ ಆಯುಧ ಪೂಜೆ, ವಿಜಯದಶಮಿ, ದೀಪಾವಳಿ ಜಾತ್ರಾ ಮಹೋತ್ಸವ ಕಾರ್ತಿಕ ಮಾಸ ಪ್ರಾರಂಭವಾಗುವುದರಿಂದ ಲಕ್ಷಾಂತರ ಭಕ್ತಾದಿಗಳು ಆಗಮಿಸುವ ನಿರೀಕ್ಷೆಯಿದೆ. ಈ ಹಿನ್ನೆಲೆ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ.
ಪ್ರಾಧಿಕಾರದ ಅಧ್ಯಕ್ಷರಾದ ಮುಖ್ಯಮಂತ್ರಿಗಳು, ಜಿಲ್ಲಾ ಉಸ್ತುವಾರಿ ಸಚಿವರು, ಶಾಸಕರು ಹಾಗೂ ಜಿಲ್ಲಾಡಳಿತದ ಸಹಕಾರದ ವತಿಯಿಂದ ಮಹಾಲಯ ಜಾತ್ರಾ ಅಮಾವಾಸ್ಯೆ ಯಶಸ್ವಿಯಾಗಿ ನೆರವೇರಿದೆ ಮುಂದಿನ ದಿನಗಳಲ್ಲಿ ವಿಜಯದಶಮಿ ಹಾಗೂ ದೀಪಾವಳಿ ಜಾತ್ರಾ ಮಹೋತ್ಸವ ಇರುವ ಹಿನ್ನೆಲೆ ಭಕ್ತರಿಗೆ ಅಗತ್ಯ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಿಕೊಡಲು ಈಗಿನಿಂದಲೇ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ ಎಂದು ಎ.ಈ.ರಘು ತಿಳಿಸಿದ್ದಾರೆ.












Click it and Unblock the Notifications