ಮೋದಿ ಮತ್ತೆ ಪ್ರಧಾನಿಯಾಗಲೆಂದು ಮಲೆ ಮಹದೇಶ್ವರ ಬೆಟ್ಟಕ್ಕೆ ಶತಾಯುಷಿ ಅಜ್ಜಿ ಪಾದಯಾತ್ರೆ
ಚಾಮರಾಜನಗರ, ಮಾರ್ಚ್ 07: ಮಹಾಶಿವರಾತ್ರಿ ಹಿನ್ನೆಲೆಯಲ್ಲಿ ಹನೂರು ತಾಲೂಕಿನ ಮಲೆ ಮಹದೇಶ್ವರ ಬೆಟ್ಟದಲ್ಲಿ ಇಂದಿನಿಂದ ಶಿವರಾತ್ರಿ ಜಾತ್ರಾ ಮಹೋತ್ಸವ ಆರಂಭಗೊಂಡಿದ್ದು, ಸಾವಿರಾರು ಭಕ್ತರು ದೇವಾಲಯಕ್ಕೆ ಭೇಟಿ ನೀಡುತ್ತಿದ್ದಾರೆ. ನೂರಾರು ಭಕ್ತರು ಪಾದಯಾತ್ರೆ ಮೂಲಕ ಸಾಗಿ ಬಂದು ಮಾದಪ್ಪನ ದರ್ಶನ ಪಡೆಯುತ್ತಿದ್ದು, ಈ ಪೈಕಿ ಶತಾಯುಷಿ ಅಜ್ಜಿಯೊಬ್ಬರು ಈ ಬಾರಿಯ ಪಾದಯಾತ್ರೆಯಲ್ಲಿ ಎಲ್ಲರ ಗಮನ ಸೆಳೆದಿದ್ದಾರೆ.
ನರೇಂದ್ರ ಮೋದಿ ಅವರು ಮತ್ತೊಮ್ಮೆ ಪ್ರಧಾನ ಮಂತ್ರಿಯಾಗಬೇಕೆಂದು ಹಾರೈಸಿ 102 ವರ್ಷ ವಯಸ್ಸಿನ ವೃದ್ಧೆಯೊಬ್ಬರು ಮಹಾ ಶಿವರಾತ್ರಿಗೆ ಮಲೆ ಮಹದೇಶ್ವರ ಬೆಟ್ಟಕ್ಕೆ ಪಾದಯಾತ್ರೆ ಮಾಡುತ್ತಿದ್ದಾರೆ. ತುಮಕೂರು ಜಿಲ್ಲೆ ತಿಪಟೂರು ಮೂಲದ ಪಾರ್ವತಮ್ಮ ತಾಳಬೆಟ್ಟದಿಂದ ಮಹದೇಶ್ವರ ಬೆಟ್ಟದವರೆಗೆ ಮಾದಪ್ಪನ ದರ್ಶನಕ್ಕೆ18 ಕಿಲೋಮೀಟರ್ ಕಾಲ್ನಡಿಗೆ ಮೂಲಕ ಕ್ರಮಿಸಿದ್ದಾರೆ. ಪಾರ್ವತಮ್ಮ ಸುಮಾರು 5-6 ವರ್ಷಗಳಿಂದ ಪ್ರತಿವರ್ಷ ಮಹದೇಶ್ವರ ಬೆಟ್ಟಕ್ಕೆ ಪಾದಯಾತ್ರೆ ಮಾಡುತ್ತಿದ್ದಾರೆ.

102 ವರ್ಷ ವಯಸ್ಸಿನ ಪಾರ್ವತಮ್ಮ ಕೈಯಲ್ಲಿ ಕೋಲು ಹಿಡಿದು ಬೆಟ್ಟ ಗುಡ್ಡಗಳನ್ನು ಹತ್ತಿ ಮಾದಪ್ಪನ ದರ್ಶನದತ್ತ ಸಾಗುತ್ತಿದ್ದಾರೆ. ಈ ವಯಸ್ಸಿನಲ್ಲಿ ಈ ಪಾದಯಾತ್ರೆ ಬೇಕಾ..?, ಯಾಕೆ ಪಾದಯಾತ್ರೆ ಮಾಡುತ್ತಿದ್ದೀರಿ ಎಂದು ಪಾರ್ವತಮ್ಮ ಅವರನ್ನು ಕೇಳಿದಾಗ, 'ದೇಶಕ್ಕೆ ಒಳ್ಳೆಯದಾಗಬೇಕು. ರೈತರಿಗೆ ಒಳ್ಳೆಯದಾಗಬೇಕು. ಮಳೆ, ಬೆಳೆ ಚೆನ್ನಾಗಿ ಆಗಬೇಕು. ಹಾಗೆ ಆದರೆ ಅಲ್ಲವೇ ರೈತರಿಗೆ ಒಳಿತಾಗುವುದು? ಅದೇ ರೀತಿ ಕಾಡು ಪ್ರಾಣಿಗಳಿಗೂ ಒಳ್ಳೆಯದಾಗಬೇಕು. ಅವುಗಳಿಗೆ ಕುಡಿಯುವ ನೀರು ದೊರೆಯುವಂತಾಗಬೇಕು. ಈ ಎಲ್ಲ ಬೇಡಿಕೆಗಳನ್ನು ದೇವರ ಮುಂದಿಟ್ಟುಕೊಂಡು ಮಹದೇಶ್ವರನ ದರ್ಶನಕ್ಕೆ ಬರುತ್ತಿದ್ದೇನೆ' ಎಂದು ಪಾರ್ವತಮ್ಮ ಹೇಳಿದ್ದಾರೆ.
ಅಲ್ಲದೇ ಪಾರ್ವತಮ್ಮ ನರೇಂದ್ರ ಮೋದಿ ಅವರು ಮತ್ತೊಮ್ಮೆ ಪ್ರಧಾನಿಯಾಗಬೇಕು ಎಂದು ಪಾದಯಾತ್ರೆ ಕೈಗೊಂಡಿರುವುದಾಗಿ ತಿಳಿಸಿದ್ದು, ದೇಶಕ್ಕೆ ಒಳ್ಳೆಯದಾಗಲು ಮೋದಿ ಮತ್ತೊಮ್ಮೆ ಪ್ರಧಾನಿಯಾಗಬೇಕು ಎಂದಿದ್ದಾರೆ. ಈ ವೇಳೆ ಅಲ್ಲೇ ಇದ್ದ ಮತ್ತೊಂದು ಪಾದಯಾತ್ರಿಗಳು ನಿಮ್ಮ ಆಶೀರ್ವಾದ ಇದ್ದರೆ ನರೇಂದ್ರ ಮೋದಿ ಮತ್ತೊಮ್ಮೆ ಪ್ರಧಾನಿ ಆಗಿಯೇ ಆಗುತ್ತಾರೆ ಎಂದು ಹೇಳಿದ್ದಾರೆ. ಈ ಸಂಭಾಷಣೆಯ ವಿಡಿಯೋ ಸದ್ಯ ಎಲ್ಲೆಡೆ ವೈರಲ್ ಆಗುತ್ತಿದೆ.












Click it and Unblock the Notifications