ದೊಡ್ಡ ಆರ್ಡರ್ ಮಾಡಿದರೂ ಪ್ಲಾಟ್‌ಫಾರ್ಮ್ ಶುಲ್ಕ ನೀಡಬೇಕಿಲ್ಲ : ಜೊಮ್ಯಾಟೋ ಲೋಪವೇ ಗ್ರಾಹಕರಿಗೆ ವರ
ತುಂಬಾ ಸುಸ್ತಾಗಿದೆ, ಅಡುಗೆ ಮಾಡಲು ಮನಸ್ಸಿಲ್ಲ, ಅಥವಾ ಏನಾದರೂ ಹೊಸ ರುಚಿ ತಿನ್ನಬೇಕು, ಹೊರಗಿನ ಆಹಾರ ಸವಿಯಬೇಕು ಎಂದಾಗ ಥಟ್ ಅಂತ ನಮಗಿಷ್ಟವಾದ ಹೊಟೇಲ್‌ನಿಂದ ಆರ್ಡರ್ ಮಾಡಿ ಬಿಡುತ್ತೇವೆ. ಈಗ ಯಾವ ಆಹಾರ ಬೇಕೋ ಅದು ನಾವು ಆರ್ಡರ್ ಮಾಡಿದ ಹದಿನೈದು ನಿಮಿಷದಿಂದ ಅರ್ಧ ಗಂಟೆ ಅವಧಿಯೊಳಗೆ ನಮ್ಮ ಕೈ ಸೇರುತ್ತದೆ. ಆದರೆ ಹೀಗೆ ಫುಡ್ ಆರ್ಡರ್ ಮಾಡುವಾಗ ಅಲ್ಲಿ ತೋರಿಸುವ ಹಣಕ್ಕಿಂತ ಹೆಚ್ಚು ಹಣವನ್ನು ನಾವು ಪಾವತಿ ಮಾಡಬೇಕಾಗುತ್ತದೆ. ಇದು ಯಾಕೆ ಎಂದು ನೋಡಿದರೆ ಅಲ್ಲಿ ಡೆಲಿವೆರಿ ಚಾರ್ಜ್, ಪ್ಲಾಟ್‌ಫಾರಂ ರೇಟ್, ಟ್ಯಾಕ್ಸ್ ಎಲ್ಲವೂ ಸೇರಿರುತ್ತದೆ. ಇದೀಗ ಹೊರಗಿನಿಂದ ಆಹಾರ ಆರ್ಡರ್ ಮಾಡಿದರೂ ಪ್ಲಾಟ್‌ಫಾರ್ಮ್ ಶುಲ್ಕವನ್ನು ಹೇಗೆ ತಪ್ಪಿಸಬಹುದು ಎನ್ನುವ ಬಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ಚರ್ಚೆಯಾಗುತ್ತಿದೆ. ಇದರ ಪ್ರಕಾರ ಎಷ್ಟೇ ದೊಡ್ಡ ಮೊತ್ತದ ಆರ್ಡರ್ ಮಾಡಿದರೂ ಪ್ಲಾಟ್‌ಫಾರ್ಮ್ ಶುಲ್ಕ ನೀಡಬೇಕೆಂದಿಲ್ಲ. ಇಲ್ಲಿ ಜೊಮ್ಯಾಟೋ ಆಪ್‌ನಲ್ಲಿರುವ ಲೋಪವೇ ಗ್ರಾಹಕರಿಗೆ ವರವಾಗಿ ಪರಿಣಮಿಸಿರುವುದು.
ಇತ್ತೀಚೆಗೆ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆದ ಪೋಸ್ಟ್ ಒಂದರಲ್ಲಿ ಪ್ಲಾಟ್‌ಫಾರ್ಮ್ ಫೀಸ್ ಅನ್ನು ಉಳಿಸುವುದು ಹೇಗೆ ಎನ್ನುವ ಉಪಾಯದ ಬಗ್ಗೆ ಚರ್ಚಿಸಲಾಗಿದೆ. ರೆಸ್ಟೋರೆಂಟ್‌ಗಳು ಜೊಮ್ಯಾಟೊ ಸಂಸ್ಥೆಗೆ ನೀಡಬೇಕಾದ 25% ರಿಂದ 30% ಕಮಿಷನ್ ಮತ್ತು ಗ್ರಾಹಕರು ಪಾವತಿಸಬೇಕಾಗಿರುವ ಪ್ಲಾಟ್‌ಫಾರ್ಮ್ ಶುಲ್ಕವನ್ನು ಉಳಿಸುವುದು ಹೇಗೆ ಎನ್ನುವ ಬಗ್ಗೆ ದೊಡ್ಡ ಮಟ್ಟದ ಚರ್ಚೆ ನಡೆಯುತ್ತಿದೆ.

ಗ್ರಾಹರು ಜೊಮ್ಯಾಟೊದ ವಿತರಣಾ ವ್ಯವಸ್ಥೆಯಲ್ಲಿನ ಲೋಪದೋಷವನ್ನು ಬಳಸಿಕೊಂಡು ಪ್ಲಾಟ್‌ಫಾರ್ಮ್ ಶುಲ್ಕ ಮತ್ತು ರೆಸ್ಟೋರೆಂಟ್ ಕಮಿಷನ್‌ಗಳನ್ನು ಪಾವತಿಸುವುದನ್ನು ಹೇಗೆ ತಪ್ಪಿಸಬಹುದು ಎನ್ನುವ ಬಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಲಾಗಿದೆ. ಇದು ಆನ್‌ಲೈನ್‌ನಲ್ಲಿ ಚರ್ಚೆಗೆ ನಾಂದಿ ಹಾಡಿದೆ. ಜನರು ಆ್ಯಪ್ ಮೂಲಕ ಹೇಗೆ ಸಣ್ಣ ಆರ್ಡರ್ ಅನ್ನು ನೀಡಿ ಉಳಿದವನ್ನು ನೇರವಾಗಿ ರೆಸ್ಟೋರೆಂಟ್‌ಗೆ ನೀಡುವ ಮೂಲಕ ಹೆಚ್ಚುವರಿ ಹಣ ಪಾವತಿಸುವುದನ್ನು ತಪ್ಪಿಸಬಹುದು ಎನ್ನುವುದನ್ನು ಇಲ್ಲಿ ವಿವರಿಸಲಾಗಿದೆ.
ಈ ವಿಧಾನವು ಹೇಗೆ ಕಾರ್ಯನಿರ್ವಹಿಸುತ್ತದೆ ?:
ಪ್ರೇಮ್ ಸೋನಿ ಎನ್ನುವವರು ಈ ಬಗೆಗಿನ ಪೋಸ್ಟ್ ಅನ್ನು ಶೇರ್ ಮಾಡಿದ್ದು, ಈ ವಿಧಾನವನ್ನು ವಿವರವಾಗಿ ವಿವರಿಸಿದ್ದಾರೆ. ಸೋನಿ ಅವರ ಪ್ರಕಾರ, ಗ್ರಾಹಕರು ಜೊಮ್ಯಾಟೊದಲ್ಲಿ 40 ರೂ. ಮೌಲ್ಯದ ಒಂದು ರೊಟ್ಟಿಯಂತಹ ಸಣ್ಣ ಆರ್ಡರ್ ಮಾಡಬಹುದು. ಅದೇ ಸಮಯದಲ್ಲಿ, ಗ್ರಾಹಕರು ನೇರವಾಗಿ ಫೋನ್ ಕರೆ ಅಥವಾ ವಾಟ್ಸಾಪ್ ಮೂಲಕ ರೆಸ್ಟೋರೆಂಟ್ ಅನ್ನು ಸಂಪರ್ಕಿಸಿ ಪ್ರತ್ಯೇಕವಾಗಿ ದೊಡ್ಡ ಆರ್ಡರ್ ನೀಡಬಹುದು. ಅಂದರೆ ಗ್ರಾಹಕರು ರೆಸ್ಟೋರೆಂಟ್‌ಗೆ ನೇರವಾಗಿ ಆರು ರೊಟ್ಟಿಗಳು, ಪನೀರ್ ಬಟರ್ ಮಸಾಲ, ಮಲೈ ಚಾಪ್, ದಾಲ್ ಮಖಾನಿ, ಗುಲಾಬ್ ಜಾಮೂನ್ ಆರ್ಡರ್ ಮಾಡಿ UPI ಮೂಲಕ ಪಾವತಿಸುತ್ತಾರೆ. ಈಗ ಮೊದಲು ಜೊಮ್ಯಾಟೋ ಮೂಲಕ ಆರ್ಡರ್ ನೀಡಿರುವ ಒಂದು ರೊಟ್ಟಿಯ ಜೊತೆಗೇ ಉಳಿದ ಎಲ್ಲಾ ಆಹಾರ ಪ್ಯಾಕ್ ಆಗಿ ಬರುತ್ತದೆ. 40 ರೂ. ಆರ್ಡರ್‌ನೊಂದಿಗೆ 1,200 ರೂ. ಆಹಾರವನ್ನು ಕೂಡಾ ಅದೇ ಜೊಮ್ಯಾಟೋ ಡೆಲಿವೆರಿ ಮ್ಯಾನ್ ತಂದು ನೀಡುತ್ತಾನೆ.
ಇಲ್ಲಿ ಹೆಚ್ಚಿನ ಪಾವತಿಯು ಜೊಮ್ಯಾಟೋ ಅಪ್ಲಿಕೇಶನ್‌ನ ಹೊರಗೆ ನಡೆಯುತ್ತದೆ. ಈ ಮೂಲಕ ಗ್ರಾಹಕರು ಮತ್ತು ರೆಸ್ಟೋರೆಂಟ್‌ಗಳೆರಡೂ ಕಮಿಷನ್‌ಗಳು, ಪ್ಲಾಟ್‌ಫಾರ್ಮ್ ಶುಲ್ಕಗಳು ಮತ್ತು ದೊಡ್ಡ ಆರ್ಡರ್ ಮೇಲೆ ನೀಡಬೇಕಾದ ಹೆಚ್ಚಿನ ಬೆಲೆಯನ್ನು ತಪಿಸುತ್ತದೆ.
ಸಾಮಾಜಿಕ ಮಾಧ್ಯಮ ಬಳಕೆದಾರರ ಚರ್ಚೆ:
ಆಹಾರ ವಿತರಣಾ ಕಂಪನಿಗಳು ವಹಿವಾಟಿನಿಂದ ಸ್ವಲ್ಪ ಮೊತ್ತವನ್ನು ಮಾತ್ರ ಗಳಿಸುತ್ತಾ ವಿತರಣೆ ಕಾರ್ಯವನ್ನು ನಿರ್ವಹಿಸುವುದರಿಂದ ಇದು ಅವುಗಳ ಆರ್ಥಿಕ ನಷ್ಟಕ್ಕೆ ಕಾರಣವಾಗಬಹುದು ಎಂದು ಹೇಳಲಾಗಿದೆ. ಹೆಚ್ಚಿನವರು ಹೀಗೆಯೇ ಮಾಡುತ್ತಾ ಬಂದರೆ ಆಹಾರ ವಿತರಣಾ ವೇದಿಕೆಗಳ ವ್ಯವಹಾರ ಮಾದರಿಯ ಮೇಲೆ ಪರಿಣಾಮ ಬೀರಬಹುದು ಎಂದು ಎಚ್ಚರಿಸಲಾಗಿದೆ.
ಈ ಪೋಸ್ಟ್ ಅನ್ನು ಒಂದು ಮಿಲಿಯನ್ ಗಿಂತಲೂ ಹೆಚ್ಚು ಜನ ವೀಕ್ಷಿಸಿದ್ದಾರೆ. ಅಲ್ಲದೆ ಈ ಪೋಸ್ಟ್‌ಗೆ ಮಿಶ್ರ ಪ್ರತಿಕ್ರಿಯೆಗಳನ್ನು ನೀಡಿದ್ದಾರೆ. ಕೆಲವರು ಇದನ್ನು ಹಣ ಉಳಿಸಲು ಇರುವ ಕ್ರಮ ಎಂದು ಕರೆದರೆ ಇನ್ನು ಕೆಲವರು ವೇದಿಕೆಯ ದುರುಪಯೋಗ ಎಂದು ಬಣ್ಣಿಸಿದ್ದಾರೆ. ಮತ್ತೊಬ್ಬ ಬಳಕೆದಾರ ಲೋಪದೋಷವನ್ನು ಆನಂದಿಸಿ" ಎಂದು ಕಾಮೆಂಟ್ ಮಾಡಿದ್ದಾರೆ.
ಕೆಲವು ಬಳಕೆದಾರರು ಇದನ್ನು ಅಪಾಯಕಾರಿ ಬೆಳವಣಿಗೆ ಎಂದು ಕರೆದಿದ್ದಾರೆ. ಇಂತಹ ಅಭ್ಯಾಸಗಳು ನಿಯಮಿತವಾಗಿ ನಡೆಯುತ್ತಿರುವುದು ಕಂಡು ಬಂದರೆ ರೆಸ್ಟೋರೆಂಟ್‌ಗಳು ತೊಂದರೆಯನ್ನು ಎದುರಿಸಬೇಕಾಗುತ್ತದೆ ಎಂದು ಹಲವರು ಗಮನ ಸೆಳೆದಿದ್ದಾರೆ. ಮತ್ತೊಬ್ಬ ಬಳಕೆದಾರರು, "ದಯವಿಟ್ಟು ನಾವು ವಂಚನೆ ಮಾಡುವ ಮಾರ್ಗಗಳನ್ನು ಹಂಚಿಕೊಳ್ಳುವುದನ್ನು ನಿಲ್ಲಿಸಬಹುದೇ ಎಂದು ಪ್ರಶ್ನಿಸಿದ್ದಾರೆ.
ಜೊಮ್ಯಾಟೊ ಇಲ್ಲಿಯವರೆಗೆ ಹಕ್ಕುಗಳ ಬಗ್ಗೆ ಸಾರ್ವಜನಿಕವಾಗಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಜೊಮ್ಯಾಟೊ ಪ್ಲಾಟ್‌ಫಾರ್ಮ್ ದುರುಪಯೋಗದ ಬಗ್ಗೆ ಕಳವಳಗಳು ವ್ಯಕ್ತವಾಗುತ್ತಿರುವುದು ಇದೇ ಮೊದಲಲ್ಲ. ಜನವರಿ 2023 ರಲ್ಲಿ, ವೈರಲ್ ಆದ ಲಿಂಕ್ಡ್‌ಇನ್ ಪೋಸ್ಟ್ ಜೊಮಾಟೊದ ಕ್ಯಾಶ್-ಆನ್-ಡೆಲಿವರಿ (COD) ವ್ಯವಸ್ಥೆ ಒಳಗೊಂಡ ವಿಭಿನ್ನ ಲೋಪವನ್ನು ತೆರೆದಿಟ್ಟಿತ್ತು.
(ಬರಹ: ರಂಜಿತಾ ಆರ್.ಕೆ.)














Click it and Unblock the Notifications