ಪೇಟಿಎಂ ಮುಖ್ಯಸ್ಥರಾಗಿ ವಿಜಯ್ ಶೇಖರ್ ಶರ್ಮಾ ಮರು ನೇಮಕ
ನವದೆಹಲಿ, ಮೇ 22: ಪೇಟಿಎಂ ಕಂಪನಿಯನ್ನು ನಿರ್ವಹಿಸುವ ಒನ್97 ಕಮ್ಯೂನಿಕೇಶನ್ಸ್ ಕಂಪನಿಗೆ ಎಂಡಿ ಮತ್ತು ಸಿಇಒ ಆಗಿ ವಿಜಯ್ ಶೇಖರ್ ಶರ್ಮಾ ಮರು ನೇಮಕವಾಗಿದ್ದಾರೆ. ಇವರ ಅಧಿಕಾರಾವಧಿ 2027 ಡಿಸೆಂಬರ್ 18ರವರೆಗೂ ಇರಲಿದೆ. ಒನ್97 ಕಮ್ಯೂನಿಕೇಶನ್ಸ್ ಸಂಸ್ಥೆ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ ಈ ಕುರಿತು ಮಾಹಿತಿ ನೀಡಲಾಗಿದೆ.
"ನಾಮಾಂಕಣ ಮತ್ತು ಸಂಭಾವನೆ ಸಮಿತಿಯ (Nomination and Remuneration Committee) ಶಿಫಾರಸುಗಳು ಮತ್ತು ಷೇರುದಾರರ ಅನುಮೋದನೆ ಮೇರೆಗೆ ಮೇ 20ರಂದು ನಡೆದ ಕಂಪನಿ ಮಂಡಳಿ ನಿರ್ದೇಶಕರ ಸಬೆಯಲ್ಲಿ ವಿಜಯ್ ಶೇಖರ್ ಶರ್ಮಾ ಅವರನ್ನು ಕಂಪನಿಯ ನಿರ್ವಾಹಕ ನಿರ್ದೇಶಕ ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿ 2022, ಡಿಸೆಂಬರ್ 19ರಿಂದ 2027 ಡಿಸೆಂಬರ್ 18ರವರೆಗೂ ಮರು ಆಯ್ಕೆಗೆ ಅನುಮೋದನೆ ಮಾಡಲಾಗಿದೆ" ಎಂದು ಒನ್97 ಕಮ್ಯೂನಿಕೇಶನ್ಸ್ ಸಂಸ್ಥೆ ಸ್ಟಾಕ್ ವಿನಿಮಯ (Stock exchanges) ಕೇಂದ್ರಗಳಿಗೆ ಸಲ್ಲಿಸಿದ ಮಾಹಿತಿಯಲ್ಲಿ ತಿಳಿಸಲಾಗಿದೆ.
"ಒನ್97 ಕಮ್ಯೂನಿಕೇಶನ್ಸ್ ಹಾಗು ಅದರಡಿಯ ಪೇಟಿಎಂ ಕಂಪನಿಯ ಛೇರ್ಮನ್, ಎಂಡಿ ಹಾಗೂ ಸಿಇಒ ಆಗಿ ಭಾರತದಲ್ಲಿ ಡಿಜಿಟಲ್ ಪೇಮೆಂಟ್ ಮತ್ತು ಹಣಕಾಸು ಸೇವೆ ಕ್ಷೇತ್ರದಲ್ಲಿ ಕ್ರಾಂತಿ ತರುವಲ್ಲಿ ವಿಜಯ್ ಶೇಖರ್ ಶರ್ಮಾ ಪ್ರಮುಖ ಪಾತ್ರ ವಹಿಸಿದ್ದಾರೆ. ಅವರ ಮಾರ್ಗದರ್ಶನದಲ್ಲಿ ಭಾರತದ ಐವತ್ತು ಕೋಟಿ ಜನರನ್ನು ಆರ್ಥಿಕತೆಯ ಮುಖ್ಯವಾಹಿನಿಗೆ ತರುವ ಗುರಿ ಪೇಟಿಎಂಗೆ ಇದೆ" ಎಂದೂ ಕಂಪನಿಯ ಹೇಳಿಕೆಯಲ್ಲಿ ಬರೆಯಲಾಗಿದೆ.

ವಿಜಯ್ ಶೇಖರ್ ಬಗ್ಗೆ ಒಂದು ಪರಿಚಯ: 44 ವರ್ಷದ ವಿಜಯ್ ಶೇಖರ್ ಉತ್ತರ ಪ್ರದೇಶದವರಾಗಿದ್ದು ಭಾರತದ ಅತ್ಯಂತ ಕಿರಿಯ ಕೋಟ್ಯಾಧಿಪತಿ ಎಂಬ ಶ್ರೇಯಕ್ಕೆ ಪಾತ್ರರಾದವರು. ಕಾಲೇಜಿನಲ್ಲಿದ್ಧಾಗಲೇ ಅವರು ಒಂದು ವೆಬ್‌ಸೈಟ್ ಮಾಡಿ ಅದನ್ನು ಎರಡು ವರ್ಷಗಳ ಬಳಿಕ ಆರೇಳು ಕೋಟಿ ರೂಪಾಯಿಗೆ ಮಾರಾಟ ಮಾಡಿದ್ದರು. 2000 ವರ್ಷದಲ್ಲಿ ಒನ್97 ಕಮ್ಯೂನಿಕೇಶನ್ಸ್ ಎಂಬ ಕಂಪನಿ ಸ್ಥಾಪನೆ ಮಾಡಿದರು. ಸುದ್ದಿ, ಕ್ರಿಕೆಟ್ ಸ್ಕೋರು, ರಿಂಗ್‌ಟೋನ್, ಜೋಕ್, ಪರೀಕ್ಷೆ ಫಲಿತಾಂಶ ಇತ್ಯಾದಿ ಟ್ರೆಂಡಿಂಗ್ ಮಾಹಿತಿಯನ್ನು ಮೊಬೈಲ್‌ನಲ್ಲಿ ಕೊಡುವ ಕಂಪನಿ ಅದಾಗಿತ್ತು.

2010ರಲ್ಲಿ ಇದೇ ಒನ್97 ಕಮ್ಯುನಿಕೇಶನ್ಸ್ ಸಂಸ್ಥೆಯ ಅಡಿಯಲ್ಲಿ ಪೇಟಿಎಂ ಕಂಪನಿಯನ್ನೂ ವಿಜಯ್ ಶೇಖರ್ ಶರ್ಮಾ ಸ್ಥಾಪನೆ ಮಾಡಿದರು. ಕೇಂದ್ರ ಸರಕಾರ 2016ರಲ್ಲಿ ನೋಟ್ ಬ್ಯಾನ್ ಕ್ರಮ ಕೈಗೊಂಡ ಬಳಿಕ ಪೇಟಿಎಂ ಸಂಸ್ಥೆಯ ವ್ಯಾಪ್ತಿ ಗಮನಾರ್ಹವಾಗಿ ವಿಸ್ತಾರವಾಯಿತು. ಇದೀಗ 40 ಕೋಟಿ ಜನರು ಪೇಟಿಎಂ ಬಳಸುತ್ತಿದ್ದು, ದಿನವೂ 2.5 ಕೋಟಿ ವಹಿವಾಟು ನಡೆಯುತ್ತದೆ ಎಂದು ಹೇಳಲಾಗುತ್ತದೆ.
(ಒನ್ಇಂಡಿಯಾ ಸುದ್ದಿ)












Click it and Unblock the Notifications