ಟೈಟಾನ್ ವಾಚುಗಳ ಸ್ಥಾಪಕ ಕ್ಸೆರೆಕ್ಸ್ ದೇಸಾಯಿ ಇನ್ನಿಲ್ಲ
ಬೆಂಗಳೂರು, ಜೂನ್ 27: ಬೆಂಗಳೂರಿನ ಗಡಿಭಾಗದ ಹೊಸೂರಿನಲ್ಲಿ ಟೈಟಾನ್ ವಾಚು ಫ್ಯಾಕ್ಟರಿ ಸ್ಥಾಪಿಸಿ, ಟಾಟಾ ಸಂಸ್ಥೆಯನ್ನು ಅಧಿಕೃತವಾಗಿ ವಾಚುಗಳ ಉದ್ಯಮದಲ್ಲಿ ತೊಡಗುವಂತೆ ಮಾಡಿದ ಉದ್ಯಮಿ ಕ್ಸೆರೆಕ್ಸ್ ದೇಸಾಯಿ ಅವರು ಸೋಮವಾರ ಸಂಜೆ ನಿಧನರಾಗಿದ್ದಾರೆ. ಮಾರಣಾಂತಿಕ ಡೆಂಗ್ಯೂ ಅವರನ್ನು ಬಲಿ ತೆಗೆದುಕೊಂಡಿದೆ.
ವಾಚು ಉತ್ಪಾದನಾ ಕ್ಷೇತ್ರದಲ್ಲಿ ಹೊಸ ಸಾಧ್ಯತೆಗಳನ್ನು ತೋರಿಸಿಕೊಟ್ಟ ಕ್ಸೆರೆಕ್ಸ್ ದೇಸಾಯಿ(79) ಅವರು ಕೆಲ ಕಾಲದಿಂದ ಹೊಟ್ಟೆ ಸಂಬಂಧಿಸಿದ ಕಾಯಿಲೆಯಿಂದ ಬಳಲುತ್ತಿದ್ದರು. [ಪೊಲೀಸರ ಕಣ್ಣಿಗೆ 'ಸನ್ ಗ್ಲಾಸ್' ಹಾಕಿದ ಟೈಟಾನ್ ಐ]

ಜೆಆರ್ ಡಿ ಟಾಟಾ ಅವರಿಗೆ ಮೊದಲ ಬಾರಿಗೆ ವಾಚು ಉದ್ಯಮದಲ್ಲಿ ತೊಡಗಿಕೊಳ್ಳಲು ಸಲಹೆ ನೀಡಿದ ದೇಸಾಯಿ ಅವರು ಟಾಟಾ ಸಮೂಹದ ಮೂಲಕ ಈ ಹೊಸ ಸಾಹಸಕ್ಕೆ ಕೈ ಹಾಕಿದರು. ಇದಕ್ಕೂ ಮುನ್ನ ದೇಸಾಯಿ ಅವರು ಟಾಟಾ ಕೆಮಿಕಲ್ಸ್, ಟಾಟಾ ಇಂಡಸ್ಟ್ರೀಸ್, ಟಾಟಾ ಸಮೂಹದ ಹೊಟೆಲ್ , ಪ್ರೆಸ್ ಮುಂತಾದೆಡೆ ಅನುಭವ ಹೊಂದಿದ್ದರು. ಹೊಸೂರಿನ ಘಟಕ ಸ್ಥಾಪನೆಗಾಗಿ ಸರಿ ಸುಮಾರು 6 ವರ್ಷಗಳ ಕಾಲ ತಮಿಳುನಾಡು ಸರ್ಕಾರದೊಡನೆ ಸಂಧಾನ ನಡೆಸಿ ಯಶಸ್ವಿಯಾದ ದೇಸಾಯಿ ಅವರು ಬೆಳೆಸಿದ ಟೈಟಾನ್ ರೀಟೆಲ್ ನೆಟ್ವರ್ಕ್ ಇಂದು ದೇಶದ ವಿಸ್ತೃತ ಜಾಲವನ್ನು ಹೊಂದಿದೆ.[ಟೈಟಾನ್ ನಿಂದ ಫೈಬರ್ ಸರಣಿ ಹೊಸ ಗಡಿಯಾರ]
ಟೈಟಾನ್ ರೀಟೆಲ್ ನೆಟ್‍ವರ್ಕ್ ಕುರಿತು: 445ಕ್ಕೂ ಅಧಿಕ ಎಕ್ಸ್‍ಕ್ಲ್ಯೂಸಿವ್ ಮಳಿಗೆಯನ್ನು 180ಕ್ಕೂ ಅಧಿಕ ನಗರಗಳಲ್ಲಿ ಹೊಂದಿದ್ದು, ಟೈಟಾನ್ ಭಾರತದ ಬೃಹತ್ ವಾಚ್ ರೀಟೆಲರ್. ಮಧ್ಯಪ್ರಾಚ್ಯ, ದಕ್ಷಿಣ ಏಷ್ಯಾ, ಆಫ್ರಿಕ ಸೇರಿದಂತೆ 32 ದೇಶಗಳಲ್ಲಿ ಅಸ್ತಿತ್ವ ಹೊಂದಿದೆ. 700ಕ್ಕು ಅಧಿಕ ಅಧಿಕೃತ ಸೇವಾ ಕೇಂದ್ರಗಳನ್ನು ಹೊಂದಿದೆ. 2011-12ರಲ್ಲಿ 50 ಲಕ್ಷ ಗ್ರಾಹಕರ ಗಡಿ ತಲುಪಿತ್ತು. ಸಾಕಷ್ಟು ಗ್ರಾಹಕ ಸಂಬಂಧ ಅಭಿವೃದ್ಧಿ ಕಾರ್ಯಕ್ರಮಗಳನ್ನು ಹೊಂದಿದ್ದು, 40 ಲಕ್ಷ ಸಕ್ರಿಯ ಗ್ರಾಹಕರನ್ನು ಹೊಂದಿದೆ.












Click it and Unblock the Notifications