Share Market Crash: ಷೇರು ಮಾರುಕಟ್ಟೆ ಮಹಾಕುಸಿತ; ಒಂದೇ ದಿನ ಹೂಡಿಕೆದಾರರಿಗೆ ₹17 ಲಕ್ಷ ಕೋಟಿ ನಷ್ಟ
ಸೋಮವಾರ ಷೇರು ಮಾರುಕಟ್ಟೆಯಲ್ಲಿ ಹೂಡಿಕೆದಾರರಿಗೆ ಮಹಾ ಆಘಾತ ಎದುರಾಗಿದೆ. ಜಾಗತಿಕ ಆರ್ಥಿಕ ಹಿಂಜರಿತದ ಭಯದಿಂದ ಯುಎಸ್ ಮಾರುಕಟ್ಟೆ ಕುಸಿಯುತ್ತಿದ್ದಂತೆ ವಿಶ್ವದ ವಿವಿಧ ಷೇರು ಮಾರುಕಟ್ಟೆಗಳ ಮೇಲೂ ಪರಿಣಾಮ ಬೀರಿದೆ. ಭಾರತೀಯ ಷೇರುಮಾರುಕಟ್ಟೆಯಲ್ಲಿ ಕೂಡ ಮಹಾಕುಸಿತ ಕಂಡಿದ್ದು ಒಂದೇ ದಿನ ಹೂಡಿಕೆದಾರರು ಸುಮಾರು 17 ಲಕ್ಷ ಕೋಟಿ ರೂಪಾಯಿ ನಷ್ಟ ಮಾಡಿಕೊಂಡಿದ್ದಾರೆ. ಸೆನ್ಸೆಕ್ಸ್ ಮಧ್ಯಾಹ್ನದ ವೇಳೆಗೆ 2100 ಅಂಕಗಳಷ್ಟು ಕುಸಿತ ಕಂಡಿದೆ.
ಯುಎಸ್ ಮಾರುಕಟ್ಟೆಯಲ್ಲಿ ಉದ್ಯೋಗ ಕಡಿತವು ಆರ್ಥಿಕ ಬೆಳವಣಿಗೆಯನ್ನು ನಿಧಾನಗೊಳಿಸುವ ಆತಂಕ ಮೂಡಿಸಿದ ನಂತರ ಹೂಡಿಕೆದಾರರು ಭಾರಿ ಪ್ರಮಾಣದಲ್ಲಿ ಷೇರುಗಳನ್ನು ಮಾರಾಟ ಮಾಡಲು ಮುಂದಾಗಿದ್ದರಿಂದ ಷೇರು ಮಾರುಕಟ್ಟೆ ಕುಸಿತ ಕಂಡಿದೆ. ಶುಕ್ರವಾರ ಕುಸಿದಿದ್ದ ಷೇರು ಮಾರುಕಟ್ಟೆ ಸೋಮವಾರ ಕೂಡ ಕುಸಿತವನ್ನು ಮುಂದುವರೆಸಿದೆ. ಸೋಮವಾರ ದೇಶೀಯ ಷೇರುಮಾರುಕಟ್ಟೆ ಒಟ್ಟಾರೆ ಶೇಕಡಾ 2 ರಷ್ಟು ಕುಸಿತ ಕಂಡಿದೆ. ಸೆನ್ಸೆಕ್ಸ್ ಮತ್ತು ನಿಫ್ಟಿ ಎರಡೂ ಸೂಚ್ಯಂಕಗಳು ಕುಸಿದಿವೆ.

ಎಷ್ಟು ಕುಸಿತ?
ಷೇರು ಮಾರುಕಟ್ಟೆ ಆರಂಭವಾಗುತ್ತಿದ್ದಂತೆ ಹೂಡಿಕೆದಾರರು ಭಾರಿ ಪ್ರಮಾಣದಲ್ಲಿ ಷೇರು ಮಾರಾಟಕ್ಕೆ ಮುಗಿಬಿದ್ದರು. ಆರಂಭದಲ್ಲೇ ಸೆನ್ಸೆಕ್ಸ್ 2,393.76 ಕುಸಿದು, 78,588.19 ಅಂಕಗಳಿಂದ ಆರಂಭವಾಯಿತು. ಮಧ್ಯಾಹ್ನದ ವೇಳೆಗೆ ಅಲ್ಪ ಸುಧಾರಣೆ ಕಂಡು ಮತ್ತೆ 78,865.81 ಅಂಕಗಳಿಗೆ ಏರಿಕೆಯಾಗಿದೆ.
ನಿಫ್ಟಿ 50 ಕೂಡ 2 ಶೇಕಡಾ ಅಥವಾ 414.85 ಪಾಯಿಂಟ್‌ಗಳನ್ನು ಕುಸಿದು 24,302.85 ನಲ್ಲಿ ಪ್ರಾರಂಭವಾಯಿತು. ಮಧ್ಯಾಹ್ನದ ವೇಳೆಗೆ 645.85 (2.25%) ಕುಸಿತ ಕಂಡಿದೆ. ಜಾಗತಿಕವಾಗಿ ಪ್ರಮುಖ ಮಾರುಕಟ್ಟೆಗಳು ಭಾರಿ ಪ್ರಮಾಣದಲ್ಲಿ ಕುಸಿತ ಕಂಡಿರುವ ಕಾರಣ ಹೂಡಿಕೆದಾರರು ಲಕ್ಷಾಂತರ ಕೋಟಿ ರೂಪಾಯಿ ಸಂಪತ್ತು ಕಳೆದುಕೊಂಡಿದ್ದಾರೆ.
ಮಾರುಕಟ್ಟೆ ಕುಸಿಯಲು ಕಾರಣವೇನು?
ಯುಎಸ್ ಮಾರುಕಟ್ಟೆ ದೇಶದ ಪ್ರಮುಖ ಷೇರುಮಾರುಕಟ್ಟೆ ವಿಶ್ವದ ಬಲವಾದ ಆರ್ಥಿಕತೆ ಹೊಂದಿರುವ ಕಾರಣ, ಈ ದೇಶದ ಆರ್ಥಿಕ ಏರಿಳಿತಗಳು ಜಾಗತಿಕ ಷೇರುಮಾರುಕಟ್ಟೆ ಮೇಲೆ ಪ್ರಭಾವ ಬೀರುತ್ತವೆ. ಯುಎಸ್‌ನಲ್ಲಿ ಹೆಚ್ಚಿನ ಉದ್ಯೋಗ ಕಡಿತವು ಜಾಗತಿಕವಾಗಿ ಷೇರುಮಾರುಕಟ್ಟೆ ಮೇಲೆ ಪರಿಣಾಮ ಬೀರಿದೆ.
ಯುಎಸ್‌ನಲ್ಲಿ ಜುಲೈನಲ್ಲಿ ನಿರುದ್ಯೋಗ ದರವು 4.3 ಪ್ರತಿಶತಕ್ಕೆ ಏರಿಕೆಯಾಗಿತ್ತು. ಕಾರ್ಮಿಕ ಮಾರುಕಟ್ಟೆಯಲ್ಲಿ ಹಿಂಜರಿತ ಆರ್ಥಿಕತೆಯ ಬೆಳವಣಿಗೆಯನ್ನು ಕುಂಠಿತಗೊಳಿಸುವ ಭಯವನ್ನು ಹುಟ್ಟುಹಾಕಿತು. ಇದರಿಂದ ಹೂಡಿಕೆದಾರರು ಷೇರುಗಳನ್ನು ಮಾರಾಟಮಾಡಲು ಮುಂದಾದರು, ಪರಿಣಾಮವಾಗಿ ಷೇರುಮಾರುಕಟ್ಟೆ ಕುಸಿತ ಕಂಡಿತು.
ಮಧ್ಯಪ್ರಾಚ್ಯ ದೇಶಗಳಲ್ಲಿ ರಾಜಕೀಯ ಉದ್ವಿಗ್ನತೆ ಕೂಡ ಷೇರುಮಾರುಕಟ್ಟೆ ಕುಸಿಯಲು ಮತ್ತೊಂದು ಪ್ರಮುಖ ಕಾರಣವಾಗಿದೆ. ಇಸ್ರೇಲ್ - ಹಮಾಸ್ ಸಂಘರ್ಷ, ಇರಾನ್ ಮೇಲಿನ ದಾಳಗಳು ಕೂಡ ಷೇರುಮಾರುಕಟ್ಟೆ ಮೇಲೆ ಕೆಟ್ಟಪರಿಣಾಮ ಬೀರಿವೆ. ಇನ್ನು ಒಂದಷ್ಟು ದಿನ ಷೇರು ಮಾರುಕಟ್ಟೆ ಕುಸಿಯಬಹುದು ಎಂದು ತಜ್ಞರು ಅಂದಾಜಿಸಿದ್ದಾರೆ. ದೀರ್ಘಾವಧಿ ಹೂಡಿಕೆದಾರರು ಹೆಚ್ಚು ಭಯಪಡುವ ಅಗತ್ಯವಿಲ್ಲವಾದರೂ, ಇಂಟ್ರಾ ಡೇ ಷೇರು ಖರೀದಿ ಮಾರಾಟಗಾರರು ಮಾತ್ರ ಭಾರಿ ಪ್ರಮಾಣದಲ್ಲಿ ನಷ್ಟ ಅನುಭವಿಸಿದ್ದಾರೆ.












Click it and Unblock the Notifications