Stock Market: 6,00,000 ಕೋಟಿ ರೂಪಾಯಿ ಕಳೆದುಕೊಂಡ ಹೂಡಿಕೆದಾರರು, ಷೇರು ಪೇಟೆಯಲ್ಲಿ ಭಾರಿ ತಲ್ಲಣ...
ಭಾರತೀಯ ಷೇರು ಮಾರುಕಟ್ಟೆ ಇಂದು ಭಾರಿ ದೊಡ್ಡ ಹಿನ್ನಡೆ ಅನುಭವಿಸಿದ್ದು, ಪ್ರಮುಖ ಸೂಚ್ಯಂಕ ಸೆನ್ಸೆಕ್ಸ್ ಹಾಗೂ ನಿಫ್ಟಿ ಭಾರಿ ದೊಡ್ಡ ಕುಸಿತ ಕಂಡಿವೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ದೊಡ್ಡ ದೊಡ್ಡ ಬದಲಾವಣೆಗಳು ಸಂಭವಿಸುತ್ತಿದ್ದು, ಯುದ್ಧ ಹಾಗೂ ಮಧ್ಯಪ್ರಾಚ್ಯ ದೇಶಗಳ ಸೂಕ್ಷ್ಮ ಪರಿಸ್ಥಿತಿ ಮಧ್ಯೆ ಈಗ ಷೇರುಪೇಟೆ ನಷ್ಟದ ಹಾದಿ ಹಿಡಿದಿದೆ. ಒಂದಲ್ಲ ಎರಡಲ್ಲ ಬರೋಬ್ಬರಿ 600000 ಕೋಟಿ ರೂಪಾಯಿ ಇಂದು ಒಂದೇ ಕಳೆದುಕೊಂಡ ಹೂಡಿಕೆದಾರರು ಚಿಂತೆಯಲ್ಲಿ ಇದ್ದಾರೆ. ಹಾಗಾದರೆ ಈಗ ಹೇಗಿದೆ ಷೇರು ಮಾರುಕಟ್ಟೆಯ ಪರಿಸ್ಥಿತಿ? ಬನ್ನಿ ತಿಳಿಯೋಣ.
ಜಗತ್ತಿನ ಅತಿದೊಡ್ಡ ಆರ್ಥಿಕತೆಗಳಲ್ಲಿ ಒಂದಾಗಿರುವ ಭಾರತ ಇದೀಗ ದೊಡ್ಡ ದೊಡ್ಡ ದೇಶಗಳಿಗೂ ಪೈಪೋಟಿ ಕೊಡುವ ಹಂತಕ್ಕೆ ಬಂದಿದೆ. ಅದರಲ್ಲೂ ಭಾರತದ ಷೇರುಪೇಟೆ ಹೂಡಿಕೆದಾರರ ಪಾಲಿಗೆ ಸ್ವರ್ಗ ಎಂದೇ ಗುರುತಿಸಿಕೊಂಡಿದೆ. ಹೀಗಾಗಿ ಕಳೆದ ಕೆಲವು ವರ್ಷಗಳಿಂದ ಭಾರತದ ಷೇರ ಮಾರುಕಟ್ಟೆ ಲಕ್ಷಾಂತರ ಕೋಟಿ ರೂಪಾಯಿ ಬಂಡವಾಳ ಆಕರ್ಷಣೆ ಮಾಡಿದೆ. ಹೀಗಿದ್ದಾಗ ಕಳೆದ ಕೆಲವು ದಿನಗಳಿಂದ ಷೇರುಪೇಟೆಯಲ್ಲಿ ಪದೇ ಪದೇ ಕುಸಿತ ಎದುರಾಗುತ್ತಿದ್ದು, ಹೂಡಿಕೆದಾರರಿಗೆ ಭಾರಿ ನಷ್ಟವಾಗಿದೆ. ಈ ರೀತಿ ಇಂದು ಕೂಡ ಷೇರು ಮಾರುಕಟ್ಟೆ ಇಳಿಕೆ ಕಂಡಿದೆ.

6,00,000 ಕೋಟಿ ರೂಪಾಯಿ ನಷ್ಟ
ಷೇರು ಮಾರುಕಟ್ಟೆ ಇಂದು ವಹಿವಾಟು ಆರಂಭ ಮಾಡಿದಾಗ ಕೊಂಚ ಏರಿಕೆ ಕಂಡಿತ್ತು, ಆದರೆ ಈ ಏರಿಕೆ ತುಂಬಾ ಸಮಯ ಉಳಿಯಲೇ ಇಲ್ಲ. ದಿಢೀರ್ ಅಂತಾ, ಷೇರು ಮಾರುಕಟ್ಟೆಯ ಪ್ರಮುಖವಾದ ಸೂಚ್ಯಂಕಗಳು ಎಂದು ಗುರುತಿಸಲಾಗುವ ಸೆನ್ಸೆಕ್ಸ್ ಹಾಗೂ ನಿಫ್ಟಿ-50 ದೊಡ್ಡ ಮಟ್ಟದಲ್ಲಿಯೇ ಕುಸಿತ ಕಾಣಲು ಆರಂಭಿಸಿತ್ತು. ಹೀಗೆ ನೋಡ ನೋಡುತ್ತಲೇ ಸೆನ್ಸೆಕ್ಸ್ ಹಾಗೂ ನಿಫ್ಟಿ-50 ಗರಿಷ್ಠ ಕುಸಿತದಲ್ಲಿ ಬರೋಬ್ಬರಿ 6,00,000 ಕೋಟಿ ರೂಪಾಯಿ ನಷ್ಟ ಅನುಭವಿಸುವಂತೆ ಮಾಡಿತ್ತು. ಸೆನ್ಸೆಕ್ಸ್ ಗರಿಷ್ಠ 800 ಅಂಕ ಕುಸಿತ ಕಂಡು ಒಂದಷ್ಟು ಚೇತರಿಸಿಕೊಂಡಿತ್ತು. ಮತ್ತೊಂದು ಕಡೆ ನಿಫ್ಟಿ-50 ಕೂಡ ಭಾರಿ ದೊಡ್ಡ ಪೆಟ್ಟು ತಿಂದಿದೆ ಇಂದು.
ಷೇರುಪೇಟೆ ಕುಸಿತಕ್ಕೆ ಕಾರಣ ಏನು?
ಭಾರತದಲ್ಲಿ ಸಾಕಷ್ಟು ದೊಡ್ಡ ಮಟ್ಟದ ಹೂಡಿಕೆ ಮಾಡಿರುವ ವಿದೇಶಿ ಹೂಡಿಕೆದಾರರು ಇದೀಗ ತಮ್ಮ ಬಂಡವಾಳ ಹೊರಗೆ ತೆಗೆದುಕೊಳ್ಳಲು ಶುರು ಮಾಡಿದ್ದಾರೆ. ಹೀಗೆ ವಿದೇಶಿ ಸಾಂಸ್ಥಿಕ ಹೂಡಿಕೆದಾರರಿಂದ ನಿರಂತರವಾಗಿ ಷೇರು ಮಾರಾಟ ಪ್ರಕ್ರಿಯೆ ನಡೆಯುತ್ತಿರುವ ಕಾರಣ ಇಂದು ಕೂಡ ಷೇರುಪೇಟೆ ಕುಸಿತ ದಾಖಲಿಸಿದೆ ಎನ್ನಲಾಗಿದೆ. 2026 ಜನವರಿ ತಿಂಗಳಲ್ಲಿ ಈವರೆಗೂ ವಿದೇಶಿ ಹೂಡಿಕೆದಾರರು ಸುಮಾರು 36,591 ಕೋಟಿ ರೂಪಾಯಿ ಮೌಲ್ಯದ ಷೇರು ಮಾರಾಟ ಮಾಡಿದ್ದಾರೆ ಎನ್ನಲಾಗಿದೆ.
ಹೀಗಿದ್ದಾಗ ನಮ್ಮ ದೇಶದ ಹೂಡಿಕೆದಾರರು ಎಂದರೆ ದೇಶೀಯ ಸಾಂಸ್ಥಿಕ ಹೂಡಿಕೆದಾರರು 50,720 ಕೋಟಿ ರೂಪಾಯಿ ಮೌಲ್ಯದ ಷೇರು ಖರೀದಿಸಿ ಮಾರುಕಟ್ಟೆಗೆ ಬಲ ತುಂಬುವ ಪ್ರಯತ್ನ ಮಾಡಿದ್ದಾರೆ. ಹೀಗೆ ಷೇರುಗಳ ಭಾರಿ ದೊಡ್ಡ ಮಟ್ಟದ ಮಾರಾಟ ಕುಸಿತಕ್ಕೆ ಕಾರಣವಾಗಿದೆ ಎನ್ನಲಾಗಿದ್ದು, ಮುಂದಿನ ಕೆಲವು ದಿನಗಳ ಕಾಲ ಪರಿಸ್ಥಿತಿ ಹೇಗೆ ಇರಲಿದೆ ಎಂಬ ಚರ್ಚೆ ಶುರುವಾಗಿದೆ. ಮುಂದಿನ ವಾರ ಕೇಂದ್ರ ಬಜೆಟ್ ಕೂಡ ಬರಲಿದ್ದು, ಷೇರು ಮಾರುಕಟ್ಟೆಯಲ್ಲಿ ಚೇತರಿಕೆಯ ನಿರೀಕ್ಷೆ ಮೂಡಿದೆ.
ಬೆಳ್ಳಿ & ಚಿನ್ನದ ಬೆಲೆ ಏರಿಕೆ
ಚಿನ್ನದ ಬೆಲೆ ಭಾರಿ ಏರಿಕೆ ಕಾಣುತ್ತಿದ್ದು, ಬೆಳ್ಳಿಯ ಬೆಲೆ ಕೂಡ ವಿಪರೀತ ಏರಿಕೆ ಆಗಿದೆ. ಇಂದು ಕೂಡ ಅದೇ ರೀತಿ ಚಿನ್ನದ ಬೆಲೆ ಹಾಗೂ ಬೆಳ್ಳಿಯ ಬೆಲೆ ಭಾರಿ ಏರಿಕೆ ಕಂಡಿದೆ. ಇರಾನ್ ಹಾಗೂ ಅಮೆರಿಕ ನಡುವಿನ ಕಿರಿಕ್ ಮಧ್ಯೆ ಯುದ್ಧ ಭೀತಿ ಹಿನ್ನೆಲೆ ಚಿನ್ನದ ಬೆಲೆ ನಡುಕ ಹುಟ್ಟಿಸುವ ಹಂತಕ್ಕೆ ತಲುಪುತ್ತಿದೆ ಈಗ. 24 ಕ್ಯಾರೆಟ್ ಶುದ್ಧ ಚಿನ್ನ ಬೆಲೆ ಪ್ರತಿ 10 ಗ್ರಾಂಗೆ 1,59,710 ರೂಪಾಯಿಗೆ ತಲುಪಿದೆ. 22 ಕ್ಯಾರೆಟ್ ಆಭರಣ ಚಿನ್ನ ಪ್ರತಿ 10 ಗ್ರಾಂಗೆ ಇದೀಗ 1,46,400 ರೂಪಾಯಿಗೆ ತಲುಪಿದೆ. ಬೆಳ್ಳಿಯ ಬೆಲೆ ಒಂದೇ ದಿನ 15,000 ಪ್ರತಿ ಕೆಜಿಗೆ ಏರಿಕೆಯಾಗಿ ಇದೀಗ 3,40,000 ರೂಪಾಯಿಗೆ ತಲುಪಿದೆ.












Click it and Unblock the Notifications