ಬೆಳ್ಳಿ ಬೆಲೆ ಹೆಚ್ಚಳ: ಎಡ - ಬಲ - ಮಧ್ಯ ಎಲ್ಲರ ಆದ್ಯತೆಯ ಕಾಳಜಿ ಆಗಬೇಕಿದೆ: ರಾಜಾರಾಂ ತಲ್ಲೂರು ಬರಹ
Silver Price: ಬೆಳ್ಳಿ ಬೆಲೆಯು ನಿರಂತರವಾಗಿ ಹೆಚ್ಚಳವಾಗುತ್ತಿದೆ. ಈ ನಡುವೆ ಬೆಳ್ಳಿ ಬೆಲೆಗೆ ಸಂಬಂಧಿಸಿದಂತೆ ಸುಳ್ಳು ಸುದ್ದಿಗಳ ಪ್ರಚಾರವೂ ಹೆಚ್ಚಾಗಿದೆ. ಬೆಳ್ಳಿ ಬೆಲೆ ಹೆಚ್ಚಳ: ಎಡ - ಬಲ - ಮಧ್ಯ ಎಲ್ಲರ ಆದ್ಯತೆಯ ಕಾಳಜಿ ಆಗಬೇಕಿದೆ. ಹಿರಿಯ ಪತ್ರಕರ್ತ ರಾಜಾರಾಂ ತಲ್ಲೂರು ಅವರ ಬರಹ ಇಲ್ಲಿದೆ.
ಆಡಳಿತ ಪಕ್ಷದ ಸಮರ್ಥಕರ ಕೆಲವೊಂದು ಸೋಷಿಯಲ್ ಮೀಡಿಯಾ ಪುಟಗಳಲ್ಲಿ ಎರಡು ದಿನಗಳಿಂದ ಗುಲ್ಲೇ ಗುಲ್ಲು! ನಮ್ಮ ನಾಯಕರು ತಂತ್ರಗಾರಿಕೆ ಮಾಡಿ, ಇಂಗ್ಲಂಡು ಇಲ್ಲಿ ಆಳುತ್ತಿದ್ದಾಗ ಕದ್ದುಕೊಂಡು ಹೋದ ದೇಶದ ಎಲ್ಲ ಬೆಳ್ಳಿಯನ್ನು, ಅಷ್ಟೇ ನಯವಾಗಿ ಅವರಿಗೆ ಗೊತ್ತೇ ಆಗದಂತೆ ವಾಪಸ್ ತಂದುಬಿಟ್ಟಿದ್ದಾರೆ. 6000 ಟನ್ ಬೆಳ್ಳಿ ಇಂಗ್ಲಂಡಿನಿಂದ ವಾಪಸ್ ಭಾರತದ ರಿಸರ್ವ್ ಬ್ಯಾಂಕ್ ಸೇರಿದೆ, ಇಂಗ್ಲಂಡಿನ ಬೆಳ್ಳಿ ಮಾರುಕಟ್ಟೆ ಕ್ರ್ಯಾಷ್ ಆಗಿದೆ ಎಂಬ "ಸುದ್ದಿ ಸಂಭ್ರಮ" ಅಲ್ಲೆಲ್ಲ ಹರಡಿದೆ.

ಸಾಮಾನ್ಯ ಜ್ಞಾನ ಏನೆಂದರೆ, ಯಾವುದೇ ಮಾರುಕಟ್ಟೆ ಕ್ರ್ಯಾಷ್ ಆದಾಗ (ಅರ್ಥಾತ್ ಕುಸಿದಾಗ), ಆ ಸರಕಿನ ದರಗಳು ಅತಿರೇಕವೆಂಬಷ್ಟು ಕುಸಿಯಬಹುದು. ಅಥವಾ ಕೆಲವು ನಿರ್ದಿಷ್ಟ ಸನ್ನಿವೇಶಗಳಲ್ಲಿ ಅತಿರೇಕ ಎಂಬಷ್ಟು ಏರಬಹುದು. ಕೆಳಗೆ ನಾನು ಕೊಟ್ಟಿರುವುದು ಕಳೆದ ಆರು ತಿಂಗಳ ಬ್ರಿಟಿಷ್ ಮಾರುಕಟ್ಟೆಯಲ್ಲಿನ ಬೆಳ್ಳಿ ಧಾರಣೆ. ಆಸಕ್ತರು ರಾಯಲ್ ಮಿಂಟ್ ವೆಬ್‌ಸೈಟಿನಲ್ಲಿ ಪರಿಶೀಲಿಸಬಹುದು.
ಈ ಫೇಕ್ ಸುದ್ದಿಯ ಮೂಲ, ಕೇವಲ ಹದಿನೈದು ದಿನಗಳ ಹಿಂದೆ ಹುಟ್ಟಿಕೊಂಡಿರುವ ಒಂದು AI ಅನೌನ್ಸರ್ ಹೊಂದಿರುವ ಬೇನಾಮಿ ಯುಟ್ಯೂಬ್ ಚಾನೆಲ್. ಅದರಲ್ಲಿರುವುದು ಇಂತಹ ಕೇವಲ ನಾಲ್ಕು ವೀಡಿಯೊಗಳು.ಅದರ ಮಾಲಕತ್ವದ ಬಗ್ಗೆಯೂ ಸ್ಪಷ್ಟ ಇಲ್ಲ. ಇಲ್ಲಿ ಭಾರತದ ಒಳಗೆ ಭಕ್ತರು ಮಾತ್ರ ಅದನ್ನು "ವೈರಲ್" ಮಾಡಿಕೊಂಡು "Orgastic" ಆಗಿದ್ದಾರೆ!
ಅರ್ಧ ಸತ್ಯಗಳನ್ನೆಲ್ಲ ಜೋಡಿಸಿ, ಅದನ್ನು ಮೂಗಿನ ನೇರಕ್ಕೆ ಸುದ್ದಿ ಮಾಡುವ, ಮೇಲುನೋಟಕ್ಕೆ ಫೇಕ್ ಎಂದು ಗೊತ್ತಾಗುವ, ಇಂತಹ ಚಾನೆಲ್‌ಗಳನ್ನೂ ಸುದ್ದಿ ಎಂದು ನಂಬುವವರು ಇರುವ ತನಕ, ದೇಶವನ್ನು ಯಾರು ಬೇಕಿದ್ದರೂ "ಪುಂಗಿ" ಊದಿ ಆಡಿಸುತ್ತಿರಬಹುದು. ಅದೇ ಆಗುತ್ತಿರುವುದು. "ಕಳೆದ ದೀಪಾವಳಿ ಆಸುಪಾಸಿನಲ್ಲಿ ಭಾರತದಲ್ಲಿ ಚಿನ್ನ-ಬೆಳ್ಳಿ ಬೇಡಿಕೆ ಹೆಚ್ಚಿತ್ತು" ಎಂಬ ಏಕೈಕ ಮಾರುಕಟ್ಟೆ ಮಾಹಿತಿ ಎಳೆ ಆಧರಿಸಿ ಕಟ್ಟಿದ ಕಥೆ ಇದು. ಅದನ್ನು ನನ್ನ ಕೈಯಾರೆ ಮತ್ತಿಷ್ಟು ವೈರಲ್ ಮಾಡುವುದು ಬೇಡ ಎಂಬ ಕಾರಣಕ್ಕೆ ಇಲ್ಲಿ ಲಿಂಕ್ ಹಾಕಿಲ್ಲ. How India Used 25% Raids to Steal 6,000 Tons Market Collapse ಎಂಬ ಶಿರೋನಾಮೆಯ ವೀಡಿಯೊ ಅದು.
ಈ ವೀಡಿಯೊದ ಸಾಚಾತನದ ಬಗ್ಗೆ AI BOT ಗಳಲ್ಲಿ ಕೇಳಿದರೆ, ಅವೂ ಸ್ಪಷ್ಟವಾಗಿ "ಸಂಶಯಾಸ್ಪದ" ಅನ್ನುತ್ತಿವೆ. ಯಾವುದೋ ಅಸ್ತಿತ್ವದಲ್ಲಿಲ್ಲದ ಕಂಪನಿಯೊಂದನ್ನು ಭಾರತದ ರಿಸರ್ವ್ ಬ್ಯಾಂಕಿನ ಹೆಸರಿನ ಜೊತೆ ಜೋಡಿಸಿ, ಜೇಮ್ಸ್‌ಬಾಂಡ್ ಶೈಲಿಯಲ್ಲಿ "ಸರ್ಜಿಕಲ್ ಸ್ಟ್ರೈಕ್" ಮಾಡಿರುವ ಬಗ್ಗೆ ಹೇಳುವ ಈ ವೀಡಿಯೊ, ಅಷ್ಟೆಲ್ಲಾ ಬೆಳ್ಳಿ ಭಾರತಕ್ಕೆ ಬಂದೂ, ಇಲ್ಲಿ ಯಾಕೆ ದರ ಆ ಪಾಟಿ ಏರುತ್ತಿದೆ ಎಂಬ ಬಗ್ಗೆ ವಿವರಿಸುವುದಿಲ್ಲ. ಭಕ್ತರಿಗೂ ಅದೆಲ್ಲ ಬೇಡ! ಸುಶಿಕ್ಷಿತ ಭಕ್ತರಿಂದ ದೇಶದ ಮಾನಸಿಕ ಆರೋಗ್ಯವನ್ನು ರಕ್ಷಿಸುವುದು ಎಡ-ಬಲ-ಮಧ್ಯ ಎಲ್ಲರ ಆದ್ಯತೆಯ ಕಾಳಜಿ ಆಗಬೇಕಿರುವುದು ಈವತ್ತಿನ ತುರ್ತು.












Click it and Unblock the Notifications