ಉದ್ಯಮ ಸ್ಥಾಪನೆಗೆ 6 ಗಂಟೆ ಸಾಕು: ಕರ್ನಾಟಕದ ಉದ್ಯಮಿಗಳನ್ನು ಆಹ್ವಾನಿಸಿದ ರೊವಾಂಡಾ ದೇಶ

ಬೆಳಗಾವಿ, ಸೆಪ್ಟೆಂಬರ್ 10: "ರೊವಾಂಡಾ ದೇಶದಲ್ಲಿ ಒಂದು‌ ಉದ್ಯಮ ಆರಂಭಿಸಲು ಕೇವಲ 6 ಗಂಟೆಗಳು ಸಾಕು. ಒನ್ ಸ್ಟಾಪ್ ಸೆಂಟರ್ ಮಾದರಿಯಲ್ಲಿ ಎರಡು ನೂರು ಬಗೆಯ ಸರಕಾರಿ ಅನುಮತಿಗಳನ್ನು ಉಚಿತವಾಗಿ ಸರಕಾರ ನೀಡಲಿದೆ" ಎಂದು ಕರ್ನಾಟಕದ ಉದ್ಯಮಿಗಳಿಗೆ ದೇಶದ ಹೈಕಮೀಷನರ್ ಜಾಕ್ವೆಲಿನ್ ಮುಕಂಜಿರಾ ಆಹ್ವಾನ ನೀಡಿದ್ದಾರೆ.

ಜಾಕ್ವೆಲಿನ್ ಮುಕಂಜಿರಾ ಕರ್ನಾಟಕದ ಬೆಳಗಾವಿ ಜಿಲ್ಲಾ ಪ್ರವಾಸದಲ್ಲಿದ್ದಾರೆ. ಶನಿವಾರ ಅವರು ಸುವರ್ಣ ವಿಧಾನಸೌಧಕ್ಕೆ ಭೇಟಿ ನೀಡಿ ವೀಕ್ಷಣೆ ಮಾಡಿದ್ದರು, ಕಾರ್ಯ ಕಲಾಪದ ಕುರಿತು ಮಾಹಿತಿ ಪಡೆದಿದ್ದರು. ನಗರದ ಖಾಸಗಿ ಹೋಟೆಲ್‌ನಲ್ಲಿ ಅವರು ಉದ್ಯಮಿಗಳು ಹಾಗೂ ಬಂಡವಾಳ ಹೂಡಿಕೆದಾರರ ಸಭೆಯನ್ನು ನಡೆಸಿದರು. ಲೋಕೋಪಯೋಗಿ ಮತ್ತು ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಸಹ ಪಾಲ್ಗೊಂಡಿದ್ದರು.

Rwanda High Commissioner Jacqueline Invited Karnataka Investors For Country

ಸಭೆಯಲ್ಲಿ ಮಾತನಾಡಿದ ಜಾಕ್ವೆಲಿನ್ ಮುಕಂಜಿರಾ, "ಆಫ್ರಿಕಾದಲ್ಲಿ ಬಂಡವಾಳ ಹೂಡಿಕೆ ಮಾಡಲು ಬಯಸುವ ಉದ್ಯಮಿಗಳ ಮೊದಲ‌ ಆದ್ಯತೆ ರೊವಾಂಡಾ ದೇಶ ಆಗಿರಲಿ. ಇಂಟರ್ನೆಟ್ ಸೌಲಭ್ಯ, ವಿದ್ಯುತ್ ಸಂಪರ್ಕ, ಶುದ್ಧ ಕುಡಿಯುವ ನೀರು ಸೇರಿದಂತೆ ಮೂಲಸೌಕರ್ಯಗಳು ಲಭ್ಯವಿವೆ. ದೇಶದ ಸಂವಿಧಾನವು ಮಹಿಳಾ ಸಬಲೀಕರಣ ಹಾಗೂ ಲಿಂಗ ಸಮಾನತೆಗೆ ಆದ್ಯತೆಯನ್ನು ನೀಡಿರುವುದರಿಂದ ಶೇ 50ಕ್ಕೂ ಅಧಿಕ ಮಹಿಳೆಯರು ಸಂಸದರಾಗಿದ್ದಾರೆ. ಮೂಲಸೌಕರ್ಯ, ರಿಯಲ್ ಎಸ್ಟೇಟ್, ಕೃಷಿ, ಇಂಧನ, ಪ್ರವಾಸೋದ್ಯಮ, ಆರೋಗ್ಯ, ಗಣಿಗಾರಿಕೆ, ಶಿಕ್ಷಣ ಮತ್ತಿತರ ಕ್ಷೇತ್ರಗಳಲ್ಲಿ ಬಂಡವಾಳ ಹೂಡಿಕೆಗೆ ವಿಫುಲ ಅವಕಾಶಗಳಿವೆ" ಎಂದರು.

"ರೊವಾಂಡಾ ಇ-ಕಾಮರ್ಸ್, ಇ-ಸರ್ವೀಸ್ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಕ್ಷಿಪ್ರ ಪ್ರಗತಿ ಸಾಧಿಸುತ್ತಿದೆ. ದೇಶದಲ್ಲಿ ಭ್ರಷ್ಟಾಚಾರಕ್ಕೆ ಯಾವುದೇ ಅವಕಾಶವಿಲ್ಲ. ವ್ಯಾಪಾರ-ವಹಿವಾಟು ನಡೆಸಲು ಅನುಕೂಲವಾಗುವಂತೆ ವ್ಯಾಪಾರ ಸ್ನೇಹಿ ವಾತಾವರಣವನ್ನು ದೇಶ ಹೊಂದಿದೆ. ಬಂಡವಾಳ ಹೂಡಿಕೆಗೆ ಅನುಕೂಲವಾಗುವಂತಹ ತೆರಿಗೆ ಪದ್ಧತಿ ಜಾರಿಯಲ್ಲಿದೆ. ಪಾರದರ್ಶಕ ಹಾಗೂ ಉದ್ಯೋಗ ಸ್ನೇಹಿ ವಾತಾವರಣದ ಜತೆಗೆ ಆಫ್ರಿಕಾದಲ್ಲಿ ಅತ್ಯಂತ ಸುರಕ್ಷಿತ ದೇಶವಾಗಿದೆ. ಆಫ್ರಿಕಾದಲ್ಲಿಯೇ ಆರ್ಥಿಕತೆಯ ಬೆಳವಣಿಗೆಯಲ್ಲಿ‌ ಕಳೆದ ಹನ್ನೊಂದು ವರ್ಷಗಳಿಂದ ರೊವಾಂಡಾ ಮುಂಚೂಣಿಯಲ್ಲಿದೆ" ಎಂದು ಉದ್ಯಮಿಗಳಿಗೆ ವಿವರಣೆ ನೀಡಿದರು.

ಭಾರತದ ಜೊತೆ ಉತ್ತಮ ಸಂಬಂಧ: ಜಾಕ್ವೆಲಿನ್ ಮುಕಂಜಿರಾ, "ಭಾರತದಿಂದ ರೊವಾಂಡಾ ಸ್ಟೀಲ್, ಔಷಧ ಸಾಮಗ್ರಿ ಮತ್ತಿತರ ವಸ್ತುಗಳನ್ನು ಆಮದು ಮಾಡಿಕೊಳ್ಳುತ್ತಿದೆ. ಗುಜರಾತ್, ಮಹಾರಾಷ್ಟ್ರ ರಾಜ್ಯಗಳಿಗೆ ಕಾಫಿ ಮತ್ತಿತರ ವಸ್ತುಗಳನ್ನು ರಫ್ತು ಮಾಡುತ್ತಿದೆ. ಭಾರತ-ರೊವಾಂಡಾ ನಡುವಿನ ದ್ವಿಪಕ್ಷೀಯ ಸಂಬಂಧ ಇದೇ ರೀತಿ ಸದೃಢವಾಗಿ ಮುಂದುವರಿಯಬೇಕಿದೆ. ಎರಡೂ ದೇಶಗಳ ಸಂಬಂಧವು ಮಹತ್ವದ್ದಾಗಿದೆ. ವ್ಯಾಪಾರ, ಕೃಷಿ, ಶಿಕ್ಷಣ, ಭದ್ರತೆ, ಇಂಧನ, ಸಂಶೋಧನಾ ಕ್ಷೇತ್ರಗಳಲ್ಲಿ ಬಂಡವಾಳ ಹೂಡಿಕೆ ಮಾಡುವ ಭಾರತ ದೇಶದ ಉದ್ದಿಮೆದಾರರಿಗೆ ಮುಕ್ತ‌ ಅವಕಾಶ ನೀಡುತ್ತಿದೆ" ಎಂದರು.

"ಕಾಮನ್ ವೆಲ್ತ್ ಸದಸ್ಯ ರಾಷ್ಟ್ರಗಳ ಜನರಿಗೆ ವೀಸಾ ಸರಳವಾಗಿ ನೀಡುತ್ತಿದೆ. ವೀಸಾ ಆನ್ ಅರೈವಲ್ ವ್ಯವಸ್ಥೆ ಕಲ್ಪಿಸಿದೆ. ಪೂರ್ವ ಆಫ್ರಿಕಾ ದೇಶಗಳ ಪೈಕಿ ರೊವಾಂಡಾ ದೇಶವು ವ್ಯಾಪಾರ-ವಹಿವಾಟು ಹಾಗೂ ಬಂಡವಾಳ ಹೂಡಿಕೆಗೆ ಅತ್ಯಂತ ಸೂಕ್ತವಾಗಿದೆ. ಆದ್ದರಿಂದ ಬೆಳಗಾವಿ ಜಿಲ್ಲೆಯ ಕೈಗಾರಿಕೋದ್ಯಮಿಗಳು ಇದರ ಪ್ರಯೋಜನ ಪಡೆದುಕೊಂಡು ಭಾರತ-ರೊವಾಂಡಾ ನಡುವಿನ ವ್ಯಾಪಾರ ಸಂಬಂಧವನ್ನು ಮತ್ತಷ್ಟು ಬಲಪಡಿಸಬೇಕು" ಎಂದು ಆಹ್ವಾನವನ್ನು ನೀಡಿದರು. ರೊವಾಂಡಾದಲ್ಲಿ ಉದ್ದಿಮೆ ಸ್ಥಾಪಿಸಲು ಮುಂದಾಗಿರುವ ಸಚಿವ ಸತೀಶ್ ಜಾರಕಿಹೊಳಿ ಅವರಿಗೆ ಕೃತಜ್ಞತೆಯನ್ನು ಸಲ್ಲಿಸಿದರು.

ಕ್ರೀಡಾ ಶಾಲೆ ಸ್ಥಾಪನೆ: ಸಭೆಯಲ್ಲಿ ಮಾತನಾಡಿದ ಸಚಿವ ಸತೀಶ್ ಜಾರಕಿಹೊಳಿ, ರೊವಾಂಡಾ ದೇಶದಲ್ಲಿ ಇಂಡಿಯನ್ ಕ್ರೀಡಾ ಶಾಲೆಯನ್ನು ಆರಂಭಿಸಲು ತಾವು ಉದ್ಧೇಶಿಸಿದ್ದು, ಇದಕ್ಕಾಗಿ ಅಗತ್ಯವಿರುವ ಜಾಗವನ್ನು ಕೂಡ ಗುರುತಿಸಲಾಗಿದೆ. ದೇಶದಲ್ಲಿ ಸಾಕಷ್ಟು ಉದ್ದಿಮೆಗಳ ಸ್ಥಾಪನೆಗೆ ಅವಕಾಶಗಳಿವೆ. ಬೆಳಗಾವಿ ಜಿಲ್ಲೆಯ ಉದ್ಯಮಿದಾರರು ಇದರ ಬಗ್ಗೆ ಆಸಕ್ತಿ ತೋರಿಸಬೇಕು" ಎಂದು ಸಲಹೆಯನ್ನು ನೀಡಿದರು.

"ಆಫ್ರಿಕಾ ಇತ್ತೀಚೆಗೆ ಕೆಲವು ಕ್ಷೇತ್ರಗಳಲ್ಲಿ ಸಾಕಷ್ಟು ಅಭಿವೃದ್ಧಿ ಸಾಧಿಸಿದೆ. ಸ್ವಚ್ಛತೆ ವಿಷಯದಲ್ಲಿಯೂ ಹೆಚ್ಚಿನ ಪ್ರಗತಿ ಸಾಧಿಸಿದ್ದು, ಶಿಕ್ಷಣ ಕ್ಷೇತ್ರದಲ್ಲೂ ಸಾಧನೆಯತ್ತ ದಾಪುಗಾಲು ಹಾಕುತ್ತಿದೆ. ರೊವಾಂಡಾ ಆರೋಗ್ಯಕರ ವಾತಾವರಣ ಹೊಂದಿದೆ. ಸಂಚಾರ ನಿಯಮಗಳನ್ನು ಜನರು ಕಟ್ಟುನಿಟ್ಟಾಗಿ ಪಾಲಿಸುತ್ತಾರೆ. ಈ ಭಾಗದ ಉದ್ಯಮಿಗಳು ಸಿಂಗಾಪುರ ಕಡೆ ಪ್ರವಾಸ ಹೋದಾಗ ರೊವಾಂಡಾ ದೇಶಕ್ಕೆ ತಪ್ಪದೇ ಭೇಟಿ ನೀಡಬೇಕು" ಎಂದರು.

ಸಭೆಯಲ್ಲಿ ಬೆಳಗಾವಿ ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ಸತ್ಯನಾರಾಯಣ ಭಟ್, ಬೆಳಗಾವಿ ಜಿಲ್ಲೆಯ ಕೈಗಾರಿಕೆ, ಶಿಕ್ಷಣ, ಆರೋಗ್ಯ, ಆಟೋಮೊಬೈಲ್, ಸಕ್ಕರೆ ಉದ್ಯಮ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿನ ಸಾಧನೆಯ ಕುರಿತು ವಿವರಣೆ ನೀಡಿದರು. ಇಲ್ಲಿನ ಕೈಗಾರಿಕೋದ್ಯಮಿಗಳು ರೊವಾಂಡಾದಲ್ಲಿ ಬಂಡವಾಳ ಹೂಡಿಕೆ ಹಾಗೂ ವಿವಿಧ ಬಗೆಯ ಉದ್ಯಮಗಳನ್ನು ಆರಂಭಿಸಲು ಉತ್ಸುಕರಾಗಿದ್ದಾರೆ ಎಂದು ತಿಳಿಸಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+