ಭಾರತದಲ್ಲಿ ಪೆಟ್ರೋಲ್-ಡೀಸೆಲ್ ದರದಲ್ಲಿ ಭಾರಿ ಇಳಿಕೆ; ಕಾರಣ ತಿಳಿಯಿರಿ
ನವದೆಹಲಿ, ಏಪ್ರಿಲ್ 13: ಉಕ್ರೇನ್ ಜೊತೆಗಿನ ಯುದ್ಧ ಮತ್ತು ಯುರೋಪ್ ರಾಷ್ಟ್ರಗಳ ನಿರ್ಬಂಧದ ನಡುವೆ ಭಾರತಕ್ಕೆ ರಷ್ಯಾ ಬಂಪರ್ ಕೊಡುಗೆಯನ್ನೇ ನೀಡಿದೆ. ಭಾರತಕ್ಕೆ ಭಾರೀ ರಿಯಾಯತಿಯಲ್ಲಿ ಕಚ್ಚಾತೈಲವನ್ನು ನೀಡುವುದಕ್ಕೆ ರಷ್ಯಾ ಸಮ್ಮತಿಸಿದೆ.
ಜಾಗತಿಕ ಮಾರುಕಟ್ಟೆಯಲ್ಲಿ ಒಂದು ಬ್ಯಾರೆಲ್ ಕಚ್ಚಾತೈಲದ ಬೆಲೆ 101.06 ಡಾಲರ್ ಇದೆ. ಈ ಮೊದಲು ಭಾರತವು ಒಂದು ಬ್ಯಾರೆಲ್ ಕಚ್ಚಾತೈಲಕ್ಕೆ 103.48 ಡಾಲರ್ ಹಣವನ್ನು ಪಾವತಿ ಮಾಡುತ್ತಿದ್ದು, ಇದೀಗ ಆ ಬೆಲೆಯು 63.40 ಡಾಲರ್ ಗೆ ಇಳಿಕೆಯಾಗಿದೆ. ಅಂದರೆ ಭಾರತಕ್ಕೆ ರಷ್ಯಾದಿಂದ ಒಂದು ಬ್ಯಾರೆಲ್ ಗೆ 37.66 ಡಾಲರ್ ರಷ್ಟು ರಿಯಾಯತಿ ನೀಡಲಾಗಿದೆ.
ಉಕ್ರೇನ್ ಮತ್ತು ರಷ್ಯಾ ನಡುವಿನ ಯುದ್ಧದ ಹಿನ್ನೆಲೆ ಯುನೈಟೆಡ್ ಸ್ಟೇಟ್ಸ್, ಯುಕೆ ಮತ್ತು ಯುರೋಪ್ ಖಂಡದ ಹಲವು ರಾಷ್ಟ್ರಗಳು ರಷ್ಯಾದ ಕಚ್ಚಾತೈಲ ಖರೀದಿಗೆ ನಿರ್ಬಂಧ ಹೇರಿವೆ. ಜಗತ್ತಿನ ಅತಿಹೆಚ್ಚು ಕಚ್ಚಾತೈಲ ಮಾರಾಟ ಮಾಡುವ ರಷ್ಯಾದ ಮೇಲಿನ ಈ ನಿರ್ಬಂಧದಿಂದಾಗಿ ರಷ್ಯಾ ಭಾರತದತ್ತ ಮುಖ ಮಾಡಿದೆ. ಭಾರತಕ್ಕೆ ಭಾರಿ ರಿಯಾಯತಿ ದರದಲ್ಲಿ ಕಚ್ಚಾತೈಲವನ್ನು ನೀಡುವುದಕ್ಕೆ ರಷ್ಯಾ ಮುಂದಾಗಿದೆ. ಈ ಬೆಳವಣಿಗೆಯಿಂದಾಗಿ ದೇಶದಲ್ಲಿ ಪೆಟ್ರೋಲ್-ಡೀಸೆಲ್ ದರದಲ್ಲೂ ಭಾರೀ ಕುಸಿತ ಕಂಡು ಬರಬಹುದು ಎಂದು ಹೇಳಲಾಗುತ್ತಿದೆ.

ಭಾರತದಲ್ಲಿ ಪೆಟ್ರೋಲ್-ಡೀಸೆ ಬೆಲೆ ಇಳಿಕೆ
- ಭಾರತದಲ್ಲಿ ಕಳೆದ ತಿಂಗಳು ಒಂದು ಬ್ಯಾರೆಲ್ ಕಚ್ಚಾತೈಲ ಖರೀದಿಗೆ 129 ಡಾಲರ್ ಹಣ ಪಾವತಿ ಮಾಡಬೇಕಾಗಿತ್ತು. ಈ ಹಿನ್ನೆಲೆ ಪ್ರತಿನಿತ್ಯ ಇಂಧನ ಕಂಪನಿಗಳು ಪೆಟ್ರೋಲ್-ಡೀಸೆಲ್ ದರದಲ್ಲಿ ಏರಿಕೆ ಮಾಡುತ್ತಿದ್ದವು.
- ದೇಶದಲ್ಲಿ ಕಳೆದ ಮೂರು ವಾರದಲ್ಲೇ ಪೆಟ್ರೋಲ್ ದರದಲ್ಲಿ 10.83 ರೂಪಾಯಿ ಏರಿಕೆಯಾಗಿದ್ದರೆ, ಡೀಸೆಲ್ ದರದಲ್ಲಿ 10.43 ರೂಪಾಯಿ ಏರಿಕೆ ಆಗಿತ್ತು.
- ಏಪ್ರಿಲ್ 12ರಂದು ಕೇರಳದ ತಿರುವನಂತಪುರಂನಲ್ಲಿ ಪೆಟ್ರೋಲ್ ದರ 117.19 ರೂಪಾಯಿ ಹಾಗೂ ಡೀಸೆಲ್ ದರ 103.95 ರೂಪಾಯಿ ಆಗಿದ್ದು, ಇದು ದೇಶದಲ್ಲಿ ಹೊಸ ದಾಖಲೆ ಆಗಿತ್ತು.
- ಮೇ ತಿಂಗಳ ಹೊತ್ತಿಗೆ ರಷ್ಯಾ ನೀಡುವ ರಿಯಾಯತಿ ದರದ ಕಚ್ಚಾತೈಲವು ಭಾರತಕ್ಕೆ ತಲುಪಲಿದೆ.
- ರಷ್ಯಾದಿಂದ ರಿಯಾಯತಿ ದರದಲ್ಲಿ ಕಚ್ಚಾತೈಲ ಖರೀದಿಯಿಂದಾಗಿ ದೇಶದಲ್ಲಿ ಪೆಟ್ರೋಲ್-ಡೀಸೆಲ್ ದರದಲ್ಲಿ ಭಾರಿ ಇಳಿಕೆಯಾಗುವ ಸಾಧ್ಯತೆಯಿದೆ.
- ಕಳೆದ ವರ್ಷ ಕಚ್ಚಾತೈಲ ಖರೀದಿಗಾಗಿಯೇ ಭಾರತವು ಬರೋಬ್ಬರಿ 10 ಬಿಲಿಯನ್ ಡಾಲರ್ ಹಣವನ್ನು ಖರ್ಚು ಮಾಡಿತ್ತು.

ಜಾಗತಿಕ ಮಟ್ಟದಲ್ಲಿ ಕಚ್ಚಾತೈಲ ಬೆಲೆ ಇಳಿಕೆ ಹೇಗೆ?
ಕಳೆದ ತಿಂಗಳ ವೇಳೆಯಲ್ಲಿ ಒಂದು ಬ್ಯಾರೆಲ್ ಕಚ್ಚಾತೈಲದ ಬೆಲೆಯು ಸುಮಾರು 140 ಡಾಲರ್ ಸಮೀಪಕ್ಕೆ ತಲುಪಿತ್ತು. ಈ ಹಿನ್ನೆಲೆ ಕಚ್ಚಾತೈಲ ಆಮದನ್ನು ನಿರ್ಬಂಧಿಸಿ ತನ್ನಲ್ಲಿರುವ ಕಚ್ಚಾತೈಲವನ್ನೇ ಪುನರ್ ಬಳಕೆ ಮಾಡಿಕೊಳ್ಳುವುದಕ್ಕೆ ಯುಎಸ್ ನಿರ್ಧರಿಸಿತ್ತು. ಕಚ್ಚಾತೈಲದ ಬೆಲೆಯು ಒಂದು ಬ್ಯಾರೆಲ್ ಗೆ 100 ಡಾಲರ್ ಆಗುವವರೆಗೂ ಮೀಸಲಾಗಿರುವ ಕಚ್ಚಾತೈಲವನ್ನೇ ಬಳಸುವುದಕ್ಕೆ ಸೂಚನೆ ನೀಡಲಾಗಿತ್ತು.
ಮೇ ತಿಂಗಳ ಹೊತ್ತಿಗೆ ಯುಎಸ್ ತನ್ನಲ್ಲಿರುವ 18 ಬಿಲಿಯನ್ ಬ್ಯಾರೆಲ್ ಕಚ್ಚಾತೈಲವನ್ನು ಬಿಡುಗಡೆಗೊಳಿಸಿತು. ಅದೇ ರೀತಿ ಅಂತಾರಾಷ್ಟ್ರೀಯ ತೈಲ ಸಂಸ್ಥೆಯ ಇತರೆ ಸದಸ್ಯ ರಾಷ್ಟ್ರಗಳು 6 ಕೋಟಿ ಬ್ಯಾರೆಲ್ ಕಚ್ಚಾತೈಲವನ್ನು ಬಿಡುಗಡೆಗೊಳಿಸಿತು. ಚೀನಾದಲ್ಲಿ ಲಾಕ್ ಡೌನ್ ಆಗಿರುವುದು ಕೂಡಾ ಬೆಲೆ ಇಳಿಕೆಗೆ ಒಂದು ಕಾರಣವಾಗಿದೆ.

ದೇಶದಲ್ಲಿ ಪೆಟ್ರೋಲ್-ಡೀಸೆಲ್ ದರ ಸ್ಥಿರ
ಕಳೆದ 22 ದಿನಗಳಲ್ಲಿ 14 ಬಾರಿ ಇಂಧನ ದರವನ್ನು ಏರಿಕೆ ಕಂಡಿದ್ದು, ಏಪ್ರಿಲ್ 13ರ ಬುಧವಾರ ಪೆಟ್ರೋಲ್, ಡೀಸೆಲ್ ದರದಲ್ಲಿ ಯಾವುದೇ ಏರಿಳಿತ ಕಂಡುಬಂದಿಲ್ಲ. ಕಳೆದ ಎಂಟು ದಿನಗಳಿಂದ ಇಂಧನ ದರದಲ್ಲಿ ಸ್ಥಿರವಾಗಿದೆ.

ಪ್ರತಿನಿತ್ಯ ಬೆಳಗ್ಗೆ 6 ಗಂಟೆಗೆ ಪೆಟ್ರೋಲ್-ಡೀಸೆಲ್ ದರ ಪರಿಷ್ಕರಣೆ
ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆಯಲ್ಲಿ ಏರಿಳಿತ ಮತ್ತು ಡಾಲರ್-ರುಪಾಯಿ ವಿನಿಮಯ ದರದ ಆಧಾರದ ಮೇಲೆ ಪೆಟ್ರೋಲ್-ಡೀಸೆಲ್ ಬೆಲೆಯು ಏರಿಳಿತ ಕಾಣುತ್ತದೆ. ಸರ್ಕಾರಿ ತೈಲ ಕಂಪನಿಗಳು, ಬೆಲೆಗಳನ್ನು ಪರಿಶೀಲಿಸಿದ ನಂತರ, ಪ್ರತಿದಿನ ಪೆಟ್ರೋಲ್ ಮತ್ತು ಡೀಸೆಲ್ ದರವನ್ನು ನಿಗದಿಪಡಿಸುತ್ತವೆ. ಇಂಡಿಯನ್ ಆಯಿಲ್, ಭಾರತ್ ಪೆಟ್ರೋಲಿಯಂ ಮತ್ತು ಹಿಂದೂಸ್ತಾನ್ ಪೆಟ್ರೋಲಿಯಂ ಪರಿಷ್ಕರಿಸುತ್ತವೆ ಮತ್ತು ಪ್ರತಿದಿನ ಬೆಳಗ್ಗೆ 6 ಗಂಟೆಯಿಂದ ಪೆಟ್ರೋಲ್ ದರ ಮತ್ತು ಡೀಸೆಲ್ ದರವನ್ನು ನೀಡುತ್ತವೆ.

ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾತೈಲದ ಬೆಲೆ ಹೇಗಿದೆ?
ಇದೀಗ ಅಂತಾರಾಷ್ಟ್ರೀಯ ತೈಲ ಮಾರುಕಟ್ಟೆಯಲ್ಲಿ ಕಚ್ಚಾತೈಲದ ಬೆಲೆ ಮತ್ತೆ ಏರಿಕೆ ಕಾಣುತ್ತಿದೆ. ದೇಶದಲ್ಲಿ ಕಳೆದೊಂದು ವಾರದಲ್ಲಿ ಪೆಟ್ರೋಲ್- ಡೀಸೆಲ್ ದರ ಇಳಿಕೆಯಾಗಿದೆ. ಅದೇ ರೀತಿ ಇಂಧನ ದರ ಕಡಿಮೆಯಾದರೆ ವಾಹನ ಸವಾರರಿಗೆ ಮತ್ತಷ್ಟು ಭಾರ ಕಡಿಮೆಯಾಗಲಿದೆ. ರಷ್ಯಾ- ಉಕ್ರೇನ್ ಯುದ್ಧದಿಂದಾಗಿ ಡಬ್ಲ್ಯೂಟಿಐ ಕಚ್ಚಾತೈಲದ ಬೆಲೆ ಪ್ರತಿ ಬ್ಯಾರಲ್ಗೆ 100.30 ಡಾಲರ್ ಆಗಿದ್ದು, ಇಂದು ಜಾಗತಿಕ ಬ್ರೆಂಟ್ ಕಚ್ಚಾ ತೈಲ ಬೆಲೆಯು ಪ್ರತಿ ಬ್ಯಾರೆಲ್ಗೆ 104.50 ಯುಎಸ್ ಡಾಲರ್ನಂತೆ ವ್ಯವಹಾರ ನಡೆಸುತ್ತಿದೆ.












Click it and Unblock the Notifications