ಕಳೆದ 8 ವರ್ಷದಲ್ಲಿ ರೂಪಾಯಿ ಮೌಲ್ಯ ಶೇ. 25 ಕುಸಿತ: ಕೇಂದ್ರ ಮಾಹಿತಿ
ನವದೆಹಲಿ, ಜುಲೈ 19: ರೂಪಾಯಿ ಮೌಲ್ಯ ಕುಸಿಯುತ್ತಿರುವುದು ಇತ್ತೀಚೆಗೆ ಹೆಚ್ಚುತ್ತಿದೆ. ಕೇಂದ್ರ ಸರಕಾರವೇ ನೀಡಿರುವ ಮಾಹಿತಿ ಪ್ರಕಾರ ಕಳೆದ 8 ವರ್ಷದಲ್ಲಿ ರೂಪಾಯಿ ಮೌಲ್ಯ ಶೇ. 25ರಷ್ಟು ಕುಸಿದಿದೆಯಂತೆ.
2014ರಿಂದೀಚೆ ರೂಪಾಯಿ ಮೌಲ್ಯ 16.08 ರೂ ಇಳಿದಿದೆ. 2014ರಲ್ಲಿ ವಿನಿಮಯ ಮಾರುಕಟ್ಟೆಯಲ್ಲಿ ಒಂದು ಡಾಲರ್‌ಗೆ 63.33 ರೂ ದರ ಇತ್ತು. ಈಗ 2022 ಜುಲೈ 11ರಲ್ಲಿ ಅದು 79.41 ರೂ ಆಗಿದೆ. ಈ ಮಾಹಿತಿಯನ್ನು ಹಣಕಾಸು ಸಚಿವಾಲಯ ಸೋಮವಾರ ಮುಂಗಾರು ಅಧಿವೇಶನದ ಮೊದಲ ದಿನದಂದು ಸಂಸತ್ ಮುಂದಿಟ್ಟಿದೆ.
ಲೋಕಸಭಾ ಸದಸ್ಯರಾದ ದೀಪಕ್ ಬೈಜ್ ಮತ್ತು ವಿಜಯ್ ವಸಂತ್ ಅವರು ಭಾರತದ ರೂಪಾಯಿ ಕರೆನ್ಸಿಯ ಮೌಲ್ಯ ಕುಸಿತದ ಬಗ್ಗೆ ಪ್ರಶ್ನೆ ಕೇಳಿದ್ದರು. ಇದಕ್ಕೆ ಉತ್ತರವಾಗಿ ಹಣಕಾಸು ಸಚಿವಾಲಯವು 2014ರಿಂದೀಚೆಗೆ ಪ್ರತಿ ವರ್ಷಾಂತ್ಯದಲ್ಲಿ ರೂಪಾಯಿ ಮೌಲ್ಯ ಎಷ್ಟಿತ್ತೆಂಬ ಮಾಹಿತಿಯನ್ನು ನೀಡಿದೆ.
ಅದರ ಪ್ರಕಾರ 2014 ಡಿಸೆಂಬರ್ 31ರಂದು ಡಾಲರ್ ಎದುರು ರೂಪಾಯಿ ಮೌಲ್ಯ 63.33 ಇತ್ತು. 2018ರಲ್ಲಿ ಅದು 69.79 ಕ್ಕೆ ಏರಿದೆ. 2019ರಲ್ಲಿ 70ರ ಗಡಿ ದಾಟಿದೆ. ಈಗ ಅದು 80ರ ಗಡಿ ಮುಟ್ಟಿದೆ.

ಜಾಗತಿಕ ಸಮಸ್ಯೆಗಳು ಕಾರಣ
ರೂಪಾಯಿ ಮೌಲ್ಯ ಕುಸಿಯಲು ಜಾಗತಿಕ ಅಂಶಗಳು ಕಾರಣ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.
ರಷ್ಯಾ ಉಕ್ರೇನ್ ಯುದ್ಧ ಸಂಘರ್ಷ, ಕಚ್ಛಾ ತೈಲ ಬೆಲೆ ಏರಿಕೆ, ಜಾಗತಿಕ ಆರ್ಥಿಕ ಹಿಂಜರಿತ ಇತ್ಯಾದಿ ಕಾರಣಗಳಿಂದಾಗಿ ಅಮೆರಿಕದ ಡಾಲರ್ ಎದುರು ರೂಪಾಯಿ ಮೌಲ್ಯ ಕುಸಿದಿದೆ. ಹಾಗೆಯೇ, ಭಾರತದ ಷೇರುಮಾರುಕಟ್ಟೆಯಲ್ಲಿ ವಿದೇಶಿ ಹೂಡಿಕೆದಾರರು 14 ಬಿಲಿಯನ್ ಡಾಲರ್ ಬಂಡವಾಳವನ್ನು ಹಿಂತೆಗೆದುಕೊಂಡಿರುವುದೂ ರೂಪಾಯಿ ಮೌಲ್ಯ ಕುಸಿತಕ್ಕೆ ಮತ್ತೊಂದು ಕಾರಣವಾಗಿದೆ ಎಂದು ನಿರ್ಮಲಾ ಸೀತಾಮನ್ ಅಭಿಪ್ರಾಯಪಟ್ಟಿದ್ದಾರೆ.

ಬೇರೆ ಕರೆನ್ಸಿಗಳ ಎದುರು ಚೇತರಿಕೆ
ಯುಎಸ್ ಡಾಲರ್ ಎದುರು ರೂಪಾಯಿ ಮೌಲ್ಯ ಕಳೆದುಕೊಂಡಿರುವುದನ್ನು ಹಣಕಾಸು ಸಚಿವರು ಒಪ್ಪಿಕೊಂಡರಾದರೂ, ಬೇರೆ ಕರೆನ್ಸಿಗಳಿಗೆ ಹೋಲಿಸಿದರೆ ರೂಪಾಯಿಗೆ ಅಂಥದ್ದೇನು ಹಿನ್ನಡೆಯಾಗಿಲ್ಲ ಎಂದು ವಾದಿಸಿದ್ದಾರೆ.
"ಭಾರತದ ರೂಪಾಯಿಯೊಂದೇ ಮೌಲ್ಯ ಕಳೆದುಕೊಂಡಿಲ್ಲ. ಬ್ರಿಟಿಷನ್ ಪೌಂಡ್, ಜಪಾನೀ ಯೆನ್ ಮತ್ತು ಯೂರೋ ಕರೆನ್ಸಿಗಳು ಯುಎಸ್ ಡಾಲರ್ ಎದುರು ರೂಪಾಯಿಗಿಂತಲೂ ಹೆಚ್ಚು ಕುಸಿತ ಕಂಡಿವೆ. ಈ ಕರೆನ್ಸಿಗಳ ಎದುರು ರೂಪಾಯಿ ಬಲ ಹೆಚ್ಚಿದೆ" ಎಂದು ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.
ಡಾಲರ್‌ನ ಒಟ್ಟಾರೆ ಕರೆನ್ಸಿ ಮೌಲ್ಯವನ್ನು ಲೆಕ್ಕ ಹಾಕುವ ಡಾಲರ್ ಸೂಚ್ಯಂಕದ ದರ 2022ರಲ್ಲಿ ಶೇ. 13ರಷ್ಟು ಹೆಚ್ಚಿದೆ. ಯೆನ್, ಪೌಂಡ್, ಯೂರೋ, ಸ್ವಿಸ್ ಫ್ರಾಂಕ್, ಕೆನಡಿಯನ್ ಡಾಲರ್, ಸ್ವೀಡಿಶ್ ಕ್ರೋನಾ ಈ ಆರು ಕರೆನ್ಸಿಗಳ ಎದುರು ಡಾಲರ್‌ನ ಮೌಲ್ಯದಲ್ಲಿ ಎಷ್ಟು ವ್ಯತ್ಯಾಸವಾಗಿದೆ ಎಂಬ ಲೆಕ್ಕಾಚಾರವೇ ಈ ಡಾಲರ್ ಇಂಡೆಕ್ಸ್.
ಡಾಲರ್ ಇಂಡೆಕ್ಸ್‌ನಲ್ಲಿರುವ ಆರು ಕರೆನ್ಸಿಗಳ ಎದುರು ಸರಾಸರಿಯಾಗಿ ಯುಎಸ್ ಡಾಲರ್ ಶೇ. 13ರಷ್ಟು ಮೌಲ್ಯ ಹೆಚ್ಚಿಸಿಕೊಂಡಿದೆ. ಆದರೆ, ಈ ವೇಳೆ ಭಾರತದ ರೂಪಾಯಿ ಮೌಲ್ಯ ಕುಸಿರುವುದು ಶೇ. 7 ಮಾತ್ರ. ಹೀಗಾಗಿ, ಡಾಲರ್ ಇಂಡೆಕ್ಸ್‌ನಲ್ಲಿರುವ ಆರು ಕರೆನ್ಸಿಗಳ ಎದುರು ರೂಪಾಯಿ ಮೌಲ್ಯ ಹೆಚ್ಚಿದೆ ಎಂದು ತಜ್ಞರು ಹೇಳುತ್ತಾರೆ.

ರೂಪಾಯಿ ದುರ್ಬಲವಾದರೂ ಒಳ್ಳೆಯದೇ
ಡಾಲರ್ ಎದುರು ರೂಪಾಯಿ ಮೌಲ್ಯ ಕಡಿಮೆಯಾಗಿರುವುದಕ್ಕೆ ಅಷ್ಟೇನೂ ಕಳವಳಪಡುವ ಅಗತ್ಯ ಇಲ್ಲ ಎಂದು ಕೇಂದ್ರ ಸಚಿವೆ ವಾದಿಸುತ್ತಾರೆ.
"ಕರೆನ್ಸಿ ಮೌಲ್ಯ ಇಳಿಯುವುದರಿಂದ ರಫ್ತು ಕ್ಷೇತ್ರಕ್ಕೆ ಪುಷ್ಟಿ ಸಿಗಬಹುದು. ಹಾಗೊಂದು ವೇಳೆ ಆದಲ್ಲಿ ಆರ್ಥಿಕತೆಗೆ ಸಕಾರಾತ್ಮಕವಾಗಿ ಪರಿಣಾಮ ಬೀರುತ್ತದೆ. ಅಧೇ ವೇಳೆ ಆಮದು ವಸ್ತುಗಳು ದುಬಾರಿಯಾಗುವುದೂ ನಿಜ. ವಿದೇಶಿ ವಿನಿಮಯ ಮಾರುಕಟ್ಟೆಯ ಮೇಲೆ ಆರ್‌ಬಿಐ ಯಾವಾಗಲೂ ಒಂದು ಕಣ್ಣಿಟ್ಟೇ ಇರುತ್ತದೆ. ಹೆಚ್ಚೂಕಡಿಮೆ ಆದ ಸಂದರ್ಭದಲ್ಲಿ ಮಧ್ಯಪ್ರವೇಶಿಸಿ ಸೂಕ್ತ ಕ್ರಮ ಕೈಗೊಳ್ಳುತ್ತದೆ" ಎಂದು ಅವರು ಸ್ಪಷ್ಟಪಡಿಸಿದ್ದಾರೆ.

80 ರೂ ಗಡಿ ಮುಟ್ಟಿದ ರೂಪಾಯಿ
ಮಂಗಳವಾರದ ಫಾರೆಕ್ಸ್ ಮಾರುಕಟ್ಟೆಯಲ್ಲಿ ಯುಎಸ್ ಡಾಲರ್ ಎದುರು ರೂಪಾಯಿ 80 ಗಡಿ ದಾಟಿದೆ. ರೂಪಾಯಿ ಈ ಹಂತಕ್ಕೆ ಬಂದಿದ್ದು ಇದೇ ಮೊದಲು. ನಿನ್ನೆ ಸೋಮವಾರ ಸಂಜೆ ಡಾಲರ್ ಎದರು ರೂಪಾಯಿ 6 ಪೈಸೆ ಮೌಲ್ಯ ಹೆಚ್ಚಿಸಿಕೊಂಡಿತ್ತು. ಯೂರೋಪಿಯನ್ ಸೆಂಟ್ರಲ್ ಬ್ಯಾಂಕ್ ಬಡ್ಡಿ ದರಗಳನ್ನು ಹೆಚ್ಚಿಸಬಹುದು ಎಂಬ ನಿರೀಕ್ಷೆಯಲ್ಲಿ ಯೂರೋಪ್ ದೇಶಗಳ ಕರೆನ್ಸಿಗಳು ಪುಷ್ಟಿ ಪಡೆದಿದ್ದವು. ಇದರ ಪರೋಕ್ಷ ಪರಿಣಾಮವಾಗಿ ಡಾಲರ್ ಎದುರು ರೂಪಾಯಿ ಮೌಲ್ಯದಲ್ಲಿ ಅಲ್ಪ ಏರಿಕೆಯಾಗಿತ್ತು.
ಆದರೆ ಅದು ತಾತ್ಕಾಲಿಕ ಮಾತ್ರ. ಕೆಲವೇ ಹೊತ್ತಿನಲ್ಲಿ ಡಾಲರ್ ಎದುರು ರೂಪಾಯಿ ಮೌಲ್ಯ ಕುಸಿದಿದೆ. ನಿನ್ನೆ 79.97 ಇದ್ದ ಮೌಲ್ಯ ಇಂದು 80.02ಕ್ಕೆ ಕುಸಿದಿದೆ.
(ಒನ್ಇಂಡಿಯಾ ಸುದ್ದಿ)












Click it and Unblock the Notifications