ಶೀಘ್ರದಲ್ಲಿಯೇ ಚಲಾವಣೆಗೆ ಬರಲಿದೆ 20 ರೂ ಮುಖಬೆಲೆಯ ಹೊಸ ನೋಟು
ನವದೆಹಲಿ, ಏಪ್ರಿಲ್ 27: ಭಾರತೀಯ ರಿಸರ್ವ್ ಬ್ಯಾಂಕ್ ಶೀಘ್ರದಲ್ಲಿಯೇ 20 ರೂ. ಮುಖಬೆಲೆಯ ಹೊಸ ನೊಟುಗಳನ್ನು ಬಿಡುಗಡೆ ಮಾಡಲಿದೆ.
ಮಹಾತ್ಮಾ ಗಾಂಧಿ ಅವರ ಭಾವಚಿತ್ರ ಇರುವ ಹೊಸ ಸರಣಿಯ ನೋಟುಗಳು ಚಲಾವಣೆಗೆ ಬರಲಿದ್ದು, ಆರ್fಬಿಐನ ಹೊಸ ಗವರ್ನರ್ ಶಕ್ತಿಕಾಂತ ದಾಸ್ ಅವರ ಸಹಿ ಇರಲಿದೆ.
'ಹೊಸ ಮಾದರಿಯ 20 ರೂ. ಮುಖಬೆಲೆಯ ನೋಟುಗಳು ಹಸಿರು-ಹಳದಿ ವರ್ಣದ್ದಾಗಿರುತ್ತವೆ. ಒಂದು ಬದಿಯಲ್ಲಿ ಗಾಂಧೀಜಿ ಭಾವಚಿತ್ರ, ಆರ್‌ಬಿಐ ಚಿಹ್ನೆ, ಅಶೋಕ ಸ್ತಂಭ ಮತ್ತು ಆರ್‌ಬಿಐ ಗವರ್ನರ್ ಸಹಿ ಇರುತ್ತದೆ. ಇನ್ನೊಂದು ಬದಿಯಲ್ಲಿ ಭಾರತದ ಹದಿನಾಲ್ಕು ಭಾಷೆಗಳಲ್ಲಿ ರೂಪಾಯಿ ಮೌಲ್ಯ ಬರೆದಿರುವುದರ ಜತೆಗೆ, ದೇಶದ ಸಾಂಸ್ಕೃತಿಕ ಪರಂಪರೆಯ ಪ್ರತೀಕವಾದ ಎಲ್ಲೋರಾದ ಕಲ್ಲಿನ ಗುಹೆಗಳ ಚಿತ್ರ ಇರಲಿದೆ' ಎಂದು ಆರ್‌ಬಿಐನ ಹೇಳಿಕೆ ತಿಳಿಸಿದೆ.

ಹೊಸ ನೋಟುಗಳು ಚಲಾವಣೆಗೆ ಬಂದರೂ, 20 ರೂ. ಮುಖಬೆಲೆಯ ಹಳೆಯ ನೋಟುಗಳು ಎಂದಿನಂತೆ ಚಲಾವಣೆಯಲ್ಲಿ ಮುಂದುವರಿಯಲಿವೆ ಎಂದು ಅದು ಸ್ಪಷ್ಟಪಡಿಸಿದೆ.
ಈ ನೋಟುಗಳಲ್ಲಿ ಬೇರೆ ವಿಭಿನ್ನ ವಿನ್ಯಾಸಗಳೂ ಇರಲಿದ್ದು, ಎರಡೂ ಬದಿಗಳಲ್ಲಿ ವರ್ಣಮಯವಾಗಿರಲಿವೆ. ಹೊಸ ನೋಟುಗಳು 63*129 ಮಿ.ಮೀ. ಗಾತ್ರ ಹೊಂದಿರುತ್ತವೆ. ಮುಂಬದಿಯಲ್ಲಿ ಸಂಖ್ಯೆಯ ಚಿತ್ರವಿದ್ದು, ದೇವನಾಗರಿಯಲ್ಲಿ ಬರೆದ ಸಂಖ್ಯೆಯೂ ಇರಲಿದೆ. ಜತೆಗೆ ವಾಟರ್‌ಮಾರ್ಕ್‌ನಲ್ಲಿ ಬರೆದ ಸಂಕೇತಾಕ್ಷರಗಳನ್ನು ಒಳಗೊಂಡಿರಲಿದೆ.












Click it and Unblock the Notifications