200 ರುಪಾಯಿ ಮುಖಬೆಲೆಯ ನೋಟು ಶೀಘ್ರವೇ ಚಲಾವಣೆಗೆ
ಮುಂಬೈ, ಅಗಸ್ಟ್ 23: ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ(ಆರ್ ಬಿಐ) ಶೀಘ್ರದಲ್ಲೇ 200 ರುಪಾಯಿ ಮುಖಬೆಲೆಯ ನೋಟುಗಳನ್ನು ಚಲಾವಣೆಗೆ ತರಲಿದೆ.
ಕಳೆದ ಮಾರ್ಚ್ ನಲ್ಲಿ ನಡೆದ ಸಭೆಯಲ್ಲಿ ಈ ಬಗ್ಗೆ ತೀರ್ಮಾನ ತೆಗೆದುಕೊಳ್ಳಲಾಗಿದ್ದು,ವಿತ್ತ ಸಚಿವಾಲಯ ಕೂಡಾ ಬುಧವಾರ(ಆಗಸ್ಟ್ 23) ದಂದು ಈ ಬಗ್ಗೆ ಸುಳಿವು ನೀಡಿದೆ. ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಕಾಯ್ದೆ 1934ರ ಅನ್ವಯ ಹಾಗೂ ಆರ್ ಬಿಐ ಪ್ರಮುಖರ ಸಲಹೆ ಮೇರೆಗೆ 200ರೂಪಾಯಿ ಹೊಸ ನೋಟು ಹೊರಬರಲಿದೆ.

ಕೇಂದ್ರ ಸರಕಾರ ಒಮ್ಮೆ ಅಧಿಕೃತವಾಗಿ ಒಪ್ಪಿಗೆ ನೀಡಿದ ಮೇಲೆ ಈ ವರ್ಷದ ಆಗಸ್ಟ್ ಅಂತ್ಯಕ್ಕೆ ಅಥವಾ ಸೆಪ್ಟೆಂಬರ್ ಮೊದಲ ವಾರದ ನಂತರ 200 ರುಪಾಯಿ ನೋಟಿನ ಮುದ್ರಣ ಆರಂಭವಾಗುತ್ತದೆ. ಆದರೆ, ರಿಸರ್ವ್ ಬ್ಯಾಂಕ್ ಇಂಡಿಯಾದ ವಕ್ತಾರರು ಈ ಬಗ್ಗೆ ಇನ್ನೂ ಅಧಿಕೃತ ಹೇಳಿಕೆ ನೀಡಿಲ್ಲ.
ಕಡಿಮೆ ಮುಖ ಬೆಲೆಯ ನೋಟುಗಳನ್ನು ಪರಿಚಯಿಸಲು ಸರಕಾರ ಕೈಗೊಂಡಿರುವ ಕ್ರಮದ ಭಾಗವಾಗಿ 200 ರುಪಾಯಿ ನೋಟು ಚಾಲ್ತಿಗೆ ಬರಲಿದೆ
ಕಳೆದ ವರ್ಷ ನವೆಂಬರ್ 8ರಂದು 500, 1000 ರುಪಾಯಿ ಹಳೇ ನೋಟನ್ನು ಚಲಾವಣೆಯಿಂದ ಹಿಂಪಡೆಯಲಾಯಿತು. ಆ ನಂತರ ,2000 ಹಾಗೂ 500 ರುಪಾಯಿಯ ಹೊಸ ನೋಟು ಪರಿಚಯಿಸಲಾಯಿತು. ಈ ಹಿಂದೆ ಕೂಡ 2,000 ರುಪಾಯಿ ನೋಟಿನ ಚಿತ್ರಗಳು ಬಿಡುಗಡೆಗೂ ಮುನ್ನವೇ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದನ್ನು ಇಲ್ಲಿ ಸ್ಮರಿಸಬಹುದು.












Click it and Unblock the Notifications