7ನೇ ವೇತನ ಆಯೋಗದ ಆಧಾರದ ಮೇಲೆ ಬೋನಸ್ ನೀಡುವಂತೆ ರೈಲ್ವೆ ನೌಕರರ ಸಂಘ ಒತ್ತಾಯ
ನವದೆಹಲಿ, ಸೆಪ್ಟೆಂಬರ್ 27: ಭಾರತೀಯ ರೈಲ್ವೆ ಎಂಪ್ಲಾಯೀಸ್ ಫೆಡರೇಶನ್ (ಐಆರ್‌ಇಎಫ್) ರೈಲ್ವೆ ಇಲಾಖೆಗೆ ಪತ್ರ ಬರೆದು ಕಾರ್ಮಿಕರಿಗೆ ಪ್ರತಿ ವರ್ಷವೂ ಹಬ್ಬದ ಸೀಸನ್‌ಗೆ ಮುಂಚಿತವಾಗಿ ಉತ್ಪಾದಕತೆ ಸಂಯೋಜಿತ ಬೋನಸ್ (PLB) ಅನ್ನು ಹೆಚ್ಚಿಸಬೇಕೆಂದು ಒತ್ತಾಯಿಸಿದೆ.
ರೈಲ್ವೆ ಇಲಾಖೆಯು 78 ದಿನಗಳ ವೇತನಕ್ಕೆ ಸಮಾನವಾದ ಬೋನಸ್ ಅನ್ನು ಎಲ್ಲ ಗೆಜೆಡೆಟ್ ಅಲ್ಲದ (ಗ್ರೂಪ್ ಸಿ ಮತ್ತು ಗ್ರೂಪ್ ಡಿ) ಉದ್ಯೋಗಿಗಳಿಗೆ ಉತ್ಪಾದಕತೆಯನ್ನು ಹೆಚ್ಚಿಸಲು ನೀಡುತ್ತದೆ. ಉತ್ಪಾದಕತೆ ಸಂಯೋಜಿತ ಬೋನಸ್ ಗ್ರೂಪ್ ಡಿ ದರ್ಜೆಯ ಉದ್ಯೋಗಿಗಳಿಗೆ ನೀಡುವ ಕನಿಷ್ಟ ವೇತನ ಆಧಾರದ ಮೇಲೆ ಲೆಕ್ಕ ಹಾಕಲಾಗುತ್ತದೆ.

6ನೇ ವೇತನ ಆಯೋಗದಲ್ಲಿ ಗ್ರೂಪ್ ಡಿ ನೌಕರರಿಗೆ ನೀಡಲಾಗುತ್ತಿದ್ದ ಕನಿಷ್ಠ ವೇತನವು ಕೇವಲ 7000 ರೂ ಆಗಿದ್ದರೆ, 7ನೇ ವೇತನ ಆಯೋಗದಲ್ಲಿ ಅದನ್ನು 18,000 ರೂ.ಗೆ ಹೆಚ್ಚಿಸಲಾಗಿದೆ. ರೈಲ್ವೆ ಎಂಪ್ಲಾಯೀಸ್ ಫೆಡರೇಶನ್ ಪ್ರಕಾರ, ಗ್ರೂಪ್ ಸಿ ಮತ್ತು ಗ್ರೂಪ್ ಡಿ ಯ ಎಲ್ಲಾ ಉದ್ಯೋಗಿಗಳು ಕೇವಲ 17,951 ರೂಗಳನ್ನು ಪಡೆಯುತ್ತಾರೆ. ಇದನ್ನು ಕನಿಷ್ಠ ಮಾಸಿಕ ವೇತನವಾಗಿ 7000 ರೂಗಳ ಆಧಾರದ ಮೇಲೆ ಲೆಕ್ಕಹಾಕಲಾಗುತ್ತದೆ.
ಈಗ 7ನೇ ವೇತನ ಆಯೋಗದ ಶಿಫಾರಸ್ಸಿನ ಅನ್ವಯ ಕನಿಷ್ಠ ವೇತನವನ್ನು ಪರಿಗಣಿಸಿ 46,159 ರೂ.ಗೆ ಏರಿಸಬೇಕು ಎಂದು ರೈಲ್ವೆ ಎಂಪ್ಲಾಯೀಸ್ ಫೆಡರೇಶನ್ ನೌಕರರು ಒತ್ತಾಯಿಸಿದ್ದಾರೆ. ಕೋವಿಡ್ -19 ಸಮಯದಲ್ಲಿ ದೇಶಾದ್ಯಂತ ಲಾಕ್‌ಡೌನ್ ವಿಧಿಸಿದಾಗ ಮತ್ತು ಜನರು ತಮ್ಮ ಮನೆಗಳಿಂದ ಹೊರಬರಲು ಹೆದರುತ್ತಿದ್ದಾಗ ರೈಲ್ವೆ ನೌಕರರು ತಮ್ಮ ಪ್ರಾಣವನ್ನು ಪಣಕ್ಕಿಟ್ಟು ರೈಲ್ವೆ ಕಾಮಗಾರಿಗಳನ್ನು ಮುಂದುವರೆಸಿದರು ಎಂದು ಫೆಡರೇಶನ್ ತನ್ನ ಪತ್ರದಲ್ಲಿ ಮನವಿ ಮಾಡಿಕೊಂಡಿದೆ.
ಡಿ ದರ್ಜೆ ನೌಕರರು ರೈಲು ಕಾರ್ಯಾಚರಣೆಗಳಲ್ಲಿ ಹೊಸ ದಾಖಲೆಗಳನ್ನು ಮಾಡಿದರು. ಇದು ರೈಲ್ವೆಯ ಆದಾಯದಲ್ಲಿ ಹೆಚ್ಚಳಕ್ಕೆ ಕಾರಣವಾಯಿತು. ಈ ಅಂಕಿಅಂಶಗಳನ್ನು ರೈಲ್ವೆ ಇಲಾಖೆಯು ತ್ರೈಮಾಸಿಕ ವರದಿಯಲ್ಲಿ ಬಹಿರಂಗ ಮಾಡಿದೆ ಎಂದು ತಿಳಿಸಿದೆ. ಹಾಗಾಗಿ ಬೋನಸ್ ನೀಡಬೇಕು. ಬೋನಸ್ ವಿಳಂಬ ವಿಷಯವು ನೌಕರರಲ್ಲಿ ಸಾಕಷ್ಟು ಅಸಮಾಧಾನವನ್ನು ಉಂಟುಮಾಡಿದ್ದು, ರೈಲ್ವೆ ಮಂಡಳಿಯು ಆದಷ್ಟು ಬೇಗ ಸಮಸ್ಯೆ ಬಗೆಪರಿಹರಿಸಬೇಕು ಎಂದು ಫೆಡರೇಶನ್ ಹೇಳಿದೆ.
ಕಳೆದ ವರ್ಷ ಅಕ್ಟೋಬರ್‌ನಲ್ಲಿ ಬೋನಸ್ಸನ್ನು ಘೋಷಿಸುವಾಗ ರೈಲ್ವೇ ಸಚಿವಾಲಯವು 11.27 ಲಕ್ಷ ಗೆಜೆಟೆಡ್ ಅಲ್ಲದ ರೈಲ್ವೆ ಉದ್ಯೋಗಿಗಳು ಬೋನಸ್‌ನಿಂದ ಪ್ರಯೋಜನ ಪಡೆಯುವ ಸಾಧ್ಯತೆಯಿದೆ ಎಂದು ಹೇಳಿತ್ತು. ರೈಲ್ವೆ ನೌಕರರಿಗೆ 78 ದಿನಗಳ ಬೋನಸ್ ಪಾವತಿಯ ಆರ್ಥಿಕ ಪರಿಣಾಮವು 1832.09 ಕೋಟಿ ರೂಪಾಯಿ ಎಂದು ಅಂದಾಜಿಸಲಾಗಿದೆ. ಈ ಬೋನಸ್ ಪಾವತಿಗೆ ಸೂಚಿಸಲಾದ ವೇತನ ಲೆಕ್ಕಾಚಾರದ ಮೊತ್ತವು 7,000 ರೂಪಾಯಿ ಆಗಿದೆ. ಅರ್ಹ ರೈಲ್ವೇ ಉದ್ಯೋಗಿಗೆ ಪಾವತಿಸಬೇಕಾದ ಗರಿಷ್ಠ ಮೊತ್ತವು 78 ದಿನಗಳವರೆಗೆ 17,951 ರೂ ಆಗಿದೆ ಎಂದು ಅಕ್ಟೋಬರ್ 1, 2022 ರಂದು ರೈಲ್ವೆ ಸಚಿವಾಲಯದ ಹೇಳಿಕೆ ತಿಳಿಸಿದೆ.












Click it and Unblock the Notifications