ಭಾರತದ ಯಾವ ರಾಜ್ಯದಲ್ಲಿ ಪೆಟ್ರೋಲ್-ಡೀಸೆಲ್ ದರ ಕಡಿಮೆ ಇದೆ?
ಶ್ರೀಗಂಗಾ ನಗರ್, ಏಪ್ರಿಲ್ 18: ಭಾರತದಲ್ಲಿ ಪೆಟ್ರೋಲ್-ಡೀಸೆಲ್ ಬೆಲೆ ಸಾಮಾನ್ಯರ ಕೈಗೆ ಸಿಗದಂತೆ ಓಡುತ್ತಿದೆ. ಪ್ರತಿನಿತ್ಯ ಏರಿಕೆ ಆಗುತ್ತಿರುವ ಇಂಧನ ದರವು ಕಳೆದ ಕೆಲವು ದಿನಗಳಿಂದ ಸ್ಥಿರವಾಗಿದೆ. ಇದರ ನಡುವೆಯೇ ದೇಶದ ಅದೊಂದು ನಗರಗಲ್ಲಿ ಪೆಟ್ರೋಲ್ ದರ 123 ರೂಪಾಯಿ ಗಡಿ ದಾಟಿದೆ.
ರಾಜಸ್ಥಾನದ ಶ್ರೀ ಗಂಗಾನಗರ ಜಿಲ್ಲೆಯಲ್ಲಿ ಸೋಮವಾರ ಬೆಳಗ್ಗೆ ವೇಳೆಗೆ ಪೆಟ್ರೋಲ್ ಬೆಲೆ ಲೀಟರ್‌ಗೆ 123 ರೂ.ಗೆ ಏರಿಕೆಯಾಗಿದೆ. ಇದು ದೇಶದಲ್ಲೇ ಅತ್ಯಧಿಕ ಬೆಲೆಯಾಗಿದೆ ಎಂದು ಎಎನ್ಐ ಸುದ್ದಿ ಸಂಸ್ಥೆ ವರದಿ ಮಾಡಿದೆ. ಪೆಟ್ರೋಲ್ ಬೆಲೆಯಲ್ಲಿನ ಈ ಹೆಚ್ಚಳದಿಂದ ಶೇಕಡಾ 80ರಷ್ಟು ಪೆಟ್ರೋಲ್ ಪಂಪ್‌ಗಳನ್ನು ಮುಚ್ಚುವ ಪರಿಸ್ಥಿತಿ ಬಂದಿದೆ ಎಂದು ಪೆಟ್ರೋಲ್ ಪಂಪ್ ಮಾಲೀಕರು ಹೇಳುತ್ತಿದ್ದಾರೆ.
ದೇಶದಲ್ಲಿ ಡೀಸೆಲ್ ದರದಲ್ಲೂ ಸಹ ಭಾರಿ ಏರಿಕೆ ಕಂಡು ಬಂದಿದೆ. ಡೀಸೆಲ್ ಒಂದು ಲೀಟರ್‌ಗೆ 105.31 ರೂಪಾಯಿ ಆಗಿರುವುದೇ ಅತ್ಯಧಿಕ ದರ ಎನಿಸಿದೆ. ರಾಜಸ್ಥಾನದ ಶ್ರೀ ಗಂಗಾನಗರ ಜಿಲ್ಲೆಯಲ್ಲಿ ಪೆಟ್ರೋಲ್ ದರ 123 ರೂಪಾಯಿ ಗಡಿ ದಾಟುವುದಕ್ಕೆ ಕಾರಣವೇನು?, ಅತಿ ಅಗ್ಗದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ದರ ಯಾವ ರಾಜ್ಯದಲ್ಲಿದೆ. ಕರ್ನಾಟಕದ ಬೆಂಗಳೂರಿನಲ್ಲಿ ಪೆಟ್ರೋಲ್-ಡೀಸೆಲ್ ದರ ಎಷ್ಟಿದೆ ಎಂಬುದರ ಕುರಿತು ಒಂದು ವಿವರಣಾತ್ಮಕ ವರದಿ ಇಲ್ಲಿದೆ ನೋಡಿ.

ಪಂಜಾಬ್‌ನಲ್ಲಿ ಅಗ್ಗದ ದರದಲ್ಲಿ ಪೆಟ್ರೋಲ್-ಡೀಸೆಲ್
ನೆರೆರಾಜ್ಯ ಪಂಜಾಬ್‌ನಲ್ಲಿ ಪೆಟ್ರೋಲ್ ದರ 17 ರಪಾಯಿ ಮತ್ತು ಡೀಸೆಲ್ ಪ್ರತಿ ಲೀಟರ್‌ಗೆ 11 ರೂಪಯಿಯಷ್ಟು ಅಗ್ಗವಾಗಿದೆ. ರಾಜಸ್ಥಾನದ ಪೆಟ್ರೋಲ್ ಗ್ರಾಹಕರು ಪಂಜಾಬ್‌ನ ಫಿಲ್ಲಿಂಗ್ ಸ್ಟೇಷನ್‌ಗಳಲ್ಲಿ ಸಾಲುಗಟ್ಟಿ ನಿಂತಿರುವ ದೃಶ್ಯಗಳು ಸರ್ವೇ ಸಾಮಾನ್ಯ ಎನ್ನುವಂತಾಗಿದೆ. ಇನ್ನೊಂದು ದಿಕ್ಕಿನಲ್ಲಿ ಅತಿಹೆಚ್ಚು ಏರಿಕೆ ಕಂಡಿರುವ ಶ್ರೀ ಗಂಗಾನಗರದಲ್ಲಿ ಇಂಧನ ಹಾಕಿಸಿಕೊಳ್ಳುವ ಗ್ರಾಹಕರ ಸಂಖ್ಯೆ ತೀರಾ ವಿರಳವಾಗಿ ಬಿಟ್ಟಿದೆ.

ಶ್ರೀ ಗಂಗಾನಗರದಲ್ಲಿ ಪೆಟ್ರೋಲ್-ಡೀಸೆಲ್ ಏಕೆ ದುಬಾರಿ?
ಇಂಧನ ವೆಚ್ಚದಲ್ಲಿನ ಭಾರಿ ವ್ಯತ್ಯಾಸದ ಪರಿಣಾಮದಿಂದ ಶೇಕಡಾ 80ರಷ್ಟು ಪೆಟ್ರೋಲ್ ಪಂಪ್‌ಗಳು ಮುಚ್ಚುವ ಹಂತದಲ್ಲಿವೆ ಎಂದು ಶ್ರೀ ಗಂಗಾನಗರ ಜಿಲ್ಲಾ ಪೆಟ್ರೋಲ್ ಪಂಪ್ ಡೀಲರ್ಸ್ ಅಸೋಸಿಯೇಶನ್ ಜಿಲ್ಲಾ ಅಧ್ಯಕ್ಷ ಅಶುತೋಷ್ ಗುಪ್ತಾ ಹೇಳಿದ್ದಾರೆ. "ದೇಶದಲ್ಲೇ ಅತ್ಯಂತ ದುಬಾರಿ ಬೆಲೆಗೆ ನಮ್ಮ ಜಿಲ್ಲೆಯಲ್ಲಿ ಪೆಟ್ರೋಲ್ ಮಾರಾಟ ಮಾಡಲಾಗುತ್ತಿದೆ. ಈ ಜಿಲ್ಲೆಯಿಂದ ಡಿಪೋ 500 ಕಿಮೀ ದೂರದಲ್ಲಿದೆ. ಆದ್ದರಿಂದ ಒಬ್ಬರು ಸುಮಾರು 1,100 ಕಿಮೀ ಪ್ರಯಾಣಿಸಬೇಕಾಗುತ್ತದೆ. ಇದರಿಂದಾಗಿ ಹೆಚ್ಚುವರಿ ವೆಚ್ಚವನ್ನು ಸೇರಿಸಲಾಗುತ್ತಿದ್ದು, ಈ ಹೆಚ್ಚಿನ ಬೆಲೆಗೆ ಪ್ರಮುಖ ಕಾರಣವಾಗಿದೆ ಎಂದು ಅವರು ಹೇಳಿದ್ದಾರೆ.

ರಾಜಸ್ಥಾನದಲ್ಲಿ ಪಂಜಾಬ್ ಮಾದರಿ ಅಳವಡಿಕೆಗೆ ಮನವಿ
"ನಾನು ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರನ್ನು ಈ ನಿಟ್ಟಿನಲ್ಲಿ ಭೇಟಿ ಮಾಡಿದ್ದು, ರಾಜ್ಯ ಸರ್ಕಾರವು ಮೂರು ತಿಂಗಳ ಕಾಲ ಪಂಜಾಬ್‌ಗೆ ಸಮಾನವಾದ ಮಾದರಿ ಅಳವಡಿಸಿಕೊಳ್ಳಬೇಕು. ಪೆಟ್ರೋಲ್, ಡೀಸೆಲ್ ಬೆಲೆಗಳನ್ನು ಇಳಿಸಿ ಪರಿಣಾಮವನ್ನು ಪರಿಶೀಲಿಸಬೇಕು. ಅದು ಸಕಾರಾತ್ಮಕವಾಗಿದ್ದರೆ ನಾವು ಮಾದರಿಯೊಂದಿಗೆ ಮುಂದುವರಿಯಬಹುದು. ಇಲ್ಲದಿದ್ದರೆ, ಅದನ್ನು ಕೈಬಿಡಲಾಗುವುದು, "ಎಂದು ಗುಪ್ತಾ ಹೇಳಿದ್ದಾರೆ. ರಾಜ್ಯದ ಮುಖ್ಯಮಂತ್ರಿಯು ಜನರ ಸಮಸ್ಯೆಗಳನ್ನು ಆಲಿಸಿ ಅದಕ್ಕೆ ತಕ್ಕ ಪರಿಹಾರವನ್ನು ನೀಡಬೇಕು. ಆದರೆ ಈ ವಿಷಯದಲ್ಲಿ ಅದ್ಯಾವುದೂ ಆಗುತ್ತಿಲ್ಲ ಎಂದು ಅವರು ದೂಷಿಸಿದ್ದಾರೆ.

ದೆಹಲಿಯಲ್ಲಿ ಇಂಧನ ದರ ಇಳಿಸುವಂತೆ ಆಗ್ರಹಿಸಿ ಪ್ರತಿಭಟನೆ
ರಾಷ್ಟ್ರ ರಾಜಧಾನಿಯಲ್ಲಿ ಆಟೋರಿಕ್ಷಾ, ಟ್ಯಾಕ್ಸಿ ಮತ್ತು ಕ್ಯಾಬ್ ಚಾಲಕರ ಒಕ್ಕೂಟ ಸೋಮವಾರ ಪ್ರತಿಭಟನೆ ನಡೆಸುತ್ತಿದೆ. ದೆಹಲಿ ಮತ್ತು ಎನ್ ಸಿ ಆರ್ ಪ್ರದೇಶಗಳಲ್ಲಿ ಸಿಎನ್ ಜಿ ದರ ಪರಿಷ್ಕರಣೆ ಮಾಡುವುದು, ಟ್ಯಾಕ್ಸಿ, ಆಟೋಗಳ ಮೀಟರ್ ದರ ಹೆಚ್ಚಳ ಮಾಡುವಂತೆ ಆಗ್ರಹಿಸಿ ಚಾಲಕರು ಪ್ರತಿಭಟನೆ ನಡೆಸುತ್ತಿದ್ದಾರೆ.

ಭಾರತದ ಪ್ರಮುಖ ನಗರ ಪೆಟ್ರೋಲ್-ಡೀಸೆಲ್ ದರ?
ದೆಹಲಿ
ಪೆಟ್ರೋಲ್ ದರ: 105.41
ಡೀಸೆಲ್ ದರ: 96.67
ಮುಂಬೈ
ಪೆಟ್ರೋಲ್ ದರ: 120.51
ಡೀಸೆಲ್ ದರ: 104.77
ಬೆಂಗಳೂರು
ಪೆಟ್ರೋಲ್ ದರ: 111.09
ಡೀಸೆಲ್ ದರ: 94.79
ಚೆನ್ನೈ
ಪೆಟ್ರೋಲ್ ದರ: 110.85
ಡೀಸೆಲ್ ದರ: 100.94












Click it and Unblock the Notifications