ಅ.21: ಮತ್ತೆ ಏರಿಕೆ ಕಂಡ ಇಂಧನ ದರ; ಬೆಂಗಳೂರಿನಲ್ಲಿ ಲೀಟರ್ ಪೆಟ್ರೋಲ್ ಬೆಲೆ 110 ರೂ.!
ನವದೆಹಲಿ, ಅಕ್ಟೋಬರ್ 21: ಸತತ ಎರಡು ದಿನಗಳಿಂದ ಇಂಧನ ದರ ಏರಿಕೆಯಾಗುತ್ತಿದ್ದು, ಇಂದು ಗುರುವಾರ (ಅ.21) ಮತ್ತೆ ತೈಲ ದರ ಏರಿಕೆ ಆಗಿದೆ. ದಿನದಿಂದ ದಿನಕ್ಕೆ ಪೈಸೆಗಳ ಲೆಕ್ಕದಲ್ಲಿ ದರ ಏರಿಕೆಯಾಗಿ ಆ ಮೂಲಕ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ಗರಿಷ್ಠ ಮಟ್ಟ ತಲುಪಿವೆ.
ಬುಧವಾರ ಲೀಟರ್ ಪೆಟ್ರೋಲ್ ದರದಲ್ಲಿ 35 ಪೈಸೆ ಹೆಚ್ಚಳ ಮಾಡಲಾಗಿದ್ದರೆ, ಅದೇ ರೀತಿ ಲೀಟರ್ ಡೀಸೆಲ್ ದರದಲ್ಲಿಯೂ ಸಹ 35 ಪೈಸೆ ಹೆಚ್ಚಳವಾಗಿದೆ. ಈಗಾಗಲೇ ದಿನನಿತ್ಯ ಬಳಕೆ ವಸ್ತುಗಳ ಬೆಲೆ ಏರಿಕೆಯಿಂದ ಕಂಗೆಟ್ಟಿರುವ ಜನರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ. ಇದರಿಂದಾಗಿ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳ ಮೇಲೆ ಜನರು ಹಿಡಿ ಶಾಪ ಹಾಕುತ್ತಿದ್ದಾರೆ.
ದೇಶದ ಸರ್ಕಾರಿ ಸ್ವಾಮ್ಯದ ತೈಲ ಸಂಸ್ಥೆಗಳು ಪೆಟ್ರೋಲ್ ಮತ್ತು ಡೀಸೆಲ್ ದರವನ್ನು ಮತ್ತೆ ಏರಿಕೆ ಮಾಡಿದ್ದು, ಕಳೆದ ಎರಡು ದಿನಗಳಿಂದ ಸ್ಥಿರತೆ ಕಾಪಾಡಿಕೊಂಡಿದ್ದ ಇಂಧನ ಮತ್ತೆ ಏರಿಕೆಯಾಗುತ್ತಿದೆ. ಸಾರ್ವಕಾಲಿಕ ಗರಿಷ್ಠ ಮಟ್ಟವನ್ನು ದಾಟಿ ಇಂಧನ ದರ ಏರಿಕೆಯಾಗಿದ್ದು, ಇಂದು (ಅ.21, ಗುರುವಾರ) ಕೂಡ ದೇಶದ ಎಲ್ಲಾ ಮಹಾನಗರಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ದರ ಏರಿಕೆ ಮಾಡಲಾಗಿದೆ.
ಈ ಹಬ್ಬದ ಋತುವಿನಲ್ಲಿ ಇಂಧನ ದರ ಏರುಗತಿಯಲ್ಲಿ ಸಾಗುತ್ತಿದೆ. ಈ ಮೂಲಕ ಪ್ರಮುಖ ನಗರಗಳಲ್ಲಿ ಪೆಟ್ರೋಲ್ ದರವೊಂದೇ ಅಲ್ಲದೇ ಲೀಟರ್ ಡೀಸೆಲ್ ದರವೂ ಸಹ 100ರ ಗಡಿ ದಾಟಿ ಮುನ್ನುಗ್ಗುತ್ತಿದೆ. ಪ್ರಮುಖ ನಗರಗಳಲ್ಲಿ ಎಷ್ಟಿದೆ ಬೆಲೆ ಎಂಬ ಮಾಹಿತಿ ಇಲ್ಲಿದೆ ಪರಿಶೀಲಿಸಿ.

ದೆಹಲಿಯಲ್ಲಿ ಲೀಟರ್ ಪೆಟ್ರೋಲ್ ದರ 106.54 ರೂ.
ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಲೀಟರ್ ಪೆಟ್ರೋಲ್ ದರ 106.54 ರೂಪಾಯಿಗೆ ಏರಿಕೆ ಆಗಿದೆ. ಅದೇ ರೀತಿ ವಾಣಿಜ್ಯ ನಗರಿ ಮುಂಬೈನಲ್ಲಿ ಲೀಟರ್ ಪೆಟ್ರೋಲ್ ದರ 112.44 ರೂಪಾಯಿ ಇದೆ. ತಮಿಳುನಾಡಿನ ಚೆನ್ನೈನಲ್ಲಿ ಲೀಟರ್ ಪೆಟ್ರೋಲ್ ದರ 103.61 ರೂಪಾಯಿ ಆಗಿದ್ದರೆ, ಪಶ್ಚಿಮ ಬಂಗಾಳದ ಕೋಲ್ಕತ್ತಾದಲ್ಲಿ ಲೀಟರ್ ಪೆಟ್ರೋಲ್ ದರ 107.12 ರೂಪಾಯಿ ನಿಗದಿಯಾಗಿದೆ.
ಇನ್ನು ಪ್ರಮುಖ ನಗರಗಳಲ್ಲಿನ ಡೀಸೆಲ್ ದರ ನೋಡುವುದಾದರೆ, ದೆಹಲಿಯಲ್ಲಿ ಲೀಟರ್ ಡೀಸೆಲ್ ದರ 95.27 ರೂಪಾಯಿ ಇದೆ. ಮುಂಬೈನಲ್ಲಿ ಲೀಟರ್ ಡೀಸೆಲ್ ದರ 103.26 ರೂಪಾಯಿ ಇದೆ. ಇನ್ನು, ಚೆನ್ನೈನಲ್ಲಿ ಲೀಟರ್ ಡೀಸೆಲ್ ದರ 99.59 ರೂಪಾಯಿ ಇದ್ದರೆ, ಕೋಲ್ಕತ್ತಾದಲ್ಲಿ ಲೀಟರ್ ಡೀಸೆಲ್ ದರ 98.38 ರೂಪಾಯಿ ಇದೆ.

ಬೆಂಗಳೂರಿನಲ್ಲಿ ಲೀಟರ್ ಪೆಟ್ರೋಲ್ ದರ 110.25 ರೂ.
ನಾಲ್ಕು ಪ್ರಮುಖ ಮೆಟ್ರೋ ನಗರಗಳಲ್ಲಿ ಮುಂಬೈ ನಗರದಲ್ಲಿ ಇಂಧನ ದರ ಅಧಿಕವಾಗಿದೆ. ಇತ್ತೀಚಿಗಿನ ಏರಿಕೆಯಿಂದ ಕೇವಲ ಲೀಟರ್ ಪೆಟ್ರೋಲ್ ದರವೊಂದೇ ಅಲ್ಲದೇ, ಕೆಲವೆಡೆ ಲೀಟರ್ ಡೀಸೆಲ್ ದರವೂ ಸಹ 100ರ ಗಡಿ ದಾಟಿ ಮುನ್ನುಗ್ಗಿದೆ. ಎಲ್ಲಾ ರಾಜ್ಯಗಳ ರಾಜಧಾನಿಗಳಲ್ಲಿ ಲೀಟರ್ ಪೆಟ್ರೋಲ್‌ಗೆ 100 ರೂ. ಅಥವಾ ಅದಕ್ಕಿಂತ ಹೆಚ್ಚಿನದ್ದಾಗಿದೆ ಮತ್ತು ಲೀಟರ್ ಡೀಸೆಲ್‌ಗೆ ಒಂದು ಡಜನ್‌ಗಿಂತಲೂ ಹೆಚ್ಚಿನ ರಾಜ್ಯಗಳಲ್ಲಿ ಗರಿಷ್ಠ ಮಟ್ಟವನ್ನು ಮುಟ್ಟಿದೆ. ದುಬಾರಿ ಇಂಧನ ರಾಜಸ್ಥಾನದ ಗಂಗಾನಗರ ಪಟ್ಟಣದಲ್ಲಿದ್ದು, ಅಲ್ಲಿ ಪೆಟ್ರೋಲ್ ಲೀಟರ್‌ಗೆ 118.23 ರೂ. ಮತ್ತು ಡೀಸೆಲ್ 109.04 ರೂ. ಇದೆ.
ಕರ್ನಾಟಕ ರಾಜಧಾನಿ ಬೆಂಗಳೂರಿನಲ್ಲಿ ಬುಧವಾರದ ದರ ಏರಿಕೆಯ ಬಳಿಕ ಲೀಟರ್ ಡೀಸೆಲ್ ದರವೂ ಸಹ 100ರ ಗಡಿ ದಾಟಿ ಮುನ್ನುಗ್ಗಿದೆ. ಲೀಟರ್ ಪೆಟ್ರೋಲ್ ದರ 110.25 ರೂಪಾಯಿಗೆ ಏರಿಕೆ ಆಗಿದ್ದರೆ, ಲೀಟರ್ ಡೀಸೆಲ್ ದರ 101.07 ರೂಪಾಯಿ ಆಗಿದೆ. ನಿರಂತರವಾಗಿ ಏರಿಕೆ ಕಾಣುತ್ತ ಗರಿಷ್ಠ ಮಟ್ಟ ತಲುಪಿದ ಇಂಧನ ದರ ಕಂಡು ವಾಹನ ಸವಾರರು ರಾಜ್ಯ ಹಾಗೂ ಕೇಂದ್ರ ಸರ್ಕಾರಗಳ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.

ಪ್ರತಿದಿನ ಬೆಳಿಗ್ಗೆ 6 ಗಂಟೆಗೆ ಇಂಧನ ದರ ಪರಿಷ್ಕರಣೆ
ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗೆ ಅಬಕಾರಿ ಸುಂಕಗಳನ್ನು ಸೇರಿಸಿದ ನಂತರ, ಅದರ ಬೆಲೆ ದ್ವಿಗುಣಗೊಳ್ಳುತ್ತದೆ. ಈ ಮಾನದಂಡಗಳ ಆಧಾರದ ಮೇಲೆ, ತೈಲ ಕಂಪನಿಗಳು ಪ್ರತಿದಿನ ಪೆಟ್ರೋಲ್ ಮತ್ತು ಡೀಸೆಲ್ ದರವನ್ನು ನಿಗದಿಪಡಿಸುತ್ತವೆ. ಪ್ರತಿನಿತ್ಯ ಹೊಸ ದರಗಳು ಬೆಳಿಗ್ಗೆ 6 ಗಂಟೆಗೆ ನಿಗದಿಯಾಗುತ್ತವೆ.

ಅಂತರರಾಷ್ಟ್ರೀಯ ಮಾನದಂಡಗಳ ಆಧಾರದಲ್ಲಿ ದರ ನಿಗದಿ
ಭಾರತ್ ಪೆಟ್ರೋಲಿಯಂ ಕಾರ್ಪೊರೇಶನ್ ಲಿಮಿಟೆಡ್ (ಬಿಪಿಸಿಎಲ್), ಇಂಡಿಯನ್ ಆಯಿಲ್ ಕಾರ್ಪೊರೇಶನ್ ಲಿಮಿಟೆಡ್ (ಐಒಸಿಎಲ್) ಮತ್ತು ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೊರೇಶನ್ ಲಿಮಿಟೆಡ್ (ಎಚ್‌ಪಿಸಿಎಲ್) ಇಂಧನ ಬೆಲೆಗಳನ್ನು ಪ್ರತಿದಿನ ಅಂತರರಾಷ್ಟ್ರೀಯ ಮಾನದಂಡಗಳು ಮತ್ತು ವಿದೇಶಿ ವಿನಿಮಯ ದರಗಳೊಂದಿಗೆ ಪರಿಷ್ಕರಿಸುತ್ತವೆ. ಆ ಮೂಲಕ ವಿದೇಶಿ ವಿನಿಮಯ ದರಗಳ ಜತೆಗೆ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ಬೆಲೆಗಳು ಏನೆಂಬುದನ್ನು ಅವಲಂಬಿಸಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ಬದಲಾಗುತ್ತವೆ.












Click it and Unblock the Notifications