10 ದಿನದಲ್ಲಿ 9ನೇ ಬಾರಿ ಪೆಟ್ರೋಲ್-ಡೀಸೆಲ್ ಬೆಲೆ ಏರಿಕೆ: ದರ ಪಟ್ಟಿ ಇಲ್ಲಿದೆ
ನವದೆಹಲಿ, ಮಾರ್ಚ್ 31: ದೇಶದಲ್ಲಿ ಕೆಲವು ದಿನಗಳಿಂದ ಪೆಟ್ರೋಲ್ ಹಾಗೂ ಡೀಸೆಲ್ ದರದಲ್ಲಿ ಏರಿಕೆ ಕಂಡು ಬಂದಿದೆ. ಕಳೆದ 10 ದಿನದಲ್ಲಿ 9ನೇ ಬಾರಿ ಪೆಟ್ರೋಲ್-ಡೀಸೆಲ್ ಬೆಲೆ ಏರಿಕೆಯಾಗಿದೆ. ಇಂದು (ಮಾರ್ಚ್ 31,2022) ಸಹ, ಪೆಟ್ರೋಲ್, ಡೀಸೆಲ್ ಪ್ರತಿ ಲೀಟರ್‌ಗೆ 80 ಪೈಸೆ ಏರಿಕೆಯಾಗಿದೆ. ಕಳೆದ ಹತ್ತು ದಿನಗಳಲ್ಲಿ ಪೆಟ್ರೋಲ್, ಡೀಸೆಲ್ ಲೀಟರ್‌ಗೆ 6.40 ರೂಪಾಯಿ ಏರಿಕೆ ಆಗಿದೆ.
ಸರ್ಕಾರಿ ಸ್ವಾಮ್ಯದ ಮೂರು ಪ್ರಮುಖ ತೈಲ ಕಂಪನಿಗಳು ಮಾರ್ಚ್ 31ರಂದು ಪೆಟ್ರೋಲ್, ಡೀಸೆಲ್ ದರ ಪರಿಷ್ಕರಣೆ ಮಾಡಿದೆ. ಈ ಪರಿಷ್ಕರಣೆಯ ಪ್ರಕಾರ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಈಗ ಪೆಟ್ರೋಲ್ ಬೆಲೆ ರೂ. 101.81 ಆಗಿದೆ. ಈ ಹಿಂದೆ ದೆಹಲಿಯಲ್ಲಿ ಪೆಟ್ರೋಲ್ ಬೆಲೆಯು ಲೀಟರ್‌ಗೆ 101.01 ರೂಪಾಯಿ ಆಗಿತ್ತು. ಇನ್ನು ಡಿಸೇಲ್ ಬೆಲೆಯು ಲೀಟರ್‌ಗೆ 93.07ಗೆ ತಲುಪಿದೆ.
ರಷ್ಯಾ ಮತ್ತು ಉಕ್ರೇನ್ ಯುದ್ಧದ ಪರಿಣಾಮವಾಗಿ ಕಚ್ಚಾತೈಲ ಬೆಲೆ ದಶಕದ ಬಳಿಕ ಮೊದಲ ಬಾರಿಗೆ ಭಾರೀ ಏರಿಕೆ ಕಂಡು ಬಂದಿದೆ. ಈ ಬೆನ್ನಲ್ಲೇ ದೇಶದಲ್ಲಿ ಸುಮಾರು 137 ದಿನಗಳ ನಂತರ ಪೆಟ್ರೋಲ್ ಹಾಗೂ ಡೀಸೆಲ್ ದರವನ್ನು ಏರಿಕೆ ಮಾಡಲಾಗಿದೆ. ಸತತ ಎರಡು ದಿನ ಏರಿಕೆ ಕಂಡಿದ್ದ ಪೆಟ್ರೋಲ್, ಡೀಸೆಲ್ ದರ ಮೂರನೇ ದಿನ ಸ್ಥಿರವಾಗಿತ್ತು. ಆದರೆ ಬಳಿಕ ನಿರಂತರವಾಗಿ ಏರಿಕೆ ಕಾಣುತ್ತಿದೆ. ಹಾಗಾದರೆ ಪ್ರಮುಖ ನಗರಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ಎಂದು ತಿಳಿಯಲು ಮುಂದೆ ಓದಿ..

ಬೆಂಗಳೂರು ಸೇರಿ ಇತರ ನಗರಗಳಲ್ಲಿ ಪೆಟ್ರೋಲ್-ಡೀಸೆಲ್ ದರ
ಕರ್ನಾಟಕ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಪೆಟ್ರೋಲ್ ದರ ಏರಿಕೆ ಕಂಡಿದ್ದು, 107.30 ರೂಪಾಯಿಗೆ ಹೆಚ್ಚಿದೆ. ನಿನ್ನೆ 106.46 ರೂಪಾಯಿ ಇದ್ದ ಪೆಟ್ರೋಲ್ ಬೆಲೆಯು ಇಂದು 0.84 ಪೈಸೆ ಹೆಚ್ಚಳವಾಗಿ 107.30 ರೂಪಾಯಿಗೆ ತಲುಪಿದೆ. ಇನ್ನು ಡೀಸೆಲ್ ಬೆಲೆಯು ಕೂಡಾ ಏರಿದೆ. 0.78 ಪೈಸೆ ಹೆಚ್ಚಳವಾಗಿ, ಡಿಸೇಲ್ ಬೆಲೆಯು 91.27ಗೆ ತಲುಪಿದೆ. ಚೆನ್ನೈನಲ್ಲಿ ಪೆಟ್ರೋಲ್ ದರ 107.45 ರೂಪಾಯಿ, ಡೀಸೆಲ್ ದರ 97.52 ರೂಪಾಯಿ ಇದೆ. ಕೋಲ್ಕತ್ತಾದಲ್ಲಿ ಪೆಟ್ರೋಲ್ ದರ 111.35 ರೂಪಾಯಿ, ಡೀಸೆಲ್ ದರ 96.22 ರೂಪಾಯಿ ಆಗಿದೆ.

ವಾಣಿಜ್ಯ ನಗರಿ ಪೆಟ್ರೋಲ್, ಡೀಸೆಲ್ ದರ
ದೇಶದ ವಾಣಿಜ್ಯ ನಗರಿ ಮುಂಬೈನಲ್ಲಿ ಇಂದು ಪೆಟ್ರೋಲ್ ಬೆಲೆ 85 ಪೈಸೆ ಹೆಚ್ಚಾಗಿ ರೂ. 115.04 ಗೆ ತಲುಪಿದರೆ, ಡೀಸೆಲ್ ಬೆಲೆ 75 ಪೈಸೆ ಹೆಚ್ಚಾಗಿದ್ದು ರೂ. 99.25. ಆಗಿದೆ. ಇನ್ನು ಹೈದರಾಬಾದ್‌ನಲ್ಲಿ ಪೆಟ್ರೋಲ್ ದರ 113.61 ರೂಪಾಯಿ ಆಗಿದ್ದರೆ, ಡೀಸೆಲ್ ದರ 99.84 ರೂಪಾಯಿ ಆಗಿದೆ. ಇನ್ನು ರಾಜ್ಯ ರಾಜಧಾನಿ ಪೈಕಿ ಚಂಡೀಗಢದಲ್ಲಿ ಅತೀ ಕಡಿಮೆ ಡೀಸೆಲ್ ದರವಿದೆ. ಪ್ರತಿ ಲೀಟರ್‌ಗೆ 85.99 ರೂಪಾಯಿ ಆಗಿದೆ. ಇನ್ನು ಪೆಟ್ರೋಲ್ ದರವು ಕೂಡಾ ಚಂಡೀಗಢದಲ್ಲಿ ಕಡಿಮೆ ಇದೆ. 99.63 ರೂಪಾಯಿ ಆಗಿದೆ.

ಯಾವೆಲ್ಲಾ ಪ್ರಮುಖ ನಗರಗಳಲ್ಲಿ ಬೆಲೆ ತೀವ್ರ ಏರಿಕೆ?
ದೇಶದ ಎಲ್ಲಾ ಪ್ರಮುಖ ನಗರಗಳಲ್ಲಿ ಪೆಟ್ರೋಲ್ ಬೆಲೆಯು ನೂರರ ಗಡಿ ದಾಟಿದೆ. ದೇಶದ ಎಲ್ಲಾ ಪ್ರಮುಖ ನಗರಗಳಲ್ಲಿ ಪೆಟ್ರೋಲ್ ದರವು ನೂರರ ಗಡಿಯನ್ನು ದಾಟಿದೆ. ದೇಶದ ಪ್ರಮುಖ ನಗರಗಳಲ್ಲಿ ಪೆಟ್ರೋಲ್ ದರವು 101 ರೂಪಾಯಿಯಿಂದ 116 ರೂಪಾಯಿ ಆಸುಪಾಸಿನಲ್ಲಿದೆ. ಇನ್ನು ಡೀಸೆಲ್ ದರವು ದೇಶದ ಒಂದೆರಡು ಪ್ರಮುಖ ನಗರದಲ್ಲಿ ನೂರರ ಗಡಿಯನ್ನು ದಾಟಿದೆ. ಹೈದರಾಬಾದ್, ಮುಂಬೈನಲ್ಲಿ ಡೀಸೆಲ್ ದರವು ನೂರರ ಗಡಿಯನ್ನು ದಾಟಿದೆ. ಉಳಿದಂತೆ ಇತರೆ ನಗರಗಳಲ್ಲಿ 90 ರೂಪಾಯಿ ಆಸುಪಾಸಿನಲ್ಲಿದೆ.

ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲದ ಬೆಲೆ
ಜಾಗತಿಕ ಬ್ರೆಂಟ್ ಕಚ್ಚಾ ತೈಲ ಬೆಲೆಯು ಪ್ರತಿ ಬ್ಯಾರೆಲ್‌ಗೆ 108.1 ಯುಎಸ್ ಡಾಲರ್‌ನಂತೆ ವ್ಯವಹಾರ ನಡೆಸುತ್ತಿದೆ. ಭಾರತದಲ್ಲಿ ಇಂಧನ ಆಮದು ಬಳಿಕ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗೆ ರಾಜ್ಯಗಳಲ್ಲಿ ಅಬಕಾರಿ ಸುಂಕಗಳನ್ನು ಸೇರಿಸಲಾಗುತ್ತದೆ, ನಂತರ ಬೆಲೆ ದ್ವಿಗುಣಗೊಳ್ಳುತ್ತದೆ. ಈ ಮಾನದಂಡಗಳ ಆಧಾರದ ಮೇಲೆ, ತೈಲ ಕಂಪನಿಗಳು ಪ್ರತಿದಿನ ಪೆಟ್ರೋಲ್ ಮತ್ತು ಡೀಸೆಲ್ ದರವನ್ನು ನಿಗದಿಪಡಿಸುತ್ತವೆ. ಪ್ರತಿನಿತ್ಯ ಹೊಸ ದರಗಳು ಬೆಳಗ್ಗೆ 6 ಗಂಟೆಗೆ ನಿಗದಿಯಾಗುತ್ತವೆ.












Click it and Unblock the Notifications