Online Will : ಆನ್‌ಲೈನ್‌ನಲ್ಲೂ ವಿಲ್ ಬರೆಯಬಹುದು! ಸುಲಭ, ಕಡಿಮೆ ಖರ್ಚು, ಆದ್ರೆ ರಿಸ್ಕ್ ಹೆಚ್ಚು!
Online Will: ಒಬ್ಬ ವ್ಯಕ್ತಿ ತನ್ನ ಜೀವಿತಾವಧಿಯಲ್ಲಿ ಕಷ್ಟಪಟ್ಟು ಸಂಪಾದಿಸಿದ ಹಣ, ಮನೆ, ಜಮೀನು, ಬ್ಯಾಂಕ್ ಠೇವಣಿ, ವಿಮೆ, ಷೇರು, ಮ್ಯೂಚುವಲ್ ಫಂಡ್ ಸೇರಿದಂತೆ ಹಲವು ಆಸ್ತಿಗಳನ್ನು ಹೊಂದಿರಬಹುದು. ಆದರೆ ಆತ ಅಥವಾ ಆಕೆ ಮರಣ ಹೊಂದಿದ ಬಳಿಕ ಈ ಆಸ್ತಿ ಯಾರಿಗೆ ಸೇರಬೇಕು ಎಂಬುದನ್ನು ಸ್ಪಷ್ಟವಾಗಿ ತಿಳಿಸುವ ವಿಲ್ ಅಥವಾ ಉಯಿಲು ಪತ್ರ ಇಲ್ಲದಿದ್ದರೆ, ಕುಟುಂಬದವರು ಸಾಕಷ್ಟು ಕಾನೂನು ಮತ್ತು ಆರ್ಥಿಕ ಸಮಸ್ಯೆಗಳನ್ನು ಎದುರಿಸಬೇಕಾಗಬಹುದು.

Bank: ಬ್ಯಾಂಕ್ ಖಾತೆ ನಿಷ್ಕ್ರಿಯವಾದ್ರೆ ಕಂಡು ಹಿಡಿಯುವುದು ಹೇಗೆ? ರಿ ಆಕ್ಟಿವೇಟ್‌ಗೆ ಏನು ಮಾಡಬೇಕು?
ವಿಶೇಷವಾಗಿ ಕುಟುಂಬದ ಮುಖ್ಯ ಆದಾಯದ ವ್ಯಕ್ತಿ ಹಠಾತ್ತನೆ ಮೃತಪಟ್ಟರೆ ಪರಿಸ್ಥಿತಿ ಇನ್ನಷ್ಟು ಸಂಕೀರ್ಣವಾಗುತ್ತದೆ. ಬೇರೆ ಬೇರೆ ಬ್ಯಾಂಕ್ ಖಾತೆಗಳು, ಹೂಡಿಕೆಗಳು, ವಿಮೆ ಪಾಲಿಸಿಗಳು ಮತ್ತು ಆಸ್ತಿಗಳ ಮಾಹಿತಿ ಹುಡುಕುವುದೇ ಕುಟುಂಬದವರಿಗೆ ದೊಡ್ಡ ಸವಾಲಾಗಬಹುದು. ಈ ಹಿನ್ನೆಲೆಯಲ್ಲಿ ಉಯಿಲು ಪತ್ರ ಬರೆಯುವ ಮಹತ್ವದ ಬಗ್ಗೆ ಜನರಲ್ಲಿ ನಿಧಾನವಾಗಿ ಅರಿವು ಹೆಚ್ಚುತ್ತಿದೆ.
ಈಗ ಉಯಿಲು ಪತ್ರವನ್ನು ತಯಾರಿಸಲು ವಕೀಲರ ಕಚೇರಿಗೆ ಹೋಗುವುದರ ಜೊತೆಗೆ ಆನ್‌ಲೈನ್ ಸೇವೆಗಳೂ ಲಭ್ಯವಿವೆ. ಕೆಲವು ಸಂಸ್ಥೆಗಳು ಕಡಿಮೆ ವೆಚ್ಚದಲ್ಲಿ ಮನೆಯಲ್ಲೇ ಕುಳಿತು ಉಯಿಲು ಪತ್ರದ ಕರಡು ಸಿದ್ಧಪಡಿಸುವ ಅವಕಾಶ ನೀಡುತ್ತಿವೆ. ಆದರೆ ಈ ವೇಗದ ಮತ್ತು ಅಗ್ಗದ ವಿಧಾನ ಎಲ್ಲರಿಗೂ ಸೂಕ್ತವೇ? ಇದರಲ್ಲಿರುವ ರಿಸ್ಕ್ ಏನೇನು?
ಆನ್‌ಲೈನ್‌ನಲ್ಲಿ ವಿಲ್ ಹೇಗೆ ತಯಾರಾಗುತ್ತದೆ?
ಸಾಮಾನ್ಯವಾಗಿ ಆನ್‌ಲೈನ್ ಸೇವೆಗಳಲ್ಲಿ ಮೊದಲು ವ್ಯಕ್ತಿಯ ವೈಯಕ್ತಿಕ ವಿವರಗಳನ್ನು ಕೇಳಲಾಗುತ್ತದೆ. ಹೆಸರು, ವಿಳಾಸ, ಕುಟುಂಬ ಸದಸ್ಯರು, ಅವಲಂಬಿತರ ವಿವರ, ಆಸ್ತಿಯ ವಿವರ, ಉಯಿಲು ಪತ್ರವನ್ನು ಜಾರಿಗೆ ತರುವ ಕಾರ್ಯನಿರ್ವಾಹಕರ ಮಾಹಿತಿ ಮತ್ತು ಸಾಕ್ಷಿದಾರರ ವಿವರಗಳನ್ನು ನಮೂದಿಸಬೇಕು.
ನಂತರ ತಮ್ಮ ಬಳಿ ಇರುವ ಆಸ್ತಿಗಳನ್ನು ಯಾರಿಗೆ ಎಷ್ಟು ಪ್ರಮಾಣದಲ್ಲಿ ನೀಡಬೇಕು ಎಂಬುದನ್ನೂ ತಿಳಿಸಬೇಕು. ಈ ಮಾಹಿತಿಯ ಆಧಾರದ ಮೇಲೆ ಉಯಿಲು ಪತ್ರದ ಕರಡು ಸಿದ್ಧವಾಗುತ್ತದೆ. ಸಾಮಾನ್ಯವಾಗಿ ಅದನ್ನು ಪಿಡಿಎಫ್ ರೂಪದಲ್ಲಿ ಪಡೆಯಬಹುದು. ಆದರೆ ಇಲ್ಲೊಂದು ಪ್ರಮುಖ ವಿಷಯವನ್ನು ಮರೆಯಬಾರದು.
ಕೇವಲ ಡಿಜಿಟಲ್ ಸಹಿ ಮಾಡಿದರೆ ಮಾತ್ರ ಉಯಿಲು ಪತ್ರ ಕಾನೂನುಬದ್ಧವಾಗುವುದಿಲ್ಲ. ದಾಖಲೆಗಳನ್ನು ಮುದ್ರಿಸಿ, ನಿಯಮಾನುಸಾರ ಸಹಿ ಮಾಡಿ, ಸಾಕ್ಷಿದಾರರ ಸಮ್ಮುಖದಲ್ಲಿ ಉಯಿಲು ಪತ್ರವನ್ನು ಕಾರ್ಯಗತಗೊಳಿಸಬೇಕಾಗುತ್ತದೆ. ಸಾಕ್ಷಿದಾರರೂ ಅಗತ್ಯವಿರುವ ರೀತಿಯಲ್ಲಿ ಸಹಿ ಮಾಡಬೇಕು.
ಇದರಲ್ಲಿದೆ ಅಪಾಯ
ಸ್ವತಃ ಮಾಹಿತಿ ನೀಡಿ ಸಿದ್ಧಪಡಿಸಿಕೊಳ್ಳುವ ವಿಧಾನ ಸರಳವಾಗಿರಬಹುದು. ಆದರೆ ಅದೇ ಇದರ ದೊಡ್ಡ ಮಿತಿಯೂ ಹೌದು. ಕೇವಲ ಒಂದು ಮನೆ, ಬ್ಯಾಂಕ್ ಠೇವಣಿ ಮತ್ತು ಸರಳ ಕುಟುಂಬ ವ್ಯವಸ್ಥೆ ಹೊಂದಿರುವ ವ್ಯಕ್ತಿಗೆ ಸ್ವಯಂ ಸಿದ್ಧಪಡಿಸಿದ ಉಯಿಲು ಪತ್ರ ಸಾಕಾಗಬಹುದು. ಆದರೆ ಕುಟುಂಬ ಅಥವಾ ಆಸ್ತಿಯ ಪರಿಸ್ಥಿತಿ ಸಂಕೀರ್ಣವಾಗಿದ್ದರೆ ತಜ್ಞರ ನೆರವು ಪಡೆಯುವುದು ಉತ್ತಮ.
ಉದಾಹರಣೆಗೆ, ವಿಚ್ಛೇದನವಾಗಿದ್ದರೆ, ಮರುಮದುವೆಯಾಗಿದ್ದರೆ, ಒಂದಕ್ಕಿಂತ ಹೆಚ್ಚು ಮನೆ ಅಥವಾ ಜಮೀನು ಇದ್ದರೆ, ಬೇರೆ ದೇಶದಲ್ಲಿ ವಾಸಿಸುವ ಭಾರತೀಯರಾಗಿದ್ದರೆ, ಮಕ್ಕಳ ಅಥವಾ ಕುಟುಂಬ ಸದಸ್ಯರ ನಡುವೆ ವಿಶೇಷ ಪರಿಸ್ಥಿತಿ ಇದ್ದರೆ, ಕುಟುಂಬದ ವ್ಯವಹಾರ ಅಥವಾ ದೊಡ್ಡ ಪ್ರಮಾಣದ ಹೂಡಿಕೆಗಳಿದ್ದರೆ- ಇಂತಹ ಸಂದರ್ಭಗಳಲ್ಲಿ ತಪ್ಪಾದ ಪದ ಬಳಕೆ ಅಥವಾ ಅಪೂರ್ಣ ಮಾಹಿತಿ ಮುಂದಿನ ದಿನಗಳಲ್ಲಿ ಕುಟುಂಬದೊಳಗೆ ಕಾನೂನು ವಿವಾದಕ್ಕೆ ಕಾರಣವಾಗಬಹುದು.
ಕಡಿಮೆ ಬೆಲೆಯ ಆನ್‌ಲೈನ್ ಸೇವೆಯಲ್ಲಿ ಎಲ್ಲ ಕಾನೂನು ಸಂಕೀರ್ಣತೆಗಳಿಗೂ ಸರಿಯಾದ ಪರಿಹಾರ ಸಿಗುತ್ತದೆ ಎಂದು ನಿರೀಕ್ಷಿಸುವುದು ಅಪಾಯಕಾರಿ.
ತಜ್ಞರ ನೆರವಿನೊಂದಿಗೆ ವಿಲ್
ಹಲವು ಆನ್‌ಲೈನ್ ಸಂಸ್ಥೆಗಳು ಕೇವಲ ಸ್ವಯಂ ಸೇವೆಯನ್ನು ಮಾತ್ರವಲ್ಲದೆ, ವಕೀಲರು ಅಥವಾ ತಜ್ಞರ ನೆರವನ್ನೂ ನೀಡುತ್ತವೆ. ಕೆಲವು ಸೇವೆಗಳಲ್ಲಿ ಪ್ರಶ್ನೆಗಳಿಗೆ ಸಲಹೆ ಪಡೆಯಬಹುದು. ಇನ್ನೂ ಕೆಲವು ಸೇವೆಗಳಲ್ಲಿ ಈಗಾಗಲೇ ಸಿದ್ಧಪಡಿಸಿರುವ ಕರಡನ್ನು ಪರಿಶೀಲಿಸಲಾಗುತ್ತದೆ. ಹೆಚ್ಚಿನ ಶುಲ್ಕದ ಸೇವೆಗಳಲ್ಲಿ ಉಯಿಲು ಪತ್ರದ ಕರಡು, ಕಾನೂನು ಪರಿಶೀಲನೆ, ದೃಢೀಕರಣ ಮತ್ತು ನೋಂದಣಿ ಪ್ರಕ್ರಿಯೆಗೆ ನೆರವು ಕೂಡ ಸಿಗಬಹುದು. ಕೆಲವು ಸಂಸ್ಥೆಗಳು ಮನೆಗೆ ಬಂದು ಅಥವಾ ನೇರವಾಗಿ ಭೇಟಿ ನೀಡಿ ಸಹಾಯ ಮಾಡುವ ವ್ಯವಸ್ಥೆಯನ್ನೂ ಹೊಂದಿವೆ.
Online Willಗೆ ಎಷ್ಟು ವೆಚ್ಚವಾಗಬಹುದು?
ವೆಚ್ಚವು ಆಯ್ಕೆ ಮಾಡುವ ಸೇವೆ ಮತ್ತು ತಜ್ಞರ ಸಹಾಯದ ಪ್ರಮಾಣದ ಮೇಲೆ ಬದಲಾಗುತ್ತದೆ. ಉದಾಹರಣೆಗೆ, ಕೆಲವು ವೇದಿಕೆಗಳಲ್ಲಿ ಸ್ವತಃ ಉಯಿಲು ಪತ್ರ ಸಿದ್ಧಪಡಿಸುವ ಯೋಜನೆ ಕೆಲವು ನೂರು ರೂಪಾಯಿಗಳಿಂದ ಆರಂಭವಾಗಬಹುದು. ಮೂಲ ಸೇವೆಗಳಿಗೆ ಸುಮಾರು ₹2,000 ರಿಂದ ₹5,000 ಅಥವಾ ಅದಕ್ಕಿಂತ ಹೆಚ್ಚಿನ ಶುಲ್ಕ ಇರಬಹುದು.
ಸಂಪೂರ್ಣವಾಗಿ ವೈಯಕ್ತಿಕ ಅಗತ್ಯಕ್ಕೆ ತಕ್ಕಂತೆ ಉಯಿಲು ಪತ್ರ ಸಿದ್ಧಪಡಿಸುವುದು, ಕಾನೂನು ಪರಿಶೀಲನೆ, ನೇರ ಸಹಾಯ ಮತ್ತು ನೋಂದಣಿ ಪ್ರಕ್ರಿಯೆ ಸೇರಿಸಿದರೆ ವೆಚ್ಚ ₹10,000 ರಿಂದ ₹30,000 ಅಥವಾ ಅದಕ್ಕಿಂತಲೂ ಹೆಚ್ಚಾಗಬಹುದು.
ಆದ್ದರಿಂದ ಕೇವಲ ಕಡಿಮೆ ಬೆಲೆ ನೋಡಿ ಸೇವೆಯನ್ನು ಆಯ್ಕೆ ಮಾಡುವುದು ಸರಿಯಲ್ಲ. ಸ್ಥಳೀಯ ವಕೀಲರು ವಿಲ್ ತಯಾರಿಸಲು ಪಡೆಯುವ ಶುಲ್ಕದೊಂದಿಗೆ ಕೂಡ ಹೋಲಿಕೆ ಮಾಡುವುದು ಉತ್ತಮ.
ವಿಲ್ ನೋಂದಣಿ ಮಾಡಿಸಬೇಕೇ?
ಇದು ಬಹಳ ಮುಖ್ಯವಾದ ಪ್ರಶ್ನೆ. ವಿಲ್ ಕಾನೂನುಬದ್ಧವಾಗಿರಲು ಅದನ್ನು ಕಡ್ಡಾಯವಾಗಿ ನೋಂದಣಿ (registration) ಮಾಡಿಸಲೇಬೇಕು ಎಂಬ ನಿಯಮ ಇಲ್ಲ. ಅಂದರೆ, ಸರಿಯಾದ ರೀತಿಯಲ್ಲಿ ಸಿದ್ಧಪಡಿಸಿ ಮತ್ತು ಅಗತ್ಯ ಸಹಿಗಳೊಂದಿಗೆ ಕಾರ್ಯಗತಗೊಳಿಸಿದ ಉಯಿಲು ಪತ್ರ ನೋಂದಣಿ ಇಲ್ಲದಿದ್ದರೂ ಮಾನ್ಯವಾಗಬಹುದು.
ಆದರೆ ಭವಿಷ್ಯದಲ್ಲಿ ಉಯಿಲು ಪತ್ರದ ನೈಜತೆ ಅಥವಾ ಅದರ ಸತ್ಯಾಸತ್ಯತೆ ಬಗ್ಗೆ ವಿವಾದ ಉಂಟಾದರೆ, ನೋಂದಣಿ ಹೆಚ್ಚುವರಿ ಸಾಕ್ಷಿಯಾಗಿ ನೆರವಾಗಬಹುದು.
ಸರ್ಕಾರದ ನೋಂದಣಿ ಶುಲ್ಕ ಸಾಮಾನ್ಯವಾಗಿ ಕಡಿಮೆ ಇರಬಹುದು. ಆದರೆ ದಾಖಲೆ ಸಿದ್ಧಪಡಿಸುವುದು, ಸೇವಾ ಶುಲ್ಕ, ವಕೀಲರ ನೆರವು ಮತ್ತು ಇತರ ವೆಚ್ಚಗಳನ್ನು ಸೇರಿಸಿದರೆ ಖಾಸಗಿ ಸೇವಾ ಸಂಸ್ಥೆಗಳ ಮೂಲಕ ನೋಂದಣಿ ಮಾಡಿಸುವ ಒಟ್ಟು ವೆಚ್ಚ ಹೆಚ್ಚಾಗಬಹುದು.
ವಿಲ್ ಮಾತ್ರ ಸಾಕಾಗುವುದಿಲ್ಲ
ಒಬ್ಬ ವ್ಯಕ್ತಿ ಉಯಿಲು ಪತ್ರದಲ್ಲಿ ತನ್ನ ಆಸ್ತಿಯ ಬಗ್ಗೆ ಸ್ಪಷ್ಟ ಮಾಹಿತಿ ನೀಡಬೇಕು. ಆದರೆ ಕಾಲ ಕಳೆದಂತೆ ಪರಿಸ್ಥಿತಿಗಳು ಬದಲಾಗಬಹುದು. ಹೊಸ ಮನೆ ಖರೀದಿಸಬಹುದು. ಹೊಸ ಹೂಡಿಕೆ ಮಾಡಬಹುದು. ಕುಟುಂಬದಲ್ಲಿ ಮದುವೆ, ವಿಚ್ಛೇದನ ಅಥವಾ ಹೊಸ ಸದಸ್ಯರ ಆಗಮನವಾಗಬಹುದು. ಇಂತಹ ಸಂದರ್ಭಗಳಲ್ಲಿ ಹಳೆಯ ಉಯಿಲು ಪತ್ರವನ್ನು ಪರಿಶೀಲಿಸಿ ಅಗತ್ಯವಿದ್ದರೆ ತಿದ್ದುಪಡಿ ಮಾಡುವುದು ಮುಖ್ಯ. ಉಯಿಲು ಪತ್ರವನ್ನು ಒಮ್ಮೆ ಬರೆದು ಮರೆತುಬಿಡುವ ದಾಖಲೆ ಎಂದು ಭಾವಿಸಬಾರದು.
Online Will: ಡಿಜಿಟಲ್ ಆಸ್ತಿ ಕೂಡ ಮುಖ್ಯ
ಇಂದಿನ ಕಾಲದಲ್ಲಿ ಆಸ್ತಿ ಎಂದರೆ ಕೇವಲ ಮನೆ, ಜಮೀನು ಮತ್ತು ಬ್ಯಾಂಕ್ ಖಾತೆ ಮಾತ್ರವಲ್ಲ. ಮ್ಯೂಚುವಲ್ ಫಂಡ್ (share market), ಷೇರುಗಳು, ಡಿಮ್ಯಾಟ್ ಖಾತೆಗಳು, ಡಿಜಿಟಲ್ ಹೂಡಿಕೆಗಳು ಮತ್ತು ಇತರ ಆನ್‌ಲೈನ್ ಹಣಕಾಸು ಆಸ್ತಿಗಳೂ ಇರಬಹುದು. ಕುಟುಂಬದವರಿಗೆ ಈ ಹೂಡಿಕೆಗಳ ಮಾಹಿತಿ ತಿಳಿಯದಿದ್ದರೆ, ವ್ಯಕ್ತಿಯ ಮರಣದ ಬಳಿಕ ಅವುಗಳನ್ನು ಪತ್ತೆಹಚ್ಚುವುದು ಕಷ್ಟವಾಗಬಹುದು. ಆದ್ದರಿಂದ ಉಯಿಲು ಪತ್ರದ ಜೊತೆಗೆ ತಮ್ಮ ಆಸ್ತಿಗಳ ಒಂದು ಸರಳ ಪಟ್ಟಿ ಮತ್ತು ಅಗತ್ಯ ದಾಖಲೆಗಳ ಮಾಹಿತಿ ಸುರಕ್ಷಿತವಾಗಿ ಇಡುವುದು ಕೂಡ ಮುಖ್ಯ.
ಉಯಿಲು ಜಾರಿಗೊಳಿಸುವ ಜವಾಬ್ದಾರಿ ಯಾರದು?
ಉಯಿಲು ಪತ್ರದಲ್ಲಿ ಒಬ್ಬ ಎಕ್ಸಿಕ್ಯೂಟರ್ (ಕಾರ್ಯನಿರ್ವಾಹಕ) ನನ್ನು ನೇಮಿಸಬಹುದು. ವ್ಯಕ್ತಿ ಮೃತಪಟ್ಟ ಬಳಿಕ ಉಯಿಲಿನಲ್ಲಿ ತಿಳಿಸಿರುವ ಸೂಚನೆಗಳನ್ನು ಜಾರಿಗೆ ತರುವ ಜವಾಬ್ದಾರಿ ಈ ವ್ಯಕ್ತಿಯದ್ದಾಗಿರುತ್ತದೆ. ಆಸ್ತಿಗಳನ್ನು (assets) ಪತ್ತೆಹಚ್ಚುವುದು, ಅಗತ್ಯ ದಾಖಲೆಗಳನ್ನು ನಿರ್ವಹಿಸುವುದು ಮತ್ತು ಉಯಿಲಿನಲ್ಲಿ ತಿಳಿಸಿರುವಂತೆ ಫಲಾನುಭವಿಗಳಿಗೆ ಆಸ್ತಿ ವರ್ಗಾವಣೆ ಮಾಡಲು ನೆರವಾಗುವುದು ಕಾರ್ಯನಿರ್ವಾಹಕನ ಪ್ರಮುಖ ಪಾತ್ರ. ಕೆಲವು ಆನ್‌ಲೈನ್ ಸೇವಾ ಸಂಸ್ಥೆಗಳು ಈ ರೀತಿಯ ಮರಣಾನಂತರದ ಸೇವೆಗಳನ್ನೂ ನೀಡುತ್ತಿವೆ.


Click it and Unblock the Notifications
