ಬ್ಯಾಂಕಿಂಗ್ ಸೇವಾ ಶುಲ್ಕ ಏರಿಕೆ? ಸದ್ಯಕ್ಕಿಲ್ಲ ಎಂದ ಐಬಿಎ
ಬೆಂಗಳೂರು, ಜನವರಿ 11: ಸಾರ್ವಜನಿಕ ಕ್ಷೇತ್ರದ ಅನೇಕ ಬ್ಯಾಂಕುಗಳು ತಮ್ಮ ಸೇವಾ ಶುಲ್ಕ ಏರಿಕೆ ಮಾಡಲು ಮುಂದಾಗಿವೆ. ಉಳಿತಾಯ ಖಾತೆಯ ಕನಿಷ್ಠ ಮೊತ್ತದ ಮೇಲೆ ವಿಧಿಸುತ್ತಿದ್ದ ಚಾರ್ಜ್ ತೆಗೆದು ಹಾಕಲಾಗುತ್ತದೆ ಎಂಬ ಸುದ್ದಿಯನ್ನು ಭಾರತೀಯ ಬ್ಯಾಂಕುಗಳ ಒಕ್ಕೂಟ(ಐಬಿಎ) ಅಲ್ಲಗೆಳೆದಿದೆ.
ಸರ್ಕಾರಿ ಸ್ವಾಮ್ಯದ ಬಹುತೇಕ ಬ್ಯಾಂಕ್ ಗಳು ಜನವರಿ 20ರಿಂದ ಬ್ಯಾಂಕಿಂಗ್ ಸೇವೆಯನ್ನು ದುಬಾರಿಗೊಳಿಸಲಿವೆ. ಗ್ರಾಹಕರಿಗೆ ಬೆಲೆ ಏರಿಕೆ ಬಿಸಿ ತಟ್ಟಲಿದೆ ಎಂಬ ಸುದ್ದಿ ಹರಡುತ್ತಿದೆ. ಆದರೆ, ಇದು ಸತ್ಯಕ್ಕೆ ದೂರವಾಗಿದ್ದು, ಈ ರೀತಿ ಯಾವುದೇ ಚರ್ಚೆ, ಚಿಂತನೆ ಸದ್ಯಕ್ಕಿಲ್ಲ. ಆರ್ ಬಿಐ ನೀಡುವ ಸಂದೇಶವನ್ನು ಮಾತ್ರ ಪರಿಗಣಿಸಿ, ಎಚ್ಚರದಿಂದಿರಿ ಎಂದು ಐಬಿಎನ ಮುಖ್ಯಸ್ಥ ಕಾರ್ಯಕಾರಿ ಸದಸ್ಯ ವಿಜಿ ಕಣ್ಣನ್ ಹೇಳಿದ್ದಾರೆ.

ಬ್ಯಾಂಕ್ ಗೆ ಹಣ ಜಮಾ ಮಾಡಲು ಹಾಗೂ ಹಣ ಡ್ರಾ ಮಾಡಲು ಇನ್ಮುಂದೆ ಚಾರ್ಜ್ ನೀಡಬೇಕಾಗುತ್ತದೆ. ಈ ಮೊತ್ತವನ್ನು ನಿಮ್ಮ ಅಕೌಂಟ್ ನಿಂದ ನೇರವಾಗಿ ಬ್ಯಾಂಕ್ ಗಳು ಪಡೆಯಲಿವೆ. ಚೆಕ್ ಮೂಲಕ ಹಣ ಡ್ರಾ, ಬ್ಯಾಂಕ್ ಖಾತೆಗೆ ನೀಡಿರುವ ಮೊಬೈಲ್ ನಂಬರ್ ಬದಲಾವಣೆ, ಕೆವೈಸಿ ಬದಲಾವಣೆ, ನೆಟ್ ಬ್ಯಾಂಕಿಂಗ್, ಪಾಸ್ ಬುಕ್ ಅಪ್ಡೇಟ್ ಎಲ್ಲಕ್ಕೂ ಶುಲ್ಕ ವಿಧಿಸಲಾಗುತ್ತದೆ. ಈ ಹೊಸ ಬದಲಾವಣೆಗಳು ಜನವರಿ 20ರಿಂದ ಜಾರಿಗೆ ಬರಲಿದೆ ಎಂಬ ಸುದ್ದಿ ಹರಡುತ್ತಿದೆ.
ಕನಿಷ್ಟ 25 ರಿಂದ 50 ರು ತನಕ ಶುಲ್ಕ ವಿಧಿಸಲಾಗುತ್ತದೆ. ಚೆಕ್ ಕ್ಲಿಯರ್, ಪಿನ್ ಬದಲಾವಣೆ, ಒಂದೇ ದಿನ ಒಂದಕ್ಕಿಂತ ಹೆಚ್ಚು ವ್ಯವಹಾರ ನಡೆಸಿದರೆ 10 ರು ಶುಲ್ಕ ತೆರಬೇಕಾಗುತ್ತದೆ ಎಂದು ಶುಲ್ಕ ಏರಿಕೆ ಪಟ್ಟಿಯನ್ನು ಹಂಚಲಾಗುತ್ತಿದೆ. ಆದರೆ, ಈ ಬಗ್ಗೆ ಆರ್ ಬಿಐ ಯಾವುದೇ ಪ್ರಕಟಣೆ ಹೊರಡಿಸಿಲ್ಲ.












Click it and Unblock the Notifications