ಎಷ್ಟೇ ದುಡ್ಡು ಉಳಿಸಿದರೂ ಈ ಮಧ್ಯಮ ವರ್ಗದವರು ಶ್ರೀಮಂತರಾಗೋಲ್ಲ ಯಾಕೆ? 7 ಕಾರಣಗಳು ಇಲ್ಲಿವೆ

Middle Class Saving Tips: ರಿಕ್ಷಾದಲ್ಲಿ ಹೋದರೆ ಎಪ್ಪತ್ತು ರೂಪಾಯಿ, ಬಸ್ಸಿನಲ್ಲಿ ಹೋದರೆ ಇಪ್ಪತ್ತು. ಐವತ್ತು ರೂಪಾಯಿ ಉಳಿಸಬಹುದು ಎಂದು ಯೋಚಿಸಿ ಎಷ್ಟೇ ಹೊತ್ತಾದರೂ ಸರಿ, ಕಾದು ಕೂತು ಬಸ್ಸಿಗೆ ಹೋಗುತ್ತೇವೆ. ಮಧ್ಯಮ ವರ್ಗದವರಾದ ನಮ್ಮ ಉಳಿತಾಯದ ಮನಸ್ಥಿತಿ. ಮಧ್ಯಮ ವರ್ಗದ ಕುಟುಂಬಗಳು ವರ್ಷಗಳ ಕಾಲ ಕಷ್ಟಪಟ್ಟು ದುಡಿಯುತ್ತವೆ, ಖರ್ಚು ಕಡಿಮೆ ಮಾಡುತ್ತವೆ, ತಿಂಗಳಲ್ಲಿ ಸ್ವಲ್ಪ ಹಣ ಉಳಿಸುತ್ತವೆ. ಆದರೂ ನಿವೃತ್ತಿಯ ಹೊತ್ತಿಗೆ ದೊಡ್ಡ ಆರ್ಥಿಕ ಸಂಪತ್ತು ಅವರ ಕೈಯಲ್ಲಿ ಇರುವುದಿಲ್ಲ.

Middle Class Family Saving Tips

ಇದಕ್ಕೆ ಕಾರಣ ಇರುವುದು ಹಣ ಉಳಿಸುವುದರಲ್ಲಿ ಅಲ್ಲ. ಹಣವನ್ನು ಹೇಗೆ ಬಳಸುತ್ತೇವೆ, ಎಲ್ಲಿ ಹೂಡಿಕೆ ಮಾಡುತ್ತೇವೆ ಮತ್ತು ಕಾಲಾನಂತರದಲ್ಲಿ ಅದು ಎಷ್ಟು ಬೆಳೆಯುತ್ತದೆ ಎಂಬುದೇ ಮುಖ್ಯ. ಮಧ್ಯಮ ವರ್ಗದವರು ಹಣ ಉಳಿಸಿದರೂ ಶ್ರೀಮಂತರಾಗದಿರಲು ಪ್ರಮುಖವಾದ 7 ಕಾರಣಗಳು ಇಲ್ಲಿವೆ.

1. ಉಳಿಸುವುದೇ ಗುರಿ, ಸಂಪತ್ತು ಸೃಷ್ಟಿಸುವುದಲ್ಲ

ಬಹುತೇಕ ಜನರ ಹಣಕಾಸಿನ ಗುರಿ, ತಿಂಗಳಿಗೆ 5,000 ರೂ. ಅಥವಾ 10,000 ರೂ. ಉಳಿಸಬೇಕು ಎನ್ನುವುದಕ್ಕೆ ಸೀಮಿತವಾಗಿರುತ್ತದೆ. ಉಳಿತಾಯ ಅಗತ್ಯ. ಆದರೆ ಹಣವನ್ನು ಕೇವಲ ಬ್ಯಾಂಕ್ ಖಾತೆಯಲ್ಲಿ ಅಥವಾ ನಗದಿನ ರೂಪದಲ್ಲಿ ಇಟ್ಟುಕೊಂಡರೆ ಅದರ ಬೆಳವಣಿಗೆ ಸೀಮಿತವಾಗಿರಬಹುದು. ಉಳಿತಾಯ ಹಣವನ್ನು ಸುರಕ್ಷಿತವಾಗಿಡುತ್ತದೆ; ಸರಿಯಾದ ಹೂಡಿಕೆ ಹಣವನ್ನು ಬೆಳೆಯಲು ಸಹಾಯ ಮಾಡುತ್ತದೆ. ಹೀಗಾಗಿ "ನಾನು ಎಷ್ಟು ಉಳಿಸುತ್ತಿದ್ದೇನೆ?" ಎಂಬ ಪ್ರಶ್ನೆಯ ಜೊತೆಗೆ "ನನ್ನ ಹಣ ಎಷ್ಟು ವೇಗವಾಗಿ ಬೆಳೆಯುತ್ತಿದೆ?" ಎಂಬ ಪ್ರಶ್ನೆಯನ್ನೂ ಕೇಳಬೇಕು.

2. ಹಣದುಬ್ಬರದ ಶಕ್ತಿಯನ್ನು ಕಡೆಗಣಿಸುವುದು

ಇಂದು 10 ಲಕ್ಷ ರೂ. ದೊಡ್ಡ ಮೊತ್ತದಂತೆ ಕಾಣಬಹುದು. ಆದರೆ 10 ಅಥವಾ 15 ವರ್ಷಗಳ ನಂತರ ಅದೇ ಹಣದ ಖರೀದಿ ಸಾಮರ್ಥ್ಯ ಕಡಿಮೆಯಾಗಿರಬಹುದು. ಇದನ್ನೇ ಹಣದುಬ್ಬರ ಅಥವಾ Inflation ಎನ್ನುತ್ತೇವೆ. ಉದಾಹರಣೆಗೆ, ಇಂದು ಒಂದು ಮಗುವಿನ ಉನ್ನತ ಶಿಕ್ಷಣಕ್ಕೆ 10 ಲಕ್ಷ ರೂ. ಬೇಕಿದ್ದರೆ, ಹಲವು ವರ್ಷಗಳ ನಂತರ ಅದೇ ಶಿಕ್ಷಣಕ್ಕೆ 15 ಲಕ್ಷ ರೂ ಅಥವಾ ಇನ್ನೂ ಹೆಚ್ಚಿನ ಹಣ ಬೇಕಾಗಬಹುದು. ಹೀಗಾಗಿ ಕೇವಲ "ನನ್ನ ಬಳಿ ಎಷ್ಟು ಹಣ ಇದೆ?" ಎನ್ನುವುದಕ್ಕಿಂತ "ಭವಿಷ್ಯದಲ್ಲಿ ಆ ಹಣದಿಂದ ಏನು ಖರೀದಿಸಬಹುದು?" ಎಂಬುದೂ ಮುಖ್ಯ.

3. ಸಂಬಳ ಹೆಚ್ಚಾದಂತೆ ಜೀವನಶೈಲಿ ಖರ್ಚು

ಇದು ಮಧ್ಯಮ ವರ್ಗದವರ ದೊಡ್ಡ ಸಮಸ್ಯೆಗಳಲ್ಲಿ ಒಂದು. 40,000 ರೂ. ಸಂಬಳವಿದ್ದಾಗ 5,000 ರೂ. ಉಳಿಸುತ್ತಾರೆ. ಸಂಬಳ 60,000 ರೂ. ಆದಾಗ 10,000 ರೂ. ಉಳಿಸಬಹುದು ಎಂದುಕೊಳ್ಳುತ್ತಾರೆ. ಆದರೆ ಹೊಸ ಮೊಬೈಲ್, ಕಾರು, ಪ್ರವಾಸ, ರೆಸ್ಟೋರೆಂಟ್, ಆನ್‌ಲೈನ್ ಶಾಪಿಂಗ್, ಹೊಸ subscriptionಗಳು ಸೇರಿಕೊಂಡು ಖರ್ಚು ಕೂಡ ಹೆಚ್ಚಾಗುತ್ತದೆ. ಇದನ್ನು Lifestyle Inflation ಎಂದು ಕರೆಯಬಹುದು.

ಸಂಬಳ ಹೆಚ್ಚಾದಾಗ ಅದರ ಒಂದು ಭಾಗವನ್ನು ಜೀವನಮಟ್ಟ ಸುಧಾರಿಸಲು ಬಳಸುವುದು ತಪ್ಪಲ್ಲ. ಆದರೆ ಆದಾಯ ಹೆಚ್ಚಾದ ಪ್ರತಿಬಾರಿಯೂ ಖರ್ಚು ಅದೇ ಪ್ರಮಾಣದಲ್ಲಿ ಹೆಚ್ಚಾದರೆ, ಸಂಪತ್ತು ನಿರ್ಮಾಣದ ವೇಗ ಕಡಿಮೆಯಾಗುತ್ತದೆ.

4. ಹೂಡಿಕೆ ಆರಂಭಿಸುವುದನ್ನು ಮುಂದೂಡುವುದು

"ಇನ್ನೂ ಸ್ವಲ್ಪ ಹಣ ಬಂದ ಮೇಲೆ ಹೂಡಿಕೆ ಮಾಡುತ್ತೇನೆ." "ಮಕ್ಕಳ ಖರ್ಚು ಕಡಿಮೆಯಾದ ಮೇಲೆ ಶುರು ಮಾಡುತ್ತೇನೆ." "ಮುಂದಿನ ವರ್ಷದಿಂದ SIP ಮಾಡುತ್ತೇನೆ. ಇಂತಹ ಮಾತುಗಳನ್ನು ಹೇಳುತ್ತಾ ವರ್ಷಗಳು ಕಳೆದುಹೋಗುತ್ತವೆ. ಆದರೆ ಹೂಡಿಕೆಯಲ್ಲಿ ಸಮಯ ಬಹಳ ಮುಖ್ಯ. ಚಿಕ್ಕ ಮೊತ್ತವನ್ನಾದರೂ ದೀರ್ಘಕಾಲ ಹೂಡಿಕೆ ಮಾಡುವುದರಿಂದ ಸಂಯುಕ್ತ ಬಡ್ಡಿಯ ಪರಿಣಾಮದಿಂದ ಹಣ ಬೆಳೆಯುವ ಅವಕಾಶ ಸಿಗುತ್ತದೆ. ಇಲ್ಲಿ ಮುಖ್ಯವಾದುದು ದೊಡ್ಡ ಮೊತ್ತದಿಂದ ಆರಂಭಿಸುವುದಲ್ಲ. ಆರಂಭಿಸಿ, ನಿಯಮಿತವಾಗಿ ಮುಂದುವರಿಸುವುದೇ ಮುಖ್ಯ.

5. ಮನೆ ಮತ್ತು ಚಿನ್ನವನ್ನೇ ಸಂಪತ್ತು ಎಂದು ಭಾವಿಸುವುದು

ಭಾರತೀಯ ಮಧ್ಯಮ ವರ್ಗದಲ್ಲಿ ಮನೆ ಖರೀದಿಸುವುದು ದೊಡ್ಡ ಆರ್ಥಿಕ ಗುರಿ. ಸ್ವಂತ ಮನೆ ಹೊಂದಿರುವುದು ಖಂಡಿತವಾಗಿಯೂ ಒಂದು ಆಸ್ತಿ. ಆದರೆ ಮನೆಯ ಮೌಲ್ಯ ಹೆಚ್ಚಾಗಿದೆ ಎಂಬ ಕಾರಣಕ್ಕೆ ಕೈಯಲ್ಲಿ ಬಳಸಬಹುದಾದ ಹಣವೂ ಹೆಚ್ಚಾಗಿದೆ ಎಂದರ್ಥವಲ್ಲ. ಅದೇ ರೀತಿ ಚಿನ್ನವೂ ಸಂಪತ್ತಿನ ಒಂದು ಭಾಗವಾಗಬಹುದು. ಆದರೆ ಸಂಪೂರ್ಣ ಹಣವನ್ನು ಒಂದೇ ರೀತಿಯ ಆಸ್ತಿಯಲ್ಲಿ ಇಡುವುದು ಅಪಾಯವನ್ನು ಹೆಚ್ಚಿಸಬಹುದು. ಸಂಪತ್ತು ನಿರ್ಮಾಣದಲ್ಲಿ ವೈವಿಧ್ಯಮಯ ಹೂಡಿಕೆಗಳ ಬಗ್ಗೆ ಯೋಚಿಸುವುದು ಮುಖ್ಯ.

6. ಸಾಲವನ್ನು ಆದಾಯದ ವಿಸ್ತರಣೆಯಂತೆ ಬಳಸುವುದು

ಕ್ರೆಡಿಟ್ ಕಾರ್ಡ್, ವೈಯಕ್ತಿಕ ಸಾಲ, ಕಾರು ಸಾಲ, ದೊಡ್ಡ ಇಎಂಐ- ಇವುಗಳೆಲ್ಲ ಸರಿಯಾಗಿ ನಿರ್ವಹಿಸಿದರೆ ಉಪಯುಕ್ತವಾಗಬಹುದು. ಆದರೆ ಸಮಸ್ಯೆ ಶುರುವಾಗುವುದು ಆದಾಯ ಹೆಚ್ಚಾಗುವ ಮೊದಲೇ ಜೀವನಶೈಲಿಯನ್ನು ಸಾಲದ ಮೂಲಕ ಹೆಚ್ಚಿಸಿದಾಗ.

ಸಂಬಳ ಬಂದ ಕೂಡಲೇ EMI, ಕ್ರೆಡಿಟ್ ಕಾರ್ಡ್ ಬಿಲ್ ಮತ್ತು ಇತರ ಸಾಲದ ಪಾವತಿಗಳಿಗೆ ದೊಡ್ಡ ಮೊತ್ತ ಹೋಗುತ್ತಿದ್ದರೆ, ಹೂಡಿಕೆಗೆ ಉಳಿಯುವ ಹಣ ಕಡಿಮೆಯಾಗುತ್ತದೆ. ಒಂದು ಹಂತದಲ್ಲಿ ವ್ಯಕ್ತಿ ಹೆಚ್ಚು ಸಂಪಾದಿಸುತ್ತಿದ್ದರೂ, ಸಂಪತ್ತು ಮಾತ್ರ ಹೆಚ್ಚಾಗುವುದಿಲ್ಲ.

7. ಒಟ್ಟು ಆಸ್ತಿ ಮೌಲ್ಯ

"ಎಷ್ಟು ಸಂಪಾದಿಸುತ್ತೇನೆ?" ಎಂಬುದಕ್ಕಿಂತ ಹೆಚ್ಚು, "ನನ್ನ Net Worth ಎಷ್ಟು?" ಎಂಬುದಕ್ಕೆ ಗಮನ ಕೊಡಬೇಕು. ಇದು ಬಹಳ ಮುಖ್ಯವಾದ ವ್ಯತ್ಯಾಸ. ತಿಂಗಳಿಗೆ 1 ಲಕ್ಷ ರೂ. ಸಂಪಾದಿಸುವ ವ್ಯಕ್ತಿ ದೊಡ್ಡ ಮನೆ, ಕಾರು ಮತ್ತು ಹಲವು ಇಎಂಐಗಳನ್ನು ಹೊಂದಿರಬಹುದು. ಮತ್ತೊಬ್ಬ ವ್ಯಕ್ತಿ 70,000 ರೂ. ಸಂಪಾದಿಸಿದರೂ ಸಾಲವಿಲ್ಲದೆ, ನಿಯಮಿತವಾಗಿ ಹೂಡಿಕೆ ಮಾಡುತ್ತಿರಬಹುದು.

ಯಾರು ನಿಜವಾಗಿ ಹೆಚ್ಚು ಆರ್ಥಿಕವಾಗಿ ಬಲಿಷ್ಠರು? ಇದನ್ನು ತಿಳಿಯಲು Net Worth ನೋಡಬೇಕು. ಸರಳವಾಗಿ ಹೇಳುವುದಾದರೆ, Net Worth = ಒಟ್ಟು ಆಸ್ತಿಗಳ ಮೌಲ್ಯ - ಒಟ್ಟು ಸಾಲ. ಅಂದರೆ ಸಂಬಳ ಎಷ್ಟು ಎನ್ನುವುದಕ್ಕಿಂತ, ವರ್ಷಗಳು ಕಳೆದಂತೆ ನಿಮ್ಮ ಆಸ್ತಿ ಎಷ್ಟು ಹೆಚ್ಚಾಗಿದೆ ಮತ್ತು ಸಾಲ ಎಷ್ಟು ಕಡಿಮೆಯಾಗಿದೆ ಎಂಬುದು ಮುಖ್ಯ.

Middle Class Family Saving Tips ಇಲ್ಲಿವೆ

ಮಧ್ಯಮ ವರ್ಗದವರು ಈ ಸರಳ ನಿಯಮಗಳನ್ನು ಅನುಸರಿಸಿ ಹಣಕಾಸಿನ ಯಶಸ್ಸು ಕಂಡುಕೊಳ್ಳಬಹುದು.

- ಆದಾಯ ಹೆಚ್ಚಾದಾಗ ಉಳಿತಾಯ ಮತ್ತು ಹೂಡಿಕೆಯ ಮೊತ್ತವನ್ನೂ ಹೆಚ್ಚಿಸಿ.
- ಕನಿಷ್ಠ ಕೆಲವು ತಿಂಗಳ ಖರ್ಚಿಗೆ ಸಾಕಾಗುವ ತುರ್ತು ನಿಧಿ ಇಟ್ಟುಕೊಳ್ಳಿ.
- ಹೆಚ್ಚಿನ ಬಡ್ಡಿಯ ಸಾಲವನ್ನು ಆದಷ್ಟು ಬೇಗ ಕಡಿಮೆ ಮಾಡಿ.
- ಕುಟುಂಬದ ಅಗತ್ಯಕ್ಕೆ ತಕ್ಕ ಆರೋಗ್ಯ ಮತ್ತು ಜೀವ ವಿಮೆಯನ್ನು ಪರಿಗಣಿಸಿ.
- ದೀರ್ಘಕಾಲದ ಗುರಿಗಳಿಗೆ ಸೂಕ್ತ ಹೂಡಿಕೆ ಮಾರ್ಗಗಳನ್ನು ಆರಿಸಿ.
- ಮಕ್ಕಳ ಶಿಕ್ಷಣ, ನಿವೃತ್ತಿ ಮುಂತಾದ ಗುರಿಗಳಿಗೆ ಪ್ರತ್ಯೇಕವಾಗಿ ಯೋಜಿಸಿ.
- ವರ್ಷಕ್ಕೊಮ್ಮೆ ನಿಮ್ಮ Net Worth ಪರಿಶೀಲಿಸಿ.
- ಹೂಡಿಕೆಯಲ್ಲಿ ವೈವಿಧ್ಯತೆಯನ್ನು ಕಾಪಾಡಿಕೊಳ್ಳಿ.
- "ತಕ್ಷಣ ಶ್ರೀಮಂತ" ಮಾಡುವ ಯೋಜನೆಗಳ ಬದಲು ದೀರ್ಘಕಾಲದ ಸಂಪತ್ತು ನಿರ್ಮಾಣದತ್ತ ಗಮನ ಕೊಡಿ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+