ವಕೀಲನಿಗೆ ಮಾನನಷ್ಟ; ಗೂಗಲ್‌ನಿಂದ ಬರೋಬ್ಬರಿ 1900 ಕೋಟಿ ರೂ ಕಕ್ಕಿಸಿದ ಕೋರ್ಟ್
ಮೆಕ್ಸಿಕೋ ಸಿಟಿ, ಜೂನ್ 18: ವಕೀಲರೊಬ್ಬರ ಬಗ್ಗೆ ಅವಹೇಳನಕಾರಿಯಾಗಿ ಸುಳ್ಳು ಸುದ್ದಿ ಹಬ್ಬಿಸಲು ಬ್ಲಾಗ್‌ವೊಂದಕ್ಕೆ ಅವಕಾಶ ಮಾಡಿಕೊಟ್ಟ ಕಾರಣಕ್ಕೆ ಮೆಕ್ಸಿಕೋದ ನ್ಯಾಯಾಲಯವೊಂದು ಗೂಗಲ್ ಸಂಸ್ಥೆಗೆ ಬರೋಬ್ಬರಿ 1900 ಕೋಟಿ ರೂ ದಂಡ ವಿಧಿಸಿದೆ.
ಮೆಕ್ಸಿಕೋ ಸಿಟಿ ನಗರದ ವಕೀಲ ಉಲ್ತಿಚ್ ರಿಕ್ಟರ್ ಮೊರೇಲ್ಸ್ ಅವರೇ ಗೂಗಲ್ ವಿರುದ್ಧ ಕೇಸ್ ಗೆದ್ದವರು. ತನ್ನ ವಿರುದ್ಧ ಹಣದ ಅವ್ಯವಹಾರ ಇತ್ಯಾದಿ ಆರೋಪಗಳನ್ನು ಮಾಡಲು ಬ್ಲಾಗ್‌ವೊಂದಕ್ಕೆ ಗೂಗಲ್ ಅವಕಾಶ ಮಾಡಿಕೊಟ್ಟಿತು. ಇದರಿಂದ ತನಗೆ ಸಾಕಷ್ಟು ಹಾನಿಯಾಗಿದೆ ಎಂದು ಮೊರೇಲ್ಸ್ 2005ರಲ್ಲಿ ದೂರು ದಾಖಲಿಸಿದ್ದರು.
ಬ್ಲಾಗ್ ಅನ್ನು ಕಿತ್ತುಹಾಕಲು ಗೂಗಲ್ ಸಂಸ್ಥೆಗೆ ಮೊರೇಲ್ಸ್ ಮೊರೆ ಮಾಡಿಕೊಂಡಿದ್ದರೆನ್ನಲಾಗಿದೆ. ಆದರೆ, ಇವರ ಮನವಿಗೆ ಪುರಸ್ಕರಿಸದ ಕಾರಣಕ್ಕೆ ಗೂಗಲ್ ಮೇಲೆ ಈ ವಕೀಲರು ಪ್ರಕರಣ ದಾಖಲಿಸಿದ್ದರು.

ಇದೀಗ ಮೆಕ್ಕಿಕೋ ಸಿಟಿ ನಗರದ ನ್ಯಾಯಾಲಯವು ಗೂಗಲ್‌ನಿಂದ ಆಗಿರುವ ತಪ್ಪನ್ನು ಗುರುತಿಸಿದೆ. "ಐದು ಬಿಲಿಯನ್ ಪೆಸೋಸ್" ಹಣವನ್ನು ದಂಡವಾಗಿ ತೆರವುಂತೆ ಗೂಗಲ್‌ಗೆ ಆದೇಶ ನೀಡಿದೆ. ಐದು ಬಿಲಿಯನ್ ಪೆಸೋಸ್ ಎಂದರೆ ಸುಮಾರು 1900 ಕೋಟಿ ರೂ ಆಗುತ್ತದೆ. ಇದು ಜೂನ್ 13ರಂದು ನೀಡಿದ ತೀರ್ಪಾಗಿದೆ.
ಕೋರ್ಟ್ ಆದೇಶವನ್ನು ವಕೀಲ ರಿಕ್ಟರ್ ಮೊರೇಲ್ಸ್ ಸಂತಸದಿಂದ ಸ್ವಾಗತ ಮಾಡಿದ್ದಾರೆ. "ನನಗೆ ಪದಗಳೇ ಬರುತ್ತಿಲ್ಲ" ಎಂಬುದು ಅವರ ಮೊದಲ ಪ್ರತಿಕ್ರಿಯೆ. ಅಂದಹಾಗೆ, ರಿಕ್ಟರ್ ಮೊರೇಲ್ಸ್ ಅವರು ಪೌರತ್ವ ವಿಚಾರದಲ್ಲಿ ಹಲವು ಪುಸ್ತಕಗಳನ್ನು ಬರೆದಿದ್ದಾರೆ. ಕುತೂಹಲವೆಂದರೆ ಅವರು ಬರೆದ ಪುಸ್ತಕಗಳಲ್ಲಿ ಇಂಟರ್ನೆಟ್ ಯುಗದಲ್ಲಿ ನಕಲಿ ಸುದ್ದಿ ಕುರಿತ ಒಂದು ಪುಸ್ತಕವೂ ಇದೆ.

ತೀರ್ಪು ಒಪ್ಪದ ಗೂಗಲ್:
ತನಗೆ ದಂಡ ಕಟ್ಟಲು ಆದೇಶಿಸಿದ ಕೋರ್ಟ್ ತೀರ್ಪಿನ ಬಗ್ಗೆ ಗೂಗಲ್ ಅಸಂತುಷ್ಟಿ ವ್ಯಕ್ತಪಡಿಸಿದೆ. "ಕೋರ್ಟ್ ಅಭಿಪ್ರಾಯ ನಿರಾಧಾರವಾಗಿದೆ. ಅಭಿಪ್ರಾಯ ಸ್ವಾತಂತ್ರ್ಯ ಮತ್ತಿತರ ಮೂಲಭೂತ ತತ್ವಗಳಿಗೆ ಇದು ವಿರುದ್ಧವಾಗಿದೆ. ಕೊನೆಯವರೆಗೂ ಈ ತೀರ್ಪಿನ ವಿರುದ್ಧ ನಿಲ್ಲುತ್ತೇವೆ" ಎಂದು ಗೂಗಲ್ ಹೇಳಿದೆ.
ಗೂಗಲ್ ಸಂಸ್ಥೆ ಮೆಕ್ಸಿಕೋದ ಸುಪ್ರೀಂ ಕೋರ್ಟ್‌ನಲ್ಲಿ ಈ ತೀರ್ಪನ್ನು ಪ್ರಶ್ನಿಸುವ ಸಾಧ್ಯತೆ ಇದೆ. ಗೂಗಲ್ ಇಂಥ ಪ್ರಕರಣಗಳು ಹೊಸತಲ್ಲ. ವಿಶ್ವದ ಹಲವು ಕಡೆ ಈ ರೀತಿಯ ಪ್ರಕರಣಗಳು ಗೂಗಲ್ ವಿರುದ್ಧ ದಾಖಲಾಗಿವೆ. ಗೂಗಲ್ ಮಾಲಕತ್ವದ ಯೂಟ್ಯೂಬ್‌ನಲ್ಲಿ ಕಾಮಿಡಿಯನ್‌ವೊಬ್ಬ ಆಸ್ಟ್ರೇಲಿಯಾದ ರಾಜಕಾರಣಿಯನ್ನು ಗೇಲಿ ಮಾಡಿ ವಿಡಿಯೋ ಪೋಸ್ಟ್ ಮಾಡಿದ್ದ. ಇದರಿಂದ ತನಗೆ ಮಾನನಷ್ಟ ಆಗಿದೆ ಎಂದು ಆ ರಾಜಕಾರಣಿಯು ಗೂಗಲ್ ಅನ್ನೂ ಕೋರ್ಟ್ ಕಟಕಟೆಗೆ ತಂದಿದ್ದ. ಆ ಪ್ರಕರಣದಲ್ಲಿ 4.88 ಲಕ್ಷ ಯುಎಸ್ ಡಾಲರ್ (ಸುಮಾರು 3.8 ಕೋಟಿ ರೂಪಾಯಿ) ಹಣವನ್ನು ದಂಡವಾಗಿ ಕಟ್ಟುವಂತೆ ಆಸ್ಟ್ರೇಲಿಯಾದ ಕೋರ್ಟ್ ಕೆಲ ದಿನಗಳ ಹಿಂದಷ್ಟೇ ಗೂಗಲ್‌ಗೆ ಆದೇಶ ನೀಡಿ ತೀರ್ಪು ಕೊಟ್ಟಿತ್ತು.
(ಒನ್ಇಂಡಿಯಾ ಸುದ್ದಿ)












Click it and Unblock the Notifications