ಏಪ್ರಿಲ್‌ನಲ್ಲಿ ರಫ್ತು ಶೇ.24 ಏರಿಕೆ, 38.19 ಬಿಲಿಯನ್ ಡಾಲರ್‌ಗೆ ಹೆಚ್ಚಳ
ದೇಶದಲ್ಲಿ ಏಪ್ರಿಲ್‌ನಲ್ಲಿ ಸರಕು ರಫ್ತು ಏರಿಕೆ ಆಗಿದೆ. 2022 ರಲ್ಲಿ ಭಾರತದ ಸರಕು ರಫ್ತು 38.19 ಬಿಲಿಯನ್ ಡಾಲರ್ ಆಗಿದೆ. ಕಳೆದ ವರ್ಷ ಏಪ್ರಿಲ್‌ನಲ್ಲಿ 30.75 ಬಿಲಿಯನ್ ಡಾಲರ್ ರಫ್ತು ಆಗಿದೆ. ಕಳೆದ ವರ್ಷಕ್ಕೆ ಹೋಲಿಕೆ ಮಾಡಿದಾಗ ಈ ಏಪ್ರಿಲ್‌ನಲ್ಲಿ ಭಾರತದ ಸರಕು ರಫ್ತು ಶೇಕಡ 24ರಷ್ಟು ಹೆಚ್ಚಳವಾಗಿದೆ.
ಆದರೆ ಕಳೆದ ವರ್ಷದ ಇದೇ ಅವಧಿಯಲ್ಲಿ ದಾಖಲಾದ ವ್ಯಾಪಾರ ಕೊರತೆಗೆ ಹೋಲಿಕೆ ಮಾಡಿದರೆ ಈ ವರ್ಷ ವ್ಯಾಪಾರದ ಕೊರತೆ ಹೆಚ್ಚಳವಾಗಿದೆ. ಕಳೆದ ವರ್ಷ ಏಪ್ರಿಲ್‌ನಲ್ಲಿ 15.29 ಬಿಲಿಯನ್ ಡಾಲರ್ ವ್ಯಾಪಾರದ ಕೊರತೆ ಉಂಟಾಗಿತ್ತು. ಆದರೆ ಈ ವರ್ಷದ ಏಪ್ರಿಲ್‌ನಲ್ಲಿ ವ್ಯಾಪಾರ ಕೊರತೆಯು 20.07 ಶತಕೋಟಿ ಡಾಲರ್‌ಗೆ ವಿಸ್ತರಿಸಿದೆ.
ಏಪ್ರಿಲ್ 2022 ರಲ್ಲಿ ಪೆಟ್ರೋಲಿಯಂ ಅಲ್ಲದ ರಫ್ತು ಮೌಲ್ಯವು 30.46 ಶತಕೋಟಿ ಡಾಲರ್ ಆಗಿತ್ತು. ಏಪ್ರಿಲ್ 2021 ರಲ್ಲಿ 27.12 ಶತಕೋಟಿ ಪೆಟ್ರೋಲಿಯಂ ಅಲ್ಲದ ರಫ್ತು ಆಗಿದೆ. ಏಪ್ರಿಲ್ 2021 ರ ಪೆಟ್ರೋಲಿಯಂ ಅಲ್ಲದ ರಫ್ತು ಮೌಲ್ಯಕ್ಕೆ ಹೋಲಿಕೆ ಮಾಡಿದಾಗ ಏಪ್ರಿಲ್ 2022ರ ಪೆಟ್ರೋಲಿಯಂ ಅಲ್ಲದ ರಫ್ತು ಮೌಲ್ಯವು ಶೇಕಡಾ 12.32 ರಷ್ಟು ಏರಿಕೆಯಾಗಿದೆ.

14.3 ಶೇಕಡಾ ಬೆಳವಣಿಗೆ ದಾಖಲು; ವಾಣಿಜ್ಯ ಸಚಿವಾಲಯವು ಬಿಡುಗಡೆ ಮಾಡಿದ ಮಾಹಿತಿಯ ಪ್ರಕಾರ ಏಪ್ರಿಲ್ 2022ರಲ್ಲಿ ಪೆಟ್ರೋಲಿಯಂ ಅಲ್ಲದ ಮತ್ತು ರತ್ನ, ಜ್ಯುವೆಲ್ಲರಿಗಳನ್ನು ಹೊರತುಪಡಿಸಿದ ರಫ್ತುಗಳು 27.16 ಬಿಲಿಯನ್ ಡಾಲರ್ ಆಗಿದೆ. ಏಪ್ರಿಲ್ 2021 ರಲ್ಲಿ ದಾಖಲಾದ 23.74 ಬಿಲಿಯನ್ ಡಾಲರ್ ರಫ್ತುಗಳಿಗಿಂತ 14.3 ಶೇಕಡಾ ಬೆಳವಣಿಗೆಯನ್ನು ದಾಖಲಿಸಿದೆ.
ಏಪ್ರಿಲ್ 2022 ರಲ್ಲಿ ಪೆಟ್ರೋಲಿಯಂ ಉತ್ಪನ್ನಗಳು ಶೇ 113.21, ಎಲೆಕ್ಟ್ರಾನಿಕ್ ವಸ್ತುಗಳು ಶೇ. 64.04 ಮತ್ತು ರಾಸಾಯನಿಕಗಳು ಶೇ. 26.71ರಷ್ಟು ರಫ್ತುಗಳಲ್ಲಿ ಭಾರಿ ಬೆಳವಣಿಗೆ ಕಂಡುಬಂದಿದೆ.

ಮೊದಲ ಬಾರಿಗೆ 400 ಬಿಲಿಯನ್ ಯುಎಸ್ ಡಾಲರ್ ಸರಕು ರಫ್ತು; ಭಾರತ ಇದೇ ಮೊದಲ ಬಾರಿಗೆ 400 ಬಿಲಿಯನ್ ಯುಎಸ್ ಡಾಲರ್ ಸರಕು ರಫ್ತಿನ ಗುರಿಯನ್ನು ಮಾ. 23ರಂದು ನಿಗದಿತ ವೇಳಾಪಟ್ಟಿಗಿಂತ 9 ದಿನ ಮುಂಚಿತವಾಗಿ ತಲುಪಿದ ಸಾಧನೆ ಮಾಡಿದೆ. ಈ ಕುರಿತು ಖುದ್ದು ಪ್ರಧಾನಿ ನರೇಂದ್ರ ಮೋದಿಯೇ ಟ್ವೀಟ್ ಮಾಡುವ ಮೂಲಕ ಮಾಹಿತಿ ಹಂಚಿಕೊಂಡಿದ್ದಾರೆ. ಅಲ್ಲದೆ, ಈ ಯಶಸ್ಸಿಗೆ ನೆರವಾದ ರೈತರು, ನೇಕಾರರು, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳು, ಉತ್ಪಾದಕರು, ರಫ್ತುದಾರರನ್ನು ಅಭಿನಂದಿಸಿದ್ದಾರೆ.
"ಭಾರತವು ಸರಕು ರಫ್ತಿಗೆ ಮಹತ್ವಾಕಾಂಕ್ಷೆಯ ಗುರಿ ನಿಗದಿಪಡಿಸಿಕೊಂಡಿತ್ತು ಹಾಗೂ ಇದೇ ಮೊದಲ ಬಾರಿಗೆ ಈ ಗುರಿ ತಲುಪಲಾಗಿದೆ. ಈ ಯಶಸ್ಸಿಗೆ ಕಾರಣೀಕರ್ತರಾದ ರೈತರು, ನೇಕಾರರು, ಎಂಎಸ್ಎಂಇಎಸ್, ಉತ್ಪಾದಕರು, ರಫ್ತುದಾರರನ್ನು ನಾನು ಅಭಿನಂದಿಸುತ್ತೇನೆ. ನಮ್ಮ ಆತ್ಮನಿರ್ಭರ ಭಾರತ ಪ್ರಯಾಣದಲ್ಲಿ ಇದು ಪ್ರಮುಖ ಮೈಲಿಗಲ್ಲಾಗಿದೆ,'' ಎಂದು ಪ್ರಧಾನಿ ನರೇಂದ್ರ ಮೋದಿ ಬುಧವಾರ (ಮಾ.23) ಟ್ವೀಟ್ ಮಾಡಿದ್ದಾರೆ.












Click it and Unblock the Notifications